ಶೇ. 50 ವಿವಿಪ್ಯಾಟ್ ಸ್ಲಿಪ್ ಲೆಕ್ಕ ಹಾಕಲು ಕಾಂಗ್ರೆಸ್ ಆಗ್ರಹ

Update: 2019-01-22 17:08 GMT

ಹೊಸದಿಲ್ಲಿ, ಜ. 22: ಮತಗಳನ್ನು ಪರಿಶೀಲಿಸಲು ಪ್ರತಿ ಸಂಸತ್ ಕ್ಷೇತ್ರದ ಕನಿಷ್ಠ ಅರ್ಧದಷ್ಟು ವಿವಿಪ್ಯಾಟ್ ಸ್ಲಿಪ್‌ಗಳನ್ನು ಯಾದೃಚ್ಛಿಕವಾಗಿ ಲೆಕ್ಕ ಹಾಕಬೇಕು ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ. ಪ್ರಸ್ತುತ ಈ ಉದ್ದೇಶಕ್ಕಾಗಿ ಶೇ. 10 ವಿವಿಪ್ಯಾಟ್ ಸ್ಲಿಪ್‌ಗಳನ್ನು ಮಾತ್ರ ಯಾದೃಚ್ಛಿಕವಾಗಿ ಲೆಕ್ಕ ಹಾಕಲಾಗುತ್ತಿದೆ. ಶೇ. 50 ವಿವಿಪ್ಯಾಟ್ ಸ್ಲಿಪ್‌ಗಳನ್ನು ಲೆಕ್ಕ ಹಾಕಿದರೆ ಮಾತ್ರ ಮತದಾನ ಪ್ರಕ್ರಿಯೆ ಪವಿತ್ರವಾಗಿದೆ ಹಾಗೂ ವಿಶ್ವಾಸಾರ್ಹ ವಾಗಿದೆ ಎಂದು ಮತದಾರರು ಸಂಪೂರ್ಣವಾಗಿ ಭರವಸೆ ಹೊಂದಲು ಸಾಧ್ಯ ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 ಚುನಾವಣೆ ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯಬೇಕಾಗಿರುವುದು ತುಂಬಾ ಮುಖ್ಯ. ಆದರೆ, ಮತದಾರರಲ್ಲಿ ಮತದಾನ ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯುತ್ತಿದೆ ಎಂಬ ನಂಬಿಕೆ ಮೂಡಬೇಕು ಎಂದು ಅವರು ಹೇಳಿದರು. ಪ್ರತಿಪಕ್ಷಗಳು ಕಳೆದ ಎರಡು ವರ್ಷಗಳಿಂದ ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಲೇ ಇವೆ. ಆದರೂ ಅದನ್ನು ನಿರಾಕರಿಸುತ್ತಿರುವ ಚುನಾವಣಾ ಆಯೋಗ, ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ ಎಂದರು.

 ದೊಡ್ಡ ರಾಷ್ಟ್ರವಾದ ಯುರೋಪ್ ಕೂಡ ಮತ ಪತ್ರಗಳಿಗೆ ಹಿಂದಿರುಗಿವೆ. ಆದುದರಿಂದ ಈ ವಿವಾದ ಪರಿಹಾರವಾಗು ವವರೆಗೆ, ಪ್ರತಿ ಸಂಸದೀಯ ಕ್ಷೇತ್ರದಲ್ಲಿ ಕನಿಷ್ಠ ಶೇ. 50 ವಿವಿಪಾಟ್ ಸ್ಲಿಪ್‌ಗಳನ್ನು ಯಾದೃಚ್ಛಿಕವಾಗಿ ಲೆಕ್ಕ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News