ಹೋರಾಡಿ ತಣ್ಣಗಾದ ಜಾರ್ಜ್ ಎಂಬ ಜ್ವಾಲೆ

Update: 2019-01-30 06:41 GMT

ಅದೊಂದು ಕಾಲವಿತ್ತು. ಜನ ಹೋರಾಟದ ಸಮರಾಂಗಣದಲ್ಲಿ ಕಾದಾಡಿ ಗೆದ್ದವರು ಸಂಸತ್ತಿಗೆ, ಶಾಸನ ಸಭೆಗಳಿಗೆ ಬರುತ್ತಿದ್ದರು. ಎಂಬತ್ತರ ದಶಕದ ಮುಂಚೆ ಸಂಸತ್ತಿನ ಉಭಯ ಸದನಗಳಲ್ಲಿ ರಾಮಮನೋಹರ ಲೋಹಿಯಾ, ಎಸ್. ಎ. ಡಾಂಗೆ, ಎ. ಕೆ. ಗೋಪಾಲನ್, ಭೂಪೇಶ ಗುಪ್ತ, ಪ್ರೊ. ಹಿರೇನ್ ಮುಖರ್ಜಿ, ಮಧುಲಿಮಯೆ ಅವರಂತಹ ಹೋರಾಟದ ಕೆಚ್ಚಿನ ಕಲಿಗಳು ಸಂಸತ್ತಿನಲ್ಲಿ ಕಾಣುತ್ತಿದ್ದರು. ಮಂಗಳವಾರ ನಿಧನರಾದ ಜಾರ್ಜ್ ಫೆರ್ನಾಂಡಿಸ್ ಕೂಡ ಇಂತಹ ಹೋರಾಟದ ಕಲಿ. ಜನ ಹೋರಾಟದ ಅಗ್ನಿಕುಂಡದಿಂದ ಮೇಲೆದ್ದು ಬಂದು ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದು ನಿಂತ ಜಾರ್ಜ್ ಫೆರ್ನಾಂಡಿಸ್ ಈಗ ನೆನಪು ಮಾತ್ರ. ಅವರ ಅಗಲಿಕೆ ತುಂಬ ನೋವಿನ ಸಂಗತಿ.

1930ರಲ್ಲಿ ಮಂಗಳೂರಿನ ಬಿಜೈಯಲ್ಲಿ ಜನಿಸಿದ ಜಾರ್ಜ್ ಅವರು ಪಾಲಕರ ಬಯಕೆಯಂತೆ ಪಾದ್ರಿಯಾಗಬೇಕಾಗಿತ್ತು. ಆದರೆ, ಆ ದಾರಿಯನ್ನು ಬಿಟ್ಟು ಸಮಾಜವಾದಿ ಚಳವಳಿಗಾರನಾಗಿ, ಮುಂದೆ ಕೇಂದ್ರ ಮಂತ್ರಿಯಾಗಿ ಜಾರ್ಜ್ ಹೆಸರು ಮಾಡಿದರು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಸಮಾಜವಾದಿ ನಾಯಕ ಅಮ್ಮೆಂಬಳ ಬಾಳಪ್ಪಅವರ ಸಂಪರ್ಕ ಹೊಂದಿದ್ದ ಜಾರ್ಜ್, ಕನ್ನಡ, ಇಂಗ್ಲಿಷ್, ಕೊಂಕಣಿ, ಹಿಂದಿ, ಮರಾಠಿ, ತಮಿಳು, ಮಲಯಾಳಂ, ಉರ್ದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಆ ಕಾಲದ ಬಹುತೇಕ ಕರಾವಳಿಗರಂತೆ ಮುಂಬೈಗೆ ದುಡಿಯಲು ಹೋದ ಜಾರ್ಜ್ ಫೆರ್ನಾಂಡಿಸ್ ಅಲ್ಲಿ ಬಂದರು ಕಾರ್ಮಿಕರ ನಾಯಕರಾಗಿದ್ದ ಡಿಮೆಲ್ಲೊ ಅವರ ಸಂಪರ್ಕಕ್ಕೆ ಬಂದರು. ಅವರಿಂದ ಕಾರ್ಮಿಕ ಚಳವಳಿಯ ದೀಕ್ಷೆ ಪಡೆದ ಜಾರ್ಜ್ ಮತ್ತೆ ಹಿಂದೆ ನೋಡಲಿಲ್ಲ.

