ವಂಚಕರ ವಿರುದ್ಧ ಸಿಬಿಐ ದಾಳಿ ನಡೆಸಿದರೆ ಜೇಟ್ಲಿಗೇಕೆ ಸಿಟ್ಟು?

Update: 2019-01-29 10:42 GMT

ಸಿಬಿಐಯ ಮೇಲೆ ಕೇಂದ್ರ ಸರಕಾರ ನಡೆಸುತ್ತಿರುವ ಸರಣಿ ದಾಳಿ ಮುಗಿದಂತಿಲ್ಲ. ಈಗಾಗಲೇ ಅಲೋಕ್ ವರ್ಮಾ ಅವರ ವಜಾದ ಮೂಲಕ ಸಿಬಿಐ ಸಂಸ್ಥೆಯ ಮಿತಿಯನ್ನು ಸರಕಾರ ಸ್ಪಷ್ಟ ಪಡಿಸಿತ್ತು. ಸ್ವತಃ ನ್ಯಾಯಾಂಗದ ನಿರ್ಧಾರಕ್ಕೂ ಮನ್ನಣೆ ನೀಡದೆ, ಅಲೋಕ್ ವರ್ಮಾ ಅವರನ್ನು ಸಿಬಿಐಯಿಂದ ಕಿತ್ತು ಹಾಕುವುದು ತನ್ನ ಸಾವು ಬದುಕಿನ ಪ್ರಶ್ನೆ ಎಂಬಂತೆ ವರ್ತಿಸಿತು. ಒಂದು ರೀತಿಯಲ್ಲಿ ಸಿಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಕೇಂದ್ರ ಸರಕಾರದ ಪಾಲಿಗೆ ಸಾವು ಬದುಕಿನ ಪ್ರಶ್ನೆಯೇ ಆಗಿತ್ತು ಕೂಡ. ರಫೇಲ್ ಹಗರಣದಲ್ಲಿ ಅದು ಪ್ರಾಮಾಣಿಕವಾಗಿ ತನ್ನ ಹೆಜ್ಜೆಯನ್ನು ಮುಂದಿಟ್ಟಿದ್ದರೆ ಮೋದಿಯ ಜೊತೆಜೊತೆಗೆ ಇಡೀ ಸರಕಾರ ಕುಸಿಯುತ್ತಿತ್ತು. ಅಷ್ಟೇ ಅಲ್ಲ, ರಫೇಲ್ ಹಗರಣದಲ್ಲಿ ಭಾಗಿಯಾಗಿರುವ ಹಲವು ನಾಯಕರು ಜೈಲು ಸೇರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಸಿಬಿಐ ಮುಖಸ್ಥರನ್ನೇ ಕಿತ್ತು ಹಾಕಿದ ಸರಕಾರಕ್ಕೆ ಉಳಿದ ಸಿಬ್ಬಂದಿ ಒಂದು ಲೆಕ್ಕವೇ? ಇದೀಗ ಕೇಂದ್ರ ಸರಕಾರದ ಕೆಂಗಣ್ಣು ಅದರೊಳಗಿರುವ ಕೆಳಹಂತದ ಸಿಬ್ಬಂದಿ ಮೇಲೆ ಬಿದ್ದಿದೆ. ಇತ್ತೀಚೆಗೆ ಸಿಬಿಐ ಮಹತ್ವದ ದಾಳಿಯೊಂದನ್ನು ನಡೆಸಿತು. ಐಸಿಐಸಿಐ ಬ್ಯಾಂಕ್- ವೀಡಿಯೊಕಾನ್ ಸಾಲ ಪ್ರಕರಣಕ್ಕೆ ಸಂಬಂಧಿಸಿ ಚಂದಾಕೊಚ್ಚಾರ್, ದೀಪಕ್ ಕೊಚ್ಚಾರ್, ವೇಣುಗೋಪಾಲ ಧೂತ್ ಹಾಗೂ ಇತರರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತು. ಸಿಬಿಐ ಅಧಿಕಾರಿ ಸುಧಾಂಶು ದಾರ್ ಮಿಶ್ರಾ ಈ ಪ್ರಕರಣದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಅವರು