ಸಾರ್ವಜನಿಕ ನಳ್ಳಿ ಬಳಸುವಂತಿಲ್ಲ, ಹೊಟೇಲ್ ಗಳಲ್ಲಿ ಲೋಟ ಮುಟ್ಟುವಂತಿಲ್ಲ

Update: 2019-01-22 07:28 GMT
ಫೋಟೊ ಕೃಪೆ: scroll.in

#ಮೇಲ್ಜಾತಿಗಳ ಮನೆಗಳಲ್ಲಿ ಪುಕ್ಕಟೆ ದುಡಿಯಬೇಕು ಮಾದಿಗರು

#“ನಾವು ಅವರನ್ನು(ಮಾದಿಗರು) ಮುಟ್ಟೋದಿಲ್ಲ, ಮನೆಗೂ ಸೇರಿಸಲ್ಲ”

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 7 ದಶಕಗಳು ಕಳೆದಿದ್ದರೂ, ಮನುಷ್ಯ ಆಧುನಿಕ ಜಗತ್ತಿನೊಡನೆ ತೆರೆದುಕೊಂಡಿದ್ದರೂ, ಮನುಷ್ಯನನ್ನು ಮತ್ತೊಬ್ಬ ಮನುಷ್ಯ ಹೀನವಾಗಿ ಕಾಣುವ ಜಾತಿ ಪದ್ಧತಿ ದೇಶದಲ್ಲಿ ಹಲವೆಡೆ ಇನ್ನೂ ಜೀವಂತವಿದೆ. ರಾಜ್ಯದ ಹಾವೇರಿಯ ರಾಣೆಬೆನ್ನೂರು ತಾಲೂಕಿನಲ್ಲಿರುವ ಜಾತಿಯಾಧಾರಿತ ತಾರತಮ್ಯ ಇನ್ನೂ ಆಳವಾಗಿದೆ. ಈ ಬಗ್ಗೆ scroll.in ನಲ್ಲಿ ಎಸ್. ಸೆಂಥಾಲಿರ್ ಬರೆದ ಲೇಖನದ ಮುಖ್ಯಾಂಶಗಳು ಈ ಕೆಳಗಿದೆ.

‘ಸ್ವಾಭಿಮಾನಿ ದಲಿತ ಶಕ್ತಿ’ ಸಂಘಟನೆಯು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ 87 ಗ್ರಾಮಗಳಲ್ಲಿ ವಾಸವಿರುವ ದಲಿತ ಕುಟುಂಬಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಎರಡೂವರೆ ವರ್ಷಗಳ ಕಾಲ ಕೈಗೊಂಡಿದ್ದ ಅಧ್ಯಯನದ ವರದಿಯನ್ನು ಇತ್ತೀಚಿಗೆ ಬಿಡುಗಡೆಗೊಳಿಸಿದೆ. ದೇಶದಲ್ಲಿ ಅಸ್ಪೃಶ್ಯತೆ ನಿರ್ಮೂಲನವನ್ನು ಅಧಿಕೃತವಾಗಿ ಘೋಷಿಸಿ ಆರು ದಶಕಗಳೇ ಕಳೆದಿದ್ದರೂ ಈ ಗ್ರಾಮಗಳಲ್ಲಿ ಇನ್ನೂ ತಾಂಡವವಾಡುತ್ತಿರುವ ಅಸ್ಪೃಶ್ಯತೆ ಸೇರಿದಂತೆ ಹಲವಾರು ಆಘಾತಕಾರಿ ಅಂಶಗಳನ್ನು ಈ ವರದಿಯು ಬಹಿರಂಗಗೊಳಿಸಿದೆ.

