ಶಾಲಾ ವಾರ್ಷಿಕೋತ್ಸವಗಳಲ್ಲಿ ಸಿನೆಮಾ ಹಾಡು ಎಷ್ಟು ಸರಿ?

Update: 2019-01-25 03:55 GMT

ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳೆಂದರೆ ಬೀಜ ಬಿತ್ತುವುದಕ್ಕಿರುವ ಹಸನಾದ ನೆಲ. ಯಾವ ಬೀಜ ಬಿತ್ತಿದರೂ ತಕ್ಷಣ ಅಂಕುರವೊಡೆದು ಬೇರಿಳಿಸಿಕೊಳ್ಳುತ್ತವೆ. ಬೀಜ ಮರವಾಗಿ ಒಳ್ಳೆಯ ಹಣ್ಣುಗಳನ್ನು ಕೊಡುತ್ತದೆಯೋ, ವಿಷದ ಹಣ್ಣುಗಳನ್ನು ಕೊಡುತ್ತದೆಯೋ ಎನ್ನುವುದನ್ನು ಆ ಮೃದು ನೆಲ ಗಮನಿಸುವುದಿಲ್ಲ. ಒಂದು ರೀತಿಯಲ್ಲಿ ಮೆದು ಗೋಡೆಯಿದ್ದ ಹಾಗೆ. ಒಂದು ಕಲ್ಲು ಒಗೆದರೆ ಗೋಡೆಯಲ್ಲೇ ಗಟ್ಟಿಯಾಗಿ ಉಳಿದು ಬಿಡುತ್ತದೆ. ಒಣಗಿದ ಬಳಿಕ ಆ ಕಲ್ಲನ್ನು ಕಿತ್ತು ಹಾಕುವುದು ಅಷ್ಟು ಸುಲಭವಿಲ್ಲ. ಆದುದರಿಂದಲೇ ಮನೆ ಮತ್ತು ಶಾಲೆಯ ಪರಿಸರ ಮಕ್ಕಳ ಪಾಲಿಗೆ ಚೆನ್ನಾಗಿರಬೇಕು. ಮಕ್ಕಳ ಅಭಿರುಚಿ ನಿರ್ಮಾಣವಾಗುವುದು ಇದೇ ಸಂದರ್ಭದಲ್ಲಿ. ಶಾಲಾ ಬದುಕಿನಲ್ಲಿ ವಾರ್ಷಿಕ ಪರೀಕ್ಷೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದಕ್ಕಿಂತ ಹೆಚ್ಚು, ಆ ಶಾಲೆಯ ವಾರ್ಷಿಕೋತ್ಸವಗಳು ಮಕ್ಕಳ ಸೃಜನಶೀಲ ಪ್ರತಿಭೆಗಳನ್ನು ಬಯಲಿಗೆಳೆಯುತ್ತವೆ.

ಶಾಲಾ ವಿದ್ಯಾರ್ಥಿಗಳು ಶಾಲೆಯಲ್ಲಿ ಹಬ್ಬದಂತೆ ಆಚರಿಸುವುದು ‘ವಾರ್ಷಿಕ ದಿನ’ವನ್ನು ಮಾತ್ರ. ಆ ದಿನ ವಿದ್ಯಾರ್ಥಿಗಳ ಸಡಗರಗಳೇ ಬೇರೆಯಿರುತ್ತವೆ. ಇದಕ್ಕೆ ಮುಖ್ಯ ಕಾರಣ, ವಾರ್ಷಿಕೋತ್ಸವದ ನೆಪದಲ್ಲಿ ಮಕ್ಕಳ ನಿಜವಾದ ಆಸಕ್ತಿಗಳು ಆ ದಿನ ಬಯಲಿಗೆ ಬರುತ್ತವೆೆ. ಆಟೋಟ ಸ್ಪರ್ಧೆ ನಡೆಯುವುದು ಅದೇ ದಿನ. ರ್ಯಾಂಕ್ ತೆಗೆದವರು ಆಟದಲ್ಲಿ ರ್ಯಾಂಕ್ ಪಡೆಯಬೇಕು ಎಂದಿಲ್ಲ. ಶಾಲೆಯಲ್ಲಿ ಶತದಡ್ಡ ಎಂದು ಗುರುತಿಸಿದವರು ವಾರ್ಷಿಕೋತ್ಸವದ ಸಂದರ್ಭದಲ್ಲಿ ಕ್ರೀಡಾ ಚಾಂಪಿಯನ್ ಆಗಿ ಎಲ್ಲರ ಗೌರವಕ್ಕೆ ಪಾತ್ರರಾಗಬಹುದು. ಸಂಗೀತ, ಹಾಡು, ಕಲೆ ಈ ಎಲ್ಲವುಗಳನ್ನು ಬೆಳಕಿಗೆ ತರುವುದು ಶಾಲಾ ವಾರ್ಷಿಕೋತ್ಸವ. ವಿದ್ಯಾರ್ಥಿಗಳ ಗಮನ ಪರೀಕ್ಷೆಯಿಂದ ಬೇರೆಡೆಗೆ ಚಲಿಸುತ್ತದೆ ಎಂಬ ಕಾರಣಕ್ಕಾಗಿ ಕೆಲವು ಶಾಲೆಗಳು ವಾರ್ಷಿಕೋತ್ಸವಗಳನ್ನು ಕಾಟಾಚಾರಕ್ಕಾಗಿ ಮಾಡುತ್ತವೆ. ಅಂತಹ ಶಾಲೆಗಳು ಕೇವಲ ಅಂಕಗಳನ್ನು ಉತ್ಪಾದಿಸುವ ಯಂತ್ರಗಳನ್ನಷ್ಟೇ ನಿರ್ಮಾಣ ಮಾಡುತ್ತವೆ. ಆ ವಿದ್ಯಾರ್ಥಿಗಳ ಒಳಗೆ ಯಾವ ಸೃಜನಶೀಲವಾದ ಜೀವಸೆಲೆಗಳೂ ಇರುವುದಿಲ್ಲ.

