ನಡಾಲ್, ಸ್ಟಿಫನೊಸ್, ಕ್ವಿಟೋವಾ ಸೆಮಿ ಪೈನಲ್

Update: 2019-01-22 18:56 GMT

ಮೆಲ್ಬೋರ್ನ್, ಜ.22: ಸ್ಪೇನ್ ಆಟಗಾರ ರಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಂತಿಮ-4ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಡಾಲ್ 21ರ ಹರೆಯದ ಶ್ರೇಯಾಂಕರಹಿತ ಆಟಗಾರ ಫ್ರಾನ್ಸಿಸ್ ಟಿಯಾಫೊ ಅವರನ್ನು 6-3, 6-4, 6-2 ಸೆಟ್‌ಗಳಿಂದ ಮಣಿಸಿದರು.

ಟೂರ್ನಿಯಲ್ಲಿ ಐದನೇ ಶ್ರೇಯಾಂಕದ ಕೆವಿನ್ ಆ್ಯಂಡರ್ಸನ್ ಹಾಗೂ 20ನೇ ಶ್ರೇಯಾಂಕದ ಗ್ರಿಗೊರ್ ಡಿಮಿಟ್ರೊವ್‌ರನ್ನು ಸೋಲಿಸಿ ದೈತ್ಯ ಸಂಹಾರಿಯಾಗಿ ಹೊರಹೊಮ್ಮಿದ್ದ 21ರ ಹರೆಯದ ಟಿಯಾಫೊ ಪ್ರಮುಖ ಟೂರ್ನಿಯಲ್ಲಿ ಆಡಿದ ತನ್ನ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಎದುರು ಮಂಡಿಯೂರಿದರು. 2003ರ ಬಳಿಕ ಸೆಮಿ ಫೈನಲ್ ತಲುಪಿದ ಅಮೆರಿಕದ ಮೊದಲ ಆಟಗಾರನಾಗಬೇಕೆಂಬ ಕನಸು ಕೈಗೂಡಲಿಲ್ಲ. ವಿಶ್ವದ ನಂ.2ನೇ ಆಟಗಾರ ನಡಾಲ್ 107 ನಿಮಿಷಗಳಲ್ಲಿ ಜಯ ದಾಖಲಿಸಿದ್ದು, ಸೆಮಿ ಫೈನಲ್ ಸುತ್ತಿನಲ್ಲಿ ಗ್ರೀಕ್‌ನ ಇನ್ನೋರ್ವ ಉದಯೋನ್ಮುಖ ಸ್ಟಾರ್, ಹಾಲಿ ಚಾಂಪಿಯನ್ ರೋಜರ್ ಫೆಡರರ್‌ಗೆ ಸೋಲುಣಿಸಿ ಶಾಕ್ ನೀಡಿದ್ದ ಸ್ಟಿಫನೊಸ್ ಸಿಟ್‌ಸಿಪಾಸ್‌ರನ್ನು ಎದುರಿಸಲಿದ್ದಾರೆ. ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಿದ ಸ್ಟಿಫನೊಸ್: ಗ್ರೀಕ್‌ನ ಯುವ ಆಟಗಾರ ಸ್ಟಿಫನೊಸ್ ಸಿಟ್‌ಸಿಪಾಸ್ ದಿಟ್ಟ ಹಾಗೂ ಪ್ರಬುದ್ಧ ಪ್ರದರ್ಶನ ನೀಡುವುದರೊಂದಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಮಂಗಳವಾರ 3 ಗಂಟೆ, 15 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 20ರ ಹರೆಯದ ಸ್ಟಿಫನೊಸ್ ಸ್ಪೇನ್‌ನ ರೊಬರ್ಟೊ ಬೌಟಿಸ್ಟಾ ಅಗುಟ್‌ರನ್ನು 7-5, 4-6, 6-4, 7-6(7/2)ಸೆಟ್‌ಗಳಿಂದ ಮಣಿಸಿದ್ದಾರೆ. ಸ್ವಿಸ್ ಹಿರಿಯ ಆಟಗಾರ ರೋಜರ್ ಫೆಡರರ್‌ರನ್ನು ಸೋಲಿಸಿ ವಿಶ್ವದ ಗಮನ ಸೆಳೆದಿದ್ದ 22ನೇ ಶ್ರೇಯಾಂಕದ ಸ್ಟಿಫನೊಸ್ ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ ಸಾಧನೆ ಮಾಡಿದ್ದಾರೆ.

2018ರಲ್ಲಿ ಎಟಿಪಿ ಟೂರ್ ಪ್ರಶಸ್ತಿ ಜಯಿಸಿ ಗಮನ ಸೆಳೆದಿದ್ದ ಸ್ಟಿಫನೊಸ್ ಮುಂದಿನ ಸುತ್ತಿನಲ್ಲಿ ರಫೆಲ್ ನಡಾಲ್ ಸವಾಲು ಎದುರಿಸಲಿದ್ದಾರೆ.

