ಭರ್ಜರಿ ಸರಣಿ ಜಯದತ್ತ ಭಾರತದ ಚಿತ್ತ

Update: 2019-01-30 19:05 GMT

ಹ್ಯಾಮಿಲ್ಟನ್, ಜ.30: ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಗುರುವಾರ ನ್ಯೂಝಿಲೆಂಡ್ ಎದುರು ನಾಲ್ಕನೇ ಏಕದಿನ ಪಂದ್ಯವನ್ನಾಡಲಿದೆ. ಹಂಗಾಮಿ ನಾಯಕ ರೋಹಿತ್ ಶರ್ಮಾ ಭಾರತದ ಪರ 200ನೇ ಪಂದ್ಯವನ್ನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಶರ್ಮಾಗೆ ಇದು ಸ್ಮರಣೀಯ ಪಂದ್ಯವಾಗಿದೆ.

ಖಾಯಂ ನಾಯಕ ವಿರಾಟ್ ಕೊಹ್ಲಿಗೆ ಬಿಸಿಸಿಐ ನ್ಯೂಝಿಲೆಂಡ್ ಪ್ರವಾಸ ಸರಣಿಯ ಇನ್ನುಳಿದ ಪಂದ್ಯಗಳಿಗೆ(2 ಏಕದಿನ,3 ಟಿ-20)ವಿಶ್ರಾಂತಿ ನೀಡಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲಿರುವ ರೋಹಿತ್ ಹಂಗಾಮಿ ನಾಯಕನಾಗಿ ಉತ್ತಮ ದಾಖಲೆ ಕಾಯ್ದುಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ ಹಿರಿಮೆ ಅವರದ್ದಾಗಿದೆ. ಬ್ಯಾಟಿಂಗ್ ಸ್ನೇಹಿ ಸೆಡ್ಡ್ಡಾನ್ ಪಾರ್ಕ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಮತ್ತೊಮ್ಮೆ ಸವಾರಿ ಮಾಡಲು ರೋಹಿತ್ ಪಡೆ ಸಜ್ಜಾಗಿದೆ.

ಒಂದು ವೇಳೆ ಭಾರತ ನಾಲ್ಕನೇ ಪಂದ್ಯವನ್ನೂ ಜಯಿಸಿದರೆ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಲಿದೆ. 52 ವರ್ಷಗಳ ಬಳಿಕ ನ್ಯೂಝಿಲೆಂಡ್ ನೆಲದಲ್ಲಿ ಭಾರೀ ಅಂತರದ ಗೆಲುವು ದಾಖಲಿಸಿ ದಾಖಲೆ ನಿರ್ಮಿಸಲಿದೆ. ಭಾರತ ಕ್ರಿಕೆಟ್ ತಂಡ 1967ರಲ್ಲಿ ಮೊದಲ ಬಾರಿ ನ್ಯೂಝಿಲೆಂಡ್‌ಗೆ ಪ್ರವಾಸ ಕೈಗೊಂಡಿತ್ತು.

ಸರಣಿಯಲ್ಲಿ ಬಾಕಿ ಇರುವ ಎರಡು ಪಂದ್ಯಗಳು ಭಾರತಕ್ಕೆ ತನ್ನ ಶಕ್ತಿಯನ್ನು ಅನಾವರಣಗೊಳಿಸಲು ಇರುವ ಅವಕಾಶವಾಗಿದೆ. ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಇದೊಂದು ಉತ್ತಮ ವೇದಿಕೆಯಾಗಿದೆ.

