ಇವಿಎಂ ಹ್ಯಾಕಿಂಗ್ ಆರೋಪ: ವಾಸ್ತವಗಳ ಜೊತೆ ತಾಳೆಯಾಗುತ್ತಿಲ್ಲ ‘ಸೈಬರ್ ತಜ್ಞ’ನ ಹೇಳಿಕೆಗಳು

Update: 2019-01-23 14:07 GMT

ಸೋಮವಾರ ಲಂಡನ್ನಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಭಾರತದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಹೇಗೆ ಹ್ಯಾಕ್ ಮಾಡುವುದು ಎನ್ನುವುದರ ಪ್ರಾತ್ಯಕ್ಷಿಕೆ ಎಂದು ಹೇಳಲಾಗಿತ್ತು. ಆದರೆ ಈ ಗೋಷ್ಠಿಯಲ್ಲಿ ಸೈಬರ್ ತಜ್ಞ ಎಂದು ಹೇಳಿಕೊಂಡಿದ್ದ ಮುಖಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿ ಇವಿಎಂಗಳನ್ನು ತಿರುಚಬಹುದು ಎಂದು ಆರೋಪಿಸಿದ ಮರುದಿನವೇ ಕಾರ್ಯಕ್ರಮದ ಸಂಘಟಕರು ಅದರಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ.

ಸೋಮವಾರದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವ್ಯಕ್ತಿ ತನ್ನ ಆರೋಪಗಳಿಗೆ ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ. ಆತ ವಿಶ್ವಾಸಾರ್ಹ ವ್ಯಕ್ತಿಯಲ್ಲ ಮತ್ತು ಆತನಿಗೆ ವೇದಿಕೆಯನ್ನೊದಗಿಸಬಾರದಿತ್ತು ಎಂದು ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಷನ್ ಜೊತೆ ಕಾರ್ಯಕ್ರಮವನ್ನು ಸಂಘಟಿಸಿದ್ದ ಫಾರಿನ್ ಪ್ರೆಸ್ ಅಸೋಸಿಯೇಷನ್‌ನ ಡೆಬೋರಾ ಬಾನೆಟಿ ಹೇಳಿದ್ದಾರೆ.

ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಸ್ಕ್‌ಧಾರಿ ವ್ಯಕ್ತಿ ತನ್ನನ್ನು ಸೈಯದ್ ಶುಜಾ ಎಂದು ಗುರುತಿಸಿಕೊಂಡಿದ್ದ ಮತ್ತು ತಾನು ಅಮೆರಿಕದ ಸೈಬರ್ ತಜ್ಞ ಎಂದು ಹೇಳಿಕೊಂಡಿದ್ದ. 2014ರಲ್ಲಿ ಭಾರತದಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಗಳಲ್ಲಿ ಇವಿಎಂಗಳಿಗೆ ಕನ್ನ ಹಾಕಲಾಗಿತ್ತು ಮತ್ತು ಈ ವಿಷಯವನ್ನು ಮುಚ್ಚಿಹಾಕಲು ಬಿಜೆಪಿ ನಾಯಕ ಗೋಪಿನಾಥ ಮುಂಢೆ ಮತ್ತು ಪತ್ರಕರ್ತೆ ಗೌರಿ ಲಂಕೇಶ ಅವರನ್ನು ಹತ್ಯೆಗೈಯಲಾಗಿತ್ತು ಎಂದಾತ ಆರೋಪಿಸಿದ್ದ.

2009ರಿಂದ 2014ರವರೆಗೆ ತಾನು ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.(ಇಸಿಐಎಲ್)ನಲ್ಲಿ ಕೆಲಸ ಮಾಡಿದ್ದೆ ಎಂದು ಹೇಳಿಕೊಂಡಿದ್ದ ಶುಜಾ,ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಇವಿಎಂಗಳಿಂದ ‘ಸಂಕೇತಗಳು ಹೊರಹೊಮ್ಮುತ್ತಿರುವುದು’ ತನಗೆ ಮತ್ತು ತನ್ನ ತಂಡಕ್ಕೆ 2014,ಎಪ್ರಿಲ್‌ನಲ್ಲಿ ಗೊತ್ತಾಗಿತ್ತು ಎಂದು ತಿಳಿಸಿದ್ದ. ಆ ಚುನಾವಣೆಯನ್ನು ಗೆದ್ದಿದ್ದ ಬಿಜೆಪಿ ಮಿಲಿಟರಿ ದರ್ಜೆಯ ತರಂಗಗಳನ್ನು ಪ್ರಸಾರಿಸುವ ಮಾಡ್ಯುಲೇಟರ್ ಬಳಸಿ ಇವಿಎಂಗಳನ್ನು ಹ್ಯಾಕ್ ಮಾಡಿತ್ತು ಎಂದು ಆತ ಆರೋಪಿಸಿದ್ದ.