ವೃತ್ತಿಜೀವನದಲ್ಲಿ ಈ ಟೂರ್ನಿಯ ವೇಳೆಯೇ ನನಗೆ ಕೆಲವು ಸಮಸ್ಯೆ ಕಾಣಿಸಿಕೊಂಡಿತ್ತು. ಇಂದು ನಾನು ಆಡಿದ್ದ ರೀತಿಯಿಂದ ಸಂತಸವಾಗಿದೆ ಎಂದು ಕಳೆದ ವರ್ಷ ಮರಿನ್ ಸಿಲಿಕ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಗಾಯಗೊಂಡು ನಿವೃತ್ತಿಯಾಗಿದ್ದ ನಡಾಲ್ ಹೇಳಿದ್ದಾರೆ.

ಕ್ವಿಟೋವಾಗೆ ತಲೆಬಾಗಿದ ಬಾರ್ಟಿ

ಸ್ಥಳೀಯ ಆಟಗಾರ್ತಿ ಆ್ಯಶ್ಲೆ ಬಾರ್ಟಿ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ 8ನೇ ಶ್ರೇಯಾಂಕದ ಪೆಟ್ರಾ ಕ್ವಿಟೋವಾ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ಬಾರ್ಟಿ ಅವರನ್ನು 6-1, 6-4 ಸೆಟ್‌ಗಳಿಂದ ಮಣಿಸಿದರು. ನೇರ ಸೆಟ್‌ಗಳಿಂದ ಜಯ ಸಾಧಿಸಿದ ಝೆಕ್ ಆಟಗಾರ್ತಿ ಭಾವೋದ್ವೇಗಕ್ಕೆ ಒಳಗಾದರು. ಚೂರಿ ಇರಿತದ ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿ ಗ್ರಾನ್‌ಸ್ಲಾಮ್ ಪಂದ್ಯದಲ್ಲಿ ಕ್ವಿಟೋವಾ ಉತ್ತಮ ಪ್ರದರ್ಶನ ನೀಡಿದ್ದಾರೆ. 2016ರಲ್ಲಿ ಝೆಕ್ ಗಣರಾಜ್ಯದ ತನ್ನ ಮನೆಯಲ್ಲಿದ್ದಾಗ 28ರ ಹರೆಯದ ಕ್ವಿಟೋವಾ ಅವರ ಮೇಲೆ ಚೂರಿ ದಾಳಿ ನಡೆದಿತ್ತು. ಕೈಗೆ ಗಾಯವಾದ ಕಾರಣ ಅವರು ಸರ್ಜರಿಗೆ ಒಳಗಾಗಿದ್ದರು. ಸಿಡ್ನಿ ಇಂಟರ್‌ನ್ಯಾಶನಲ್ ಟೂರ್ನಿಯನ್ನು ಜಯಿಸಿರುವ ಕ್ವಿಟೋವಾ ಈ ವರ್ಷ ಸತತ 10ನೇ ಪಂದ್ಯವನ್ನು ಜಯಿಸಿದ್ದು, ಮುಂದಿನ ಸುತ್ತಿನಲ್ಲಿ ಶ್ರೇಯಾಂಕರಹಿತ ಅಮೆರಿಕದ ಡ್ಯಾನಿಲ್ಲೆ ಕಾಲಿನ್ಸ್‌ರನ್ನು ಎದುರಿಸಲಿದ್ದಾರೆ.

ಕಾಲಿನ್ಸ್ ಸೆಮಿಗೆ ಜಿಗಿತ

ಪ್ರಥಮ ಸೆಟ್‌ನ ಹಿನ್ನಡೆಯನ್ನು ಯಶಸ್ವಿಯಾಗಿ ಮೆಟ್ಟಿನಿಂತ ಅಷ್ಟೇನೂ ಪ್ರಸಿದ್ಧರಲ್ಲದ ಶ್ರೇಯಾಂಕರಹಿತ ಆಟಗಾರ್ತಿ ಅಮೆರಿಕದ ಡ್ಯಾನಿಲ್ಲೆ ಕಾಲಿನ್ಸ್ ಆಸ್ಟ್ರೇಲಿಯನ್ ಓಪನ್‌ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಮಂಗಳವಾರ ಇಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅವರು ವಿಶ್ವದ ನಂ.44 ಆಟಗಾರ್ತಿ ಅನಸ್ತಾಸಿಯಾ ಪಾವ್ಲಿಚೆಂಕೊವಾ ಅವರಿಗೆ 2-6, 7-5, 6-1 ಸೆಟ್‌ಗಳ ಅಂತರದಿಂದ ಸೋಲಿನ ರುಚಿ ತೋರಿಸಿದರು.

25 ವರ್ಷ ವಯಸ್ಸಿನ ಕಾಲಿನ್ಸ್ ಟೂರ್ನಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆ್ಯಂಜೆಲಿಕ್ ಕೆರ್ಬರ್ ಅವರಿಗೆ 6-0, 6-2 ಸೆಟ್‌ಗಳಿಂದ ಮಣ್ಣುಮುಕ್ಕಿಸಿ ಸುದ್ದಿಯಾಗಿದ್ದರು.

