ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಬಡತನಕ್ಕೆ ಕಾರಣವೇ?

Update: 2019-01-30 19:05 GMT

ಇತ್ತೀಚೆಗೆ ರಾಜಕಾರಣಿ, ಉದ್ಯಮಿ, ಸ್ವಯಂಘೋಷಿತ ಸನ್ಯಾಸಿ ಬಾಬಾ ರಾಮ್‌ದೇವ್ ‘‘ಈ ದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅವರಿಗೆ ಮತದಾನವನ್ನು ನಿರಾಕರಿಸಬೇಕು’’ ಎಂದು ಕರೆ ನೀಡಿದ್ದಾರೆ. ಈ ದೇಶದಲ್ಲಿ ಇತ್ತೀಚೆಗೆ ತಮಗೆ ಸಂಬಂಧ ಪಡದ ವಿಷಯಗಳ ಬಗ್ಗೆ ಚರ್ಚಿಸುವವರ ಸಂಖ್ಯೆ ಹೆಚ್ಚಾಗಿದೆ. ವಿಜ್ಞಾನದ ಬಗ್ಗೆ ರಾಜಕೀಯ ನಾಯಕರು ಹೇಳಿಕೆ ನೀಡುತ್ತಿದ್ದರೆ, ಸನ್ಯಾಸಿಗಳು ಅರ್ಥಶಾಸ್ತ್ರ ಪಾರಂಗತರಾಗುತ್ತಿದ್ದಾರೆ. ರಾಮ್‌ದೇವ್ ಹೇಳಿಕೆ ಅದರ ಮುಂದುವರಿದ ಭಾಗವಾಗಿದೆ. ಅವರ ಅರ್ಥದಲ್ಲಿ ಈ ದೇಶದ ಬಡತನಕ್ಕೆ ಮುಖ್ಯ ಕಾರಣವೇ ಜನಸಂಖ್ಯೆ ಹೆಚ್ಚಿರುವುದು. ಈ ಥಿಯರಿ ಇದೀಗ ಹಳೆಯದಾಗಿದೆ. ಚೀನಾದಂತಹ ದೇಶವೇ ಕುಟುಂಬ ಯೋಜನೆಯಿಂದಾಗಿ ವೃದ್ಧರು ಹೆಚ್ಚುತ್ತಿರುವ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಯೋಜನೆಯ ತನ್ನ ನೀತಿಯಿಂದ ಈಗಾಗಲೇ ಹಿಂದೆ ಸರಿದಿದೆ. ಭಾರತದಂತಹ ದೇಶದಲ್ಲಿ ಜನಸಂಖ್ಯೆ ಒಂದು ಸಂಪನ್ಮೂಲವಾಗಿದೆ. ಇಲ್ಲಿ ಸಂಪನ್ಮೂಲದ ಕೊರತೆಯಿಂದ ಜನರು ನರಳುತ್ತಿಲ್ಲ. ಬದಲಿಗೆ ಸಂಪನ್ಮೂಲಗಳು ಅಂಬಾನಿ, ಅದಾನಿ, ರಾಮ್‌ದೇವ್‌ರಂತಹ ಬೆರಳೆಣಿಕೆಯ ಶ್ರೀಮಂತರ ಕೈಯಲ್ಲಿ ಶೇಖರಣೆಯಾಗಿರುವುದೇ ದೇಶ ಹಿಂದುಳಿಯಲು ಕಾರಣ. ನಿಜಕ್ಕೂ ಈ ದೇಶದ ಬಗ್ಗೆ ಕಾಳಜಿಯಿದ್ದರೆ ಸಂಪನ್ಮೂಲದ ಹಂಚಿಕೆಯ ಕುರಿತಂತೆ ಬಾಬಾರಾಮ್‌ದೇವ್ ಹೇಳಿಕೆ ನೀಡಬೇಕು. ಒಬ್ಬ ಸನ್ಯಾಸಿಗೆ ತಕ್ಕುದಾದ ಹೇಳಿಕೆ ಅದಾಗಿದೆ. ಆದರೆ ರಾಮ್‌ದೇವ್ ಒಬ್ಬ ಅಪ್ಪಟ ಉದ್ಯಮಿ. ಬಡವರಿಗೆ ಸೇರಬೇಕಾದ ಸರಕಾರದ ಸಕಲ ಸವಲತ್ತುಗಳನ್ನು ತನ್ನದಾಗಿಸಿಕೊಳ್ಳುತ್ತಾ ಬಂದಿರುವ ಈ ಮನುಷ್ಯನಿಂದ ‘ಸಂಪನ್ಮೂಲ ಹಂಚಿಕೆ’ಯ ಮಾತುಗಳನ್ನು ನಿರೀಕ್ಷಿಸುವುದು ಮೂರ್ಖತನ.

