ಜಯಂತ್ ಎನ್ನುವ ಅಮೃತ ಬಳ್ಳಿ...

Update: 2019-01-27 05:43 GMT

ಬದುಕಿನಲ್ಲಿ ಅಪ್ಪಟ ಹೃದಯವಂತರೂ, ಬರೆಯುವ ಸಂದರ್ಭದಲ್ಲಿ ಅಷ್ಟೇ ಬೌದ್ಧಿಕರೂ ಆಗಿದ್ದ ಹಿರಿಯ ಚಿಂತಕ ಗೌರೀಶ್ ಕಾಯ್ಕಿಣಿಯವರ ಪುತ್ರ ಜಯಂತ ಕಾಯ್ಕಿಣಿ. ತಂದೆಯ ಬರಹದ ಬೌದ್ಧಿಕ ಸುಳಿಗೆ ಎಳ್ಳಷ್ಟು ಸಿಕ್ಕದೆ ಅವರು ಹೇಗೆ ತನ್ನನ್ನು ತಾನು ರೂಪಿಸಿಕೊಂಡರು ಎನ್ನುವುದೇ ಒಂದು ಒಗಟು. ಕುವೆಂಪು ಅವರ ಪುತ್ರನಾಗಿಯೂ ಬರಹದಲ್ಲಿ ಅವರ ಶೈಲಿಯ ಪ್ರಭಾವಕ್ಕೆ ಸಿಕ್ಕದೆ ಸಾಹಿತ್ಯಕ್ಕೆ ಹೊಸ ಪ್ರಕಾರವನ್ನು ನೀಡಿದ ತೇಜಸ್ವಿ ಈ ಸಂದರ್ಭದಲ್ಲಿ ನೆನಪಾಗುತ್ತಾರೆ. ತನ್ನ ಬದುಕಿನ ಬಹು ಮುಖ್ಯ ಭಾಗವನ್ನು ಮುಂಬೈ ಶಹರದಲ್ಲಿ ಕಳೆದ ಜಯಂತ್‌ರ ಕತೆಗಳನ್ನು ಓದುವಾಗ, ಆ ಕತೆಗಳೊಳಗಿನ ನಗರದ ಬದುಕಿನ ಬೆಕ್ಕಸ ಬೆರಗಾಗಿಸುವ ವಿವರಗಳನ್ನು ತನ್ನದಾಗಿಸಿಕೊಳ್ಳುವಾಗ ನೆನಪಾಗುವುದು ಮುಂಬೈ ಚೋರ್ ಬಝಾರ್. ಜಯಂತ್ ಕಾಯ್ಕಿಣಿಯವರ ಕಥೆಯೊಳಗೆ ನುಗ್ಗುವುದೆಂದರೆ ಮುಂಬೈಯ ಚೋರ್‌ಬಝಾರ್‌ಗೆ ನುಗ್ಗಿದಂತೆ. ಎಲ್ಲೆಲ್ಲಿಂದಲೋ ಕದ್ದು ತಂದ ಮುಂಬೈ ಬದುಕಿನ ಚೂರುಗಳ ರಾಶಿಗಳು ಅಲ್ಲಿ ಹರಡಿಕೊಂಡಿರುತ್ತವೆ. ಚೋರ್‌ಬಝಾರ್‌ಗಳ ಗಲ್ಲಿಗಳಲ್ಲಿ ಆವರಿಸಿಕೊಂಡ ಆತಂಕ, ಅಚ್ಚರಿ, ಕುತೂಹಲ, ತಳಮಳಗಳ ಅನುಭವವನ್ನು ಕೊಡುತ್ತವೆ ಜಯಂತ್‌ರ ಕತೆಗಳು. ಅಲ್ಲಿ ನಮಗೆ ನಾವೇ ಎದುರುಗೊಳ್ಳುತ್ತೇವೆ. ನಮ್ಮ ಕಣ್ಣಲ್ಲಿ ನಿರ್ಲಕ್ಷಕ್ಕೊಳಗಾದ ಕ್ಷಣಗಳನ್ನು ಈ ಬಝಾರಿನಲ್ಲಿ ವಿಸ್ಮಯದ ಕಣ್ಣುಗಳಿಂದ ನಾವು ನೋಡುತ್ತೇವೆ.