ಹರಣಗಿರಿ ಇಂತಹ ಗ್ರಾಮಗಳಲ್ಲೊಂದಾಗಿದೆ. 2017 ಮಾರ್ಚ್‌ ನಲ್ಲಿ ಇಲ್ಲಿಯ ಮಾದಿಗ ಸಮುದಾಯದ ಸದಸ್ಯರು ಗ್ರಾಮದಲ್ಲಿಯ ಕ್ಷೌರದಂಗಡಿಗಳಲ್ಲಿ ತಮಗೆ ಪ್ರವೇಶ ದೊರೆಯಬೇಕು ಎಂದು ಆಗ್ರಹಿಸಿದಾಗ ಅವರಿಗೆ ಕ್ಷೌರವನ್ನು ನಿರಾಕರಿಸಿ ಎಲ್ಲ ಮೂರೂ ಅಂಗಡಿಗಳನ್ನು ಮುಚ್ಚಲಾಗಿತ್ತು. ಕ್ಷೌರಿಕರು ಈಗ ಇತರ ಸಮುದಾಯಗಳ ಮನೆಗಳಿಗೇ ತೆರಳಿ ಸೇವೆಯನ್ನು ನೀಡುತ್ತಿದ್ದಾರೆ. ಮಾದಿಗರು ಮಾತ್ರ ಕ್ಷೌರ ಮಾಡಿಸಿಕೊಳ್ಳಲು ಈಗಲೂ 19 ಕಿ.ಮೀ.ದೂರದ ರಾಣೆಬೆನ್ನೂರಿಗೆ ಹೋಗುತ್ತಿದ್ದಾರೆ. ಅವರಿಗೆ ಬೇರೆ ದಾರಿಯೇ ಇಲ್ಲ. ಅಂದ ಹಾಗೆ ಈ ಗ್ರಾಮದಲ್ಲಿ 515 ಮಾದಿಗರು ವಾಸವಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಒಟ್ಟು 108 ಗ್ರಾಮಗಳ ಪೈಕಿ ಈ 87 ಗ್ರಾಮಗಳಲ್ಲಿ ಒಟ್ಟು 4,076 ಮಾದಿಗ ಕುಟುಂಬಗಳು ಬದುಕು ಸವೆಸುತ್ತಿವೆ. 20 ಗ್ರಾಮಗಳಲ್ಲಿ ಈ ಜನರು ಕುಡಿಯುವ ನೀರಿಗಾಗಿ ಸಾರ್ವಜನಿಕ ನಳ್ಳಿಗಳನ್ನು ಬಳಸುವಂತಿಲ್ಲ. 72 ಗ್ರಾಮಗಳಲ್ಲಿ ದೇವಸ್ಥಾನಗಳಿಗೆ ಅವರಿಗೆ ಪ್ರವೇಶವಿಲ್ಲ. 57 ಗ್ರಾಮಗಳಲ್ಲಿಯ ಚಹಾದಂಗಡಿಗಳಲ್ಲಿ ಮೇಲ್ಜಾತಿಗಳ ಜನರು ಚಹಾ ಕುಡಿಯುವ ಸ್ಟೀಲಿನ ಲೋಟಗಳನ್ನು ಅವರಿಗೆ ನೀಡುವುದಿಲ್ಲ, ಅವರಿಗಾಗಿಯೇ ಪ್ರತ್ಯೇಕ ಗ್ಲಾಸ್‌ಗಳು ಮತ್ತು ಮಗ್‌ ಗಳನ್ನಿರಿಸಲಾಗಿದೆ. ಮಾದಿಗರು ಚಹಾ ಕುಡಿದ ಬಳಿಕ ಈ ಗ್ಲಾಸ್‌ಗಳನ್ನು ತೊಳೆದಿಡಬೇಕಾದ್ದು ಅವರ ಅನಿವಾರ್ಯ ಕರ್ಮವಾಗಿದೆ.

ನಂದಿಹಳ್ಳಿ ಗ್ರಾಮದ ಚಹಾದಂಗಡಿಯ ಮೂಲೆಯೊಂದರಲ್ಲಿ ಕೊಳಕು ಮಗ್ ಕಂಡ ಅಧ್ಯಯನ ತಂಡದ ಸದಸ್ಯರು ಅದು ದಲಿತರಿಗೆ ಚಹಾ ನೀಡಲು ಬಳಕೆಯಾಗುತ್ತಿದೆಯೇ ಎಂದು ಪ್ರಶ್ನಿಸಿದ್ದರು. ಲಿಂಗಾಯತ ಸಮುದಾಯಕ್ಕೆ ಸೇರಿದ ಅಂಗಡಿಯ ಮಾಲಿಕ ಗಣೇಶ ಇದನ್ನು ನಿರಾಕರಿಸಿದ್ದನಾದರೂ ಮಾದಿಗ ಸಮುದಾಯದ ಕುರಿತು ತನ್ನ ಅಭಿಪ್ರಾಯವನ್ನು ಮುಚ್ಚಿಡಲು ಪ್ರಯತ್ನಿಸಲಿಲ್ಲ. ‘ನಾವು ಅವರನ್ನು(ಮಾದಿಗರು) ಮುಟ್ಟುವುದಿಲ್ಲ. ನಮ್ಮ ಮನೆಗಳು ಮತ್ತು ದೇವಸ್ಥಾನಗಳಲ್ಲಿ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಅವರು ದೇವಸ್ಥಾನದ ಹೊರಗಿನಿಂದಲೇ ನಮಸ್ಕಾರ ಮಾಡುತ್ತಾರೆ’ ಎಂದು ಆತ ಹೇಳಿದ.

