ವಾಕರಿಕೆ ಮತ್ತು ಹೊಟ್ಟೆನೋವಿನ ಅನುಭವವಾಗುತ್ತಿದೆಯೇ? ಅದಕ್ಕೆ ಗ್ಯಾಸ್ಟ್ರೊಪರೆಸಿಸ್ ಕಾರಣವಾಗಿರಬಹುದು

Update: 2019-01-25 12:21 GMT

ನಾವು ಸೇವಿಸಿರುವ ಆಹಾರವನ್ನು ಸ್ವಯಂ ಆಗಿ ಸಣ್ಣಕರುಳಿಗೆ ಸಾಗಿಸಲು ಜಠರಕ್ಕೆ ಸಾಧ್ಯವಾಗದಿರುವ ಅಥವಾ ಅದಕ್ಕಾಗಿ ತುಂಬ ಸಮಯವನ್ನು ತೆಗೆದುಕೊಳ್ಳುವ ಸ್ಥಿತಿಯನ್ನು ಗ್ಯಾಸ್ಟ್ರೊಪರೆಸಿಸ್ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಜೀರ್ಣಾಂಗ ವ್ಯವಸ್ಥೆಯ ನರಗಳಿಗೆ ಹಾನಿಯುಂಟಾಗಿರುತ್ತದೆ ಮತ್ತು ಇದು ಜಠರದ ಸ್ನಾಯುಗಳು ಹಾಗೂ ಸಣ್ಣಕರುಳಿನ ಕಾರ್ಯನಿರ್ವಹಣೆಗೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಸಣ್ಣಕರುಳಿನ ಮೂಲಕ ಆಹಾರವು ಸಾಗಲು ಅವಕಾಶ ನೀಡುವುದಿಲ್ಲ. ಇದರಿಂದಾಗಿ ಜಠರದ ಚಲನವಲನ ಕುಂಠಿತಗೊಳ್ಳುತ್ತದೆ ಅಥವಾ ಅದು ಕಾರ್ಯ ನಿರ್ವಹಿಸುವುದಿಲ್ಲ ಮತ್ತು ಜಠರವು ಆಹಾರವನ್ನು ಸಣ್ಣಕರುಳಿಗೆ ಸಾಗಿಸಲು ವಿಫಲಗೊಳ್ಳುತ್ತದೆ.

► ಗ್ಯಾಸ್ಟ್ರೊಪರೆಸಿಸ್‌ನ ಲಕ್ಷಣಗಳು

ಗ್ಯಾಸ್ಟ್ರೊಪರೆಸಿಸ್‌ನ ಲಕ್ಷಣಗಳನ್ನು ಹೆಚ್ಚಿನ ಸಂದರ್ಭದಲ್ಲಿ ಹೊಟ್ಟೆಯ ಇತರ ತೊಂದರೆಗಳ ಲಕ್ಷಣಗಳೆಂದು ತಪ್ಪಾಗಿ ಭಾವಿಸಲಾಗುತ್ತದೆ. ಇದರ ಲಕ್ಷಣಗಳು ಸೌಮ್ಯದಿಂದ ತೀವ್ರ ಸ್ವರೂಪದ್ದಾಗಿರಬಹುದು. ವಾಕರಿಕೆ, ಹೊಟ್ಟೆಯ ಮೇಲ್ಭಾಗ ದಲ್ಲಿ ನೋವು, ವಾಂತಿ, ಹಸಿವು ಕಡಿಮೆಯಾಗುವುದು ಮತ್ತು ಹೊಟ್ಟೆ ತುಂಬಿದಂತೆನಿಸುವುದು, ಹೊಟ್ಟೆಯುಬ್ಬರ, ದೇಹದ ತೂಕ ಕಡಿಮೆಯಾಗುವುದು,ಆಮ್ಲೀಯತೆ,ರಕ್ತದಲ್ಲಿ ಸಕ್ಕರೆ ಮಟ್ಟಗಳಲ್ಲಿ ಬದಲಾವಣೆ,ಕುಪೋಷಣೆ ಮತ್ತು ನಿಶ್ಶಕ್ತಿ ಇವು ಗ್ಯಾಸ್ಟ್ರೊಪರೆಸಿಸ್‌ನ ಲಕ್ಷಣಗಳಾಗಿವೆ.

