ಕೆಮ್ಮುವಾಗ ಬಾಯಿಯಲ್ಲಿ ಲೋಹದ ರುಚಿಯುಂಟಾಗುತ್ತಿದೆಯೇ?: ಕಾರಣಗಳು ಇಲ್ಲಿವೆ...

Update: 2019-01-28 16:59 GMT

ಬಾಯಿಯಲ್ಲಿ ಲೋಹದ ರುಚಿ ಅಹಿತಕರವಾಗಿರುತ್ತದೆ. ಹೀಗೆ ಆಗಾಗ್ಗೆ ಲೋಹದ ರುಚಿಯ ಅನುಭವವಾಗುವುದು ಸಾಮಾನ್ಯ. ಕೆಲವು ಔಷಧಿಗಳು, ಬಾಯಿಯ ಗಾಯ ಅಥವಾ ಇತ್ತೀಚಿಗೆ ಬಾಯಿ ಶಸ್ತ್ರಚಿಕಿತ್ಸೆ ಅಥವಾ ಬಾಯಿಯ ಅನಾರೋಗ್ಯ ಇವು ಲೋಹದ ರುಚಿಗೆ ಕಾರಣವಾಗುತ್ತವೆ. ಆದರೆ ಕೆಲವು ಪ್ರಕರಣಗಳಲ್ಲಿ ಇಂತಹ ಲೋಹದ ರುಚಿಯು ವಿವಿಧ ಗಂಭೀರ ಕಾಯಿಲೆಗಳನ್ನು ಸೂಚಿಸುತ್ತದೆ. ಇಂತಹ ಕಾಯಿಲೆಗಳು ಮೂತ್ರಪಿಂಡ ಸಮಸ್ಯೆಗಳು, ಕ್ಯಾನ್ಸರ್ ಅಥವಾ ರೋಗನಿರ್ಧಾರವಾಗಿರದ ಮಧುಮೇಹ ಇವುಗಳನ್ನು ಒಳಗೊಂಡಿರಬಹುದು. ವಿಕಿರಣ ಚಿಕಿತ್ಸೆ ಅಥವಾ ಕ್ಯಾನ್ಸರ್ ಚಿಕಿತ್ಸೆ ಕೂಡ ಬಾಯಿಯಲ್ಲಿ ಲೋಹದ ರುಚಿಗೆ ಕಾರಣವಾಗುತ್ತದೆ.

ಕೆಮ್ಮುವಾಗ ಬಾಯಿಯಲ್ಲಿ ಲೋಹದ ರುಚಿಯುಂಟಾದರೆ ಅದು ಕಳವಳಕಾರಿಯಾಗಬಹುದು. ಉಸಿರಾಟದ ವ್ಯವಸ್ಥೆ ಅಥವಾ ಶ್ವಾಸಕೋಶಗಳ ಮೇಲಿನರ್ಧ ಭಾಗದಲ್ಲಿ ಸೋಂಕು ಇದಕ್ಕೆ ಪ್ರಮುಖ ಮತ್ತು ಸಾಮಾನ್ಯ ಕಾರಣವಾಗಿದೆ. ಶೀತದಂತಹ ಸೋಂಕು ಬಾಯಿಯಲ್ಲಿ ಹಳೆಯ ನಾಣ್ಯವೊಂದನ್ನು ಇಟ್ಟುಕೊಂಡಂತಹ ಅನುಭವವನ್ನು ನೀಡುತ್ತದೆ. ಈ ರುಚಿಯು ತುಂಬ ಅಹಿತಕರವಾಗಿರುತ್ತದೆ. ನಾವು ಕೆಮ್ಮಿದಾಗ ಶ್ವಾಸನಾಳದಿಂದ ಹೊರಬರುವ ಕಫದಲ್ಲಿ ಅಲ್ಪಪ್ರಮಾಣದ ರಕ್ತವು ಈ ರುಚಿಗೆ ಕಾರಣವಾಗುತ್ತದೆ. ಕಫದಲ್ಲಿಯ ರಕ್ತದ ಮಟ್ಟ ಹೆಚ್ಚು ಕಡಿಮೆಯಿರಬಹುದು ಮತ್ತು ಸ್ಪಷ್ಟವಾದ ಲೋಹದ ರುಚಿಯನ್ನುಂಟು ಮಾಡುತ್ತದೆ. ಕೆಮ್ಮುವಾಗ ಲೋಹದ ರುಚಿ ಸಾಮಾನ್ಯ ಶೀತವನ್ನು ಸೂಚಿಸುತ್ತದೆಯಾದರೂ,ಈ ಸ್ಥಿತಿಗೆ ಇತರ ಕಾರಣಗಳೂ ಇವೆ.