ಎಂ.ಎಸ್. ಧೋನಿಗೆ ಮೂರನೇ ಪಂದ್ಯದ ವೇಳೆ ಕಾಣಿಸಿಕೊಂಡಿರುವ ಸ್ನಾಯುಸೆಳೆತ ಈಗ ಹೇಗಿದೆ ಎಂದು ಗೊತ್ತಾಗಿಲ್ಲ. ಆದರೆ, ಮೂಲಗಳ ಪ್ರಕಾರ ಅವರ ಗಾಯ ಗಂಭೀರವಾಗಿಲ್ಲ. ಗುರುವಾರ ಟಾಸ್ ಚಿಮ್ಮುವ ಮೊದಲು ಧೋನಿಯ ಲಭ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಒಂದು ವೇಳೆ, ಧೋನಿ ಲಭ್ಯರಾದರೆ, ಟೀಮ್ ಮ್ಯಾನೇಜ್‌ಮೆಂಟ್ ತಂಡದ ಸಂಯೋಜನೆ ಬಗ್ಗೆ ಚಿಂತಿಸದೇ, ವಿರಾಟ್ ಕೊಹ್ಲಿ ಬದಲಿ ಆಟಗಾರನನ್ನು ಮಾತ್ರ ಕಣಕ್ಕಿಳಿಸಲಿದೆ. ಪ್ರವಾಸಿ ತಂಡ ಇನ್ನು ಹೆಚ್ಚಿ ನ ಬದಲಾವಣೆಗೆ ಮುಂದಾದರೆ, ಪ್ರತಿಭಾವಂತ ಆಟಗಾರ ಶುಭ್‌ಮನ್ ಗಿಲ್ ಏಕದಿನ ಕ್ರಿಕೆಟ್‌ಗೆ ಕಾಲಿಡಲಿದ್ದಾರೆ. 19ರ ಹರೆಯದ ಗಿಲ್ ಆಟದ ಶೈಲಿಯು ಕೊಹ್ಲಿಯಂತೆಯೇ ಇದೆ ಎಂದು ಹಲವು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಕೂಡ ಗಿಲ್ ಕುರಿತು ಪ್ರಶಂಸೆಯ ಮಾತನಾಡಿದ್ದಾರೆ. ಹೀಗಾಗಿ ಶಾಸ್ತ್ರಿ ಹಾಗೂ ರೋಹಿತ್ ನಾಲ್ಕನೇ ಏಕದಿನದಲ್ಲಿ ಗಿಲ್‌ಗೆ ಅವಕಾಶ ನೀಡಬಹುದು. ಅಂಬಟಿ ರಾಯುಡು, ಕೊಹ್ಲಿಯಿಂದ ತೆರವಾದ 3ನೇ ಕ್ರಮಾಂಕದಲ್ಲಿ ಆಡಿದರೆ, ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡಬಹುದು. ಒಂದು ವೇಳೆ, ಗಿಲ್ ಹಾಗೂ ಧೋನಿ ಆಡುವ ಬಳಗವನ್ನು ಸೇರಿಕೊಂಡರೆ, ದಿನೇಶ್ ಕಾರ್ತಿಕ್ ಬೆಂಚ್ ಬಿಸಿ ಮಾಡಬೇಕಾಗುತ್ತದೆ.

ಭಾರತದ ಬೌಲಿಂಗ್ ಬಲಿಷ್ಠ: ಭಾರತದ ಬೌಲಿಂಗ್ ವಿಭಾಗ ಕಿವೀಸ್ ವಿರುದ್ಧ ಮೊದಲ 3 ಪಂದ್ಯಗಳಲ್ಲಿ ಬಲಿಷ್ಠವಾಗಿ ಹೊರಹೊಮ್ಮಿದೆ. ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್(3 ಪಂದ್ಯಗಳು, 8 ವಿಕೆಟ್) ಹಾಗೂ ಯಜುವೇಂದ್ರ ಚಹಾಲ್(3 ಪಂದ್ಯಗಳು, 6 ವಿಕೆಟ್)ಸರಣಿಯಲ್ಲಿ ಈ ತನಕ ಒಟ್ಟು 14 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾದ ಮುಹಮ್ಮದ್ ಶಮಿ ಆಸ್ಟ್ರೇಲಿಯ ಟೆಸ್ಟ್ ಸರಣಿಯ ಆರಂಭದಿಂದ ಸತತವಾಗಿ ಬಿಡುವಿಲ್ಲದೆ ಕ್ರಿಕೆಟ್ ಆಡುತ್ತಿದ್ದು ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಶಮಿ ವಿಶ್ರಾಂತಿ ಪಡೆದರೆ, ಖಲೀಲ್ ಅಹ್ಮದ್ ಅಥವಾ ಮುಹಮ್ಮದ್ ಸಿರಾಜ್ ಅವಕಾಶ ಪಡೆಯಬಹುದು. ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ಇದು ಇಬ್ಬರಿಗೆ ಮತ್ತೊಂದು ಅವಕಾಶವಾಗಿದೆ.

ಭಾರತದ ಸ್ಪಿನ್ನರ್‌ಗಳಿಗೆ ಉತ್ತರಿಸಲು ಕಿವೀಸ್ ಪರದಾಟ:

ಏಕದಿನ ಸರಣಿ ಆರಂಭವಾದ ಬಳಿಕ ನ್ಯೂಝಿಲೆಂಡ್‌ಗೆ ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ. ಭಾರತ ನಮ್ಮನ್ನು ಸಂಪೂರ್ಣವಾಗಿ ಸೋಲಿಸಿದೆ ಎಂದು ನಾಯಕ ವಿಲಿಯಮ್ಸನ್ ಒಪ್ಪಿಕೊಂಡಿದ್ದಾರೆ. ಕುಲದೀಪ್ ಹಾಗೂ ಚಹಾಲ್ ಬೌಲಿಂಗ್‌ನ್ನು ಎದುರಿಸಲು ಸಾಧ್ಯವಾಗದೇ ಇರುವುದು ಪ್ರವಾಸಿಗರ ದೊಡ್ಡ ಸಮಸ್ಯೆಯಾಗಿದೆ. ಈ ಇಬ್ಬರು ಬೌಲರ್‌ಗಳು ಕಿವೀಸ್ ಆಟಗಾರರ ಕಿವಿ ಹಿಂಡುತ್ತಿದ್ದಾರೆ. ಶಮಿ ಮೊದಲ ಸ್ಪೆಲ್‌ನಲ್ಲಿ ಆತಿಥೇಯ ಆಟಗಾರರನ್ನು ಕಾಡಲು ಯಶಸ್ವಿಯಾಗಿದ್ದಾರೆ.