ವಾರ್ಷಿಕೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಬಹುಮುಖ್ಯವಾದುದು. ಮಕ್ಕಳ ಹಾಡು, ನೃತ್ಯ ಮೊದಲಾದ ಅಭಿವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಹೊರ ಬರುತ್ತವೆ. ಆದರೆ ಹೆಚ್ಚಿನ ಶಾಲೆಗಳಲ್ಲಿ ಈ ಹಾಡು, ನೃತ್ಯಗಳು ತನ್ನ ಉದ್ದೇಶಗಳನ್ನು ಸಾಧಿಸುವಲ್ಲಿ ವಿಫಲವಾಗುತ್ತಿವೆ. ಇಂದು ನೃತ್ಯವೆಂದರೆ ಸಿನೆಮಾ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕುವುದು ಎಂದು ಸ್ವತಃ ಶಿಕ್ಷಕರೇ ನಂಬಿದ್ದಾರೆ. ಹೆಚ್ಚಿನ ಶಾಲೆಗಳ ವಾರ್ಷಿಕೋತ್ಸವಗಳಲ್ಲಿ ಸಿನೆಮಾ ಹಾಡುಗಳೇ ಪ್ರಾಧಾನ್ಯವನ್ನು ಪಡೆಯುತ್ತವೆೆ. ಇದರ ಅರ್ಥ ಸಿನೆಮಾ ಹಾಡುಗಳನ್ನು ಬಳಸಬಾರದು ಎಂದಲ್ಲ. ಇಂದು ಸಿನೆಮಾ ಹಾಡುಗಳು ಮಕ್ಕಳನ್ನು ತಲುಪಲು ಸಾಕಷ್ಟು ಮಾಧ್ಯಮಗಳಿವೆ. ಮನೆಮನೆಗಳಲ್ಲಿ ಟಿವಿಗಳಿವೆ. ಮೊಬೈಲ್, ವಾಟ್ಸ್‌ಆ್ಯಪ್‌ನಲ್ಲೂ ಮಕ್ಕಳು ಸಿನೆಮಾ ನೃತ್ಯಗಳನ್ನು ನೋಡುತ್ತಾರೆ. ವಾರ್ಷಿಕೋತ್ಸವದಲ್ಲಿ ಮಕ್ಕಳು ಅದನ್ನು ಅನುಕರಿಸುತ್ತಾರೆ. ಇಷ್ಟಕ್ಕೂ ಸಿನೆಮಾ ಹಾಡುಗಳಿಗೆ ಯಾವುದೇ ಸಾಹಿತ್ಯಕ ಹಿನ್ನೆಲೆಗಳಿರುವುದಿಲ್ಲ. ವಯಸ್ಕರಿಗಾಗಿ ಬರೆದ ಹಾಡುಗಳಿಗೆ ವಯಸ್ಕರೇ ನರ್ತಿಸುವ ದೃಶ್ಯಗಳನ್ನು ಮಕ್ಕಳು ಅನುಕರಿಸಿದರೆ ಮಾನಸಿಕವಾಗಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಹಿಂದೆಲ್ಲ ಶಾಲಾ ವಾರ್ಷಿಕೋತ್ಸವಗಳಲ್ಲಿ ಭಾವಗೀತೆ, ಜಾನಪದ ಗೀತೆಗಳು ಆದ್ಯತೆ ಪಡೆದುಕೊಳ್ಳುತ್ತಿದ್ದವು. ವಿದ್ಯಾರ್ಥಿಗಳು ಜಾನಪದ ಮತ್ತು ಭಾವಗೀತೆಗಳನ್ನು ಕನ್ನಡ ಪಠ್ಯದಲ್ಲಿ ಹೊರತು ಪಡಿಸಿದರೆ, ಪರಿಚಯಿಸಿಕೊಳ್ಳುವುದು ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಾತ್ರ. ನೃತ್ಯ, ಹಾಡು ಇತ್ಯಾದಿಗಳನ್ನು ಪ್ರದರ್ಶಿಸಲು ಸುಮಾರು ಎರಡು ವಾರಗಳ ತರಬೇತಿಗಳನ್ನು ಪಡೆಯುವುದರಿಂದ, ಜೊತೆಗೆ ಯಾವ ಅಂಕಗಳ ಒತ್ತಡವೂ ಇಲ್ಲದ ಕಾರಣ ಖುಷಿಖುಷಿಯಾಗಿ ಆ ತರಬೇತಿಯಲ್ಲಿ ಭಾಗವಹಿಸುವುದರಿಂದ ಎಲ್ಲರೂ ಭಾವಗೀತೆಗಳನ್ನು, ಜಾನಪದ ಗೀತೆಗಳನ್ನು ಸುಲಭವಾಗಿ ತಮ್ಮದಾಗಿಸಿಕೊಳ್ಳುತ್ತಾರೆ. ಭಾವಗೀತೆಗಳ ಜೊತೆಗೆ ಅದನ್ನು ಬರೆದ ಹಿರಿಯ ಕವಿಗಳ ಪರಿಚಯವೂ ಮಕ್ಕಳಿಗಾಗುತ್ತದೆ. ಜಾನಪದ ಗೀತೆಗಳ ಮೂಲಕ ಬೇಟೆಯ ಹಾಡು, ಕೋಲಾಟ, ಗೀಗೀಪದ, ಹಳ್ಳಿಯ ಹಾಡು...ಸಾಮಾಜಿಕ ವೈವಿಧ್ಯಗಳ ಚಿತ್ರಣವೂ ಅವರ ಕಣ್ಣ ಮುಂದೆ ಬರುತ್ತದೆ. ಸಮಾಜವನ್ನು ನೋಡುವ ದೃಷ್ಟಿ ಅವರಿಗೆ ಎಳವೆಯಲ್ಲೇ ಸಿಗುತ್ತದೆ. ನಾಟಕಗಳೂ ಹಾಗೆಯೇ. ಇತಿಹಾಸ, ಜಾನಪದ ಇತ್ಯಾದಿಗಳನ್ನು ಪರಿಚಯಿಸುವ ಪ್ರಹಸನಗಳನ್ನು ಮಕ್ಕಳ ಕೈಯಲ್ಲಿ ಆಡಿಸಬೇಕು. ಈ ಮೂಲಕ ಅವರ ವ್ಯಕ್ತಿತ್ವವೂ ಅದರ ಜೊತೆಗೇ ವಿಕಸಿಸುತ್ತದೆ.

