ರೋಬಾಟ್‌ಗಳಿಂದ ಸೇವೆ ಪಡೆಯಬೇಕೇ? ಹಾಗಿದ್ದರೆ ಹೊರಡಿ ಬುಡಾಪೆಸ್ಟ್‌ನ ಈ ಹೋಟೆಲ್‌ಗೆ

Update: 2019-01-26 12:37 GMT

ಹಂಗೆರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿರುವ ‘ಎಂಜಾಯ್ ಬುಡಾಪೆಸ್ಟ್ ಕೆಫೆ’ ತನ್ನ ಗ್ರಾಹಕರಿಗೆ ವಿನೂತನ ಅನುಭವವನ್ನು ನೀಡುತ್ತಿದೆ. ಇಲ್ಲಿರುವ ರೋಬಾಟ್‌ಗಳು ನಿಮ್ಮಿಂದ ಆರ್ಡರ್ ಪಡೆದುಕೊಂಡು ನೀವು ಬಯಸಿದ ಆಹಾರ ಮತ್ತು ಪಾನೀಯಗಳನ್ನು ನಿಮ್ಮ ಟೇಬಲ್‌ಗೆ ತರುತ್ತವೆ. ಅವು ನಿಮಗೆ ಜೋಕ್‌ಗಳನ್ನು ಹೇಳುತ್ತವೆ, ಮಕ್ಕಳೊಂದಿಗೆ ಮತ್ತು ನಿಮ್ಮೊಂದಿಗೂ ಡ್ಯಾನ್ಸ್ ಮಾಡುತ್ತವೆ. ನಿಮ್ಮ ಪಕ್ಕದಲ್ಲಿಯೇ ನಿಂತುಕೊಂಡು ನಿಮ್ಮೊಂದಿಗೂ ಹರಟೆಯನ್ನೂ ಹೊಡೆಯುತ್ತವೆ.

ಐಟಿ ಕಂಪನಿಯೊಂದು ಆರಂಭಿಸಿರುವ ಈ ಕೆಫೆ ರೋಬಾಟ್‌ಗಳ ಪೂರ್ಣ ತಂಡವೊಂದನ್ನು ಸಿಬ್ಬಂದಿಗಳಾಗಿ ಹೊಂದಿದ್ದು, ಇವು ಆಟೋಮೇಷನ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿಯ ತಾಂತ್ರಿಕ ಕ್ರಾಂತಿಗಳನ್ನು ಅರಿತುಕೊಳ್ಳಲು ಸಾರ್ವಜನಿಕರಿಗೆ ನೆರವಾಗುವ ಉದ್ದೇಶವನ್ನು ಹೊಂದಿವೆ.

ಈ ರೋಬಾಟ್ ವೇಟರ್‌ಗಳು ಗ್ರಾಹಕರಿಗೆ ಆಹಾರ ಮತ್ತು ಪಾನೀಯಗಳನ್ನು ಪೂರೈಸಲು ನಿಗದಿತ ಪಥಗಳನ್ನು ಅನುಸರಿಸುತ್ತವೆ. ಹೀಗಾಗಿ ಇಲ್ಲಿ ಗ್ರಾಹಕರಿಗೆ ರೋಬಾಟ್‌ಗಳ ಸಂಚಾರ ಮಾರ್ಗಗಳಿಂದ ದೂರವಿರುವಂತೆ ಸೂಚಿಸಲಾಗಿರುತ್ತದೆ.

ವೇಟರ್ ಕೆಲಸವನ್ನು ಕೆಲವು ರೋಬಾಟ್‌ಗಳು ಮಾಡಿದರೆ ಇತರ ರೋಬಾಟ್‌ಗಳು ಗ್ರಾಹಕರಿಗೆ ಮನರಂಜನೆ ನೀಡುವ ಹೊಣೆಯನ್ನು ವಹಿಸಿಕೊಂಡಿವೆ. ಈ ಕೆಫೆಯಲ್ಲಿ ‘ರಿಸೆಪ್ಶನಿಸ್ಟ್ ’ ಆಗಿರುವ ‘ಪೆಪ್ಪರ್’ ಹೆಸರಿನ ರೋಬಾಟ್ ಗ್ರಾಹಕರೊಂದಿಗೆ ಸಂಭಾಷಣೆಯನ್ನು ನಡೆಸುತ್ತದೆ ಮತ್ತು ಅವರೊಂದಿಗೆ ಡ್ಯಾನ್ಸ್ ಕೂಡ ಮಾಡುತ್ತದೆ.

ಜಪಾನಿ ಕಂಪನಿ ಸಾಫ್ಟ್‌ಬ್ಯಾಂಕ್ ಅಭಿವೃದ್ಧಿಗೊಳಿಸಿರುವ ಪೆಪ್ಪರ್‌ನ್ನು ಕೆಫೆಯಲ್ಲಿನ ಗದ್ದಲದ ವಾತಾವರಣದಲ್ಲಿಯೂ ಗ್ರಾಹಕರ ಮಾತುಗಳನ್ನು ಸರಿಯಾಗಿ ಆಲಿಸಲು ಸಾಧ್ಯವಾಗುವಂತೆ ಪರಿಷ್ಕರಿಸಲಾಗಿದೆ ಎನ್ನ್ನುವುದು ಮಾಲಿಕ ಟಿಬೋರ್ ಸಿಝ್ಮಾಡಿಯಾರ ಮಾತು.

ಪೆಪ್ಪರ್ ರೋಬಾಟ್‌ನ ಕೆಲಸದ ರೀತಿ,ಅದು ಗ್ರಾಹಕರಿಗೆ ನೀಡುವ ಖುಷಿ,ವೇಟರ್ ರೋಬಾಟ್‌ಗಳ ಸೇವೆ ಇವೆಲ್ಲವುಗಳಿಗೆ ಆನ್‌ಲೈನ್‌ನಲ್ಲಿ ಭಾರೀ ಪ್ರಶಂಸೆಗಳು ವ್ಯಕ್ತವಾಗಿವೆ.

ಹೆಚ್ಚುತ್ತಿರುವ ಆಟೋಮೇಷನ್ ಮತ್ತು ಕೃತಕ ಬುದ್ಧಿಮತ್ತೆ ಮಾನವರ ಉದ್ಯೋಗಗಳನ್ನು ಕಿತ್ತುಕೊಳ್ಳಲಿವೆ ಎಂಬ ಭೀತಿಗಳಿದ್ದರೂ,ಎಂಜಾಯ್ ಬುಡಾಪೆಸ್ಟ್ ಕೆಫೆಯ ರೋಬಾಟ್‌ಗಳು ಈ ವರೆಗೆ ಯಾವುದೇ ಮಾನವ ಸಿಬ್ಬಂದಿಯ ಉದ್ಯೋಗವನ್ನು ಕಸಿದುಕೊಂಡಿಲ್ಲ.

ವಾಸ್ತವದಲ್ಲಿ ನಾವು ಮೊದಲಿಗಿಂತ ದುಪ್ಪಟ್ಟು ಜನರನ್ನು ನೇಮಕ ಮಾಡಿಕೊಂಡಿದ್ದೇವೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ 16ರಿಂದ 20 ರೋಬಾಟ್‌ಗಳನ್ನು ನಿರ್ವಹಿಸಲು ನಮಗೆ ಹಿನ್ನೆಲೆಯಲ್ಲಿ ಐಟಿ ವಿಶೇಷಜ್ಞರು ಅಗತ್ಯವಾಗಿದ್ದಾರೆ ಎನ್ನುತ್ತಾರೆ ಸಿಝ್ಮಾಡಿಯಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News