ಉತ್ತರಾಖಂಡದಲ್ಲೊಬ್ಬ ಮರಗಳ ಸಂತ

Update: 2019-01-23 18:36 GMT

ಒಂದು ಕಾಲದಲ್ಲಿ ಶಾಲೆಯ ಶಿಕ್ಷಕರಾಗಿದ್ದ ಧೂಮ್ ಸಿಂಗ್ ತನ್ನ ಸುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿ ತನ್ನ ಸುಭದ್ರ ಉದ್ಯೋಗದಲ್ಲಿ ಸುಮ್ಮನಿರಲಾರದೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದವರು. ಐವತ್ತರ ದಶಕದಲ್ಲಿ ಅವರು ತನ್ನ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಸರ್ವೋದಯ ಚಳವಳಿಗೆ ಧುಮುಕಿದರು.

46 ವರ್ಷಗಳ ಹಿಂದೆ ನಡೆದ ಪರಿಸರ ರಕ್ಷಣೆಯ ಮಹತ್ವದ ಹೋರಾಟಗಳಲ್ಲಿ ಒಂದಾದ ಚಿಪ್ಕೊ ಚಳವಳಿ ದೇಶಾದ್ಯಂತ ಅರಣ್ಯನಾಶದ ವಿರುದ್ಧ ಪ್ರತಿಭಟನೆಗಳ ಅಲೆಯನ್ನೇ ಸೃಷ್ಟಿಸಿತ್ತು. ಅಭಿವೃದ್ಧಿಯ ಹೆಸರಲ್ಲಿ ಅರಣ್ಯಗಳನ್ನು ನಾಶ ಮಾಡಲು ಬಯಸುವ ಬೃಹತ್ ಕೈಗಾರಿಕೆಗಳ ಪ್ರೋತ್ಸಾಹಕರು ಮತ್ತು ಸರಕಾರದ ನೀತಿಗಳನ್ನು ರೂಪಿಸುವವರ ವಿರುದ್ಧ ಹೋರಾಡಲು ಗ್ರಾಮಸ್ಥರು ಈ ಸಾಮೂಹಿಕ ಅಹಿಂಸಾತ್ಮಕ ಚಳವಳಿಯನ್ನು ಆರಂಭಿಸಿದರು. ತಮ್ಮ ನಂಬಿಕೆಗೆ ಬದ್ಧವಾಗಿರುವವರಿಗೆ ಅದು ಪರೀಕ್ಷೆಯ ಸಮಯವಾಗಿತ್ತು.

ಸಾಮಾಜಿಕ ಹೋರಾಟಗಾರ ಧೂಮ್ ಸಿಂಗ್ ನೇಗಿ ಈ ಚಳವಳಿಯ ನೇತೃತ್ವ ವಹಿಸಿದವರಲ್ಲಿ ಒಬ್ಬರಾಗಿದ್ದು ಹೋರಾಟಕ್ಕೆ ಕಾರಣವಾದ ನಿರ್ದಿಷ್ಟ ಘಟನೆಯನ್ನು ಸ್ಮರಿಸುತ್ತಾರೆ;
ಮಾನವ ಕಾಲಕಾಲಕ್ಕೆ ಪ್ರಕೃತಿಯನ್ನು ಶೋಷಿಸುತ್ತಲೇ ಬಂದಿದ್ದಾನೆ. 1973ರಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆಯಿತು. ಇಲ್ಲಿನ ಕಾಡಿನಲ್ಲಿರುವ ಅಂಗು ಮರಗಳನ್ನು ಅರಣ್ಯಾಧಿಕಾರಿಗಳು ಅಲಹಾಬಾದ್ ಮೂಲಕ ಸಿಮನ್ ಎಂಬ ಕಂಪೆನಿಗೆ ಹರಾಜಿನಲ್ಲಿ ನೀಡಲು ನಿರ್ಧರಿಸಿದರು. ಸಿಮನ್ ಕಂಪೆನಿ ಈ ಮರಗಳನ್ನು ಕಡಿದು ಅದರಿಂದ ಕ್ರೀಡಾ ಮತ್ತು ಇತರ ವಸ್ತುಗಳನ್ನು ತಯಾರಿಸಲು ಬಯಸಿತ್ತು. ಈ ಮರವು ಗ್ರಾಮಸ್ಥರಿಗೂ ಅಗತ್ಯವಾಗಿತ್ತು, ಯಾಕೆಂದರೆ, ಮರವು ಗಟ್ಟಿಯಾಗಿದ್ದರೂ ಮೃದುವಾಗಿದ್ದ ಕಾರಣ ಜಾನುವಾರುಗಳಿಗೆ ನೋಯುತ್ತಿರಲಿಲ್ಲ. ಹಾಗಾಗಿ ಆ ಮರ ನೇಗಿಲು ತಯಾರಿಸಲು ಸೂಕ್ತವಾಗಿತ್ತು. ಆದರೆ ಗ್ರಾಮಸ್ಥರು ನೇಗಿಲು ತಯಾರಿಸಲು ಈ ಮರಗಳನ್ನು ಕಡಿಯುತ್ತಿರಲಿಲ್ಲ ಬದಲಿಗೆ ಪ್ರಕೃತಿ ತಾನಾಗಿಯೇ ಏನನ್ನು ನೀಡುತ್ತದೋ ಆದನ್ನು ಮಾತ್ರ ಬಳಸುತ್ತಿದ್ದರು.