 ವಿಲಿಯಮ್ಸನ್ ಸರಣಿಯಲ್ಲಿ ಈತನಕ 64, 20 ಹಾಗೂ 28 ರನ್ ಗಳಿಸಿ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿಸಲು ವಿಫಲವಾಗಿದ್ದಾರೆ. ಮಾರ್ಟಿನ್ ಗಪ್ಟಿಲ್ ಹೊಸ ಚೆಂಡನ್ನು ಸಮರ್ಥವಾಗಿ ಎದುರಿಸಲು ವಿಫಲರಾಗುತ್ತಿದ್ದಾರೆ. ಟಾಮ್ ಲಥಮ್ ಹಾಗೂ ರಾಸ್ ಟೇಲರ್ ಸಮಯೋಚಿತವಾಗಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ, ಪಂದ್ಯ ಚಿತ್ರಣ ಬದಲಿಸುವಷ್ಟು ಸಮರ್ಥವಾಗಿ ಆಡುತ್ತಿಲ್ಲ. ಎರಡು ಬದಲಾವಣೆ: ಮೊದಲ 3 ಪಂದ್ಯಗಳಲ್ಲಿ ಸೋತಿದ್ದ ಕಿವೀಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಜೇಮ್ಸ್ ನೀಶಾಮ್ ಹಾಗೂ ಟಾಡ್ ಅಸ್ಟ್ಲೆ ಅವರು ವೇಗಿ ಡಗ್ ಬ್ರೆಸ್‌ವೆಲ್ ಹಾಗೂ ಲೆಗ್ ಸ್ಪಿನ್ನರ್ ಐಶ್ ಸೋಧಿ ಬದಲಿಗೆ ಆಡಲಿದ್ದಾರೆ. ಕಿವೀಸ್ ಬೌಲಿಂಗ್ ವಿಭಾಗದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಟಿಮ್ ಸೌಥಿ ಓರ್ವ ಸ್ಪಿನ್ನರ್‌ಗೆ ಸ್ಥಾನ ತೆರವುಗೊಳಿಸಬಹುದು.

ಪಿಚ್ ಹಾಗೂ ವಾತಾವರಣ

ಸೆಡ್ಡಾನ್ ಪಾರ್ಕ್‌ನಲ್ಲಿ ಕಳೆದ 3 ಏಕದಿನ ಪಂದ್ಯಗಳಲ್ಲಿ 260ಕ್ಕಿಂತ ಕಡಿಮೆ ಸ್ಕೋರ್ ದಾಖಲಾಗಿದೆ. ಇಲ್ಲಿ 290 ರನ್ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಲಾಗಿತ್ತು. ಕಳೆದ 3 ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ಮಹತ್ವದ ಪಾತ್ರವಹಿಸಿದ್ದರು. ಪ್ರತಿಕೂಲ ಹವಾಮಾನ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿಲ್ಲ.

ತಂಡಗಳು

►ಭಾರತ(ಸಂಭಾವ್ಯ):1. ರೋಹಿತ್ ಶರ್ಮಾ(ನಾಯಕ), 2. ಶಿಖರ್ ಧವನ್, 3. ಅಂಬಟಿ ರಾಯುಡು, 4. ದಿನೇಶ್ ಕಾರ್ತಿಕ್, 5. ಕೇದಾರ್ ಜಾಧವ್, 6. ಎಂಎಸ್ ಧೋನಿ(ವಿಕೆಟ್‌ಕೀಪರ್), 7. ಹಾರ್ದಿಕ್ ಪಾಂಡ್ಯ, 8.ಕುಲದೀಪ್ ಯಾದವ್, 9. ಭುವನೇಶ್ವರ ಕುಮಾರ್, 10. ಮುಹಮ್ಮದ್ ಶಮಿ, 11. ಯಜುವೇಂದ್ರ ಚಹಾಲ್

►6ನ್ಯೂಝಿಲೆಂಡ್(ಸಂಭಾವ್ಯ):1. ಮಾರ್ಟಿನ್ ಗಪ್ಟಿಲ್, 2. ಕಾಲಿನ್ ಮುನ್ರೊ, 3. ಕೇನ್ ವಿಲಿಯಮ್ಸನ್(ನಾಯಕ), 4. ರಾಸ್ ಟೇಲರ್, 5. ಟಾಮ್ ಲಥಾಮ್(ವಿಕೆಟ್‌ಕೀಪರ್),6. ಹೆನ್ರಿ ನಿಕೊಲ್ಸ್, 7. ಜೇಮ್ಸ್ ಆ್ಯಂಡರ್ಸನ್, 8. ಮಿಚೆಲ್ ಸ್ಯಾಂಟ್ನರ್, 8. ಟಾಡ್ ಅಸ್ಟ್ಲೆ, 10. ಲಾಕಿ ಫರ್ಗ್ಯುಸನ್, 11. ಟ್ರೆಂಟ್ ಬೌಲ್ಟ್.

►ಪಂದ್ಯದ ಸಮಯ: ಬೆಳಗ್ಗೆ 7:30.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News