ಬಿಜೆಪಿ ಸಚಿವನಿಂದ ರಾಹುಲ್‌ಗಾಂಧಿ ಅಜ್ಜನ ಗುಣಗಾನ !

Update: 2019-01-22 03:58 GMT

ಲಕ್ನೋ, ಜ. 22: ಶ್ರೇಷ್ಠ ಪತ್ರಕರ್ತ, ರಾಜಕಾರಣಿ ಹಾಗೂ ಸ್ವಾತಂತ್ರ್ಯ ಯೋಧ ಫಿರೋಝ್ ಗಾಂಧಿಯನ್ನು ಸ್ವತಃ ಅವರ ಮೊಮ್ಮಗ ರಾಹುಲ್‌ಗಾಂಧಿಯವರೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮೊಹ್ಸಿನ್ ರಝಾ ಆಪಾದಿಸಿದ್ದಾರೆ.

"ಫಿರೋಝ್ ಗಾಂಧಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಪ್ರಯಾಗ್‌ ರಾಜ್‌ ನಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ರಾಹುಲ್‌ ಗಾಂಧಿ ಕೂಡಾ ಭೇಟಿ ನೀಡುತ್ತಿಲ್ಲ" ಎಂದು ಹೇಳುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದಾರೆ. 

ಇಂಡಿಯಾ ಟುಡೇ ಟಿವಿ ಜತೆ ಮಾತನಾಡಿದ ಅವರು, "ಫಿರೋಝ್ ಗಾಂಧಿ ಖ್ಯಾತ ಪತ್ರಕರ್ತ, ರಾಜಕಾರಣಿ ಹಾಗೂ ಸ್ವಾತಂತ್ರ್ಯ ಯೋಧ. ದೇಶ ಸ್ವತಂತ್ರ್ಯವಾಗಲು ಅವರು ನೀಡಿದ ಕೊಡುಗೆ ಅಪಾರ. ಆದರೆ ಈಗ ಅವರ ಸಮಾಧಿ ಸ್ಥಳಕ್ಕೆ ಯಾರೂ ಭೇಟಿ ಕೂಡಾ ನೀಡುತ್ತಿಲ್ಲ. ಮೊಮ್ಮಗ ರಾಹುಲ್‌ ಗಾಂಧಿಗೆ ಕೂಡಾ ಇಲ್ಲಿಗೆ ಭೇಟಿ ನೀಡಲು ಸಮಯವಿಲ್ಲ. ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ನಿರ್ಲಕ್ಷಿಸಲಾಗುತ್ತಿದೆ" ಎಂದು ವಿವರಿಸಿದರು.

"ಬಿಜೆಪಿಯವರು ಇದನ್ನು ರಾಜಕೀಯ ವಿಷಯವಾಗಿ ಮಾಡುತ್ತಿಲ್ಲ. ಇಲ್ಲಿನ ವಾತಾವರಣದಿಂದಲೇ ಇದು ತಿಳಿಯುತ್ತದೆ. ಈ ಪ್ರದೇಶ ಈಗ ನಿರ್ಜನವಾಗಿದೆ. ಈ ಮುತ್ಸದ್ಧಿಯನ್ನು ಎಲ್ಲಿ ಸಮಾಧಿ ಮಾಡಲಾಗಿದೆ ಎನ್ನುವುದು ಕೂಡಾ ಜನತೆಗೆ ಗೊತ್ತಿಲ್ಲ. ರಾಹುಲ್‌ ಗಾಂಧಿ ಕನಿಷ್ಠ ಒಂದು ಬಾರಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅವರ ಅಜ್ಜನಿಗಾದರೂ ಗೌರವ ಸಲ್ಲಿಸಬೇಕು ಎನ್ನುವುದು ನಮ್ಮ ಬಯಕೆ" ಎಂದು ಫಿರೋಝ್ ಗಾಂಧಿ ಸಮಾಧಿಗೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದ ರಝಾ ಹೇಳಿದರು.

ಆದರೆ ಸಚಿವರ ಹೇಳಿಕೆ ಕೇವಲ ಪ್ರಚಾರ ತಂತ್ರ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಝೀಶನ್ ಹೈದರ್ ಕಿಡಿ ಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News