ಮರಗಳನ್ನು ಕಡಿಯುವ ವಿಷಯ ಗ್ರಾಮಸ್ಥರಿಗೆ ತಿಳಿದಾಗ ಅವರು ಮರಗಳ ಸುತ್ತ ನೆರೆದು ಅದನ್ನು ಗಟ್ಟಿಯಾಗಿ ಅಪ್ಪಿ ಪ್ರತಿಭಟಿಸಲು ಆರಂಭಿಸಿದರು ಎಂದು ನೆನಪಿಸಿಕೊಳ್ಳುತ್ತಾರೆ ಧೂಮ್ ಸಿಂಗ್.
2018ರ ರಚನಾತ್ಮಕ ಕ್ಷೇತ್ರಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಾಗಿ 79ರ ಹರೆಯದ ಧೂಮ್ ಸಿಂಗ್ ನೇಗಿಗೆ ಜಮುನಾಲಾಲ್ ಬಜಾಜ್ ಪ್ರತಿಷ್ಠಾನ (ಜೆಬಿಎಫ್) ಪ್ರತಿಷ್ಠಿತ ಜಮುನಾಲಾಲ್ ಬಜಾಜ್ ಪ್ರಶಸ್ತಿ ನೀಡಿ ಗೌರವಿಸಿದೆ. ಮಹಾತ್ಮಾ ಗಾಂಧೀಜಿಯ ಸಿದ್ಧಾಂತಗಳ ಆಧಾರದಲ್ಲಿ ಭಾರತದ ಗ್ರಾಮೀಣ ಸಮುದಾಯಗಳನ್ನು ಸ್ವಾವಲಂಬಿಗಳಾಗಿ ಮಾಡುವಲ್ಲಿ ರಚನಾತ್ಮಕ ಕೊಡುಗೆ ನೀಡಿರುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಧೂಮ್ ಸಿಂಗ್ ತನ್ನ ಇಡೀ ಜೀವನವನ್ನು ಮದ್ಯಪಾನ, ಅಸ್ಪಶ್ಯತೆ ಮತ್ತು ಅರಣ್ಯನಾಶದ ವಿರುದ್ಧ ಹೋರಾಡಲು ಮೀಸಲಿಟ್ಟಿದ್ದಾರೆ. ಇವೆಲ್ಲವೂ ಚಿಪ್ಕೊ ಚಳವಳಿಯ ಭಾಗವೂ ಆಗಿದೆ.
ಎಲ್ಲರಿಂದಲೂ ಗೌರವದಿಂದ ಗುರೂಜಿ ಎಂದೇ ಕರೆಯಲ್ಪಡುವ ಉತ್ತರಾಖಂಡದ ತೆಹ್ರಿ ಗಡ್ವಲ್ ಪ್ರದೇಶದ ಪಿಪಲೆತ್ ಗ್ರಾಮದ ನಿವಾಸಿಯಾಗಿರುವ ಧೂಮ್ ಸಿಂಗ್ ವಿವಿಧ ನಾಯಕರಾದ ಹೋರಾಟಗಾರ ಮತ್ತು ಪರಿಸರವಾದಿ ಸುಂದರಲಾಲ್ ಬಹುಗುಣ, ವಿಜ್ಞಾನಿ ತಾರಕ್ ಮೋಹನ್ ದಾಸ್, ಚೆಗುವೆರ ಮುಂತಾದವರಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ.
ಚಿಪ್ಕೊ ಚಳವಳಿ ಹಿಂಸೆಯನ್ನು ಬಳಸದೆಯೇ ಸಮೂಹದ ಶಕ್ತಿಯನ್ನು ತೋರಿಸಿತು. ರಾಜ್ಯಾದ್ಯಂತ ಮತ್ತು ಹೊರಗೂ ಶೀಘ್ರವಾಗಿ ಹರಡಲು ಆರಂಭಿಸಿದ ಚಳವಳಿಯ ಸ್ವಭಾವಗಳಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಉಂಟಾಯಿತು. ನಾನಿರುವ ಪ್ರದೇಶ ತೆಹ್ರಿ ಗಡ್ವಲ್‌ನಲ್ಲಿ ಈ ಚಳವಳಿ ವಿಸ್ತಾರವಾಗುತ್ತಾ ಸಾಗಿತು. ಅದೀಗ ನಮ್ಮ ಅರಣ್ಯನಾಶದ ಕಾರಣ ಉಂಟಾಗುತ್ತಿರುವ ನಿರುದ್ಯೋಗ ಮತ್ತು ಜೀವನದ ಮೇಲೆ ಬೀರುವ ಪರಿಣಾಮಕ್ಕಷ್ಟೇ ಸೀಮಿತವಾಗಿರಲಿಲ್ಲ. ಇಡೀ ಪರಿಸರದ ವಿಷಯವಾಗಿ ಬದಲಾಗಿತ್ತು. ಅರಣ್ಯನಾಶವು ಪರಿಸರದ ಮೇಲೆ ಯಾವ ರೀತಿ ದೀರ್ಘಕಾಲೀನ ಪರಿಣಾಮ ಬೀರಲಿದೆ ಎನ್ನುವುದರ ಮೇಲೆ ವೈಜ್ಞಾನಿಕವಾಗಿ ಗಮನಹರಿಸಲಾಯಿತು ಎಂದು ಹೇಳುತ್ತಾರೆ ಧೂಮ್ ಸಿಂಗ್.
ವಿಜ್ಞಾನಿ ತಾರಕ್ ಮೋಹನ್ ದಾಸ್ ನಡೆಸಿದ ಅಧ್ಯಯನವೂ, ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮರ ಸಮೃದ್ಧವಾಗಿ ಬೆಳೆದಿದ್ದರೆ ಅದರ ಉಪಯುಕ್ತತೆ ಹೆಚ್ಚಾಗಿರುತ್ತದೆ ಎನ್ನುವುದನ್ನು ಸಮರ್ಥಿಸಿತ್ತು.


