ಇನ್ನಷ್ಟು ದಾಖಲೆಗಳ ಸನಿಹ ವಿರಾಟ್ ಕೊಹ್ಲಿ

Update: 2019-01-21 18:48 GMT

ವೆಲ್ಲಿಂಗ್ಟನ್, ಜ.21: ಮತ್ತೊಂದು ಋತು, ಮತ್ತಷ್ಟು ದಾಖಲೆಗಳ ಗುಚ್ಛ ಕೊಹ್ಲಿಗಾಗಿ ಕಾಯುತ್ತಿವೆ. ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯೂ ಇದಕ್ಕೆ ಹೊರತಾಗಿಲ್ಲ. ಭಾರತ ತಂಡದ ನಾಯಕ ಸದ್ಯ ಕಿವೀಸ್ ವಿರುದ್ಧ 5 ಶತಕಗಳನ್ನು ಬಾರಿಸಿದ ಶ್ರೇಯಕ್ಕೆ ಪಾತ್ರವಾಗಿದ್ದಾರೆ. ಇನ್ನೆರಡು ಶತಕಗಳನ್ನು ಸಿಡಿಸಿದರೆ ಭಾರತದ ಮಾಜಿ ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ. ಸೆಹ್ವಾಗ್ ನ್ಯೂಝಿಲೆಂಡ್ ತಂಡದ ವಿರುದ್ಧ 6 ಶತಕ ಬಾರಿಸಿ ಕಿವೀಸ್ ವಿರುದ್ಧ ಹೆಚ್ಚು ಶತಕ ಬಾರಿಸಿದ ಭಾರತದ ಆಟಗಾರ ಎನಿಸಿಕೊಂಡಿದ್ದಾರೆ.

ನ್ಯೂಝಿಲೆಂಡ್ ವಿರುದ್ಧ ಗರಿಷ್ಠ ರನ್ ಬಾರಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಳ್ಳಲು ಕೊಹ್ಲಿಗೆ ಇನ್ನು ನಾಲ್ಕೇ ರನ್ ಅಗತ್ಯವಿದೆ. ಸದ್ಯ ಕಿವೀಸ್ ವಿರುದ್ಧದ 19 ಇನಿಂಗ್ಸ್‌ಗಳಿಂದ ಒಟ್ಟು 1154 ರನ್ ಗಳಿಸಿದ್ದಾರೆ ಕೊಹ್ಲಿ. ಸೆಹ್ವಾಗ್ 23 ಇನಿಂಗ್ಸ್‌ಗಳಿಂದ 1157 ರನ್ ಗಳಿಸಿದ್ದಾರೆ. ಸಚಿನ್ ತೆಂಡುಲ್ಕರ್ ಈ ಪಟ್ಟಿಯ ಅಗ್ರಸ್ಥಾನಿಯಾಗಿದ್ದು, 1750 ರನ್‌ಗಳನ್ನು ಕಿವೀಸ್ ವಿರುದ್ಧ ಗಳಿಸಿದ್ದಾರೆ.

ನನ್ನ ಪ್ರಕಾರ ಏಕದಿನ ಕ್ರಿಕೆಟ್ ಮಾದರಿಯ ಮಹಾನ್ ಬ್ಯಾಟ್ಸಮನ್ ಕೊಹ್ಲಿ. ಭಾರತದ ಪರ ಆತ ಮಾಡಿದ ಸಾಧನೆಯನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ’’ ಎಂದು ಆಸ್ಟ್ರೇಲಿಯದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಹೇಳುತ್ತಾರೆ.

‘‘ತನ್ನ ದೇಶಕ್ಕೆ ಜಯ ತಂದುಕೊಡಲು ಕೊಹ್ಲಿ ಹೊಂದಿರುವ ಛಲವನ್ನು ಗೌರವಿಸಬೇಕು. ಹೌದು ಆತ ಆಕ್ರಮಣಕಾರಿ ಆದರೆ ಆಟದ ಕುರಿತು ಅವರು ಹೊಂದಿರುವ ಬದ್ಧತೆ ಹಾಗೂ ಮಾಡಿದ ಸಾಧನೆಯನ್ನು ಯಾರೂ ಪ್ರಶ್ನಿಸುವಂತಿಲ್ಲ’’ ಎಂದು ಕ್ಲಾರ್ಕ್ ಕೊಂಡಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News