ಜಾತಿಯಾಧಾರಿತ ತಾರತಮ್ಯ ಈ ಗ್ರಾಮಗಳಲ್ಲಿ ಆಳವಾಗಿ ಬೇರೂರಿದೆ. ಗ್ರಾಮದಲ್ಲಿ ಜಾನುವಾರುಗಳು ಸತ್ತರೆ ಅವುಗಳ ಕಳೇಬರಗಳನ್ನು ಈ ಮಾದಿಗರೇ ವಿಲೇವಾರಿ ಮಾಡಬೇಕು. ಇದಕ್ಕಾಗಿ ಅವರಿಗೆ ನೂರಿನ್ನೂರು ರೂ. ನೀಡಿದರೆ ಅದೇ ದೊಡ್ಡದು. ಮೇಲ್ಜಾತಿಗಳ ಮನೆಗಳಲ್ಲಿ ಮದುವೆಗಳು ನಡೆದರೆ ಮಾದಿಗರು ಪುಕ್ಕಟೆ ದುಡಿಯಬೇಕು. ಯಾರಾದರೂ ಸತ್ತರೆ ಗ್ರಾಮದಲ್ಲೆಲ್ಲ ಸುತ್ತಾಡಿ ಎಲ್ಲರಿಗೂ ಮಾಹಿತಿಯನ್ನು ನೀಡಬೇಕು. ಮೇಲ್ಜಾತಿಗಳ ಮನೆಗಳ ಕೆಲಸಗಳನ್ನೂ ಇವರು ಪುಕ್ಕಟೆಯಾಗಿಯೇ ಮಾಡಬೇಕು.

ದೇಶಕ್ಕೆ ಸ್ವಾತಂತ್ಯ ಬಂದು 70 ವರ್ಷಗಳು ಕಳೆದಿದ್ದರೂ ಮಾದಿಗ ಸಮುದಾಯದ ಹೆಚ್ಚಿನವರಿಗೆ ಯಾವುದೇ ಸೌಲಭ್ಯಗಳು ದೊರಕಿಲ್ಲ ಎನ್ನುತ್ತಾರೆ ಚಿತ್ರದುರ್ಗದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸ್ವಾಭಿಮಾನಿ ದಲಿತ ಶಕ್ತಿಯ ಸ್ಥಾಪಕಾಧ್ಯಕ್ಷ ಎಸ್.ಶಿವಲಿಂಗಂ.

ಮಾದಿಗರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಸರಕಾರವು ವಿಫಲಗೊಂಡಿದೆ ಎನ್ನುವುದನ್ನು ವರದಿಯು ಬಹಿರಂಗಗೊಳಿಸಿದೆ. ಸುಮಾರು ಶೇ.66ರಷ್ಟು ಮಾದಿಗ ಕುಟುಂಬಗಳು ಬಡತನ ರೇಖೆಯ ಕೆಳಗಿವೆ. ಶೇ.42ರಷ್ಟು ಕುಟುಂಬಗಳು ಯಾವುದೇ ಭೂಮಿಯನ್ನು ಹೊಂದಿಲ್ಲ. ಇತರ ಕುಟುಂಬಗಳು ಸ್ವಲ್ಪವೇ ಭೂಮಿಯನ್ನು ಹೊಂದಿವೆ. ಕೇವಲ ಶೇ.0.58ರಷ್ಟು ಮಾದಿಗ ಕುಟುಂಬಗಳು ಮಾತ್ರ ಐದು ಅಥವಾ ಅದಕ್ಕೂ ಹೆಚ್ಚಿನ ವಿಸ್ತೀರ್ಣದ ಭೂಮಿ ಮತ್ತು ಶೇ.0.1ರಷ್ಟು ಕುಟುಂಬಗಳು ಮಾತ್ರ ಎಂಟು ಎಕರೆಗಳಷ್ಟು ಭೂಮಿಯನ್ನು ಹೊಂದಿವೆ. ಹೆಚ್ಚಿನ ಗ್ರಾಮಗಳಲ್ಲಿ ಮಾದಿಗ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವಿಲ್ಲ, ಒಳಚರಂಡಿ ವ್ಯವಸ್ಥೆಯಿಲ್ಲ, ಅವರ ಮನೆಗಳಿಗೆ ತೆರಳುವ ರಸ್ತೆಗಳು ಡಾಂಬರನ್ನೂ ಕಂಡಿಲ್ಲ.