ಲಂಡನ್ ಕಾರ್ಯಕ್ರಮವನ್ನು ಕಾಂಗ್ರೆಸ್ ಸಂಘಟಿಸಿತ್ತು ಎಂದು ಮಂಗಳವಾರ ಆರೋಪಿಸಿರುವ ಕೇಂದ್ರ ಸಚಿವ ರವಿಶಂಕರ ಪ್ರಸಾದ ಅವರು,ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರ ಉಪಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ಪ್ರತಿಪಕ್ಷವು ಕಾರ್ಯಕ್ರಮವನ್ನು ಸಂಘಟಿಸಿತ್ತು ಎಂಬ ತನ್ನ ಆರೋಪಕ್ಕೆ ಸಮರ್ಥನೆಯಾಗಿ ಅವರು ಲೇಖಕ ಆಶಿಷ್ ರೇ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿದ್ದ ಕಾಂಗ್ರೆಸ್ ಪರ ಹೇಳಿಕೆಗಳನ್ನು ಓದಿದ್ದರು. ಕಾರ್ಯಕ್ರಮದಲ್ಲಿ ಮಧ್ಯವರ್ತಿಯಾಗಿದ್ದ ರೇ ನ್ಯಾಷನಲ್ ಹೆರಾಲ್ಡ್‌ನಲ್ಲಿ ಬರೆದಿದ್ದ ಸಂಪಾದಕೀಯ ಲೇಖನಗಳನ್ನೂ ಅವರು ಓದಿದ್ದರು.

 ಪ್ರಸಾದ್ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಸಿಬಲ್,ತಾನು ವೈಯಕ್ತಿಕ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ. ಭಾರತೀಯ ಚುನಾವಣಾ ಆಯೋಗವೂ ಶುಜಾನ್ ಆರೋಪಗಳನ್ನು ನಿರಾಕರಿಸಿದ್ದು,ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದೆ. ಶುಜಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ಅದು ದಿಲ್ಲಿ ಪೊಲೀಸರಿಗೆ ಆದೇಶಿಸಿದೆ.

ಈಗ ಶುಜಾರ ಕೆಲವು ಹೇಳಿಕೆಗಳ ಸತ್ಯಾಂಶಗಳನ್ನು ಪರಿಶೀಲಿಸೋಣ:

► ತಾನು ಇಸಿಐಎಲ್ ಉದ್ಯೋಗಿಯಾಗಿದ್ದೆ

2009-2014ರ ಅವಧಿಯಲ್ಲಿ ತಾನು ಇಸಿಐಎಲ್‌ನ ‘ರೇಡಿಯೊ ಫ್ರೀಕ್ವೆನ್ಸಿ ಇಕ್ವಿಪ್‌ಮೆಂಟ್’ ವಿಭಾಗದಲ್ಲಿ ಕೆಲಸ ಮಾಡಿದ್ದಾಗಿ ಶುಜಾ ಹೇಳಿಕೊಂಡಿದ್ದೆ. ಆದರೆ ಇಸಿಐಎಲ್ ಮಂಗಳವಾರ ಹೇಳಿಕೆಯೊಂದರಲ್ಲಿ ಇದನ್ನು ನಿರಾಕರಿಸಿದೆ. ಸೈಯದ್ ಶುಜಾ ಎಂದೂ ಕಂಪನಿಯ ಉದ್ಯೋಗಿಯಾಗಿರಲಿಲ್ಲ, 2009-2014ರ ಅವಧಿಯಲ್ಲಿ ಕಂಪನಿಯು ಉತ್ಪಾದಿಸಿದ್ದ ಇವಿಎಂಗಳ ವಿನ್ಯಾಸ ಮತ್ತು ಅಭಿವೃದ್ಧಿಯೊಂದಿಗೆ ಯಾವುದೇ ರೀತಿಯಲ್ಲಿ ಅವರ ಗುರುತಿಸಿಕೊಂಡಿಯೂ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಇದು ಆತನ ನಿಜವಾದ ಹೆಸರೇ ಎನ್ನುವುದೂ ನಮಗೆ ಗೊತ್ತಿಲ್ಲ ಮತ್ತು ಈ ಹೆಸರಿನ ಯಾವುದೇ ವ್ಯಕ್ತಿ ಕಂಪನಿಯಲ್ಲಿ ಹಿಂದೆಂದೂ ಕೆಲಸ ಮಾಡಿಲ್ಲ ಎಂದು ಇಸಿಐಎಲ್‌ನ ಆಡಳಿತ ವಿಭಾಗದಲ್ಲಿ ಉದ್ಯೋಗಿಯಾಗಿರುವ ವಿನೋದ್ ಕುಮಾರ್ ತಿಳಿಸಿದ್ದಾರೆ.