  


 
  ಭಾರತ ನಿಜಕ್ಕೂ ಬಡ ರಾಷ್ಟ್ರವೇ? ಕಳೆದ ವರ್ಷ ಭಾರತೀಯ ಕೋಟ್ಯಧಿಪತಿಗಳ ಸಂಪತ್ತಿಗೆ 2,200 ಕೋಟ ರೂ. ಆಸ್ತಿ ಹೆಚ್ಚುವರಿಯಾಗಿ ಸೇರಿಕೊಂಡಿತು. ದೇಶದ ಶೇ. ಒಂದರಷ್ಟಿರುವ ಅತ್ಯಂತ ಶ್ರೀಮಂತ ವರ್ಗ ತನ್ನ ಶ್ರೀಮಂತಿಕೆಯನ್ನು ಶೇ.39ರಷ್ಟು ಹೆಚ್ಚಿಸಿಕೊಂಡರೆ ದೇಶದ ಅತ್ಯಂತ ಕೆಳದರ್ಜೆಯಲ್ಲಿರುವ ಜನಸಂಖ್ಯೆಯ ಸಂಪತ್ತು ಕಂಡ ಏರಿಕೆ ಶೇ.ಮೂರು ಮಾತ್ರ ಎಂದು ಆಕ್ಸ್‌ಫಾಮ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ದೇಶದ ಅತ್ಯಂತ ಕಡುಬಡ ವರ್ಗವಾದ ಶೇ.10 ಅಥವಾ 13.6 ಕೋಟಿ ಭಾರತೀಯರು 2004ರಿಂದಲೂ ಸಾಲದ ಸುಳಿಯಲ್ಲೇ ಸಿಲುಕಿಕೊಂಡಿದ್ದಾರೆ ಎಂದೂ ವರದಿ ತಿಳಿಸುತ್ತದೆ. ಬಡವರು ತಮ್ಮ ಮುಂದಿನ ಹೊತ್ತಿನ ಊಟ ಅಥವಾ ಮಕ್ಕಳ ಔಷಧಿಗಾಗಿ ಹಣ ಪಾವತಿ ಮಾಡಲು ಹೋರಾಟ ನಡೆಸುವಾಗ ಬೆರಳೆಣಿಕೆಯ ಶ್ರೀಮಂತರು ಭಾರತದ ಸಂಪತ್ತನ್ನು ಕಬಳಿಸುತ್ತಿರುವುದು ನೈತಿಕವಾಗಿ ಆಕ್ರೋಶಕ್ಕೆ ಕಾರಣವಾಗುತ್ತದೆ ಎಂದು ಆಕ್ಸ್‌ಫಾಮ್ ಅಂತರ್‌ರಾಷ್ಟ್ರೀಯದ ಕಾರ್ಯಕಾರಿ ನಿರ್ದೇಶಕ ವಿನ್ನಿ ಬ್ಯಾನಿಮ ತಿಳಿಸಿದ್ದಾರೆ. ಶೇ. ಒಂದು ಶ್ರೀಮಂತ ಮತ್ತು ಭಾರತದ ಉಳಿದ ಜನಸಂಖ್ಯೆಯ ಮಧ್ಯೆ ಈ ಅಸಹ್ಯ ಅಸಮಾನತೆ ಹೀಗೆಯೇ ಮುಂದುವರಿದರೆ ಇದು ದೇಶದ ಸಾಮಾಜಿಕ ಮತ್ತು ಪ್ರಜಾಸತಾತ್ಮಕ ರಚನೆಯ ಸಂಪೂರ್ಣ ನಾಶಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಆದರೆ ದುರದೃಷ್ಟಕ್ಕೆ ರಾಮ್‌ದೇವ್‌ರಂತಹ ಕುಳಗಳು ಹೆಚ್ಚಿದ ಜನಸಂಖ್ಯೆಯ ಕಡೆಗೆ ಕೈ ತೋರಿಸಿ ಕಾಗೆ ಹಾರಿಸುತ್ತಿದ್ದಾರೆ. ಭಾರತದ ಶೇ.10 ಜನಸಂಖ್ಯೆ ಒಟ್ಟಾರೆ ರಾಷ್ಟ್ರೀಯ ಸಂಪತ್ತಿನ ಶೇ.77.4ನ್ನು ಹೊಂದಿದೆ. ಅದರಲ್ಲೂ ಅಗ್ರ ಶೇ.