ಪ್ರತಿಭಟನೆಯ ವಿಡಿಯೋ ಪೋಸ್ಟ್ ಮಾಡಿ 'ಪ್ರಿಯಾಂಕಾ ಮದ್ಯದ ಅಮಲಿನಲ್ಲಿ' ಎಂದ ಟ್ರೋಲ್ ಗಳು

Update: 2019-01-30 11:22 GMT

ಹೊಸದಿಲ್ಲಿ, ಜ.30: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಗಾಂಧಿ ಮಾತನಾಡುತ್ತಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಲ್ಲದೆ, ಆಕೆ ಅಗ ಮದ್ಯದ ನಶೆಯಲ್ಲಿದ್ದರೆಂಬ ಸುಳ್ಳು ಸುದ್ದಿಯನ್ನೂ ಹರಡಲಾಗಿದೆ.

``ಪ್ರತಿ ಸಂಜೆ ಮದ್ಯ ಸೇವಿಸುವವರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಭರವಸೆಯಿರಬಹುದು ಆದರೆ ದೇಶಕ್ಕಿಲ್ಲ'' ಎಂಬ ವಿವರಣೆಯನ್ನೂ ಈ ವಿಡಿಯೋಗೆ ನೀಡಲಾಗಿದೆ. ಹಮ್ ಲೋಗ್ ಎಂಬ ಫೇಸ್ಬುಕ್ ಪುಟ ಈ ವೀಡಿಯೋವನ್ನು ಇದೇ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದು ಇಲ್ಲಿಯ ತನಕ 98,000ಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದು ಮಾತ್ರವಲ್ಲ ಸಾವಿರಾರು ಮಂದಿ ಶೇರ್ ಕೂಡ ಮಾಡಿದ್ದಾರೆ.

‘ಆಲ್ಟ್ ನ್ಯೂಸ್’ ಈ ವೀಡಿಯೋವನ್ನು ಪರಿಶೀಲಿಸಿದಾಗ ಇದೇ ವೀಡಿಯೋವನ್ನು ಎಎನ್‍ಐ ಎಪ್ರಿಲ್ 12, 2018ರಂದು  ಟ್ವೀಟ್ ಮಾಡಿತ್ತು ಎಂದು ಕಂಡುಕೊಂಡಿದೆ. “ಮೋಂಬತ್ತಿ ಮೆರವಣಿಗೆಯಲ್ಲಿ ಪ್ರಿಯಾಂಕ ಗಾಂಧಿ ಸಿಟ್ಟಾಗಿ ‘ಯಾರು ಕೂಡ ಒಬ್ಬರನ್ನೊಬ್ಬರು ದೂಡಬಾರದು. ಇಲ್ಲಿ ಸೇರಿರುವ ಕಾರಣವನ್ನು ನೀವು ಅರಿಯಬೇಕು. ನಿಮಗೆ ಸರಿಯಾಗಿ ವರ್ತಿಸಲು ಸಾಧ್ಯವಿಲ್ಲವೆಂದಾದರೆ ಮನೆಗೆ ಹೋಗಿ ಬಿಡಿ. ನೀವೆಲ್ಲರೂ ಅಲ್ಲಿಯ ತನಕ ಮೌನವಾಗಿ ನಡೆಯಬೇಕು’ ಎಂದು ಹೇಳಿದ್ದರು'' ಎಂದು ಎಎನ್‍ಐ ವರದಿ ತಿಳಿಸಿತ್ತು.

ಈ ಘಟನೆಯನ್ನು ಹಲವಾರು ಇತರ ಮಾಧ್ಯಮಗಳೂ ವರದಿ ಮಾಡಿದ್ದವು. ಕಥುವಾ ಮತ್ತು ಉನ್ನಾವೋ ಅತ್ಯಾಚಾರ ಪ್ರಕರಣಗಳನ್ನು ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಯೋಜಿಸಿದ್ದ ಮಧ್ಯರಾತ್ರಿ ಮೊಂಬತ್ತಿ ಮೆರವಣಿಗೆಯಲ್ಲಿ ಪ್ರಿಯಾಂಕ ಗಾಂಧಿ ಹಾಜರಿದ್ದರು. ವರದಿಗಳ ಪ್ರಕಾರ ಅಲ್ಲಿ ಸೇರಿದ್ದ ಜನರು ಆಕೆಯನ್ನು ಮುಂದಕ್ಕೆ ಹೋಗಲು ಬಿಡದೆ ಆಕೆಯ ಮಕ್ಕಳನ್ನೂ ದೂಡಿದ್ದರು.

“ಜನರ ಗುಂಪನ್ನು ನಿಭಾಯಿಸಲು ಪೊಲೀಸರು ಕಷ್ಟ ಪಟ್ಟಿದ್ದರು. ಹಲವಾರು ಮಂದಿ ಬ್ಯಾರಿಕೇಟುಗಳನ್ನು ದಾಟಿ ಬಂದಿದ್ದರೆ ಕೆಲವರು ಅವುಗಳನ್ನು ಮುರಿದಿದ್ದರು,'' ಎಂದು ವರದಿಗಳು ತಿಳಿಸಿದ್ದವು.

ಕಾಂಗ್ರೆಸ್ ಆಯೋಜಿಸಿದ್ದ ಈ ಮೊಂಬತ್ತಿ ಮೆರವಣಿಗೆಯಲ್ಲಿ  ಭಾಗವಹಿಸಿದವರು ತಳ್ಳಾಟದಲ್ಲಿ ತೊಡಗಿರುವುದನ್ನು ವಿರೋಧಿಸಿ ಪ್ರಿಯಾಂಕ ಅವರನ್ನು ಗದರಿದ್ದನ್ನೇ ಆಕೆ ಮದ್ಯದ ನಶೆಯಲ್ಲಿ ಮಾತನಾಡಿದ್ದರೆಂಬ ಅರ್ಥದಲ್ಲಿ ವಿವರಿಸಲಾಗಿದೆ. ಪ್ರಿಯಾಂಕಾ ಅವರನ್ನು ಪೂರ್ವ ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ ನಂತರ ಈ ಸುಳ್ಳು ಸುದ್ದಿ ಹರಿದಾಡುತ್ತಿದೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News