ದುರದೃಷ್ಟವಶಾತ್ ಇತ್ತೀಚೆಗೆ ಶಾಲೆಗಳ ವಾರ್ಷಿಕೋತ್ಸವದಲ್ಲಿ ನೃತ್ಯವೆಂದರೆ ಸಿನೆಮಾ ಹಾಡುಗಳಿಗೆ ಹೆಜ್ಜೆ ಹಾಕುವುದು. ಮಕ್ಕಳ ಕೈಯಲ್ಲಿ ಸಿನೆಮಾ ಹಾಡುಗಳನ್ನೂ ಹಾಡಿಸುವುದಿದೆ. ಜೊತೆಗೆ ಸಿನಿಮಾ ದೃಶ್ಯಗಳನ್ನು ಮಕ್ಕಳು ಅಭಿನಯಿಸುವುದಿದೆ. ಮಕ್ಕಳು ಈಗಾಗಲೇ ಈ ಹಾಡುಗಳನ್ನು ಟಿವಿಗಳಲ್ಲಿ ನೋಡಿರುವುದರಿಂದ ಕಲಿಸುವುದಕ್ಕೆ ಶಿಕ್ಷಕರಿಗೂ ಅನುಕೂಲವಾಗುತ್ತದೆ ಎಂದು ಕಾಣುತ್ತದೆ. ಮುಖ್ಯವಾಗಿ ಹೊಸತಲೆಮಾರಿನ ಶಿಕ್ಷಕರಿಗೇ ಭಾವಗೀತೆಗಳ ಮತ್ತು ಜಾನಪದ ಗೀತೆಗಳ ಕುರಿತಂತೆ ಪರಿಜ್ಞಾನವಿಲ್ಲ. ಹೆಚ್ಚಿನ ಕಾನ್ವೆಂಟ್‌ಗಳಲ್ಲೂ ಇದು ನಡೆಯುತ್ತದೆ. ಮುಖ್ಯ ಕಾರಣ ಅವುಗಳು ಇಂಗ್ಲಿಷ್ ಮೀಡಿಯಂ ಶಾಲೆಗಳು. ಭಾವಗೀತೆ, ಜಾನಪದ ಗೀತೆಯಂತಹ ಪ್ರಾಕಾರಗಳ ಬಗ್ಗೆ ಶಾಲೆಗೆ ತಿಳುವಳಿಕೆಯಿಲ್ಲ. ಮಕ್ಕಳಿಗೂ ಅದು ಅಪರಿಚಿತ. ಸಿದ್ಧ ಹಾಡುಗಳು ಮತ್ತು ನೃತ್ಯಗಳನ್ನು ಮಾದರಿಯಾಗಿಟ್ಟು ಮಕ್ಕಳಿಂದ ಸಿನೆಮಾ ಹಾಡುಗಳಿಗೇ ಹೆಜ್ಜೆ ಹಾಕಿಸುತ್ತಾರೆ. ಪಾಲಕರೂ ಈ ಬಗ್ಗೆ ಹೆಚ್ಚು ತಲೆಕೆಡಿಸುವುದಿಲ್ಲ.