ಸಿಬಿಐಯ ಬ್ಯಾಂಕಿಂಗ್ ಮತ್ತು ಭದ್ರತಾ ಪತ್ರ ವಂಚನೆ ವಿಭಾಗದ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿರುವಾಗ, ಈ ಪ್ರಕರಣವನ್ನು ಪತ್ತೆ ಹಚ್ಚಿದರು ಮಾತ್ರವಲ್ಲ, ಯಾವುದೇ ಶಿಫಾರಸನ್ನು ಲೆಕ್ಕಿಸದೇ ಕೊಚ್ಚಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಯಾರ ಮೇಲೆಯೇ ಆಗಿರಲಿ ಒಟ್ಟಾರೆಯಾಗಿ ದಾಳಿ ನಡೆಸಿ ಎಫ್‌ಐಆರ್ ದಾಖಲಿಸಲು ಆಗುವುದಿಲ್ಲ. ಸದ್ಯದ ಪ್ರಕರಣದ ಹಿಂದಿರುವವರು ಹಿರಿಯ ಕಾರ್ಪೊರೇಟ್ ಕುಳಗಳಾಗಿರುವುದರಿಂದ, ಸಿಬಿಐ ಈ ಕುರಿತಂತೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿಯೇ ಮುನ್ನಡಿಯಿಡುತ್ತದೆ. ಅಲೋಕ್‌ವರ್ಮಾ ಅವರಿಗಾದ ಗತಿಯನ್ನು ಸಿಬಿಐಯ ಸಿಬ್ಬಂದಿ ಈಗಾಗಲೇ ಗಮನಿಸಿದ್ದಾರೆ. ಜೊತೆಗೆ ಸರಕಾರವೀಗ ತನ್ನ ಮೂಗಿನ ನೇರಕ್ಕಿರುವ ಅಧಿಕಾರಿಗಳನ್ನೇ ಸಿಬಿಐ ಒಳಗೆ ಇಟ್ಟಿದೆ. ಹೀಗಿದ್ದೂ ಸಿಬಿಐಯು ಎಫ್‌ಐಆರ್ ದಾಖಲಿಸಿದ್ದರೆ ಪ್ರಕರಣ ಅಷ್ಟೊಂದು ಗಂಭೀರವಿದೆ ಎಂದು ಅರ್ಥ. ಒಂದು ವೇಳೆ ಸಿಬಿಐ ಎಫ್‌ಐಆರ್ ದಾಖಲಿಸಿರುವುದರ ಹಿಂದೆ ಯಾವುದೇ ಪ್ರಬಲ ಸಾಕ್ಷಗಳಿಲ್ಲ ಎಂದಾದರೆ ನ್ಯಾಯಾಲಯದಲ್ಲಿ ದೋಷಮುಕ್ತರಾಗುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಆದರೆ ಯಾವಾಗ ಸಿಬಿಐಯು ಎಫ್‌ಐಆರ್ ದಾಖಲಿಸಿತೋ, ತಕ್ಷಣ ವಿತ್ತ ಸಚಿವ ಜೇಟ್ಲಿ ಸಿಬಿಐ ವಿರುದ್ಧ ಉಗ್ರರಾದರು. ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಿದ್ದ ಜೇಟ್ಲಿ ಅವರು, ಈ ಕುರಿತಂತೆ ಯಾವ ವಿಚಾರಣೆಯನ್ನೂ ಮಾಡದೇ ಅಲ್ಲಿಂದಲೆ ಸಿಬಿಐಯನ್ನು ಕಟುವಾಗಿ ಟೀಕಿಸಿದರು. ‘ಸಿಬಿಐ ಸಾಹಸ ಪ್ರವೃತ್ತಿ’ಯೆಡೆಗೆ ಸಾಗುತ್ತಿದೆ. ಅದು