* ಮೇಲಿನ ಉಸಿರಾಟದ ಸೋಂಕು(ಯುಆರ್‌ಐ) ಅಥವಾ ಸಾಮಾನ್ಯ ಶೀತ

ಯುಆರ್‌ಐ ಒಂದು ವಿಧದ ವೈರಲ್ ಸೋಂಕು ಆಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಮತ್ತು ಪೀಡಿತರ ಮೂಗು, ಶ್ವಾಸಕೋಶಗಳು ಮತ್ತು ಗಂಟಲಿನಲ್ಲಿ ಕೆರಳುವಿಕೆಯನ್ನುಂಟು ಮಾಡುತ್ತದೆ. ಸಾಮಾನ್ಯ ಶೀತದಿಂದ ನಿರಂತರ ಕೆಮ್ಮಿನ ಜೊತೆಗೆ ಎದೆ ಕಟ್ಟಿದಂತಾಗುತ್ತದೆ. ಸಿಂಬಳ, ಕಫ ಅಥವಾ ಸೋಂಕಿನಿಂದುಂಟಾಗುವ ಯಾವುದೇ ಸ್ರಾವ ಲೋಹದ ರುಚಿಯನ್ನು ಹೊಂದಿರುತ್ತವೆ. ಕೆಮ್ಮುವಾಗ ವ್ಯಕ್ತಿಗೆ ಇದರ ರುಚಿಯು ಅನುಭವವಾಗುತ್ತದೆ.

* ಅಸ್ತಮಾ ಅಥವಾ ವ್ಯಾಯಾಮದಿಂದ ಉಸಿರಾಟದ ತೊಂದರೆ

ಅತಿಯಾದ ವ್ಯಾಯಾಮದಿಂದಾಗಿ ಅಥವಾ ಅಸ್ತಮಾದಿಂದಾಗಿ ಉಸಿರಾಡಲು ತೊಂದರೆ ಎದುರಿಸುತ್ತಿರುವ ವ್ಯಕ್ತಿಯಲ್ಲಿ ಕೆಮ್ಮುವಾಗ ಅಥವಾ ಉಬ್ಬಸದ ವೇಳೆ ಲೋಹದ ರುಚಿಯ ಅನುಭವಾಗುತ್ತದೆ. ಇದು ನಿರಂತರ ಸಮಸ್ಯೆಯಲ್ಲ, ಆದರೆ ಉಸಿರಾಟ ಕಷ್ಟವಾದಾಗ ಅನುಭವವಾಗುತ್ತದೆ.

* ಅತಿಸಂವೇದನಾಶೀಲತೆ

ಅನಾಫಿಲ್ಯಾಕ್ಸಿಸ್ ಅಥವಾ ಅತಿಸಂವೇದನಾಶೀಲತೆಯು ಅಲರ್ಜಿಯನ್ನುಂಟು ಮಾಡುವ ಯಾವುದೇ ವಸ್ತುವಿನ ಸಂಪರ್ಕಕ್ಕೆ ಬಂದಾಗ ಉಂಟಾಗುವ ತೀವ್ರ ಪ್ರತಿವರ್ತನೆಯಾಗಿದ್ದು, ಇದು ವಿವಿಧ ವ್ಯಕ್ತಿಗಳಲ್ಲಿ ಹೆಚ್ಚಿರಬಹುದು. ಶರೀರದಲ್ಲಿಯ ರೋಗ ನಿರೋಧಕ ವ್ಯವಸ್ಥೆಯು ಅಲರ್ಜಿಕಾರಕವನ್ನು ಹೊರಹಾಕಲು ಹೋರಾಡುವಾಗ ಪೀಡಿತ ವ್ಯಕ್ತಿಯು ಅತಿಸಂವೇದನಾಶೀಲತೆಯ ಆಘಾತಕ್ಕೊಳಗಾಗುತ್ತಾನೆ. ಅತಿಸಂವೇದನಾಶೀಲತೆ ಪ್ರತಿವರ್ತನೆಯೊಂದಿಗೆ ಕೆಮ್ಮು ಮತ್ತು ಉಬ್ಬಸ ಕಾಣಿಸಿಕೊಳ್ಳುತ್ತವೆ. ಈ ಪ್ರತಿವರ್ತನೆಯಿಂದಾಗಿ ಶ್ವಾಸಮಾರ್ಗವು ಬಲವಂತದಿಂದ ಮುಚ್ಚಲ್ಪಟ್ಟಾಗ ಬಾಯಿಯಲ್ಲಿ ಲೋಹದ ರುಚಿಯುಂಟಾಗುತ್ತದೆ.

* ಪಲ್ಮನರಿ ಎಡೆಮಾ

ವ್ಯಾಯಾಮದಂತಹ ತೀವ್ರ ದೈಹಿಕ ಚಟುವಟಿಕೆಗಳಿಂದಾಗಿ ಎದೆಯಲ್ಲಿನ ಒತ್ತಡವು ಹೆಚ್ಚಿದಾಗ ಶ್ವಾಸಕೋಶಗಳಲ್ಲಿ ದ್ರವಗಳು ಸೇರಿಕೊಳ್ಳುವ ಸ್ಥಿತಿಯನ್ನು ಪಲ್ಮನರಿ ಎಡೆಮಾ ಎನ್ನಲಾಗುತ್ತದೆ. ದ್ರವಗಳಲ್ಲಿಯ ಕೆಂಪು ರಕ್ತಕಣಗಳು ಶ್ವಾಸಕೋಶಗಳನ್ನು ಪ್ರವೇಶಿಸಬಹುದು ಮತ್ತು ಕೆಮ್ಮಿಗೆ ಕಾರಣವಾಗುತ್ತವೆ. ಕೆಂಪು ರಕ್ತಕಣಗಳ ಉಪಸ್ಥಿತಿಯಿಂದಾಗಿ ಕೆಮ್ಮಿದಾಗ ಬಾಯಿಯಲ್ಲಿ ಲೋಹದ ರುಚಿಯುಂಟಾಗುತ್ತದೆ.

