ವೈದ್ಯಕೀಯ, ಆರೋಗ್ಯ, ನೈರ್ಮಲ್ಯಕ್ಕೆ ಸರಕಾರ ವ್ಯಯಿಸುವುದಕ್ಕಿಂತ ಹೆಚ್ಚು ಹಣ ಮುಕೇಶ್ ಅಂಬಾನಿ ಬಳಿ!

Update: 2019-01-22 17:30 GMT

ಹೊಸದಿಲ್ಲಿ, ಜ.22: ವೈದ್ಯಕೀಯ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ನೀರು ಪೂರೈಕೆ ಇವುಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವ್ಯಯಿಸುತ್ತಿರುವ ಮೊತ್ತ 2.08 ಲ.ಕೋ.ರೂ. ಇದು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ 2.8 ಲ.ಕೋ.ರೂ.ಗಳ ಸಂಪತ್ತಿಗಿಂತ ಕಡಿಮೆ!.

ದೇಶದ ಅತ್ಯುನ್ನತ ಒಂಭತ್ತು ಬಿಲಿಯಾಧೀಶರ ಬಳಿ ಇರುವ ಸಂಪತ್ತು ಜನಸಂಖ್ಯೆಯ ಕೆಳಸ್ತರದ ಅರ್ಧಭಾಗವು ಹೊಂದಿರುವ ಒಟ್ಟೂ ಸಂಪತ್ತಿಗೆ ಸಮನಾಗಿದೆ. ಭಾರತದ ಜನಸಂಖ್ಯೆಯ ಶೇ.10ರಷ್ಟು ಶ್ರೀಮಂತರು ಶೇ.77ರಷ್ಟು ಒಟ್ಟು ರಾಷ್ಟ್ರೀಯ ಸಂಪತ್ತಿನ ಒಡೆಯರಾಗಿದ್ದಾರೆ. ಈ ಪೈಕಿ ಶೇ.51.53 ಸಂಪತ್ತು ಶೇ.1ರಷ್ಟು ಶ್ರೀಮಂತರ ಬಳಿಯೇ ಇದೆ. ಜನಸಂಖ್ಯೆಯ ಶೇ.60 ರಷ್ಟು ಜನರ ಬಳಿಯಿರುವುದು ಒಟ್ಟು ರಾಷ್ಟ್ರೀಯ ಸಂಪತ್ತಿನ ಕೇವಲ ಶೇ.4.8ರಷ್ಟು ಭಾಗ ಮಾತ್ರ. 2004ರಿಂದ ದೇಶದಲ್ಲಿಯ ಶೇ.10ರಷ್ಟು ಕಡುಬಡವರು (13.6 ಕೋ) ಸಾಲದ ಕೂಪದಲ್ಲಿಯೇ ಮುಂದುವರಿದಿದ್ದಾರೆ ಎಂದು ಆಕ್ಸ್‌ಫಾಮ್ ನಡೆಸಿದ ಅಧ್ಯಯನ ವರದಿಯು ಬೆಟ್ಟುಮಾಡಿದೆ.

2018ರಲ್ಲಿ ಭಾರತದಲ್ಲಿಯ ಬಿಲಿಯಾಧೀಶರ ಸಂಪತ್ತು ಪ್ರತಿ ದಿನಕ್ಕೆ 2,200 ಕೋ.ರೂ.ಗಳಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಜನಸಂಖ್ಯೆಯ ಕೆಳಸ್ತರದ ಶೇ.50 ರಷ್ಟು ಜನರ ಸಂಪತ್ತಿನಲ್ಲಿ ಶೇ.3ರಷ್ಟು ಏರಿಕೆಯಾಗಿದ್ದರೆ,ಶೇ.1ರಷ್ಟು ಭಾರತದ ಅತ್ಯಂತ ಶ್ರೀಮಂತರ ಸಂಪತ್ತು ಪ್ರತಿದಿನ ಶೇ.39ರಂತೆ ಹೆಚ್ಚಳ ಕಂಡಿದೆ.

 ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯು ಬಡತನದ ವಿರುದ್ಧದ ಹೋರಾಟವನ್ನು ಇನ್ನಷ್ಟು ಸವಾಲಿನದ್ದಾಗಿಸಿದೆ ಮತ್ತು ವಿಶ್ವಾದ್ಯಂತ ಆರ್ಥಿಕತೆಗಳಿಗೆ ಹಾನಿಯನ್ನುಂಟು ಮಾಡುತ್ತಿದೆ ಮತ್ತು ಸಿಟ್ಟಿಗೆ ಕಾರಣವಾಗುತ್ತಿದೆ ಎಂದು ವರದಿಯು ಹೇಳಿದೆ.

ಭಾರತದ ಕೆಲವೇ ಶ್ರೀಮಂತರು ದೇಶದ ಸಂಪತ್ತಿನ ಹೆಚ್ಚಿನ ಪಾಲನ್ನು ಗುಡ್ಡೆಹಾಕುತ್ತಿರುವುದು ನೈತಿಕ ಘಾತಕತನವಾಗಿದೆ ಮತ್ತು ಬಡವರು ಈಗಲೂ ತಮ್ಮ ಮುಂದಿನ ಊಟಕ್ಕಾಗಿ ಪರದಾಡುತ್ತಿದ್ದಾರೆ ಎಂದು ಆಕ್ಸ್‌ಫಾಮ್ ಇಂಟರ್‌ನ್ಯಾಷನಲ್ ತನ್ನ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News