ಸರಕಾರವು ಹಿಂದೆ ಕೆಲವು ಗ್ರಾಮಗಳಲ್ಲಿ ಲಿಂಗಾಯತರಿಂದ ಭೂಮಿಯನ್ನು ಖರೀದಿಸಿ ಮಾದಿಗ ಕುಟುಂಬಗಳಿಗೆ ಹಂಚಿತ್ತು. ಈ ಕುಟುಂಬಗಳ ಬಳಿ ಹಕ್ಕುಪತ್ರಗಳು ಇವೆಯಾದರೂ ಮೂಲ ಭೂಮಾಲಕರ ಪೀಳಿಗೆಗಳು ಈಗ ಈ ಜಮೀನಿನ ಮೇಲೆ ಹಕ್ಕು ಸಾಧಿಸಿ ನ್ಯಾಯಾಲಯದ ಮೆಟ್ಟಲನ್ನೇರಿವೆ. ಹೀಗಾಗಿ ಮಾದಿಗರು ತಮ್ಮ ಮನೆಗಳನ್ನು ದುರಸ್ತಿ ಮಾಡಲಾಗುತ್ತಿಲ್ಲ, ಶೌಚಾಲಯಗಳನ್ನೂ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

 ಸರಕಾರಿ ಯೋಜನೆಗಳೂ ಈ ಜನರನ್ನು ಸರಿಯಾಗಿ ತಲುಪುತ್ತಿಲ್ಲ. ನವೆಂಬರ್‌ ನಲ್ಲಿ ಕರ್ನಾಟಕವನ್ನು ಸ್ವಚ್ಛ ಭಾರತ ಅಭಿಯಾನದಡಿ ಬಯಲು ಶೌಚ ಮುಕ್ತ ರಾಜ್ಯವೆಂದು ಘೋಷಿಸಲಾಗಿದೆ. ಆದರೆ ಅಧ್ಯಯನ ನಡೆಸಲಾದ ಗ್ರಾಮಗಳಲ್ಲಿ ಶೇ.70ರಷ್ಟು ಮಾದಿಗ ಕುಟುಂಬಗಳು ಶೌಚಾಲಯವನ್ನೇ ಹೊಂದಿಲ್ಲ!

ಕನಿಷ್ಠ 70 ಗ್ರಾಮಗಳಲ್ಲಿಯ ಮಾದಿಗ ಕುಟುಂಬಗಳಿಗೆ ಸರಕಾರದ ಸಮಾಜ ಕಲ್ಯಾಣ ಯೋಜನೆಗಳ ಯಾವುದೇ ಲಾಭಗಳು ತಲುಪಿಲ್ಲ. ಅವರಿಗೆ ಬ್ಯಾಂಕ್ ಸಾಲಗಳೂ ಸಿಗುತ್ತಿಲ್ಲ. ಶೈಕ್ಷಣಿಕವಾಗಿ ಈ ಜನರು ತೀರ ಹಿಂದುಳಿದ್ದಾರೆ. 87 ಗ್ರಾಮಗಳ ಪೈಕಿ ಮಾದಿಗ ಸಮುದಾಯದ ಕೇವಲ 23 ಪುರುಷರು ಮತ್ತು ಐವರು ಮಹಿಳೆಯರು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕೇವಲ ಎಂಟು ಪುರುಷರು ಮತ್ತು ಇಬ್ಬರು ಮಹಿಳೆಯರು ಕಾನೂನು ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಒಂಭತ್ತು ಜನರು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ಒಬ್ಬನೇ ಒಬ್ಬ ವೈದ್ಯಕೀಯ ವಿದ್ಯಾರ್ಥಿಯಿಲ್ಲ.

 ಮೂಲ ಸೌಕರ್ಯಗಳಿಗಾಗಿ ಮಾದಿಗರ ಹೋರಾಟ ಮುಂದುವರಿದಿದೆಯಾದರೂ ಎಷ್ಟೋ ಗ್ರಾಮಗಳಲ್ಲಿ ಅವರು ಸತ್ತ ಬಳಿಕ ಅಂತ್ಯಸಂಸ್ಕಾರ ನಡೆಸಲೂ ಸ್ಥಳಾವಕಾಶವಿಲ್ಲ. ತಮ್ಮವರ ಶವಗಳನ್ನು ಹೂಳಲು ಸ್ಥಳಕ್ಕಾಗಿ ಸಮುದಾಯದ ಮುಖಂಡರು ಮತ್ತು ಕುಟುಂಬಗಳು ಲಿಂಗಾಯತ ಸಮುದಾಯರ ಬಳಿ ಬೇಡಿಕೊಳ್ಳಬೇಕಾದ ಸ್ಥಿತಿಯಿದೆ.