ಡಾ. ರಾಮಮನೋಹರ ಲೋಹಿಯಾ ಅವರಿಂದ ಸಮಾಜವಾದದ ದೀಕ್ಷೆ ಪಡೆದ ಜಾರ್ಜ್ 1967ರಲ್ಲಿ ಮುಂಬೈಯಲ್ಲಿ ಲೋಕಸಭೆಗೆ ಸ್ಪರ್ಧಿಸಿ ಆ ಕಾಲದ ಸೋಲಿಲ್ಲದ ಸರದಾರ ಎನಿಸಿದ್ದ ಎಸ್. ಕೆ. ಪಾಟೀಲರನ್ನು ಸೋಲಿಸಿ ಲೋಕಸಭೆಗೆ ಚುನಾಯಿತರಾದರು. ಮುಂದೆ ರಾಷ್ಟ್ರಮಟ್ಟದಲ್ಲಿ ರೈಲ್ವೆ ಕಾರ್ಮಿಕರನ್ನು ಸಂಘಟಿಸಿದ ಜಾರ್ಜ್ ಫೆರ್ನಾಂಡಿಸ್ 1974ರಲ್ಲಿ ನಡೆಸಿದ ರೈಲು ಕಾರ್ಮಿಕರ ಮುಷ್ಕರದಿಂದ ಅಂದಿನ ಇಂದಿರಾ ಗಾಂಧಿ ಸರಕಾರ ತತ್ತರಿಸಿ ಹೋಯಿತು. 1975ರಲ್ಲಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಆಗ ಭೂಗತರಾದ ಜಾರ್ಜ್ ಫೆರ್ನಾಂಡಿಸ್ ನಂತರ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದೇ ಲೋಕಸಭೆಗೆ ಆರಿಸಿಬಂದರು. ತುರ್ತು ಪರಿಸ್ಥಿತಿಯ ನಂತರ 1977ರಲ್ಲಿ ಮೊದಲ ಬಾರಿ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಮೊರಾರ್ಜಿ ದೇಸಾಯಿ ನಾಯಕತ್ವದ ಪ್ರಥಮ ಕಾಂಗ್ರೆಸ್ಸೇತರ ಸರಕಾರದಲ್ಲಿ ಕೈಗಾರಿಕೆ ಮಂತ್ರಿಯಾದ ಜಾರ್ಜ್ ಫೆರ್ನಾಂಡಿಸ್ ಕೋಕಕೋಲಾ ಮುಂತಾದ ವಿದೇಶೀ ಕಂಪೆನಿಗಳ ವಿರುದ್ಧ ಯುದ್ಧವನ್ನೇ ಸಾರಿದರು,

ಜಾರ್ಜ್ ಫೆರ್ನಾಂಡಿಸ್‌ರನ್ನು ಕರ್ನಾಟಕದ, ಅದರಲ್ಲೂ ಕರಾವಳಿಯ ಜನ ಎಂದೂ ಮರೆಯಲು ಸಾಧ್ಯವಿಲ್ಲ. ಅವರು ರೈಲ್ವೆ ಸಚಿವರಾಗಿದ್ದಾಗ ಕೊಂಕಣ ರೈಲು ಮಾರ್ಗವನ್ನು ನಿರ್ಮಿಸಿ ಕರ್ನಾಟಕದ ಕರಾವಳಿ ಜನರ ಬಹುದಿನದ ಬೇಡಿಕೆ ಈಡೇರಿಸಿದರು. ಈ ರೈಲು ಮಾರ್ಗ ನಿರ್ಮಾಣಕ್ಕೆ ಮುಂಚೆ ದಕ್ಷಿಣ ಕನ್ನಡದ ಜನರು ಮುಂಬೈಗೆ ಹೋಗಬೇಕಾದರೆ ಬಸ್‌ನಲ್ಲಿ ಕುಳಿತು 48 ಗಂಟೆಗಳ ಪ್ರಯಾಸದ ಪ್ರಯಾಣ ಮಾಡಬೇಕಾಗುತ್ತಿತ್ತು. ಆದರೆ ಕೊಂಕಣ ರೈಲು ಮಾರ್ಗ ನಿರ್ಮಾಣವಾದ ನಂತರ ಮಂಗಳೂರಿಗೆ ಮುಂಬೈ ಹತ್ತಿರವಾಯಿತು. ಹೀಗೆ ಹಲವಾರು ಜನಪರ ಯೋಜನೆಗಳಿಗೆ ಚಾಲನೆ ನೀಡಿದ ಅವರ ಕೊನೆಯ ದಿನಗಳು ಮಾತ್ರ ಯಾತನಾಮಯವಾಗಿದ್ದವು.