ಶಹರದ ಕುರಿತಂತೆ ಸಾಹಿತ್ಯ ವಲಯದಲ್ಲಿದ್ದ ಪೂರ್ವಗ್ರಹ ಪೀಡಿತ ಅಭಿಪ್ರಾಯಗಳನ್ನು ಜಯಂತ್ ತಮ್ಮ ಕಥೆಗಳ ಮೂಲಕ ಹೋಗಲಾಡಿಸಿದರು. ನಗರವೆಂದರೆ ಭಾವನೆಗಳೇ ಇಲ್ಲದ ಯಂತ್ರಗಳು ಎನ್ನುವುದು ಸಾಹಿತ್ಯ ವಲಯದಲ್ಲಿ ಬಳಸಿ ಸವಕಲಾಗಿರುವ ವಸ್ತು. ಸಾಹಿತಿಗಳು ಹಳ್ಳಿಯ ‘ಹೋಂ ಸಿಕ್’ನಿಂದ ನರಳುತ್ತಿದ್ದ ಹೊತ್ತಿನಲ್ಲಿ ಜಯಂತ್ ನಗರ ಬದುಕಿನ ಸೌಂದರ್ಯವನ್ನು ಕಣ್ಣ ರೆಪ್ಪೆಗಳಲ್ಲಿ ಹಿಡಿದಿಡತೊಡಗಿದರು. ಯಶವಂತ ಚಿತ್ತಾಲರೂ ಮುಂಬೈ ಶಹರದಲ್ಲೇ ಇದ್ದು ಬರೆದವರಾದರೂ, ಚಿತ್ತಾಲರು ನೋಡಿದ ನಗರಕ್ಕೂ ಜಯಂತರು ನೋಡಿದ ನಗರಕ್ಕೂ ಅಜಗಜಾಂತರವಿದೆ. ಇವರಿಬ್ಬರು ಪರಸ್ಪರ ಬೆನ್ನು ಹಾಕಿ ಭಿನ್ನ ಗಲ್ಲಿಗಳಲ್ಲಿ ನಡೆದರು. ಮುಂಬೈಯ ಧಾರಾವಿ, ಚಾಳ್‌ಗಳು, ಉಸಿರುಗಟ್ಟುವ ಜೋಪಡಿಗಳಲ್ಲೂ ಜೀವನವಿದೆ. ಪುಟ್ಟ ಗುಡಿಸಲೊಳಗೆ ತಂದು ತುರುಕಿಸಿರುವ ನೀಳವಾದ ಕನ್ನಡಿ ಕಪಾಟಿನೊಳಗೂ ಉಸಿರುಗಟ್ಟುವ ಬದುಕಿನ ಸತ್ಯಗಳಿವೆ ಎನ್ನುವುದನ್ನು ಜಯಂತ್ ನಿರೂಪಿಸುವ ಶೈಲಿಯೇ ಕನ್ನಡಕ್ಕೆ ಹೊಸತು. ಜಯಂತ್ ಅವರ ತಲೆಮಾರಿಗೆ ಕಥೆಗಾರರಲ್ಲಿ ಹೊಸ ನಿರೂಪಣಾ ಶೈಲಿಯೊಂದು ಹುಟ್ಟಿಕೊಂಡಿತು. ಆದರೆ ಬಹುತೇಕ ಕತೆಗಾರರು ಆ ತಮ್ಮ ನಿರೂಪಣೆಯನ್ನು ತಾವೇ ಮೋಹಿಸುತ್ತಾ ಅದರಲ್ಲೇ ಕಳೆದುಹೋದರು. ಜಯಂತ್ ಶಹರದ ಬದುಕಿನ ದಟ್ಟ ಉಜ್ವಲವಾದ ವಿವರಣೆಗಳನ್ನು ಅತ್ಯಂತ ಸೂಕ್ಷ್ಮ ಕಣ್ಣುಗಳಲ್ಲಿ ಕಟ್ಟಿಕೊಟ್ಟವರು. ಕತೆ ಹೇಳುವಾಗ ಅಲ್ಲಿ ಅವರಿರುವುದಿಲ್ಲ. ಪೇಂಟಿಂಗ್‌ನಂತೆ ಅವರು ಕಟ್ಟಿ ಕೊಡುವ ದೃಶ್ಯಗಳಷ್ಟೇ ನಮ್ಮ ಮುಂದಿರುತ್ತವೆ.