ಒಂದು ಶ್ರೀಮಂತರ ವರ್ಗ ಒಟ್ಟಾರೆ ರಾಷ್ಟ್ರೀಯ ಸಂಪತ್ತಿನ ಶೇ.51.53 ಆಸ್ತಿಯನ್ನು ಹೊಂದಿದೆ. ಇನ್ನು ಅತ್ಯಂತ ಕೆಳಮಟ್ಟದಲ್ಲಿರುವ ಶೇ.60 ಜನಸಂಖ್ಯೆ ರಾಷ್ಟ್ರೀಯ ಸಂಪತ್ತಿನ ಕೇವಲ ಶೇ.4.8ನ್ನು ಹೊಂದಿದೆ. ಅಗ್ರ ಒಂಬತ್ತು ಮಂದಿ ಕೋಟ್ಯಧಿಪತಿಗಳ ಆಸ್ತಿ ದೇಶದಲ್ಲಿ ಅತ್ಯಂತ ಕೆಳಮಟ್ಟದಲ್ಲಿರುವ ಶೇ.50 ಜನಸಂಖ್ಯೆಯ ಆಸ್ತಿಗೆ ಸಮವಾಗಿದೆ ಎಂದು ವರದಿ ತಿಳಿಸುತ್ತದೆ. 2018-2022ರ ಮಧ್ಯೆ ಭಾರತ ಪ್ರತಿದಿನ 70 ಹೊಸ ಕೋಟ್ಯಧಿಪತಿಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆಯಂತೆ. ಹೊಸ ಕೋಟ್ಯಧಿಪತಿಗಳು ಸೃಷ್ಟಿಯಾಗುವುದೆಂದರೆ ಬಡವರು ಇನ್ನಷ್ಟು ಬಡವರಾಗುವುದು ಎಂದೇ ಅರ್ಥ. ಬಡವರಿಗೆ ಒದಗಿಸುವ ಆರೋಗ್ಯಸೇವೆ ಮತ್ತು ಶಿಕ್ಷಣಕ್ಕೆ ಕಡಿಮೆ ಅನುದಾನ ಬಿಡುಗಡೆ ಮಾಡುವ ಜೊತೆಗೆ ಕಾರ್ಪೊರೇಟ್ ಸಂಸ್ಥೆಗಳಿಗೆ, ಶ್ರೀಮಂತರಿಗೆ ಕಡಿಮೆ ತೆರಿಗೆ ವಿಧಿಸುವುದು ಮತ್ತು ತೆರಿಗೆ ವಂಚನೆಯನ್ನು ನಿಯಂತ್ರಿಸಲು ವಿಫಲವಾಗುವ ಮೂಲಕ ಸರಕಾರ ಶ್ರೀಮಂತ-ಬಡವರ ನಡುವಿನ ಅಸಮಾನತೆಯನ್ನು ಮತ್ತಷ್ಟು ಹೆಚ್ಚುಗೊಳಿಸುತ್ತಿದೆ ಎನ್ನುವುದೂ ವರದಿಯಿಂದ ಬಹಿರಂಗವಾಗಿದೆ. ಕಳೆದ ವರ್ಷ ಭಾರತದಲ್ಲಿ 18 ಹೊಸ ಕೋಟ್ಯಧಿಪತಿಗಳು ಸೃಷ್ಟಿಯಾಗಿದ್ದಾರೆ. ಇದರಿಂದ ದೇಶದ ಕೋಟ್ಯಧಿಪತಿಗಳ ಸಂಖ್ಯೆ 119ಕ್ಕೇರಿದೆ, ಜೊತೆಗೆ ಇವರ ಒಟ್ಟಾರೆ ಆಸ್ತಿಯ ವೌಲ್ಯ 400 ಬಿಲಿಯನ್ ಡಾಲರ್ (28 ಲಕ್ಷ ಕೋಟಿ ರೂ.)