ರಾಮಮನೋಹರ ಲೋಹಿಯಾರ ಕಾಂಗ್ರೆಸ್ ವಿರೋಧಿ ರಾಜಕಾರಣ ಜಾರ್ಜ್ ಫೆರ್ನಾಂಡಿಸ್‌ರನ್ನು ಬಿಜೆಪಿ ಬಾಗಿಲಿಗೆ ತಂದು ನಿಲ್ಲಿಸಿತು. ತುರ್ತು ಪರಿಸ್ಥಿತಿಯ ನಂತರ ಜಾರ್ಜ್ ಫೆರ್ನಾಂಡಿಸ್‌ರ ಸೋಷಲಿಸ್ಟ್ ಪಾರ್ಟಿ ಅಸ್ತಿತ್ವವನ್ನು ಕಳೆದುಕೊಂಡು ಜನತಾಪಕ್ಷದಲ್ಲಿ ವಿಲೀನಗೊಂಡಿತು. ಸಮಾಜವಾದಿಗಳು ತಮ್ಮ ಸ್ವಂತ ನೆಲೆ ಕಳೆದುಕೊಂಡರು. ಆದರೆ ಆರೆಸ್ಸೆಸ್ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡು ಭಾರತೀಯ ಜನತಾ ಪಕ್ಷವನ್ನು ಹುಟ್ಟು ಹಾಕಿತು. ಜಾರ್ಜ್‌ರಂತಹ ಹಳೆಯ ಜನತಾ ಪಕ್ಷದಲ್ಲೇ ಉಳಿದುಕೊಂಡರು. ಅಲ್ಲೂ ಭಿನ್ನಾಭಿಪ್ರಾಯ ಬಂದು ತಮ್ಮದೇ ಸಮತಾ ಪಕ್ಷ ಕಟ್ಟಿದರು. ಆದರೆ ಅದಕ್ಕೆ ಭದ್ರ ನೆಲೆಯಿರಲಿಲ್ಲ. ಕೊನೆಗೆ ತಮ್ಮ ರಾಜಕೀಯ ಜೀವನದ ಕೊನೆಯಲ್ಲಿ ಸಮಾಜವಾದಿ ಆಶಯಗಳಿಗೆ ವಿರುದ್ಧವಾದ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜಾರ್ಜ್ ಗುಜರಾತ್ ಹತ್ಯಾಕಾಂಡ ನಡೆದಾಗ ನರೇಂದ್ರ ಮೋದಿಯವರನ್ನು ಸಂಸತ್ತಿನಲ್ಲಿ ಸಮರ್ಥಿಸಿಕೊಳ್ಳುವ ದುರಂತ ಸ್ಥಿತಿಗೆ ತಲುಪಿದರು. ಎಲ್ಲ ರಾಜಕಾರಣಿಗಳಂತೆ ಜಾರ್ಜ್ ರಕ್ಷಣಾ ಸಚಿವರಾಗಿದ್ದಾಗ ಶವ ಪೆಟ್ಟಿಗೆ ಖರೀದಿ ಹಗರಣದಲ್ಲಿ ಕಪ್ಪುಕಲೆ ಅಂಟಿಸಿಕೊಂಡರು.