ತನ್ನನ್ನು ತಾನು ‘ಹೀರೋ’ ಎಂದು ಬಿಂಬಿಸಲು ಹೊರಟಿದೆ. ಇದು ತೀವ್ರೋನ್ಮಾದವೇ ಹೊರತು ವೃತ್ತಿಪರತೆಯಲ್ಲ’’ ಎಂದು ಜೇಟ್ಲಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡಲು ಕಾರಣವೇನು ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ಅಷ್ಟೇ ಅಲ್ಲ, ಜೇಟ್ಲಿ ಅವರ ಹೇಳಿಕೆ ಹೊರ ಬಿದ್ದ ಬೆನ್ನಿಗೇ ಅಧಿಕಾರಿ ಸುಧಾಂಶು ದಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅಂದರೆ ಈ ವರ್ಗಾವಣೆ ರಾಜಕೀಯ ಒತ್ತಡದ ಮೇರೆಗೆ ನಡೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿಬಿಐಯ ಸ್ಥಿತಿ ಎಷ್ಟು ಪಾತಾಳಕ್ಕಿಳಿದಿದೆ ಎನ್ನುವುದಕ್ಕೆ ಈ ಘಟನೆ ಇನ್ನೊಂದು ಉದಾಹರಣೆಯಾಗಿದೆ.

ಜೇಟ್ಲಿಯವರು ಸಿಬಿಐಗೆ ಏನು ಸಂದೇಶ ನೀಡುತ್ತಿದ್ದಾರೆ? ಬ್ಯಾಂಕ್ ಒಂದು ಸಾಲನೀತಿಯನ್ನು ಉಲ್ಲಂಘಿಸುವುದಕ್ಕೆ ವಿತ್ತ ಸಚಿವರೂ ಹೊಣೆಗಾರರಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿಬಿಐಯ ಸಾಹಸ ಪ್ರವೃತ್ತಿಯನ್ನು ಜೇಟ್ಲಿ ಅಭಿನಂದಿಸಬೇಕಾಗಿತ್ತು. ಸಿಬಿಐ ಸಾಹಸ ಪ್ರವೃತ್ತಿಯನ್ನು ಪ್ರದರ್ಶಿಸಬಾರದು ಎನ್ನುವುದರ ಅರ್ಥವಾದರೂ ಏನು? ಇಷ್ಟಕ್ಕೂ ವೃತ್ತಿ ಪರತೆ ಎಂದರೇನು? ವಂಚಕ ಬ್ಯಾಂಕ್‌ಗಳ ಜೊತೆಗೆ ತನಿಖಾಧಿಕಾರಿಗಳು ಸಮನ್ವಯವನ್ನು ಸಾಧಿಸುತ್ತಾ, ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುವುದೇ ? ಒಂದು ವೇಳೆ ಸಿಬಿಐ ಸಿಬ್ಬಂದಿಯಿಂದ ತಪ್ಪು ನಡೆದರೂ ಅದಕ್ಕಾಗಿ ವಿದೇಶದಲ್ಲಿದ್ದ ಜೇಟ್ಲಿ ಆತುರಾತುರದಲ್ಲಿ ಹೇಳಿಕೆ ನೀಡುವ ಅಗತ್ಯವೇನಿತ್ತು? ಇದೇ ಸಿಬಿಐ ಮತ್ತು ಐಟಿ ಸಂಸ್ಥೆಯನ್ನು ಬಳಸಿಕೊಂಡು ಕೇಂದ್ರ ಸರಕಾರ ತಮ್ಮ ವಿರೋಧಿ ಪಕ್ಷಗಳ ನಾಯಕರ ಮನೆಯ ಮೇಲೆ ದಾಳಿ ನಡೆಸಿತ್ತು. ನಿಜಕ್ಕೂ ಆಗ ಸಿಬಿಐಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಿತ್ತು. ಇದೀಗ ಸಿಬಿಐ ಸ್ವತಂತ್ರವಾಗಿ ದಾಳಿ ನಡೆಸಿದಾಗ ಅದು ‘ತೀವ್ರೋನ್ಮಾದ’ ‘ಸಾಹಸಪ್ರವೃತ್ತಿ’ ಎಂದು ಜೇಟ್ಲಿಗೆ ಅನ್ನಿಸಿರುವುದೇ ತಮಾಷೆಯ ವಿಷಯ. ಒಬ್ಬ ವಿತ್ತ ಸಚಿವನಾಗಿ ಮಾಧ್ಯಮಗಳ ಮುಂದೆಯೇ ಸಿಬಿಐಯನ್ನು ಟೀಕಿಸುವ ಮೂಲಕ, ವಂಚಕರ ಜೊತೆಗೆ ತನಗಿರುವ ಸಂಬಂಧವನ್ನು ಅವರು ಬಹಿರಂಗ ಪಡಿಸಿದ್ದಾರೆ. ಸಿಬಿಐಯ ಈ ದಾಳಿಯಿಂದ ಸ್ವತಃ ವಿತ್ತ ಸಚಿವರೇ ‘ತೀವ್ರೋನ್ಮಾದ’ಕ್ಕೆ ಸಿಲುಕಿದ್ದಾರೆ. ಸಿಬಿಐ ಯಾವುದೇ ದಾಳಿಯನ್ನು ನಡೆಸುವಾಗ, ಎಫ್‌ಐಆರ್ ದಾಖಲಿಸುವಾಗ ಕೇಂದ್ರ ಸರಕಾರದ ಅನುಮತಿಯನ್ನು ಪಡೆಯಬೇಕು ಎಂದಾದರೆ, ಆ ಸಂಸ್ಥೆಯ ಅಗತ್ಯವಾದರೂ ಏನು? ಈಗಾಗಲೇ ಸಿಬಿಐಯ ಪ್ರಮುಖ ನರವನ್ನು ಕತ್ತರಿಸಿಯಾಗಿದೆ. ಇದೀಗ ಉಳಿದ ಅವಯವಗಳಿಗೂ ಒಂದೊಂದಾಗಿ ಕತ್ತರಿ ಬೀಳುತ್ತಿದೆ. ಸ್ವತಂತ್ರವಾಗಿ ಧೈರ್ಯದಿಂದ ಯಾವುದೇ ದಾಳಿಗಳನ್ನು ನಡೆಸುವುದಾಗಲಿ, ಎಫ್‌ಐಆರ್ ದಾಖಲಿಸುವುದಾಗಲಿ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರೇ ಇತರ ವಿರೋಧ ಪಕ್ಷಗಳನ್ನು ‘ಬ್ಲಾಕ್‌ಮೇಲ್’ ಮಾಡುವುದಕ್ಕಾಗಿಯಷ್ಟೇ ಸಿಬಿಐ ಉಳಿದಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಹೀಗಿದ್ದ ಮೇಲೆ, ಸಿಬಿಐ ಸಂಸ್ಥೆಯ ಸಿಬ್ಬಂದಿಗಾಗಿ, ಕಚೇರಿಗಳಿಗಾಗಿ ಕೋಟ್ಯಂತರ ಹಣ ವೆಚ್ಚ ಮಾಡುವುದಕ್ಕೆ ಬದಲಾಗಿ ಆ ಸಂಸ್ಥೆಯನ್ನು ಮುಚ್ಚುವುದೇ ಒಳಿತು ಅಥವಾ ಆ ಸಂಸ್ಥೆಯ ನಾಮ ಫಲಕವನ್ನು ಬದಲಿಸಿ, ಪಕ್ಷದ ಕಚೇರಿಯಾಗಿ ಬದಲಿಸುವುದೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News