ಕಾಲಿನ ಹಿಮ್ಮಡಿಗಳು ಒಡೆಯಲು ಈ ಏಳು ಸಾಮಾನ್ಯ ಕಾರಣಗಳು ನಿಮಗೆ ತಿಳಿದಿರಲಿ

Update: 2019-01-26 11:57 GMT

ಕಾಲಿನ ಹಿಮ್ಮಡಿಗಳು ಒಡೆಯುವುದು ಎಲ್ಲ ವಯೋಮಾನದ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲೊಂದಾಗಿದೆ. ಆದರೆ ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಹಿಮ್ಮಡಿಗಳು ಒಡೆಯುವುದು ಗಂಭೀರ ಆರೋಗ್ಯ ಸಮಸ್ಯೆಯೇನಲ್ಲ,ಆದರೆ ಹಿತಾನುಭವ ನೀಡುವುದಿಲ್ಲ ಮತ್ತು ಸೋಂಕುಗಳಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಚರ್ಮದಲ್ಲಿ ಆಳವಾದ ಬಿರುಕುಗಳುಂಟಾಗಿದ್ದರೆ ಅದು ಅತೀವ ನೋವಿಗೆ ಕಾರಣವಾಗಬಹುದು ಮತ್ತು ರಕ್ತಸ್ರಾವವೂ ಉಂಟಾಗಬಹುದು.

ಕಾಲಿನ ಹಿಮ್ಮಡಿಗಳಲ್ಲಿ ಬಿರುಕುಗಳನ್ನುಂಟು ಮಾಡುವ ಸಾಮಾನ್ಯ ಕಾರಣಗಳಿಲ್ಲಿವೆ....

ಹಿಮ್ಮಡಿಗಳ ಸುತ್ತಲಿನ ಚರ್ಮವು ಬಾಯ್ಬಿಟ್ಟಾಗ ಅವುಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಶುಷ್ಕತೆ ಅಥವಾ ಹಿಮ್ಮಡಿಗಳ ಮೇಲಿನ ಒತ್ತಡ ಕಾರಣವಾಗಿರಬಹುದು. ಇದರಿಂದ ಹಿಮ್ಮಡಿಯ ಅಂಚಿನ ಸುತ್ತಲಿನ ಚರ್ಮವು ಒಣಗುತ್ತದೆ ಮತ್ತು ದಪ್ಪವಾಗುತ್ತದೆ. ಈ ಭಾಗಕ್ಕೆ ಸದಾ ನೀರು ತಾಗುತ್ತಿದ್ದರೆ ಸ್ಥಿತಿಯು ಇನ್ನಷ್ಟು ಹದಗೆಡಬಹುದು.

► ದೀರ್ಘಕಾಲ ನಿಲ್ಲುವಿಕೆ

ಸುದೀರ್ಘ ಅವಧಿಗೆ ನಿಂತುಕೊಂಡೇ ಇರುವುದು ಹಿಮ್ಮಡಿಗಳು ಒಡೆಯಲು ಕಾರಣಗಳಲ್ಲೊಂದಾಗಿದೆ. ವಿಶೇಷವಾಗಿ ಗಟ್ಟಿಯಾದ ಅಥವಾ ಒರಟು ನೆಲದ ಮೇಲೆ ತುಂಬ ಸಮಯದವರೆಗೆ ನಿಂತುಕೊಳ್ಳುವುದರಿಂದ ಹಿಮ್ಮಡಿಗಳ ಮೇಲಿನ ಒತ್ತಡ ಹೆಚ್ಚುತ್ತದೆ ಮತ್ತು ನಿರಂತರ ಉಜ್ಜುವಿಕೆಗೆ ಕಾರಣವಾಗುತ್ತದೆ. ಇದು ಚರ್ಮದಲ್ಲಿ ಬಿರುಕುಗಳನ್ನು ಮತ್ತು ತೆರೆದ ಹುಣ್ಣುಗಳನ್ನುಂಟು ಮಾಡುತ್ತದೆ. ಈ ಬಗ್ಗೆ ಕಾಳಜಿ ವಹಿಸದಿದ್ದರೆ ತೀವ್ರ ಹಿಮ್ಮಡಿ ನೋವು ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ನಿಮ್ಮ ವೃತ್ತಿಯಲ್ಲಿ ದೀರ್ಘ ಕಾಲ ನಿಂತುಕೊಂಡೇ ಇರುವ ಅಗತ್ಯವಿದ್ದರೆ ಹಿಮ್ಮಡಿಗಳ ಮೇಲಿನ ಒತ್ತಡವನ್ನು ತಗ್ಗಿಸಲು ಸಾಕಷ್ಟು ಮೆತ್ತೆಯ ವ್ಯವಸ್ಥೆಯಿರುವ ಸೂಕ್ತ ಪಾದರಕ್ಷೆಗಳನ್ನು ಧರಿಸುವುದು ಒಳ್ಳೆಯದು.