ನಂದಿಹಳ್ಳಿಯಲ್ಲಿ ಮಾದಿಗ ಸಮುದಾಯದ ವ್ಯಕ್ತಿಯೋರ್ವ 10 ತಿಂಗಳ ಹಿಂದೆ ನಿಧನನಾದಾಗ ಶವವನ್ನು ಹೂಳಲು ಸ್ಥಳವಿರಲಿಲ್ಲ. ಸಾರ್ವಜನಿಕ ರುದ್ರಭೂಮಿಯಲ್ಲಿ ಶವದ ಅಂತ್ಯಸಂಸ್ಕಾರಕ್ಕೆ ಅವಕಾಶಕ್ಕಾಗಿ ಪ್ರತಿಭಟನೆ ನಡೆಸುವುದನ್ನು ಬಿಟ್ಟರೆ ಅನ್ಯಮಾರ್ಗ ಸಮುದಾಯದ ಬಳಿಯಿರಲಿಲ್ಲ. ಕೊನೆಗೂ ಪೊಲೀಸರು ಮತ್ತು ಸ್ಥಳೀಯ ಶಾಸಕರ ಮಧ್ಯಪ್ರವೇಶದ ಬಳಿಕ ಒಂದು ಎಕರೆ ವಿಸ್ತೀರ್ಣದ ರುದ್ರಭೂಮಿಯ ಒಂದು ಮೂಲೆಯಲ್ಲಿ ಶವವನ್ನು ಹೂಳಲು ಅವಕಾಶ ದೊರಕಿತ್ತು. ಆದರೆ ಗ್ರಾಮದ ಲಿಂಗಾಯತ ಸಮುದಾಯ ಮಾದಿಗರ ವಿರುದ್ಧ ತಿರುಗಿಬಿದ್ದಿತ್ತು. ಮಾದಿಗ ಸಮುದಾಯಕ್ಕೆ ಬಹಿಷ್ಕಾರ ಹಾಕಿದ ಲಿಂಗಾಯಿತರು ಅವರನ್ನು ಕೂಲಿಗೂ ಕರೆದಿರಲಿಲ್ಲ. ಹೂಳಲಾಗಿರುವ ಶವವನ್ನು ಹೊರಕ್ಕೆ ತೆಗೆದರೆ ಮಾತ್ರ ಕೂಲಿ ಕೆಲಸ ನೀಡುವುದಾಗಿ ಅವರು ಷರತ್ತು ಒಡ್ಡಿದ್ದರು. ಇದಕ್ಕೊಪ್ಪದ ಮಾದಿಗರಿಗೆ ನೆರೆಯ ಗ್ರಾಮಗಳಲ್ಲಿ ದುಡಿಮೆ ಅನಿವಾರ್ಯವಾಗಿದೆ.

ತಾಲೂಕಿನಲ್ಲಿ ತಾಂಡವವಾಡುತ್ತಿರುವ ಜಾತಿಯಾಧಾರಿತ ತಾರತಮ್ಯದ ಬಗ್ಗೆ ಪ್ರಶ್ನೆಗೆ ತಹಶೀಲ್ದಾರ ಚಿದಂಬರ ಎಸ್. ಕುಲಕರ್ಣಿ ಅವರು, ಇದು ಅವರು ಸ್ವಯಂ ಹೇರಿಕೊಂಡಿರುವ ನಂಬಿಕೆಯಾಗಿದೆ, ಇದು ಜಾತಿ ತಾರತಮ್ಯವಲ್ಲ ಎಂದು ಉತ್ತರಿಸಿದ್ದಾರೆ.

ಈ ಗ್ರಾಮಗಳಲ್ಲಿ ಬಹಿರಂಗವಾಗಿಯೇ ಅಸ್ಪಶ್ಯತೆ ಆಚರಣೆಯಾಗುತ್ತಿದ್ದರೂ ಜಿಲ್ಲಾಡಳಿತ ಮತ್ತು ಸರಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿವೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News