► 2014ರ ಸಾರ್ವತ್ರಿಕ ಮತ್ತು 2015ರ ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂಗಳಿಗೆ ಕನ್ನ ಹಾಕಲಾಗಿತ್ತು

2014ರ ಚುನಾವಣೆಗಳಲ್ಲಿ ಇವಿಎಂಗಳಿಗೆ ಕನ್ನ ಹಾಕಲಾಗಿತ್ತು ಎಂದಿರುವ ಶುಜಾ,ಅದಕ್ಕಾಗಿ ಬಳಸಲಾಗಿತ್ತು ಎನ್ನಲಾದ ಕೆಲವು ನಿರ್ದಿಷ್ಟ ತಾಂತ್ರಿಕ ಅಂಶಗಳನ್ನು ಉಲ್ಲೇಖಿಸಿದ್ದ. ಆದರೆ ಇದನ್ನು ತಿರಸ್ಕರಿಸಿರುವ ತಜ್ಞರು,ಶುಜಾನ ಹೇಳಿಕೆಗಳೇ ತಾಂತ್ರಿಕವಾಗಿ ದೋಷಪೂರ್ಣವಾಗಿವೆ ಎಂದಿದ್ದಾರೆ.

ಲೋ-ಫ್ರೀಕ್ವೆನ್ಸಿ ಸಿಗ್ನಲ್‌ಗಳನ್ನು ಬಳಸಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎಂಬ ಶುಜಾ ಹೇಳಿಕೆಗೆ ಯಾವುದೇ ಸಮರ್ಥನೆಯಿಲ್ಲ ಎಂದು ಹೇಳಿದ ಹೈದರಾಬಾದ್‌ನ ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್‌ನ ಕಿರಣ ಚಂದ್ರ ಅವರು,ಯಾವುದೇ ತರಂಗವನ್ನು ಪ್ರಸಾರಿಸಿದಾಗ ಮತ್ತು ಟ್ಯೂನ್ ಇನ್ ಮಾಡಿದಾಗ ಅದು ರೇಡಿಯೊದಲ್ಲಿ ಟ್ಯೂನ್ ಮಾಡಿದಂತಹ ತರಂಗವನ್ನೇ ತೋರಿಸುತ್ತದೆ. ಇದು ಮೂಲ ಸಿಗ್ನಲ್ ಇಂಜಿನಿಯರಿಂಗ್ ಆಗಿದೆ. ಇದೇ ರೀತಿ ತರಂಗವೊಂದನ್ನು ಪ್ರಸಾರಿಸಿದಾಗ ಅದೇ ತರಂಗ ಯಾವುದೇ ವ್ಯತ್ಯಾಸವಿಲ್ಲದೆ ಎಲ್ಲ ಇವಿಎಂಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದರು.

2010ರಿಂದ ಚುನಾವಣಾ ಆಯೋಗದಲ್ಲಿ ತಾಂತ್ರಿಕ ತಜ್ಞರಾಗಿ ಸೇವೆ ಸಲ್ಲಿಸುತ್ತಿರುರುವ ಐಐಟಿ ನಿರ್ದೇಶಕ ರಜತ್ ಮೂನಾ ಅವರೂ ಶುಜಾ ಹೇಳಿಕೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳಲ್ಲಿ ಕೃತಕತೆ ಮತ್ತು ಕಪಟ ಕಂಡುಬರುತ್ತಿದೆ.

