ವರದಿಯಾಗುವ 2 ಲಕ್ಷ ಕುಷ್ಠರೋಗಗಳಲ್ಲಿ ಅರ್ಧದಷ್ಟು ಭಾರತದಲ್ಲಿ: ವಿಶ್ವ ಆರೋಗ್ಯ ಸಂಸ್ಥೆ

Update: 2019-01-25 16:47 GMT

ಹೊಸದಿಲ್ಲಿ,ಜ.25: ಜಾಗತಿಕವಾಗಿ ಪ್ರತಿವರ್ಷ ಎರಡು ಲಕ್ಷದಷ್ಟು ಕುಷ್ಠರೋಗ ಪ್ರಕರಣಗಳು ವರದಿಯಾಗುತ್ತಿದ್ದು ಇವುಗಳಲ್ಲಿ ಅರ್ಧದಷ್ಟು ಪ್ರಕರಣಗಳು ಭಾರತದಿಂದ ವರದಿಯಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.

ಇದೇ ವೇಳೆ, ಕುಷ್ಠರೋಗಕ್ಕೆ ಸಂಬಂಧಿಸಿ ತಾರತಮ್ಯ, ಸಂಕುಚಿತತೆ ಮತ್ತು ಪೂರ್ವಾಗ್ರಹ ಈ ರೋಗವನ್ನು ತೊಲಗಿಸುವಲ್ಲಿ ಬಹುದೊಡ್ಡ ತಡೆಗಳಾಗಿವೆ ಎಂದು ವರದಿ ತಿಳಿಸಿದೆ. ಕುಷ್ಠರೋಗಪೀಡಿತ ವ್ಯಕ್ತಿಯ ಜೊತೆ ತಾರತಮ್ಯ ಮಾಡುವ ಮತ್ತು ಈ ರೋಗದ ಹಿನ್ನೆಲೆಯಲ್ಲಿ ವಿಚ್ಛೇಧನ ನೀಡುವುದನ್ನು ನ್ಯಾಯಸಮ್ಮತಗೊಳಿಸಿದ್ದ ಎರಡು ಕಾನೂನುಗಳನ್ನು ರದ್ದು ಮಾಡಿರುವ ಭಾರತದ ಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯಾದ ಪ್ರಾದೇಶಿಕ ನಿರ್ದೇಶಕಿ ಪೂನಂ ಕೇತ್ರಪಾಲ್ ಸಿಂಗ್ ಶ್ಲಾಘಿಸಿದ್ದಾರೆ. ಜಾಗತಿಕವಾಗಿ ಕುಷ್ಠರೋಗ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ರೋಗಪತ್ತೆ, ಸುಧಾರಿತ ಚಿಕಿತ್ಸೆ ಮತ್ತು ಸಮರ್ಥ ನಿಗಾವಣೆ ಈ ರೋಗವನ್ನು ಹತೋಟಿಗೆ ತರುವಲ್ಲಿ ಮಹತ್ವದ ಪಾತ್ರವನ್ನು ನಿಬಾಯಿಸಿವೆ. ಆದರೆ ಈಗಲೂ ಪ್ರತಿವರ್ಷ ಜಗತ್ತಿನಾದ್ಯಂತ ಎರಡು ಲಕ್ಷ ಪ್ರಕರಣಗಳು ವರದಿಯಾಗುತ್ತಿದ್ದು ಇದರಲ್ಲಿ ಅರ್ಧಕ್ಕೂ ಹೆಚ್ಚು ಭಾರತವೊಂದರಲ್ಲೇ ಪತ್ತೆಯಾಗುತ್ತಿದೆ ಎಂದು ಪೂನಂ ತಿಳಿಸಿದ್ದಾರೆ. ಈ ರೋಗವನ್ನು ನಿಯಂತ್ರಿಸುವಲ್ಲಿ ತಾರತಮ್ಯ, ಸಂಕುಚಿತ ಭಾವನೆ ಮತ್ತು ಪೂರ್ವಾಗ್ರಹ ಪ್ರಮುಖ ತಡೆಗಳಾಗಿದೆ. ಆದರೆ ಈ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಮಾಡಿದರೆ ಶೇ.100 ಗುಣಪಡಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯಾ ಪ್ರದೇಶವು ಬಾಂಗ್ಲಾದೇಶ, ಭಾರತ, ಭೂತಾನ್, ಕೊರಿಯಾ ಪ್ರಜಾಸತಾತ್ಮಕ ಗಣರಾಜ್ಯ, ಇಂಡೊನೇಶಿಯ, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ತಿಮೊರ್-ಲೆಸ್ಟೆಯನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News