ಕರಾವಳಿ ಕರ್ನಾಟಕದಿಂದ ಮುಂಬೈಗೆ ಹೋಗಿ ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಮುಂದೆ ಅದೇ ಮಹಾನಗರದಿಂದ ಲೋಕಸಭೆಗೆ ಚುನಾಯಿತನಾಗಿ ಬರುವುದು ಸಾಮಾನ್ಯ ಸಂಗತಿಯಲ್ಲ, ಆದರೆ ಅವರ ರಾಜಕಾರಣ ಮುಂದೆ ಹಳಿ ತಪ್ಪಿತು. ಮಂಡಲ್ ಆಯೋಗದ ವರದಿ ಜಾರಿ ನಂತರ ಲಾಲು, ಮುಲಾಯಂ, ನಿತೀಶ್ ಕುಮಾರ್ ಎಂಬ ಹೊಸ ನಾಯಕರು ಜನತಾ ಪಕ್ಷದಲ್ಲಿ ಬಂದರು. ಅವರಿಗೆ ಜಾರ್ಜ್ ಅಗತ್ಯವಿರಲಿಲ್ಲ. ಅಲ್ಪಸಂಖ್ಯಾತ ಸಮುದಾಯದ ಜಾರ್ಜ್‌ಗೂ ತನ್ನದೇ ವೋಟ್ ಬ್ಯಾಂಕ್ ಇರಲಿಲ್ಲ. ಆಗ ಬಿಜೆಪಿ ಅವಲಂಬನೆ ಅನಿವಾರ್ಯವಾಯಿತು. ಈ ಅನಿವಾರ್ಯತೆ ಅಪಾರ ಪರಿಶ್ರಮದಿಂದ ಕಷ್ಟಪಟ್ಟು ಸಂಪಾದಿಸಿದ್ದ ಅವರ ಜನಪ್ರಿಯತೆಯನ್ನು, ರಾಜಕೀಯ ವ್ಯಕ್ತಿತ್ವವನ್ನು ಮಸುಕುಗೊಳಿಸಿತು. ಜಾರ್ಜ್ ಫೆರ್ನಾಂಡಿಸ್ ಭಾರತದ ರಾಜಕಾರಣದ ದುರಂತ ನಾಯಕ ಎಂದು ಕರೆದರೆ ತಪ್ಪಿಲ್ಲ. ಸಮಾಜವಾದದ ಕನಸು ಕಂಡು ಸನಾತನವಾದದಲ್ಲಿ ರಾಜಕೀಯ ಆಶ್ರಯ ಪಡೆದು ಕೊನೆಯ ದಿನಗಳಲ್ಲಿ ಅಲ್‌ಝೈಮರ್ಸ್ ಮರೆವಿನ ಕಾಯಿಲೆಗೆ ಒಳಗಾಗಿದ್ದ ಜಾರ್ಜ್ ಫೆರ್ನಾಂಡಿಸ್ ಬಹು ಎತ್ತರಕ್ಕೆ ಏರಿ ಇದ್ದೂ ಇಲ್ಲದಂತೆ ಕೊನೆಯ ದಿನಗಳನ್ನು ಕಳೆದರು. ವಾಜಪೇಯಿ ಅವರಂತೆ ಜಾರ್ಜ್ ಫೆರ್ನಾಂಡಿಸ್‌ರೂ ಕೊನೆಯ ದಿನಗಳಲ್ಲಿ ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ. ಒಬ್ಬ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆಯಲಿ ಅವರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳೆರಡೂ ಇರುತ್ತವೆ. ಜಾರ್ಜ್ ಫೆರ್ನಾಂಡಿಸ್ ಅವರಲ್ಲಿ ಸಕಾರಾತ್ಮಕ ಅಂಶಗಳೇ ಹೆಚ್ಚಿದ್ದವು. ಅದೇನೇ ಇರಲಿ, ಸಾಮಾನ್ಯ ಹಿನ್ನೆಲೆಯಿಂದ ಬಂದು ಈ ಎತ್ತರಕ್ಕೆೆಬೆಳೆದು ನಿಂತ ಜಾರ್ಜ್ ಫೆರ್ನಾಂಡಿಸ್‌ರನ್ನು ಮರೆಯಲು ಹೇಗೆ ಸಾಧ್ಯ? ಜಾರ್ಜ್ ನಿರ್ಗಮನ ನಿಜಕ್ಕೂ ಕನ್ನಡಿರ ಪಾಲಿಗೆ, ಕಾರ್ಮಿಕ ವರ್ಗದ ಪಾಲಿಗೆ ನೋವಿನ ಸಂಗತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News