► ಬರಿಗಾಲಿನಲ್ಲಿ ನಡೆಯುವುದು

ಹುಲ್ಲಿನಲ್ಲಿ ಬರಿಗಾಲಿನಲ್ಲಿ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದನ್ನು ಹೆಚ್ಚಿನವರು ಕೇಳಿರುತ್ತಾರೆ. ಆದರೆ ಬರಿಗಾಲಿನಲ್ಲಿ ನಡೆಯುವುದು ಪಾದಗಳಲ್ಲಿ ಕೊಳೆ ಸಂಗ್ರಹಕ್ಕೆ ಕಾರಣವಾಗಬಲ್ಲುದು ಮತ್ತು ಇದು ಹಿಮ್ಮಡಿಗಳು ಒಡೆಯುವ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಹಿಂಬದಿಗೆ ತೆರೆದಿರುವ ಚಪ್ಪಲಿಗಳೂ ಹಿಮ್ಮಡಿಗಳ ಕೆಳಗಿನ ಕೊಬ್ಬು ವಿಸ್ತರಣೆಗೊಳ್ಳಲು ಅವಕಾಶ ನೀಡುತ್ತವೆ ಮತ್ತು ಹಿಮ್ಮಡಿಗಳು ಒಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಪಾದಗಳಿಗೆ ಸೂಕ್ತವಾಗಿ ಹೊಂದಿಕೊಳ್ಳದ ಶೂಗಳು ಸಹ ಹಿಮ್ಮಡಿಗಳ ಒಡೆತಕ್ಕೆ ಮತ್ತು ನೋವಿಗೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸುತ್ತವೆ. ಆದ್ದರಿಂದ ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವುದಿದ್ದರೆ ನಡಿಗೆಯ ಬಳಿಕ ನಿಮ್ಮ ಪಾದಗಳನ್ನು ನೀರು ಮತ್ತು ಸಾಬೂನಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ಕೊಳೆ ನಿವಾರಣೆಯಾಗುತ್ತದೆ ಮತ್ತು ಚರ್ಮ ಮೃದುವಾಗುತ್ತದೆ. ಕಾಲುಗಳನ್ನು ತೊಳೆದ ಬಳಿಕ ಮಾಯಿಶ್ಚರೈಸರ್ ಹಚ್ಚುವುದರಿಂದ ಚರ್ಮವು ಇನ್ನಷ್ಟು ಮೃದುವಾಗಲು ನೆರವಾಗುತ್ತದೆ.