ಗೆ ತಲುಪಿದೆ. 2017ರಲ್ಲಿ 325.5 ಬಿಲಿಯನ್ ಡಾಲರ್ ಇದ್ದ ಸಂಪತ್ತು 2018ರ ವೇಳೆಗೆ 440.1 ಬಿಲಿಯನ್ ಡಾಲರ್‌ಗೆ ಏರಿಕೆಯಾಗುವ ಮೂಲಕ 2008ರ ಜಾಗತಿಕ ಆರ್ಥಿಕ ಕುಸಿತದ ನಂತರ ಕಂಡ ಅತೀಹೆಚ್ಚು ವಾರ್ಷಿಕ ಏರಿಕೆಯಾಗಿದೆ. ಭಾರತದ ಶೇ.ಒಂದು ಶ್ರೀಮಂತರು ತಮ್ಮ ಸಂಪತ್ತಿನ ಮೇಲೆ ಕೇವಲ ಶೇ.0.5 ಹೆಚ್ಚುವರಿ ತೆರಿಗೆ ಪಾವತಿಸುವಂತೆ ಮಾಡುವುದರಿಂದ ಸಂಗ್ರಹವಾಗುವ ಹಣ ಆರೋಗ್ಯಸೇವೆಗೆ ಸರಕಾರ ವೆಚ್ಚ ಮಾಡುವ ಮೊತ್ತವನ್ನು ಶೇ.50ರಷ್ಟು ಹೆಚ್ಚುಗೊಳಿಸಲು ಸಾಕಾಗುತ್ತದೆ ಎಂದು ಆಕ್ಸ್‌ಫಾಮ್ ತಿಳಿಸುತ್ತದೆ. ಆದರೆ ಕಾರ್ಪೊರೇಟ್ ಶಕ್ತಿಯೇ ಸರಕಾರವನ್ನು ನಿಯಂತ್ರಿಸುತ್ತಿರುವಾಗ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದು ಕನಸಿನ ಮಾತು. ಇಂದು ಕಾರ್ಪೊರೇಟ್ ಕುಳಗಳು ಮಧ್ಯಮ ವರ್ಗ ಕೂಡಿಟ್ಟ ಹಣವನ್ನು ಕೊಳ್ಳೆ ಹೊಡೆದು ವಿದೇಶ ಸೇರುತ್ತಿದ್ದಾರೆ. ದೇಶ ಶ್ರೀಮಂತರ ಬದಲು ಮಧ್ಯಮವರ್ಗದಿಂದಲೇ ಅತ್ಯಧಿಕ ತೆರಿಗೆಯನ್ನು ವಸೂಲಿ ಮಾಡುತ್ತಿದೆ. ಇಂದು ಬೆರಳೆಣಿಕೆಯ ಜನರ ಬಳಿ ಶೇಖರಣೆಯಾಗಿರುವ ಸಂಪತ್ತು ದೇಶಾದ್ಯಂತ ಸಮಾನ ಹಂಚಿಕೆಯಾಗಬೇಕು. ಈ ಮೂಲಕ ದೇಶದ ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಪರಿವರ್ತಿಸಬೇಕು. ಇದನ್ನು ಬಿಟ್ಟು, ಹೊಸದಾಗಿ ಹುಟ್ಟುವ ಮಕ್ಕಳ ವಿರುದ್ಧ ಸ್ವಯಂಘೋಷಿತ ಬ್ರಹ್ಮಚಾರಿಯೊಬ್ಬ ಹೇಳಿಕೆ ನೀಡುವುದು ಆತ್ಮವಂಚನೆಯ ಪರಾಕಾಷ್ಠೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News