ಮರವನ್ನು ಕಡಿದರೆ ಅದರಿಂದ ಶೇ.3 ಮಾತ್ರ ಲಾಭವಾಗುತ್ತದೆ. ಆದರೆ ಅದೇ ಮರ ಸಮೃದ್ಧವಾಗಿ ಬೆಳೆದರೆ ಶೇ.97 ಲಾಭದಾಯಕವಾಗಿರುತ್ತದೆ ಎಂದು ಸಿಂಗ್ ತಿಳಿಸುತ್ತಾರೆ.
ಒಂದು ಕಾಲದಲ್ಲಿ ಶಾಲೆಯ ಶಿಕ್ಷಕರಾಗಿದ್ದ ಧೂಮ್ ಸಿಂಗ್ ತನ್ನ ಸುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿ ತನ್ನ ಸುಭದ್ರ ಉದ್ಯೋಗದಲ್ಲಿ ಸುಮ್ಮನಿರಲಾರದೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದವರು. ಐವತ್ತರ ದಶಕದಲ್ಲಿ ಅವರು ತನ್ನ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಸರ್ವೋದಯ ಚಳವಳಿಗೆ ಧುಮುಕಿದರು. ತನ್ನ ಪುಸ್ತಕಾಲಯದಲ್ಲಿ ಪುಸ್ತಕಗಳು ಮತ್ತು ದಿನಚರಿಗಳ ದೊಡ್ಡ ಭಂಡಾರವನ್ನೇ ಹೊಂದಿರುವ ಸಿಂಗ್ ನೀಗದ ಓದುವ ಹಸಿವನ್ನು ಹೊಂದಿದ್ದು, ‘ಮಿಟ್ಟಿ, ಪಾನಿ ಔರ್ ಬಯರ್’ (ಮಣ್ಣು, ನೀರು ಮತ್ತು ತಂಗಾಳಿ) ಎಂಬ ಪುಸ್ತಕವನ್ನೂ ಬರೆದಿದ್ದಾರೆ.