ಲವಲವಿಕೆ ಜಯಂತ್ ಕತೆಗಳ ಮೂಲ ದ್ರವ್ಯ. ಯಾವುದೋ ಒಂದು ತಮಾಷೆಯಂತೆ ಚಾಳ್‌ನ ಯಾವುದೋ ಕೊಠಡಿಯೊಳಗಿಂದ ಶುರುವಾಗುವ ಕಥೆ ನಿಧಾನಕ್ಕೆ ಕೊಠಡಿ ದಾಟಿ ಅಲ್ಲಿರುವ ಮನುಷ್ಯನ ಎದೆಯಾಳಕ್ಕೆ ಇಳಿಸುತ್ತದೆ. ತಗಡು ಪರಬನ ಅಶ್ವಮೇಧವನ್ನು ಇದಕ್ಕೆ ಉತ್ತಮ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇಷ್ಟ ವಿಲ್ಲದ ಮದುವೆಯಲ್ಲಿ, ಇಷ್ಟವಿಲ್ಲದಿದ್ದರೂ ಅಣ್ಣನ ಒತ್ತಾಯಕ್ಕೆ ಕುದುರೆಯೇರುವ ಕಥಾನಾಯಕ ಆರಂಭಕ್ಕೆ ಒಂದು ತಮಾಷೆಯಾಗಿಯೇ ಕಾಣ ತೊಡಗುತ್ತಾನೆ. ಮದುವೆಯ ಕುದುರೆ ಇದ್ದಕ್ಕಿದ್ದಂತೆಯೇ ಮದುಮಗನ ಸಹಿತ ಓಡ ತೊಡಗುತ್ತದೆ. ಆರಂಭದಲ್ಲಿ ಆತನನ್ನು ಗಾಬರಿ ಬೀಳಿಸುವ ಕುದುರೆಯ ಓಟ ಅಂತಿಮವಾಗಿ ಅದೊಂದು ಪರಿಹಾರವಾಗಿ ಅವನಿಗೆ ಭಾಸವಾಗುತ್ತದೆ. ಇರುವ ಅನಿಶ್ಚಿತ ಸ್ಥಿತಿಯಿಂದ ಕುದುರೆಯ ಓಟ ಆತನನ್ನು ಪಾರು ಮಾಡುತ್ತದೆ. ಶಹರದ ಅನಾಮಿಕತೆ ಜಯಂತ್‌ಗೆ ತುಂಬಾ ಇಷ್ಟ. ಈ ಅನಾಮಿಕತೆ ಅವರೊಳಗಿನ ಕತೆಗಾರನಿಗೆ ಸ್ವಾತಂತ್ರವನ್ನು ಕೊಟ್ಟಿದೆ. ಆ ಸ್ವಾತಂತ್ರದ ಬಲದಿಂದಲೇ ಅವರ ಹೆಚ್ಚಿನ ಕತೆಗಳು ಹುಟ್ಟಿಕೊಂಡಿವೆ. ಅಮೃತ ಬಳ್ಳಿ ಕಷಾಯ ಅವರ ಅತ್ಯುತ್ತಮ ಕಥೆಗಳಲ್ಲಿ ಒಂದು. ನಮ್ಮಿಳಗಿನ ಅನಾಥ ಮಗುವನ್ನು ಸಂತೈಯಿಸುವ ತಾಯಿಯಂತಹ ಕತೆ. ಬಹುಶಃ ವರ್ತಮಾನದ ಕಾಯಿಲೆಗಳಿಗೆ ಜಯಂತರ ಕತೆಗಳಲ್ಲಿ ಔಷಧಿಗಳಿವೆ. ನಮ್ಮ ಉಗುರುಗಳಿಂದ ನಮಗೆ ನಾವೇ ಮಾಡಿಕೊಂಡ ಗಾಯಗಳ ನಂಜುಗಳನ್ನು ಹೀರಿ ತೆಗೆಯುವ ಶಕ್ತಿ ಅವುಗಳಿಗಿವೆ.

