ರಾಣಿ ವಿಕ್ಟೋರಿಯಾ ಪುಣ್ಯತಿಥಿ ಆಚರಿಸಿದ ಹಿಂದೂಸೇನೆ!

Update: 2019-01-23 04:16 GMT

ಹೊಸದಿಲ್ಲಿ, ಜ.23: ಬಲಪಂಥೀಯ ಸಂಘಟನೆಯಾದ ಹಿಂದೂ ಸೇನಾ ಮಂಗಳವಾರ ನಗರದಲ್ಲಿ ಬ್ರಿಟಿಷ್ ರಾಣಿ ವಿಕ್ಟೋರಿಯಾ ಅವರ 118ನೇ ಪುಣ್ಯತಿಥಿಯನ್ನು ಆಚರಿಸಿದೆ. "ರಾಣಿ ವಿಕ್ಟೋರಿಯಾ ಭಾರತವನ್ನು ಮೊಘಲರ ನಿರಂಕುಶ ಪ್ರಭುತ್ವದಿಂದ ಮುಕ್ತಗೊಳಿಸಿದ ಮಹಿಳೆ" ಎಂದು ಗುಣಗಾನ ಮಾಡಿದೆ.

ಜಂತರ್ ಮಂತರ್‌ನಲ್ಲಿ ಹಿಂದೂಸೇನಾ ವತಿಯಿಂದ ಮೊಟ್ಟಮೊದಲ ಬಾರಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 1857ರಲ್ಲೇ ಭಾರತದ ಎಲ್ಲ ರಾಜಪ್ರಭುತ್ವದ ರಾಜ್ಯಗಳನ್ನು ಒಗ್ಗೂಡಿಸಿದ ಕೀರ್ತಿ ರಾಣಿ ವಿಕ್ಟೋರಿಯಾಗೆ ಸಲ್ಲುತ್ತದೆ ಎಂದು ಸಂಘಟಕರು ಹೇಳಿದ್ದಾರೆ.

"ಬ್ರಿಟಿಷರು ಇಲ್ಲದಿದ್ದರೆ ಭಾರತ ಸಾವಿರಾರು ಸಾಮ್ರಾಜ್ಯಗಳಾಗಿ ಛಿದ್ರವಾಗುತ್ತಿತ್ತು. ರಾಣಿ ವಿಕ್ಟೋರಿಯಾ ಆಡಳಿತದಲ್ಲಿ ಬ್ರಟಿಷರು ದೊಡ್ಡ ಸಂಖ್ಯೆಯ ರಾಜ ಪ್ರಭುತ್ವದ ರಾಜ್ಯಗಳನ್ನು 1857ರಲ್ಲೇ ಒಂದು ದೇಶವಾಗಿ ಒಗ್ಗೂಡಿಸಿದರು" ಎಂದು ಹಿಂದೂ ಸೇನಾ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ವಕ್ತಾರ ಸುರ್ಜೀತ್ ಯಾದವ್ ಬಣ್ಣಿಸಿದ್ದಾರೆ.

"ನಾವು ಇಂದು ಹೊಂದಿರುವ ಕಾನೂನು, ರೈಲ್ವೆ, ರಸ್ತೆಗಳು, ಸಂಪರ್ಕ ಜಾಲ, ಶಾಲೆ ಹಾಗೂ ಕಟ್ಟಡ ಹೀಗೆ ಪ್ರತಿಯೊಂದೂ ಬ್ರಿಟಿಷರ ಕೊಡುಗೆ. ಇತರರು ಮಾಡಿದಂತೆ ಬ್ರಿಟಿಷರು ನಮ್ಮ ದೇವಾಲಯಗಳನ್ನು ನಾಶ ಮಾಡಲಿಲ್ಲ. ಅವರು ನೀಡಿದ ಕಾನೂನನ್ನು ನಾವು ಇಂದೂ ಪಾಲಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

"ಬ್ರಿಟಿಷ್ ಆಡಳಿತ ನಿರಂಕುಶಪ್ರಭುತ್ವ ಅಲ್ಲದ ಕಾರಣ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಅವರಂಥ ನಾಯಕರು ಧ್ವನಿ ಎತ್ತುವುದು ಸಾಧ್ಯವಾಯಿತು. 1882ರಲ್ಲೇ ಸ್ಥಳೀಯ ಸ್ವಯಂ ಆಡಳಿತಕ್ಕೆ ಅವಕಾಶ ಮಾಡಿಕೊಳ್ಳುವ ಮೂಲಕ ಸ್ವಾತಂತ್ರ್ಯದ ರುಚಿಯನ್ನು ಭಾರತೀಯರಿಗೆ ತೋರಿಸಿಕೊಟ್ಟಿದ್ದಾರೆ. ಇಂಪೀರಿಯಲ್ ಆರ್ಮಿ ದೇಶದಲ್ಲಿ ಎಲ್ಲ ಜಾತಿಗಳ ನಡುವೆ ಸಮಾನತೆಗೆ ಶ್ರಮಿಸಿತ್ತು" ಎಂದು ಗುಣಗಾನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News