ಚಳವಳಿಯ ದಿನಗಳ ಉಲ್ಲೇಖಗಳನ್ನು ಹೊಂದಿರುವ ಈ ಪುಸ್ತಕವು ಉತ್ತರಾಖಂಡವನ್ನು ಈಗಲೂ ಬಾಧಿಸುತ್ತಿರುವ ಸಮಸ್ಯೆಗಳು ಮತ್ತು ಹೋರಾಟದ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಹೊಂದಿದೆ. ಚಿಪ್ಕೊ ಚಳವಳಿಯ ಘೋಷವಾಕ್ಯ-‘‘ಅರಣ್ಯದಿಂದ ಏನು ಉಪಕಾರ, ಮಣ್ಣು, ನೀರು ಮತ್ತು ತಂಗಾಳಿ, ಬದುಕಲು ಇದುವೇ ಆಧಾರ.’’ ಸಿಂಗ್ ಬರೆದ ಪುಸ್ತಕದ ಹೆಸರಿಗೆ ಈ ಘೋಷವಾಕ್ಯವೇ ಪ್ರೇರಣೆಯಾಗಿದೆ.
ಈಗಲೂ ಚಿಪ್ಕೊ ಚಳವಳಿಯನ್ನು ಮುಂದುವರಿಸಿರುವ ಧೂಮ್ ಸಿಂಗ್ ಈ ಚಳವಳಿಯಲ್ಲಿ ಯುವಜನತೆ ಕೈಜೋಡಿಸಬೇಕು ಎಂದು ಬಯಸುತ್ತಾರೆ.
ಬದಲಾವಣೆ ಬಂದಿದೆ. ಪ್ರಕೃತಿ ಮತ್ತು ಅದರ ಕೊಡುಗೆಯ ಬಗ್ಗೆ ಜನರ ದೃಷ್ಟಿಕೋನ ಬದಲಾಗಿದೆ ಮತ್ತು ಮತ್ತೊಮ್ಮೆ ಅವರು ಪ್ರಕೃತಿಯನ್ನು ಗೌರವಿಸಲು ಮತ್ತು ಸಂರಕ್ಷಿಸಲು ಮುಂದಾಗಿದ್ದಾರೆ. ಹಾಗಾಗಿ, ಇಬ್ಬರ ಮಧ್ಯೆ ಸೌಹಾರ್ದಯುತ ಸಂಪರ್ಕವನ್ನು ಮರುಸ್ಥಾಪಿಸಲು ಇದು ಸಕಾಲವಾಗಿದೆ.
ಅದಕ್ಕಾಗಿ ಯುವಜನತೆಯ ಈ ಹೋರಾಟದ ನೇತೃತ್ವವನ್ನು ವಹಿಸಿ ಮುನ್ನಡೆಸಿಕೊಂಡು ಹೋಗುವ ಅಗತ್ಯವಿದೆ. ನೀವು ಎಲ್ಲೇ ಇದ್ದರೂ ಎಂದೂ ಪ್ರಕೃತಿಗೆ ಸಮೀಪವಾಗಿಯೇ ಇರುತ್ತೀರಿ. ಹಾಗಾಗಿ ಅದನ್ನು ಪರಿಗಣಿಸಲು ಮತ್ತು ಮನಃಪೂರ್ವಕವಾಗಿ ಅಪ್ಪಿಕೊಳ್ಳಲು ಇದು ಸರಿಯಾದ ಸಮಯವಾಗಿದೆ ಎಂದು ಅಭಿಪ್ರಾಯಿಸುತ್ತಾರೆ ಧೂಮ್ ಸಿಂಗ್ ನೇಗಿ.
ಕೃಪೆ: www.thebetterindia.com

Writer - ಅನನ್ಯ ಬರುವಾ

contributor

Editor - ಅನನ್ಯ ಬರುವಾ

contributor

Similar News

ಜಗದಗಲ
ಜಗ ದಗಲ