ಜಯಂತ್ ಕತೆಯಲ್ಲಿ ಸಾಧ್ಯವಾಗದ್ದನ್ನು ಕವಿತೆಯಲ್ಲಿ, ಅಲ್ಲಿಯೂ ಸಾಧ್ಯವಾಗದ್ದನ್ನು ಅಂಕಣಗಳಲ್ಲಿ, ಅಳಿದುಳಿದುದನ್ನು ನಾಟಕ ಸಾಹಿತ್ಯದಲ್ಲಿ ಸಾಧ್ಯವಾಗಿಸಿದರು. ‘ಹಾಯ್ ಬೆಂಗಳೂರ್’ನಲ್ಲಿ ಅವರು ‘ಬೊಗಸೆಯಲ್ಲಿ ಮಳೆ’ ಅಂಕಣ ಬರೆಯುತ್ತಿದ್ದಾಗ ‘ಮಾಂಸದಂಗಡಿಯಲ್ಲಿ ಮಲ್ಲಿಗೆ ವ್ಯಾಪಾರ’ ಎಂಬ ಮಾತುಗಳು ಎದ್ದಿದ್ದವು. ಆಟೋ ರಿಕ್ಷಾ ಡೈವರ್‌ಗಳ ಮಟ್ಟದ ಓದುಗರನ್ನು ತಲುಪಲು ನನಗೆ ಸಾಧ್ಯವಾದದ್ದು ಆ ಅಂಕಣ ಬರಹಗಳ ಮೂಲಕ ಎಂದು ಒಮ್ಮೆ ಜಯಂತ್ ಹೆಮ್ಮೆಯಿಂದ ಹೇಳಿಕೊಂಡಿದ್ದರು. ತಳಮಟ್ಟದ, ಮಧ್ಯಮವರ್ಗದ ಬದುಕನ್ನೇ ಕೇಂದ್ರವಾಗಿಟ್ಟುಕೊಂಡು ಕತೆ ಬರೆಯುತ್ತಿದ್ದ ಜಯಂತ್‌ರಿಗೆ ತಮ್ಮ ಬರಹಗಳು ವಿದ್ವತ್‌ನ ಗೆರೆ ದಾಟಿ ಶ್ರೀಸಾಮಾನ್ಯನನ್ನು ತಲುಪುವುದು ಆಗ್ರಹವೂ ಆಗಿತ್ತು. ಕಾವ್ಯವನ್ನು ನಮಗೆ ನಾವೇ ಗಣಿತವಾಗಿಸಿರುವುದರ ಬಗ್ಗೆ ಜಯಂತ್ ತೀವ್ರ ತಕರಾರನ್ನು ಹೊಂದಿದ್ದರು. ಒಮ್ಮೆ ಗೆಳೆಯರೊಬ್ಬರು ಅವರ ಮನೆಯಲ್ಲಿ ಕವಿತೆಯನ್ನು ಓದಿದಾಗ ಅಲ್ಲಿ ಬಂದ ‘ಸೈದ್ಧಾಂತಿಕ ರೇಖೆಗಳು’ ಎಂಬ ಪದವನ್ನು ಕಂಡು ಆತಂಕದಿಂದ ‘ಇದೇನಿದು ಸೈದ್ಧಾಂತಿಕ ರೇಖೆ? ಬರೇ ರೇಖೆ ಎಂದು ಬರೆದರೆ ಸಾಕಾಗದೆ...?’ ಎಂದು ಕೇಳಿದ್ದರು. ನಾನೇ ಒಂದು ಕವಿತೆಯನ್ನು ಓದಿ ಮುಗಿಸಿದಾಗ ‘ನೀನು ಅದನ್ನು ಪೂರ್ಣವಾಗಿ ಮುಗಿಸಿ ಬಿಟ್ಟಿದ್ದಿ. ಕೊನೆಯ ಒಂದು ಚರಣವನ್ನು ತೆಗೆದುಬಿಟ್ಟಿದ್ದರೆ ಓದುಗರ ಕಲ್ಪನೆಯಲ್ಲಿ ಅದು ಬೆಳೆಯುತ್ತಾ ಹೋಗುತ್ತಿತ್ತು’ ಎಂದಿದ್ದರು. ಎಳೆಯ ತರುಣರ ಮೇಲೆ ಅವರು ಅಪಾರ ವಿಶ್ವಾಸ ಹೊಂದಿರುವವರು. ನಾನು ಅದಾಗಲೇ ಮುಂಬೈಗೆ ಕಾಲಿಟ್ಟು ಒಂದು ವರ್ಷ ಆಗಿದ್ದಷ್ಟೇ. ಬಹುಶಃ ಮುಲುಂಡ್‌ನ ಕಾಳಿದಾಸ ಸಭಾಂಗಣ ಇರಬೇಕು. ಅಲ್ಲಿನ ಕವಿ ಗೋಷ್ಠಿಯಲ್ಲಿ ಭಾಗವಹಿಸಿದ್ದೆ. ‘ಧಾರಾವಿಯ ಚಿತ್ರಣ’ವೊಂದನ್ನಿಟ್ಟು ನಾನು ಕವಿತೆ ಬರೆದಿದ್ದೆ. (ನನ್ನ ಮುಂಬೈಯ ಬದುಕಿನ ಐದು ವರ್ಷಗಳನ್ನು ನಾನು ಕಳೆದಿದ್ದು ಧಾರಾವಿಯ ಅಂಗಳದಲ್ಲಿ). ಜಯಂತ್ ಕಾಯ್ಕಿಣಿ ನೇರವಾಗಿ ನಾನು ಕುಳಿತಲ್ಲಿಗೇ ಬಂದು ‘ನಿಮ್ಮ ಕವಿತೆ ತುಂಬಾ ಚೆನ್ನಾಗಿತ್ತು’ ಎಂದು ಬಿಟ್ಟರು. ಒಬ್ಬ ಕವಿ ಹುಟ್ಟುವುದಕ್ಕೆ ಅವರ ಈ ಒಂದು ಮಾತು ಸಾಕಾಗುವುದಿಲ್ಲವೇ? ನಾವೆಲ್ಲ ಗೆಳೆಯರು ನಮ್ಮ ನಮ್ಮ ಕವಿತೆಗಳನ್ನು ಹಿಡಿದುಕೊಂಡು ಜಯಂತ್‌ರ ಮನೆಯ ಬಾಗಿಲನ್ನು ತಟ್ಟಿದರೆ ಅವರು ತಮ್ಮ ಬೆಳದಿಂಗಳ ನಗುವಿನ ಜೊತೆಗೇ ಸ್ವಾಗತಿಸುತ್ತಿದ್ದರು. ಜಯಂತ್ ಅವರ ಮನೆಗೆ ನಾನು ಮೊದಲ ಬಾರಿ ಹೋದಾಗ ಅವರ ಪತ್ನಿಗೆ ನಾನು ನನ್ನ ಹೆಸರಿನ ಜೊತೆಗೆ ಪರಿಚಯಿಸಿದಾಗ ಅವರು ತಕ್ಷಣ ಹೇಳಿದ್ದು ‘‘ಗೊತ್ತು ಗೊತ್ತು, ಆ ನನ್ನ ತಂಗಿಯ ಮುಖದ ಮೊಡವೆಯ ಕುರಿತಂತೆ ನೀವೇ ಅಲ್ಲವೆ ಕವಿತು ಓದಿರುವುದು...’’ ಎಂದು ಬಿಟ್ಟರು. ಅವರಿಗೆ ಆಗ ಕನ್ನಡ ಅಷ್ಟೇನೂ ಸಲೀಸಾಗಿ ಬರುತ್ತಿರಲಿಲ್ಲ.

