ನಿಧನರಾದ ಬಳಿಕವೂ ಜಯಲಲಿತಾರ ಬ್ಯಾಂಕ್ ಖಾತೆಗೆ ಹಣ ಜಮೆ!

Update: 2019-01-27 15:01 GMT

ಚೆನ್ನೈ, ಜ.27: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿ ಎರಡು ವರ್ಷ ಕಳೆದಿದೆ. ಆದರೂ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಜಯಲಲಿತಾರ ಹೆಸರಲ್ಲಿರುವ ವಾಣಿಜ್ಯ ಮತ್ತು ವಸತಿ ಸಂಕೀರ್ಣದ ಬಾಡಿಗೆ ಹಣ ಪ್ರತೀ ತಿಂಗಳೂ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ.

ಇದೇ ಸಂದರ್ಭ ಜಯಲಲಿತಾರಿಂದ 16 ಕೋಟಿ ರೂ. ತೆರಿಗೆ ಬಾಕಿ ಇರುವ ಕಾರಣ ಪ್ರಸಿದ್ಧ ಪೋಯೆಸ್ ಗಾರ್ಡನ್ ಮನೆ ಹಾಗೂ ಇತರ ಮೂರು ಆಸ್ತಿಗಳನ್ನು 2007ರಿಂದ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ ಎಂಬ ಮಾಹಿತಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ಒಂದೆಡೆ ಅವರ ಖಾತೆಗೆ ಹಣ ಜಮೆಯಾಗುತ್ತಿದ್ದರೆ, ಇನ್ನೊಂದೆಡೆ ಅವರ ತೆರಿಗೆ ಪಾವತಿ ಬಾಕಿಯ ಮೊತ್ತವೂ ಏರುತ್ತಿದೆ. ಜಯಲಲಿತಾ 2016ರ ಡಿ.5ರಂದು ಮೃತಪಟ್ಟ ಬಳಿಕ ಅವರ ತೆರಿಗೆ ಬಾಕಿ ಚುಕ್ತಾಗೊಳಿಸಿ ತೆರಿಗೆ ರಿಟರ್ನ್ಸ್ ಸಲ್ಲಿಸಲು ಯಾರೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳದ ಕಾರಣ ಅವರ ತೆರಿಗೆ ಬಾಕಿ ಮೊತ್ತ ಏರುತ್ತಲೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2007ರಲ್ಲಿ ಜಯಲಿತಾರಿಗೆ ಸೇರಿರುವ ನಾಲ್ಕು ಆಸ್ತಿಗಳನ್ನು(ಪೋಯೆಸ್ ಗಾರ್ಡನ್‌ನ ವೇದ ನಿಲಯಂ ಸಹಿತ) ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದಾಯ ತೆರಿಗೆ ಕಾಯ್ದೆ ಪ್ರಕಾರ, ಬಾಕಿ ತೆರಿಗೆ ಪಾವತಿಸದೆ ಈ ಆಸ್ತಿಗಳನ್ನು ಮಾರಾಟ ಅಥವಾ ಲೀಸ್‌ ಗೆ ನೀಡುವಂತಿಲ್ಲ. ತೆರಿಗೆ ಪಾವತಿಸುವಂತೆ ಜಯಲಲಿತಾರಿಗೆ ಹಲವಾರು ಬಾರಿ ನೆನಪಿಸಿದರೂ ಅವರು ಕಿವಿಗೊಡಲಿಲ್ಲ. ಈ ಮಧ್ಯೆ, ಜಯಲಲಿತಾರ ಪೋಯೆಸ್ ಗಾರ್ಡನ್ ನಿವಾಸವನ್ನು ಸ್ಮಾರಕವನ್ನಾಗಿಸುವ ತಮಿಳುನಾಡು ಸರಕಾರದ ಪ್ರಯತ್ನಕ್ಕೆ ತಡೆಯೊಡ್ಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ‘ಟ್ರಾಫಿಕ್’ ರಾಮಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಜನವರಿ 31ರಂದು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News