► ಒಣಚರ್ಮ

 ಚರ್ಮವು ಶುಷ್ಕಗೊಳ್ಳುವ ಅಪಾಯವನ್ನು ಹೆಚ್ಚಿಸುವ ಹಲವಾರು ಕಾರಣಗಳಿವೆ. ಕಡಿಮೆ ತಾಪಮಾನವು,ವಿಶೇಷವಾಗಿ ಚಳಿಗಾಲದಲ್ಲಿ ವಾಯುವಿನಲ್ಲಿಯ ತೇವಾಂಶವನ್ನು ತೆಗೆದುಹಾಕುತ್ತದೆ. ತೇವಾಂಶ ಕಡಿಮೆಯಾಗುವುದು ಚರ್ಮವು ಒಣಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಹಿಮ್ಮಡಿಗಳ ಕೆಳಗಿನ ಚರ್ಮ ಹೆಚ್ಚಾಗಿ ಶುಷ್ಕ ಮತ್ತು ಒರಟಾಗಿರುತ್ತದೆ. ಹಿಮ್ಮಡಿಗಳ ಸುತ್ತಲಿನ ಚರ್ಮವು ಕಡಿಮೆ ಸಂಖ್ಯೆಯಲ್ಲಿ ಸೆಟಾ ಗ್ರಂಥಿಗಳನ್ನು ಹೊಂದಿರುವುದರಿಂದ ಅದು ಒಣಗುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಮತ್ತು ಜಲೀಕರಣದ ಕೊರತೆಯಿಂದಾಗಿ ಚರ್ಮವು ಒಣಗುತ್ತದೆ ಮತ್ತು ಹಿಮ್ಮಡಿಗಳು ಒಡೆಯುತ್ತವೆ.

► ಚರ್ಮಕ್ಕೆ ವಯಸ್ಸಾಗುವಿಕೆ

ನಮಗೆ ವಯಸ್ಸಾಗುತ್ತಿದ್ದಂತೆ ಚರ್ಮಕ್ಕೂ ವಯಸ್ಸಾಗುತ್ತಿರುತ್ತದೆ. ಹೀಗಾಗಿ ಹಿರಿಯರಲ್ಲಿ ಚರ್ಮವು ದಪ್ಪ ಮತ್ತು ಶುಷ್ಕವಾಗಿರುತ್ತದೆ. ವಯಸ್ಸಾಗುತ್ತ ಹೋದಂತೆ ಚರ್ಮವು ತನ್ನ ಸ್ಥಿತಿಸ್ಥಾಪಕ ಗುಣವನ್ನು ಕಳೆದುಕೊಳ್ಳುವುದು ಇದಕ್ಕೆ ಕಾರಣ. ಇದು ಚರ್ಮವು ಹೆಚ್ಚು ಒಣಗುವಂತೆ,ಒರಟಾಗುವಂತೆ ಮತ್ತು ಪದರಗಳನ್ನು ಹೊಂದಿರುವಂತೆ ಮಾಡುತ್ತದೆ. ಅಲ್ಲದೆ ಚರ್ಮದಲ್ಲಿ ತೈಲಾಂಶದ ಉತ್ಪತ್ತಿಯು ಕಡಿಮೆಯಾಗುವುದರಿಂದ ಹಿಮ್ಮಡಿಗಳಲ್ಲಿ ಬಿರುಕುಗಳುಂಟಾಗುವ ಅಪಾಯವು ಹೆಚ್ಚುತ್ತದೆ.

► ಅಸ್ವಚ್ಛತೆ

ನಮ್ಮ ಮುಖದಂತೆ ನಮ್ಮ ಪಾದಗಳೂ ಧೂಳು,ವಾಯುಮಾಲಿನ್ಯ ಮತ್ತು ರಾಸಾಯನಿಕಗಳಿಗೆ ತೆರೆದುಕೊಂಡಿರುತ್ತವೆ. ಹೀಗಾಗಿ ನಾವು ನಮ್ಮ ಮುಖದ ಬಗ್ಗೆ ವಹಿಸುವಷ್ಟೇ ಕಾಳಜಿಯನ್ನು ಪಾದಗಳ ಬಗ್ಗೆಯೂ ವಹಿಸಬೇಕು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತಿ ಬಾರಿಯೂ ಹೊರಗಿನಿಂದ ಮನೆಗೆ ಬಂದಾಗ ಪಾದಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಮತ್ತು ಮೃತ ಚರ್ಮಕೋಶಗಳನ್ನು ನಿವಾರಿಸಲು ಆಗಾಗ್ಗೆ ಉಜ್ಜುಗಲ್ಲಿನಿಂದ ಪಾದಗಳನ್ನು ತಿಕ್ಕಿಕೊಳ್ಳಬೇಕು. ಚಳಿಗಾಲದಲ್ಲಿ ಪಾದಗಳಿಗೆ ಮಾಯಿಶ್ಚರೈಸ್‌ರ್ ಹಚ್ಚಿಕೊಳ್ಳುವುದು ಕೂಡ ಸೂಕ್ತ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