ಇವಿಎಂಗಳನ್ನು ಹೇಗೆ ಹ್ಯಾಕ್ ಮಾಡಲು ಸಾಧ್ಯ ಎನ್ನುವುದನ್ನು ತಿಳಿಯಲು ನಾವು ಬಯಸುತ್ತೇವೆ ಮತ್ತು ಅವುಗಳ ವಿನ್ಯಾಸದಲ್ಲಿ ಯಾವುದೇ ಲೋಪವಿದ್ದರೆ ನಾವು ಅದನ್ನು ಸರಿಪಡಿಸುತ್ತೇವೆ. ಆದರೆ ಇಂತಹ ಲೋಪವನ್ನು ತಿಳಿಸಲು ಈವರೆಗೂ ಯಾರೂ ಮುಂದೆ ಬಂದಿಲ್ಲ ಎಂದು ಅವರು ಹೇಳಿದರು.

2015ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜಪಿ ಪರವಾಗಿ ರವಾನಿಸಲಾಗಿದ್ದ ಸಂಕೇತಗಳನ್ನು ತಾನು ಮತ್ತು ತನ್ನ ತಂಡ ಛೇದಿಸಿದ್ದೆವು ಮತ್ತು ಅವುಗಳನ್ನು ಆಮ್ ಆದ್ಮಿ ಪಾರ್ಟಿಯ ಪರ ಸಂಕೇತಗಳನ್ನಾಗಿ ಪರಿವರ್ತಿಸಿದ್ದೆವು ಎಂದೂ ಶುಜಾ ಹೇಳಿಕೊಂಡಿದ್ದಾರೆ.

ಇದು ಅಸಾಧ್ಯ ಎಂದ ಚಂದ್ರ,ಛೇದಿಸುವುದಕ್ಕೂ ಹಸ್ತಕ್ಷೇಪಕ್ಕೂ ವ್ಯತ್ಯಾಸವಿದೆ. ರೇಡಿಯೊ ಸಂಕೇತವೊಂದನ್ನು ಅದೇ ಫ್ರೀಕ್ವೆನ್ಸಿಯ ಇನ್ನೊಂದು ತರಂಗವು ತಡೆದಾಗ ಶಬ್ದಗಳಾಗುತ್ತವೆ. ಸಂಕೇತವು ಜಾಮ್ ಆಗುತ್ತದೆ ಮತ್ತು ಅದರ ಮೂಲಕ ಏನೂ ಹಾದು ಹೋಗುವುದಿಲ್ಲ. ಇದು ಶಾಲಾಮಟ್ಟದ ಭೌತಶಾಸ್ತ್ರವಾಗಿದೆ ಎಂದು ತಿಳಿಸಿದರು.

ಇವಿಎಂನ ಮತ ಘಟಕ ಮತ್ತು ನಿಯಂತ್ರಣ ಘಟಕಗಳ ನಡುವೆ ಪರಸ್ಪರ ಸಂವಹನಕ್ಕೆ ಬಳಕೆಯಾಗುವ ಕೇಬಲ್‌ಗಳನ್ನು ಇಸಿಐಎಲ್ ತಯಾರಿಸುತ್ತದೆ ಮತ್ತು ಇವುಗಳನ್ನು ವಿದ್ಯುತ್ ಪರೀಕ್ಷೆಗೊಳಪಡಿಸಲಾಗುತ್ತದೆ. ಈ ಕೇಬಲ್‌ಗಳು 5ರಿಂದ 10 ವೋಲ್ಟ್‌ಗಳ ಮಟ್ಟಗಳ ನಡುವೆ ಮಾತ್ರ ಸಂವಹನ ನಡೆಸುತ್ತವೆ. ಅದರಲ್ಲಿ ಯಾವುದೇ ಸಾಧನ ಅಥವಾ ಮೈಕ್ರೋ ಪ್ರೊಸೆಸಿಂಗ್ ಯುನಿಟ್‌ನ್ನು ಸೇರಿಸಿದರೆ ಅದು ದೂರದವರೆಗೆ ಸ್ಫೋಟಗೊಳ್ಳುತ್ತದೆ. ಇಂತಹ ಯಾವುದೇ ಸಾಧನ ಕೇಬಲ್‌ನಲ್ಲಿ ಸಂವಹನ ನಡೆಸುವುದು ಸಾಧ್ಯವಾಗುವುದಿಲ್ಲ ಎಂದು ಮೂನಾ ಹೇಳಿದರು.