ಒಂದು ಕಾಲದಲ್ಲಿ ‘ಕ್ಯಾಸೆಟ್ ಕವಿ’ಗಳ ಬಗ್ಗೆ ತೀವ್ರ ಟೀಕೆ ಮಾಡುತ್ತಿದ್ದ ಜಯಂತ್ ಬಳಿಕ ವೃತ್ತಿ ಬದುಕಿನಲ್ಲಿ ಸಿನೆಮಾಗಳಿಗೆ ಹಾಡು ಬರೆಯ ತೊಡಗಿದರು. ಅದೊಂದು ದಿನ ಪೋನಲ್ಲಿ ಅವರೇ ಹೇಳಿದ್ದರು ‘‘ನಾವೆಲ್ಲ ಕ್ಯಾಸೆಟ್ ಕವಿಗಳು ಎಂದು ಟೀಕೆ ಮಾಡುತ್ತಿದ್ದೆವು. ಆದರೆ ಈ ಸಿನೆಮಾಗಳಿಗೆ ಹಾಡು ಬರೆಯುವುದಿದೆಯಲ್ಲ, ಅದು ಅದಕ್ಕಿಂತಲೂ ಭಿನ್ನವಾದುದು, ಇದಕ್ಕೂ ಸಾಧನೆ ಬೇಕು. ಒಳ-ಹೊರಗಿನ ಒತ್ತಡಗಳ ನಡುವಿನ ಗಲಾಟೆ ಇದು...ಅಷ್ಟು ಸುಲಭವಿಲ್ಲ...’’. ಜಯಂತ್ ಸಿನೆಮಾ ಹಾಡು ಬರೆಯುವ ಬಗ್ಗೆ ಗಂಭೀರ ಕವಿಗಳು ಲಘುವಾಗಿ ಮಾತನಾಡುವುದಿದೆ. ಆದರೆ ಸಿನೆಮಾ ಎನ್ನುವುದು ನಿರ್ಲಕ್ಷಿಸುವ ಮಾಧ್ಯಮವಂತೂ ಅಲ್ಲ. ಅವರು ಸಿನೆಮಾಗಳಿಗೆ ಬರೆಯುವ ರೂಪಕಗಳೆಲ್ಲವೂ ನಮಗೆ ಚಿರಪರಿಚಿತವಾಗಿದ್ದುದರಿಂದಲೋ ಏನೋ ಅವುಗಳು ಅವರ ಸಿನಿಮಾ ಹಾಡುಗಳು ಕಾಡಿದ್ದು ಕಡಿಮೆ. ಜಯಂತ್‌ರನ್ನು ಕೇವಲ ‘ಮಳೆ ಕವಿ’ಗೆ ಸೀಮಿತರಾಗಿಸುತ್ತಾರೋ ಎನ್ನುವಷ್ಟರಲ್ಲಿ ಅವರ ಕತೆಗಳಿಗೆ ಅಂತರ್‌ರಾಷ್ಟ್ರೀಯ ಪ್ರಶಸ್ತಿ ದಕ್ಕಿದ್ದು ನೆಮ್ಮದಿಯ ವಿಷಯ. ಹೊಸ ತಲೆಮಾರು ಮತ್ತೆ ಜಯಂತರ ಕತೆಗಳನ್ನು ಬಿಡಿಸಿ ಕೂರುವಂತಾಗಬೇಕು. ಈ ಪ್ರಶಸ್ತಿ ಅದಕ್ಕೊಂದು ನೆನಪಾಗಬೇಕು.