► ಬೊಜ್ಜು

ನಾವು ಬೊಜ್ಜು ಅಥವಾ ಅತಿಯಾದ ದೇಹತೂಕವನ್ನು ಹೊಂದಿದ್ದರೆ ಕೇವಲ ನಿಲ್ಲುವುದರಿಂದಲೇ ಹಿಮ್ಮಡಿಗಳ ಕೆಳಗಿನ ಕೊಬ್ಬಿನ ಮೆತ್ತೆಯ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಆ ಭಾಗವು ಎರಡೂ ಪಾರ್ಶ್ವಗಳಲ್ಲಿ ವಿಸ್ತರಣೆಗೊಂಡು ಹಿಮ್ಮಡಿಗಳು ಒಡೆಯಲು ಕಾರಣವಾಗುತ್ತದೆ. ಅಲ್ಲದೆ ಚರ್ಮವು ಪೆಡಸಾಗಿ ನಮ್ಯತೆಯನ್ನು ಕಳೆದುಕೊಂಡಿದ್ದರೆ ಹಿಮ್ಮಡಿಗಳ ಮೇಲಿನ ಯಾವುದೇ ಒತ್ತಡವು ಬಿರುಕುಗಳನ್ನುಂಟು ಮಾಡುವ ಹೆಚ್ಚಿನ ಸಾಧ್ಯತೆಯಿರುತ್ತದೆ.

► ವೈದ್ಯಕೀಯ ಸ್ಥಿತಿಗಳು

ಹಲವಾರು ಆರೋಗ್ಯ ಸ್ಥಿತಿಗಳು ಒಣ ಚರ್ಮ ಮತ್ತು ಹಿಮ್ಮಡಿಗಳ ಒಡೆತಕ್ಕೆ ಕಾರಣವಾಗುತ್ತವೆ. ವಿಟಾಮಿನ್‌ಗಳು ಮತ್ತು ಸತುವುನಂತಹ ಖನಿಜಗಳ ಕೊರತೆ,ಸೋರಿಯಾಸಿಸ್,ಅಥ್ಲೀಟ್ಸ್ ಫೀಟ್ ಮತ್ತು ಕಜ್ಜಿಯಂತಹ ಚರ್ಮರೋಗಗಳು ಇವುಗಳಲ್ಲಿ ಸೇರಿವೆ. ಅಲ್ಲದೆ ಥೈರಾಯ್ಡಿ ಕಾಯಿಲೆಗಳಂತಹ ಹಾರ್ಮೋನ್ ಸಮಸ್ಯೆಗಳೂ ಬೆವರು ಗ್ರಂಥಿಗಳನ್ನು ನಿಷ್ಕ್ರಿಯಗೊಳಿಸಿ ಚರ್ಮವು ಒಣಗುವಂತೆ ಮಾಡುತ್ತವೆ ಮತ್ತು ಹಿಮ್ಮಡಿಗಳು ಒಡೆಯುವ ಅಪಾಯವನ್ನು ಹೆಚ್ಚಿಸುತ್ತವೆ. ಮಧುಮೇಹವು ನರಗಳಿಗೆ ಹಾನಿಯನ್ನುಂಟು ಮಾಡಬಲ್ಲುದು ಮತ್ತು ಪಾದಗಳ ಚರ್ಮದ ಶುಷ್ಕತೆ,ಬಿರುಕುಗಳು ಮತ್ತು ನೋವಿನ ಅರಿವನ್ನು ತಡೆಯಬಲ್ಲುದು. ಅದು ಸೋಂಕು ಅಪಾಯಗಳನ್ನೂ ಹೆಚ್ಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News