ಬದಲಿಗೆ ನಟರ ಹಾಡುಗಳಿಗೆ ಹೆಜ್ಜೆ ಹಾಕಿದ ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದೇ ಹೆಚ್ಚು. ಇದು ಹೀಗೆಯೇ ಮುಂದುವರಿದರೆ ಹೊಸ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಭಾವಗೀತೆ, ಜಾನಪದ ಗೀತೆಗಳ ಅಭಿರುಚಿಯನ್ನು ಹುಟ್ಟಿಸುವುದು ಹೇಗೆ? ಅಷ್ಟೇ ಅಲ್ಲ, ಸಿನಿಮಾ ಅಶ್ಲೀಲ ದ್ವಂದ್ವಾರ್ಥದ ಹಾಡುಗಳನ್ನು ಎಳವೆಯಲ್ಲೇ ಮಕ್ಕಳ ಮನಸ್ಸಿನ ಮೇಲೆ ಬಿತ್ತಿದರೆ ಅದರ ಪರಿಣಾಮವೇನು?

 ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಾಲಾ ವಾರ್ಷಿಕೋತ್ಸವದಲ್ಲಿ ಸಿನೆಮಾ ಹಾಡುಗಳನ್ನು ಬಳಸಬಾರದು ಎಂಬ ಆದೇಶ ನೀಡಲು ನಿರ್ಧರಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಕ್ರಮ. ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಏನನ್ನು ಬೇಕಾದರೂ ಮಾಡಿಕೊಳ್ಳಲ್ಲಿ. ಆದರೆ ಯಾವುದು ಸರಿ, ಯಾವುದು ತಪ್ಪು ಎನ್ನುವುದು ಗೊತ್ತಿಲ್ಲದ ವಯಸ್ಸಿನಲ್ಲಿ ಮಕ್ಕಳಿಗೆ ಸಿನೆಮಾ ಹಾಡುಗಳನ್ನು ಕಲಿಸುವುದು, ಅದಕ್ಕೆ ಅವರು ಹೆಜ್ಜೆ ಹಾಕುವುದು ಅನೈತಿಕವಾಗಿದೆ. ಈ ಬಗ್ಗೆ ಪಾಲಕರೂ ಶಿಕ್ಷಣ ಸಂಸ್ಥೆಯೊಂದಿಗೆ ಮನವಿಯನ್ನು ಮಾಡಿಕೊಳ್ಳಬೇಕಾಗಿದೆ. ಜೊತೆಗೆ ಅಳಿದು ಹೋಗುತ್ತಿರುವ ಭಾವಗೀತೆ, ಜಾನಪದಗೀತೆಗಳಂತಹ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಉಳಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ಸಿನೆಮಾಗಳ ಹಾಡುಗಳೇ ಕನ್ನಡ ಪಠ್ಯವನ್ನು ಆಕ್ರಮಿಸಿಕೊಳ್ಳುವ ದಿನ ಬಂದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News