ಕೊನೆಯ ಮಾತು. ಜಯಂತ್ ಬರೆಯುತ್ತಾರೆ ‘‘ಓದು ಮತ್ತು ಬರವಣಿಗೆ ಪ್ರೇಮದಂತೆ. ಸ್ವಪ್ನದಂತೆ. ಅದರ ಖಾಸಗಿತನವನ್ನು ಏಕಾಂತವನ್ನು ಕಾಪಾಡಿಕೊಳ್ಳುವುದೇ ಲೇಖಕನ ಅಗ್ನಿದಿವ್ಯ. ಆಗ ಆತನಿಗೆ ಈ ಸಮ್ಮೇಳನ-ಗಿಮ್ಮೇಳನಗಳು, ದೂರದ ಅಪರಿಚಿತ ಕಾಂಪೌಂಡಿನಲ್ಲಿ ನಡೆವ ಯಾರದೋ ಮದುವೆಯ ಸಮಾರಂಭದಂತೆ ಕಾಣುತ್ತವೆ. ಸಾಹಿತ್ಯದ ಹೆಸರಿನಲ್ಲಿ ಎಲ್ಲರನ್ನು ದಣಿಸುವ ಇಂಥ ಕರ್ಕಶ ಬಹಿರಂಗ ಚಟುವಟಿಕೆಗಳೆಲ್ಲವೂ ಕೆಲಕಾಲ ಬರಖಾಸ್ತುಗೊಳ್ಳಬೇಕು. ಜೀವ ಜಾಲವನ್ನು ಪೋಷಿಸುವ ವೌನವೊಂದು ಕನ್ನಡದ ಪಾಕಶಾಲೆಗೆ ಮರಳಬೇಕು....’’