ಬ್ರಾಂಕೈಟಿಸ್, ಔಷಧಿಗಳ ಅಡ್ಡ ಪರಿಣಾಮಗಳು, ದೀರ್ಘಕಾಲಿಕ ಲೋಳೆಯ ಸಂಗ್ರಹ, ಧೂಳಿಗೆ ತೆರೆದುಕೊಳ್ಳುವುದು, ವೈರಲ್ ಫಾರಿಂಜಿಟಿಸ್, ಹೊಗೆ, ಗಳಗಂಡ, ದೀರ್ಘ ಕಾಲಿಕ ಶ್ವಾಸಕೋಶ ಸಮಸ್ಯೆ ಮತ್ತು ವಿಷಪ್ರಾಶನ ಇವೂ ಲೋಹದ ರುಚಿಯನ್ನುಂಟು ಮಾಡುವ ಕಾರಣಗಳಲ್ಲಿ ಸೇರಿವೆ.

ಚಿಕಿತ್ಸೆ: ಸಾಮಾನ್ಯ ಶೀತವು ಇದಕ್ಕೆ ಕಾರಣವಾಗಿದ್ದರೆ ವೈರಸನ್ನು ಆ್ಯಂಟಿಬಯಾಟಿಕ್‌ ಗಳ ಮೂಲಕ ನಿವಾರಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಲೋಹದ ರುಚಿಯ ನಿವಾರಣೆಗಾಗಿ ವೈರಸ್ ‌ನ ಜೀವಿತಾವಧಿ ಮುಗಿಯುವವರೆಗೆ ಕೆಲವು ಸಮಯ ಕಾಯಬಹುದು. ಆದರೂ ಸಾಮಾನ್ಯ ಶೀತಕ್ಕೆ ಬಳಸುವ ಔಷಧಿಗಳಿಂದ ಲಕ್ಷಣಗಳಿಗೆ ಚಿಕಿತ್ಸೆ ಪಡೆಯಬಹುದು. ಕೆಮ್ಮಿನ ಔಷಧಿಗಳು ಸ್ವಲ್ಪ ಮಟ್ಟಿಗೆ ಲೋಹದ ರುಚಿಯಿಂದ ಮತ್ತು ಕೆಮ್ಮಿನಿಂದ ಶಮನ ನೀಡಲು ನೆರವಾಗುತ್ತವೆ. ಉಸಿರಾಟದ ಸೋಂಕು ಶ್ವಾಸಕೋಶಗಳು ಅಥವಾ ಗಂಟಲಿನಲ್ಲಿ ನೋವಿಗೆ ಕಾರಣವಾಗಿದ್ದರೆ ಆ್ಯಸಿಟಾಮಿನೊಫೆನ್‌ ನಂತಹ ನೋವು ನಿವಾರಕಗಳು ತಾತ್ಕಾಲಿಕವಾಗಿ ಕೊಂಚ ಶಮನವನ್ನುಂಟು ಮಾಡುತ್ತವೆ. ಫೆನಿಲೆಫ್ರಿನ್ ಅಥೌ ಸುಡೊಫೆಡ್ರಿನ್‌ನಂತಹ ಡಿಕಂಜೆಸ್ಟಂಟ್‌ ಗಳು ಕಫ ಮತ್ತು ಲೋಳೆಗಳಿಂದ ಎದೆ ಕಟ್ಟಿಕೊಂಡಿರುವುದನ್ನು ಕಡಿಮೆ ಮಾಡುತ್ತವೆ.

ಬಾಯಿಯಲ್ಲಿ ಲೋಹದ ರುಚಿಗೆ ಸಾಮಾನ್ಯವಾಗಿ ಶೀತವು ಕಾರಣವಾಗಿರುತ್ತದೆ. ಶೀತವು ಕೆಲವು ದಿನಗಳವವರೆಗೆ ಕಾಡುತ್ತದೆ ಮತ್ತು ಬಳಿಕ ಗುಣವಾಗುತ್ತದೆ. ಆದರೆ ಸುದೀರ್ಘ ಸಮಯದವರೆಗೆ ಈ ಸ್ಥಿತಿಯಿದ್ದರೆ ಮತ್ತು ತೀವ್ರ ಜ್ವರ, ಉಬ್ಬಸ ಅಥವಾ ಉಸಿರಾಟದ ತೊಂದರೆ, ಕೆಮ್ಮಿನಲ್ಲಿ ರಕ್ತ ಇಂತಹ ಲಕ್ಷಣಗಳಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News