► ಶುಜಾ ತಂಡದ ಹತ್ಯೆಗಳನ್ನು ಮುಚ್ಚಿಡಲು ದಂಗೆಗಳು

ಹೈದರಾಬಾದ್‌ನಲ್ಲಿ ತನ್ನ ತಂಡದ 11 ಸದಸ್ಯರು ಇವಿಎಂಗಳ ತಿರುಚುವಿಕೆಯ ಕುರಿತು ಬಿಜೆಪಿ ನಾಯಕನೋರ್ವನನ್ನು ಪ್ರಶ್ನಿಸಿದಾಗ ಆತ ಅವರೆಲ್ಲರಿಗೂ ಗುಂಡಿಕ್ಕಿದ್ದ. ಈ ಕೊಲೆಗಳನ್ನು ಮುಚ್ಚಿ ಹಾಕಲು ಮೇ, 2104ರಲ್ಲಿ ಹೈದರಾಬಾದ್‌ನ ಕಿಷನ್ ಬಾಗ್‌ನಲ್ಲಿ ಕೋಮು ಘರ್ಷಣೆಗಳನ್ನು ಯೋಜಿಸಲಾಗಿತ್ತು ಎಂದು ಶುಜಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.

ಆತ ಆ ನಾಯಕನನ್ನು ಗುರುತಿಸಿರಲಿಲ್ಲವಾದರೂ ಮಂಗಳವಾರ ತೆಲಂಗಾಣದ ಬಿಜೆಪಿ ನಾಯಕ ಜಿ.ಕಿಷನ್ ರೆಡ್ಡಿ ಅವರು ಆರೋಪಗಳನ್ನು ತಿರಸ್ಕರಿಸಿದ್ದಾರೆ ಮತ್ತು ಇವಿಎಂಗಳನ್ನು ಹ್ಯಾಕ್ ಮಾಡುವುದು ಹೇಗೆ ಎನ್ನುವುದು ತನಗೆ ತಿಳಿದಿದ್ದರೆ ತಾನು ಈ ವೇಳೆಗೆ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದಿದ್ದಾರೆ. ಯಾರನ್ನಾದರೂ ಕೊಲೆ ಮಾಡಿರುವುದನ್ನೂ ಅವರು ನಿರಾಕರಿಸಿದ್ದಾರೆ. ‘ನಾನು 11 ಜನರನ್ನು ಕೊಲೆಮಾಡಿ,ಅದರ ಬಗ್ಗೆ ಯಾರಿಗೂ ಗೊತ್ತಾಗದಷ್ಟು ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಸಮರ್ಥವಾಗಿತ್ತೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿಯು ಇವಿಎಂಗಳನ್ನು ಹ್ಯಾಕ್ ಮಾಡಿದ್ದಿದ್ದರೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಹೇಗೆ ಎಂದೂ ಅವರು ಪ್ರಶ್ನಿಸಿದ್ದಾರೆ.

 ಹೈದರಾಬಾದ್ ಪೊಲೀಸರೂ ಮಂಗಳವಾರ ಶುಜಾನ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ. ಮೇ, 2014ರಲ್ಲಿ ಹೈದರಾಬಾದ್‌ನ ಕಿಶನ್ ಬಾಗ್‌ನಲ್ಲಿ ಘರ್ಷಣೆಗಳು ನಡೆದ ಬಳಿಕ ಅರೆ ಸೇನಾಪಡೆಗಳನ್ನು ಕರೆಸಲಾಗಿತ್ತು. ಪರಿಸ್ಥಿಯು ಕೈಮೀರುತ್ತಿದ್ದರಿಂದ ಪೊಲೀಸರು ಗೋಲಿಬಾರ್ ನಡೆಸಿದ್ದರು ಮತ್ತು ಮೂವರು ಮೃತಪಟ್ಟಿದ್ದರು ಎಂದೂ ಅದು ಹೇಳಿದೆ. ನಂತರ ನಡೆದ ತನಿಖೆಯಲ್ಲಿ ಇದಕ್ಕಿಂತ ಹೆಚ್ಚಿನದು ಬೆಳಕಿಗೆ ಬಂದಿರಲಿಲ್ಲ ಎಂದು ಹೈದರಾಬಾದ್‌ನ ಪೊಲೀಸ್ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಪತ್ರಿಕೆಯು ಹೇಳಿದೆ.