ಆದರೆ ಸದ್ಯದ ವರ್ತಮಾನದಲ್ಲಿ ಬರಹಗಾರನ ವೌನ, ಬೇರೆ ಬೇರೆ ರಾಜಕೀಯ ಅರ್ಥಗಳನ್ನು ಸ್ಫುರಿಸುತ್ತಿರುವ ದಿನಗಳಲ್ಲಿ ಜಯಂತರ ಮೇಲಿನ ಮಾತನ್ನು ಹೇಗೆ ತನ್ನದಾಗಿಸಬೇಕೆಂದು ತಿಳಿಯದೇ ನಾನು ತಳಮಳಗೊಂಡಿದ್ದೇನೆ.

ತೇಜಸ್ವಿನಿ ಎನ್ನುವ ನಿರಂಜನ

ಇಂಪಾಗಿ ಹಾಡುತ್ತಿದ್ದ ಕೋಗಿಲೆಯನ್ನು ನೋಡಿ ಕುವೆಂಪು ಹೇಳಿದರಂತೆ ‘‘ನೀನಿದನ್ನು ಇಂಗ್ಲಿಷ್‌ನಲ್ಲೇನಾದರೂ ಹಾಡಿದ್ದಿದ್ದರೆ ನಿನಗೆ ನೊಬೆಲ್ ಪ್ರಶಸ್ತಿ ಸಲ್ಲುತ್ತಿತ್ತು’. ವಿಶ್ವ ಸಾಹಿತ್ಯವನ್ನು ಗಮನಿಸಿದರೆ ಸಮೃದ್ಧ ಸಾಹಿತ್ಯ ಹೊರ ಬಂದಿರುವುದೇ ಪ್ರಾದೇಶಿಕ ಭಾಷೆಗಳಲ್ಲಿ. ಅವುಗಳನ್ನು ನಮಗೆಲ್ಲ ಇಂಗ್ಲಿಷ್ ಮೂಲಕ ತಲುಪಲು ಸಾಧ್ಯವಾಯಿತು. ಕನ್ನಡ ಸಾಹಿತ್ಯದಲ್ಲಿ ಅದೆಷ್ಟು ಮಹತ್ತರ ಬರಹಗಳು ಬಂದಿವೆಯೆಂದರೆ, ಅದನ್ನು ಇಂಗ್ಲಿಷ್ ಮೂಲಕ ಜಗತ್ತಿಗೆ ತಲುಪಿಸುವ ಕೈಗಳಿದ್ದಿದ್ದರೆ ಕನ್ನಡ ವಿಶ್ವಮಾನ್ಯ ಭಾಷೆಯಾಗಿ ಬಿಡುತ್ತಿತ್ತು. ಇಂದಿಗೂ ಯು. ಆರ್. ಅನಂತಮೂರ್ತಿ, ಕಾರ್ನಾಡ್‌ರಂತಹ ಲೇಖಕರು, ಚಿಂತಕರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುತ್ತಿದ್ದರೆ ಅದು ಅವರ ಬರಹಗಳ ಕಾರಣದಿಂದಷ್ಟೇ ಅಲ್ಲ, ಅದನ್ನು ತನ್ನ ಮೃದು ಕೈಗಳಲ್ಲಿ ಇಂಗ್ಲಿಷ್ ತೊಟ್ಟಿಲಿಗೆ ಇಳಿಸಿದ ಎ. ಕೆ. ರಾಮಾನುಜನ್ ಕೂಡ ಕಾರಣರು. ಇದೀಗ ಜಯಂತ್ ಎನ್ನುವ ಕನ್ನಡದ ಅಮೃತ ಬಳ್ಳಿ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಕಾರಣವಾದ ತೇಜಸ್ವಿನಿ ನಿರಂಜನ ಅವರನ್ನು ಈ ಕಾರಣಕ್ಕೇ ನಾವೆಲ್ಲ ನೆನೆಯಬೇಕಾಗಿದೆ.

 

ತೇಜಸ್ವಿನಿ ನಿರಂಜನ ಅವರು ಕರ್ನಾಟಕದ ವಿದ್ವತ್‌ಲೋಕಕ್ಕೆ ಪರಿಚಿತರಾದರೂ, ಶ್ರೀಸಾಮಾನ್ಯ ಓದುಗರಿಗೆ ಅವರು ತಲುಪಿರುವುದು ಕಡಿಮೆ. ತೇಜಸ್ವಿನಿ ಅನುಪಮಾ ನಿರಂಜನ ದಂಪತಿಯ ಪುತ್ರಿ. ಉಪನ್ಯಾಸಕಿ, ಚಿಂತಕಿ, ಲೇಖಕಿ, ಅನುವಾದಕಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ರಾಷ್ಟ್ರ ಅಂತರ್‌ರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡವರು. ವಿಶ್ವದ ಮಹಾನ್ ಲೇಖಕರ ಕೃತಿಗಳನ್ನು ನಿರಂಜನ ಅವರು ಕನ್ನಡಕ್ಕೆ ತಂದರೆ, ಇವರು ಕನ್ನಡದ ಲೇಖಕರನ್ನು ವಿಶ್ವಕ್ಕೆ ತಲುಪಿಸುವ ಪ್ರಯತ್ನ ಮಾಡಿದವರು. ಇವರ ಕಾರಣದಿಂದಲೇ ಜಯಂತ್ ಎನ್ನುವ ಅಮೃತ ಬಳ್ಳಿಯ ಕಷಾಯದ ಸವಿಯನ್ನು ಇಂಗ್ಲಿಷ್ ಓದುಗರೂ ತಮ್ಮದಾಗಿಸಿ ಕೊಳ್ಳುವಂತಾಗಿದೆ.

Writer - ಬಿ.ಎಂ. ಬಶೀರ್

contributor

Editor - ಬಿ.ಎಂ. ಬಶೀರ್

contributor

Similar News

ಜಗದಗಲ
ಜಗ ದಗಲ