► ಗ್ಯಾಸ್ಟ್ರೊಪರೆಸಿಸ್‌ಗೆ ಕಾರಣಗಳು

ಗ್ಯಾಸ್ಟ್ರೊಪರೆಸಿಸ್‌ಗೆ ನಿರ್ದಿಷ್ಟ ಕಾರಣವೆನ್ನುವುದಿಲ್ಲ,ಆದರೆ ಜಠರದ ನರಗಳಿಗೆ ಹಾನಿಯಾಗುತ್ತದೆ ಎನ್ನುವುದು ತಿಳಿದಿರುವ ಅಂಶವಾಗಿದೆ. ಜಠರದ ನರಗಳ ಕಾರ್ಯನಿರ್ವಹಣೆಗೆ ವ್ಯತ್ಯಯವುಂಟಾಗಲು ಹಲವಾರು ಕಾರಣಗಳಿವೆ.

► ಅಪಾಯದ ಅಂಶಗಳು

ವೈರಲ್ ಸೋಂಕು, ಮಧುಮೇಹ, ಪಾರ್ಕಿನ್ಸನ್ಸ್ ಕಾಯಿಲೆಯಂತಹ ನರಮಂಡಲದ ರೋಗಗಳು,ಅಂಗಾಂಗಗಳಲ್ಲಿ ಅತಿಯಾಗಿ ಪ್ರೋಟಿನ್ ಸಂಗ್ರಹವನ್ನುಂಟು ಮಾಡುವ ಅಮಿಲಾಯ್ಡೋಸಿಸ್,ಥೈರಾಯ್ಡೋ ಸಮಸ್ಯೆಗಳು ಮತ್ತು ಕೆಲವು ಔಷಧಿಗಳು ಗ್ಯಾಸ್ಟ್ರೊಪರೆಸಿಸ್‌ಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ.

► ಗ್ಯಾಸ್ಟ್ರೊಪರೆಸಿಸ್‌ನಿಂದ ಉಂಟಾಗುವ ತೊಂದರೆಗಳು

ತೀರ್ವ ನಿರ್ಜಲೀಕರಣ: ಗ್ಯಾಸ್ಟ್ರೊಪರೆಸಿಸ್‌ನಿಂದ ಬಳಲುತ್ತಿರುವ ವ್ಯಕ್ತಿಯು ನಿರಂತರ ವಾಂತಿಯಿಂದಾಗಿ ತೀವ್ರ ನಿರ್ಜಲೀಕರಣಕ್ಕೊಳಗಾಗಬಹುದು. ಈ ಸ್ಥಿತಿಯಿಂದ ಬಳಲುತ್ತಿರುವವರು ಸಾಕಷ್ಟು ನೀರು ಅಥವಾ ಇತರ ದ್ರವಗಳನ್ನು ಸೇವಿಸುತ್ತಿರಬೇಕಾಗುತ್ತದೆ.

ಕುಪೋಷಣೆ: ಗ್ಯಾಸ್ಟ್ರೊಪರೆಸಿಸ್ ರೋಗಿಯ ಹಸಿವನ್ನು ಕೊಲ್ಲುತ್ತದೆ ಮತ್ತು ಸದಾ ಹೊಟ್ಟೆ ತುಂಬಿರುವಂತೆ ಅನಿಸುತ್ತದೆ. ಅಗತ್ಯಕ್ಕಿಂತ ಕಡಿಮೆ ಆಹಾರವನ್ನು ಸೇವಿಸಿದಾಗ ನಮ್ಮ ಶರೀರಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುವುದಿಲ್ಲ. ಇದು ಕುಪೋಷಣೆಗೆ ದಾರಿ ಮಾಡಿಕೊಡುತ್ತದೆ. ಪದೇಪದೇ ವಾಂತಿಯಾಗುವುದರಿಂದ ಶರೀರವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲವಾದ್ದರಿಂದ ನಿಶ್ಶಕ್ತಿ ಕಾಣಿಸಿಕೊಳ್ಳುತ್ತದೆ.