ಮೇ, 2014ರಲ್ಲಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದ ವರದಿಯಂತೆ ಕಿಶನ್ ಬಾಗ್‌ನಲ್ಲಿ ಧಾರ್ಮಿಕ ಧ್ವ್ವಜವನ್ನು ಸುಟ್ಟುಹಾಕಿದ ಬಳಿಕ ಉಂಟಾಗಿದ್ದ ಉದ್ವಿಗ್ನ ಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಡೆಸಿದ್ದ ಗೋಲಿಬಾರ್‌ನಲ್ಲಿ ಮೂವರು ಮೃತಪಟ್ಟಿದ್ದರು. ಮುಸ್ಲಿಂ ಮತ್ತು ಸಿಖ್ ಗುಂಪುಗಳ ನಡುವಿನ ಘರ್ಷಣೆಗಳಲ್ಲಿ 13 ಜನರು ಗಾಯಗೊಂಡಿದ್ದರು ಎಂದು ದಿ ಟೈಮ್ಸ್ ಆಫ್ ಇಂಡಿಯಾ 2014,ಮೇ 15ರಂದು ವರದಿ ಮಾಡಿತ್ತು. ಘರ್ಷಣೆಗಳಲ್ಲಿ 10 ಪೊಲೀಸರು ಸೇರಿದಂತೆ 17ಜನರು ಗಾಯಗೊಂಡಿದ್ದಾರೆ ಎಂದು 2014,ಮೇ 14ರಂದು ಹಿಂದು ಬಿಸಿನೆಸ್‌ಲೈನ್ ವರದಿ ಮಾಡಿತ್ತು. ಧಾರ್ಮಿಕ ಧ್ವಜವನ್ನು ಸುಟ್ಟು ಹಾಕಿದ್ದ ಹಿನ್ನೆಲೆಯಲ್ಲಿ ಎರಡು ಗುಂಪುಗಳು ಘರ್ಷಣೆಗಳಲ್ಲಿ ತೊಡಗಿದ ಬಳಿಕ ಪೊಲೀಸರು ಗೋಲಿಬಾರ್ ಮಾಡಿದ್ದಾರೆ ಎಂದೂ ಅದು ವರದಿ ಮಾಡಿತ್ತು.

► ಅಮೆರಿಕ ಸರಕಾರವು ಶುಜಾಗೆ ರಾಜಕೀಯ ಆಶ್ರಯವನ್ನು ನೀಡಿದೆ

ಹೈದರಾಬಾದ್‌ನಲ್ಲಿ ತನ್ನ ಮೇಲೆ ದಾಳಿ ನಡೆದ ಮತ್ತು ತನ್ನ ಸಹಚರರು ಕೊಲ್ಲಲ್ಪಟ್ಟ ಬಳಿಕ ತಾನು ಅಮೆರಿಕದಲ್ಲಿ ರಾಜಕೀಯ ಆಶ್ರಯ ಕೋರಿದ್ದೆ ಎಂದು ಶುಜಾ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

ಸಿಬಲ್ ಅವರೂ ಕೆಲವು ದಾಖಲೆಗಳ ಆಧಾರದಲ್ಲಿ ಅಮೆರಿಕ ಸರಕಾರವು ಶುಜಾಗೆ ರಾಜಕೀಯ ಆಶ್ರಯವನ್ನು ನೀಡಿದೆ ಮತ್ತು ಈ ದಾಖಲೆಗಳನ್ನು ತಾನು ನೋಡಿದ್ದೇನೆ ಎಂದು ಆತನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಇದನ್ನು ಸ್ವತಂತ್ರವಾಗಿ ದೃಢೀಕರಿಸಿಕೊಳ್ಳಲು ತನಿಖೆಗಿಳಿದಿದ್ದ ಸುದ್ದಿ ಜಾಲತಾಣ scroll.inಗೆ ಸಾಧ್ಯವಾಗಿಲ್ಲ.

