ಬಿಷಪ್ ವಿರುದ್ಧ ಪ್ರತಿಭಟಿಸಿದ್ದ ನನ್‌ಗಳ ವರ್ಗಾವಣೆ ತಡೆಯುವಂತೆ ಸಿಎಂಗೆ ಒಕ್ಕೂಟದ ಆಗ್ರಹ

Update: 2019-01-27 15:45 GMT

ತಿರುವನಂತಪುರ,ಜ.27: ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದ ಐವರು ನನ್‌ಗಳ ವರ್ಗಾವಣೆ ಆದೇಶಗಳನ್ನು ತಡೆಯುವಂತೆ ಎಂಟು ಸ್ವತಂತ್ರ ಚರ್ಚ್ ಸಂಘಟನೆಗಳ ಒಕ್ಕೂಟ ‘ಸೇವ್ ಅವರ್ ಸಿಸ್ಟರ್ಸ್’ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದೆ.

ಅತ್ಯಾಚಾರ ಸಂತ್ರಸ್ತೆ ಮತ್ತು ಬಿಷಪ್ ವಿರುದ್ಧದ ಪ್ರಕರಣದಲ್ಲಿ ಆಕೆಯನ್ನು ಬೆಂಬಲಿಸಿದ್ದ ಐವರು ನನ್‌ ಗಳು ಮಿಷನರಿಸ್ ಆಫ್ ಜೀಸಸ್‌ನಿಂದ ಪ್ರತ್ಯೇಕಿಸಲ್ಪಡುವ ಮತ್ತು ಕೇರಳದಿಂದ ಹೊರಗೆ ವರ್ಗಾವಣೆಗೊಳಿಸಲ್ಪಡುವ ತಕ್ಷಣದ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ಒಕ್ಕೂಟವು, ವರ್ಗಾವಣೆ ಆದೇಶಗಳು ಜಾರಿಗೊಳ್ಳುವ ಮೂಲಕ ಅವರ ಜೀವಗಳು ಅಪಾಯಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸುತ್ತೇವೆ ಎಂದು ಹೇಳಿದೆ.

ಕಾನ್ವೆಂಟ್‌ ನಲ್ಲಿರುವ ಈ ನನ್‌ ಗಳಿಗೆ ಪ್ರಕರಣದ ವಿಚಾರಣೆಯು ಪೂರ್ಣಗೊಳ್ಳುವವರೆಗೆ ಸರಕಾರವು ರಕ್ಷಣ ನೀಡುತ್ತಿದೆ ಎಂದು ಬೆಟ್ಟು ಮಾಡಿರುವ ಒಕ್ಕೂಟವು,ನನ್‌ ಗಳನ್ನು ಅವರು ಹಾಲಿ ಇರುವ ಕಾನ್ವೆಂಟ್‌ ನಿಂದ ಹೊರಗೆ ಹೋಗುವಂತೆ ನೀಡಲಾಗಿರುವ ಆದೇಶಗಳನ್ನು ತಡೆಹಿಡಿಯಲು ತಕ್ಷಣ ಕ್ರಮವನ್ನು ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಕುರವಿಲಂಗಾಡ್ ಕಾನ್ವೆಂಟ್‌ನ್ನು ತೊರೆದು ಮಾರ್ಚ್-ಮೇ ನಡುವೆ ಅವರಿಗೆ ಸೂಚಿಸಲಾಗಿರುವ ಕಾನ್ವೆಂಟ್‌ಗಳಿಗೆ ತೆರಳುವಂತೆ ಕ್ಯಾಥೊಲಿಕ್ ಚರ್ಚ್ ಈ ತಿಂಗಳ ಆರಂಭದಲ್ಲಿ ನಾಲ್ವರು ನನ್‌ಗಳಿಗೆ ಆದೇಶಿಸಿತ್ತು. ನಂತರದ ವಾರದಲ್ಲಿ ಜಲಂಧರ್ ಕಾನ್ವೆಂಟ್‌ಗೆ ತೆರಳುವಂತೆ ಇನ್ನೋರ್ವ ನನ್‌ಗೆ ಆದೇಶಿಸಲಾಗಿತ್ತು.

ವಿಜಯನ್ ಅವರಿಗೆ ಪತ್ರವೊಂದನ್ನು ಬರೆದು ಅವರ ನೆರವನ್ನು ಕೋರಿದ್ದ ನಾಲ್ವರು ನನ್ ‌ಗಳು,ಇದು ಪ್ರಕರಣವನ್ನು ಬುಡಮೇಲುಗೊಳಿಸುವ ಪ್ರಯತ್ನದ ಭಾಗವಾಗಿದೆ ಮತ್ತು ಚರ್ಚ್‌ನ ಕ್ರಮವು ಮಾನಸಿಕ ಕಿರುಕುಳದ ಒಂದು ವಿಧವಾಗಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News