► ರಕ್ತದಲ್ಲಿ ಸಕ್ಕರೆ ಮಟ್ಟ ಬದಲಾವಣೆ

ಗ್ಯಾಸ್ಟ್ರೊಪರೆಸಿಸ್ ಮುಖ್ಯವಾಗಿ ಜೀರ್ಣ ಸಮಸ್ಯೆಗಳನ್ನುಂಟು ಮಾಡುತ್ತದೆ ಮತ್ತು ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ಪೋಷಕಾಂಶಗಳನ್ನು ಕುಗ್ಗಿಸುತ್ತದೆ. ಮಧುಮೇಹದಿಂದ ಬಳುತ್ತಿರುವ ವ್ಯಕ್ತಿ ಗ್ಯಾಸ್ಟ್ರೊಪರೆಸಿಸ್‌ಗೆ ಗುರಿಯಾದರೆ ಸ್ಥಿತಿಯು ಇನ್ನಷ್ಟು ಹದಗೆಡಬಹುದು. ಇಂತಹ ಸ್ಥಿತಿಯಲ್ಲಿ ವೈದ್ಯರು ಸೂಚಿಸಿರುವ ಪಥ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಬಿಜೋರ್ ಎಂಬ ಘನವಸ್ತುವಿನ ಸೃಷ್ಟಿ: ಗ್ಯಾಸ್ಟ್ರೊಪರೆಸಿಸ್ ನಾವು ಸೇವಿಸಿದ ಆಹಾರವು ಜಠರದಿಂದ ಮುಂದೆ ಸಾಗಲು ಅವಕಾಶ ನೀಡುವುದಿಲ್ಲ ಮತ್ತು ಇದರಿಂದಾಗಿ ಆಹಾರವು ತುಂಬ ಹೊತ್ತು ಜಠರದಲ್ಲಿಯೇ ಉಳಿದುಕೊಳ್ಳುತ್ತದೆ. ಇದರಿಂದಾಗಿ ಆಹಾರಕ್ಕೆ ಹುದುಗು ಬರುತ್ತದೆ ಮತ್ತು ಇದು ಬ್ಯಾಕ್ಟೀರಿಯಾಗಳು ಅತಿಯಾಗಿ ಉತ್ಪತ್ತಿಯಾಗುವಂತೆ ಮಾಡುತ್ತದೆ. ಅಲ್ಲದೆ ಆಹಾರವು ಗಟ್ಟಿಯಾಗಿ ‘ಬಿಜೋರ್’ಗಳೆಂದು ಎಂದು ಕರೆಯಲಾಗುವ ಘನವಸ್ತುವಿಗೆ ರೂಪಾಂತರಗೊಳ್ಳುತ್ತದೆ. ಇದು ವಾಕರಿಕೆ,ವಾಂತಿ ಮತ್ತು ಜಠರದಲ್ಲಿ ಏರುಪೇರುಗಳಿಗೆ ಕಾರಣವಾಗಬಹುದು. ಬಿಜೋರ್‌ಗಳು ಸಣ್ಣಕರುಳಿಗೆ ಆಹಾರ ಸಾಗುವುದಕ್ಕೆ ತಡೆಯನ್ನುಂಟು ಮಾಡಿದರೆ ಅಪಾಯದ ಸ್ಥಿತಿಯುಂಟಾಗಬಹುದು.

ಗ್ಯಾಸ್ಟ್ರೊಪರೆಸಿಸ್‌ಗೆ ಸಂಬಂಧಿತ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ. ಸೇವಿಸುವ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಸ್ಥಿತಿಯನ್ನು ನಿಯಂತ್ರಿಸಬಹುದಾಗಿದೆ. ಟೊಮೆಟೊ,ಕ್ಯಾರಟ್,ಅಣಬೆಗಳಂತಹ ತರಕಾರಿಗಳು ಮತ್ತು ತರಕಾರಿ ರಸ, ಹಣ್ಣುಗಳು,ಮೊಟ್ಟೆಯಂತಹ ಪ್ರೋಟಿನ್‌ಯುಕ್ತ ಆಹಾರಗಳು,ಹಾಲು ಮತ್ತು ಮೊಸರಿನಂತಹ ಡೈರಿ ಉತ್ಪನ್ನಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News