► ಮಿಲಿಟರಿ ಗ್ರೇಡ್ ಫ್ರೀಕ್ವೆನ್ಸಿ ಮಾಡ್ಯುಲೇಟರ್‌ಗಳ ಖರೀದಿಗೆ ಸಿಬಲ್ ಒಪ್ಪಿಗೆ ನೀಡಿದ್ದರು

ಸಿಬಲ್ ಕಾರ್ಯಕ್ರಮದಲ್ಲಿ ಹಾಜರಿರುವ ಒಬ್ಬರೇ ರಾಜಕಾರಣಿಯಾಗಿರುವುದರಿಂದ ‘ಯಾವುದಾದರೂ ಅಜೆಂಡಾ’ವನ್ನು ಅನುಸರಿಸಲಾಗುತ್ತಿದೆಯೇ ಎಂದು ಕಾರ್ಯಕ್ರಮದಲ್ಲಿ ಪತ್ರಕರ್ತರೋರ್ವರು ಶುಜಾರನ್ನು ಪ್ರಶ್ನಿಸಿದ್ದರು. ಸಿಬಲ್ ಜೊತೆ ಯಾವುದೇ ಸಂಬಂಧವನ್ನು ನಿರಾಕರಿಸಿದ್ದ ಆತ,ಆದರೆ ತನಗೆ ನೆರವಿನ ಅಗತ್ಯವಿದ್ದಾಗ ಒಂದು ಬಾರಿ ಅವರನ್ನು ಸಂಪರ್ಕಿಸಿದ್ದೆ ಎಂದು ಹೇಳಿದ್ದ.

2014 ಚುನಾವಣೆಯಲ್ಲಿ ಇವಿಎಂಗಳ ಹ್ಯಾಕಿಂಗ್‌ಗೆ ಸಿಬಲ್ ‘ಪರೋಕ್ಷವಾಗಿ ಹೊಣೆಗಾರ’ ರಾಗಿದ್ದರು ಎಂದು ಆತ ನಂತರ ಹೇಳಿದ್ದರು. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಸಿಬಲ್ ಮಿಲಿಟರಿ ಗ್ರೇಡ್ ಫ್ರೀಕ್ವೆನ್ಸಿ ಮಾಡ್ಯುಲೇಟರ್‌ಗಳ ಖರೀದಿಗೆ ಒಪ್ಪಿಗೆ ನೀಡಿದ್ದರು ಎಂದು ತಿಳಿಸಿದ್ದ.

 ತನ್ನ ಅಧಿಕಾರಾವಧಿಯಲ್ಲಿ ಈ ಮಾಡ್ಯುಲೇಟರ್‌ಗಳ ಖರೀದಿಗೆ ಒಪ್ಪಿಗೆ ನೀಡಲಾಗಿತ್ತು ಎಂದು ಸುದ್ದಿ ಜಾಲತಾಣಕ್ಕೆ ತಿಳಿಸಿದ ಸಿಬಲ್,ಈ ಮಾಡ್ಯುಲೇಟರ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯವು ಮೊದಲು ಒಪ್ಪಿಗೆಯನ್ನು ನೀಡಿತ್ತು ಮತ್ತು ಬಳಿಕ ವಿಷಯ ನಮ್ಮ ಬಳಿಗೆ ಬಂದಿತ್ತು. ನಮಗೆ ಅದರೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ನಾವು ಒಪ್ಪಿಗೆ ನೀಡಲೇಬೇಕಾಗಿತ್ತು ಎಂದರು.

ಆದರೆ ಇವಿಎಂಗಳೊಂದಿಗೆ ಯಾವುದೇ ನಿಸ್ತಂತು ಸಂವಹನ ಸಾಧ್ಯವಿಲ್ಲವಾದ್ದರಿಂದ ಚರ್ಚೆಯಲ್ಲಿ ಇದು ಅಸಂಗತವಾಗಿದೆ ಎಂದು ತಜ್ಞರು ಬೆಟ್ಟು ಮಾಡಿದ್ದಾರೆ. ಮತ ಘಟಕ ಮತ್ತು ನಿಯಂತ್ರಣ ಘಟಕ ಕೇಬಲ್‌ಗಳ ಮೂಲಕ ಮಾತ್ರ ಸಂವಹನ ನಡೆಸುತ್ತವೆ ಎಂದ ಮೂನಾ, ಎಎಂ ಮತ್ತು ಎಫ್‌ಎಂ ಮಾದರಿ ಸಂವಹನಗಳಿವೆ ಎಂದು ಶುಜಾ ಹೇಳಿದ್ದಾರೆ. ಆದರೆ ಅದಕ್ಕಾಗಿ ಆ್ಯಂಟೆನಾದ ಅಗತ್ಯವಿದೆ ಮತ್ತು ಇವಿಎಂಗಳ ಮೇಲೆ ಆ್ಯಂಟೆನಾಗಳಿರುವುದಿಲ್ಲ ಎಂದು ಹೇಳಿದರು.

Writer - ವಿಜಯತಾ ಲಾಲ್ವಾನಿ, scroll.in

contributor

Editor - ವಿಜಯತಾ ಲಾಲ್ವಾನಿ, scroll.in

contributor

Similar News