ವಿದೇಶಾಂಗ ಸಚಿವಾಲಯ ವಿತರಿಸಿದ ಪುಸ್ತಿಕೆಯಲ್ಲಿ #ಮೀಟೂ ಆರೋಪಿ ಎಂಜೆ ಅಕ್ಬರ್ ಫೋಟೊ : ವಿವಾದ

Update: 2019-01-22 09:12 GMT

ವಾರಣಾಸಿ, ಜ. 22 : ಮೀಟೂ ಆರೋಪದ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಹುದ್ದೆಗೆ ಕೆಲ ತಿಂಗಳುಗಳ ಹಿಂದೆ ರಾಜೀನಾಮೆ ನೀಡಿದ್ದ ಎಂ ಜೆ ಅಕ್ಬರ್ ಅವರ ಭಾವಚಿತ್ರಗಳನ್ನೊಳಗೊಂಡ ಪುಸ್ತಿಕೆಯನ್ನು ಇಲ್ಲಿ ಸೋಮವಾರ ಆರಂಭಗೊಂಡಿರುವ ಪ್ರವಾಸಿ ಭಾರತೀಯ ದಿವಸ್ ಪ್ರತಿನಿಧಿಗಳಿಗೆ ವಿತರಿಸಿದ ಕ್ರಮ ವಿವಾದಕ್ಕೀಡಾಗಿದೆ.

ಆದರೆ ಈ ಆಚರಣೆಗೂ ಅಕ್ಬರ್ ಅವರಿಗೂ ಯಾವುದೇ ಸಂಬಂಧವಿಲ್ಲ, ಅಕ್ಬರ್ ಸಚಿವ ಹುದ್ದೆಯಿಂದ ರಾಜೀನಾಮೆ ನೀಡುವುದಕ್ಕಿಂತ ಮುಂಚೆಯೇ ಮೇ ತಿಂಗಳಲ್ಲಿ ಈ ಪುಸ್ತಕ ಪ್ರಕಟವಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಚಿವಾಲಯದ ಸಾಧನೆಗಳನ್ನು ಬಿಂಬಿಸಿರುವ ಈ ಪುಸ್ತಿಕೆಯಲ್ಲಿ ಸಚಿವಾಲಯದ ಎಲ್ಲಾ ಸಚಿವರ ಚಿತ್ರಗಳನ್ನು ಪ್ರಕಟಿಸಲಾಗಿದೆ.

ಈ ಪುಸ್ತಿಕೆಯ ಬಗೆಗಿನ ವಿವಾದ ದುರದೃಷ್ಟಕರ ಎಂದು ಸಚಿವಾಲಯ ಹೇಳಿದೆ. ಆದರೆ ಪುಸ್ತಕದ ಒಳಗಿನ ಪುಟಗಳಲ್ಲೂ  ಅಕ್ಬರ್ ಅವರ ಭಾವಚಿತ್ರವಿದ್ದು, ಸಚಿವಾಲಯ ತಂಡದ ಭಾಗವಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್,  ಸಹಾಯಕ ಸಚಿವ ವಿ ಕೆ ಸಿಂಗ್ ಮತ್ತಿತರರ ಜತೆ ಅಕ್ಬರ್ ಕೂಡ ಕಾಣಿಸಿಕೊಂಡಿದ್ದಾರೆ.

ಕಾಂಗ್ರೆಸ್ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ''#ಮೀಟೂ ಆರೋಪಿಯನ್ನು ಸ್ಟಾರ್ ಎಂಬಂತೆ ಬಿಂಬಿಸಲಾಗಿದೆ. ಅವರು ರಾಜೀನಾಮೆ ನೀಡಿಲ್ಲವೇ ?,'' ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಹಲವಾರು ಪತ್ರಕರ್ತೆಯರೂ ಈ ಬೆಳವಣಿಗೆಯನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News