 ಆದರೆ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅದೇ ಲಯವನ್ನು ಮುಂದುವರಿಸುವಲ್ಲಿ ಅವರು ವಿಫಲರಾದರು. ಆದರೆ ಗೆಲುವು ಸಾಧಿಸುವಲ್ಲಿ ಹಿಂದೆ ಬೀಳಲಿಲ್ಲ. ಮೊದಲ ಸೆಟ್‌ನ್ನು ಗೆಲ್ಲುವ ಮೂಲಕ ಪಾವ್ಲಿಚೆಂಕೊವಾ ಪಂದ್ಯವನ್ನು ಭರ್ಜರಿಯಾಗಿಯೇ ಆರಂಭಿಸಿದರು. ಇದರಿಂದ ಹತಾಶರಾದಂತೆ ಕಂಡುಬಂದ ಕಾಲಿನ್ಸ್ ತಿರುಗೇಟು ನೀಡಲಾರಂಭಿಸಿದರು. ಪಾವ್ಲಿಚೆಂಕೊವಾ ಉತ್ತಮ ಪೈಪೋಟಿ ನೀಡಿಯೂ ಎರಡನೇ ಸೆಟ್‌ನ್ನು 5-7ರಿಂದ ಕಳೆದುಕೊಂಡರು. ಮೂರನೇ ಸೆಟ್ ಸುಲಭವಾಗಿ(6-1) ಕಾಲಿನ್ಸ್ ವಶವಾಯಿತು.

ಅಂತಿಮವಾಗಿ 2 ಗಂಟೆ 16 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕಾಲಿನ್ಸ್ ಗೆಲುವಿನ ನಗೆ ಬೀರಿದರು.

ಪೇಸ್-ಸ್ಟೋಸರ್ ಜೋಡಿ ಪರಾಜಯ

►ಭಾರತದ ಸವಾಲು ಅಂತ್ಯ

ಭಾರತದ ಖ್ಯಾತ ಆಟಗಾರ ಲಿಯಾಂಡರ್ ಪೇಸ್ ಹಾಗೂ ಆಸ್ಟ್ರೇಲಿಯ ಆಟಗಾರ್ತಿ ಸಮಂತಾ ಸ್ಟೋಸರ್ ಜೋಡಿ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲುವ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಮಂಗಳವಾರ ಅಂತ್ಯ ಕಂಡಿದೆ. ಟೂರ್ನಿಯಲ್ಲಿ ಶ್ರೇಯಾಂಕ ರಹಿತರಾಗಿ ಕಣಕ್ಕಿಳಿದಿದ್ದ ಪೇಸ್ ಹಾಗೂ ಸ್ಟೋಸರ್ ಜೋಡಿಯು 6-4, 4-6, 8-10 ಸೆಟ್‌ಗಳ ಅಂತರದಿಂದ ಜರ್ಮನಿ ಹಾಗೂ ಕೊಲಂಬಿಯ ಜೋಡಿಯಾದ ಅನ್ನಾ ಲೆನಾ ಗ್ರೋನ್‌ಫೆಲ್ಡ್ ಹಾಗೂ ರಾಬರ್ಟ್ ಫರಾಹ್‌ಗೆ ಮಣಿಯಿತು. ಪ್ರಥಮ ಸೆಟ್‌ನ್ನು 6-4ರಿಂದ ಗೆದ್ದುಕೊಂಡು ಉತ್ಸಾಹದಲ್ಲಿದ್ದ ಈ ಜೋಡಿ ಅಷ್ಟೇ ಅಂತರದಿಂದ ಎರಡನೇ ಸೆಟ್‌ನ್ನು ಎದುರಾಳಿಗೆ ಒಪ್ಪಿಸಿತು. ಕೊನೆಯ ಸೆಟ್ ಟೈ-ಬ್ರೇಕ್‌ವರೆಗೂ ಹೋಯಿತು. ಅಲ್ಲಿ 10-8 ರಿಂದ ಗೆದ್ದ 5ನೇ ಶ್ರೇಯಾಂಕದ ಅನ್ನಾ-ಫರಾಹ್ ಜೋಡಿ ಪ್ರಾಬಲ್ಯ ಮೆರೆಯಿತು. ಪೇಸ್-ಸ್ಟೋಸರ್ ಜೋಡಿ ಅಂತಿಮ 32ರ ಪಂದ್ಯದಲ್ಲಿ ಡಚ್-ಝೆಕ್ ಜೋಡಿಯಾದ ವೆಸ್ಲಿ ಕೂಲೊಫ್ - ಕ್ವೆಟಾ ಪೆಸ್ಚೆಕ್‌ರನ್ನು ಮಣಿಸಿತ್ತು. ಪುರುಷರ ಡಬಲ್ಸ್ ವಿಭಾಗದಲ್ಲಿ ಪೇಸ್ ಹಾಗೂ ಮೆಕ್ಸಿಕೊದ ಮಿಗ್ವೆಲ್ ಜೋಡಿ ಪ್ರಥಮ ಸುತ್ತಿನಲ್ಲೇ ಸೋಲು ಅನುಭವಿಸಿತ್ತು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News