×
Ad

ಫೆ. 1: ಕೇಂದ್ರದ ಮಧ್ಯಂತರ ಬಜೆಟ್; ಶ್ರೀಸಾಮಾನ್ಯರಿಗೆ ಭರ್ಜರಿ ಕೊಡುಗೆಗಳ ನಿರೀಕ್ಷೆ

Update: 2019-01-31 23:51 IST

ಹೊಸದಿಲ್ಲಿ, ಜ.31: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಿದೆ. ಲೋಕಸಭಾ ಚುನಾವಣಾ ಘೋಷಣೆಗೆ ದಿನಗಣನೆ ಆರಂಭವಾಗಿರುವಂತೆಯೇ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಮಂಡಿಸಲಿರುವ ಕೊನೆಯ ಬಜೆಟ್ ಇದಾಗಿದೆ.

ಕೇಂದ್ರ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ಸರಕಾರವು, ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು, ಜನಸಾಮಾನ್ಯರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸುವ ನಿರೀಕ್ಷೆಯಿದೆ.ಆದರೆ ಈ ಸಲ ಕೇಂದ್ರ ಸರಕಾರವು ಬಜೆಟ್‌ಗೆ ಪೂರ್ವಭಾವಿಯಾಗಿ ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸಂಸತ್‌ನಲ್ಲಿ ಮಂಡಿಸುವುದಿಲ್ಲ.

ವಿತ್ತ ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿರುವುದರಿಂದ, ವಿತ್ತ ಖಾತೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಿರುವ ರೈಲ್ವೆ ಸಚಿವ ಪೀಯೂಷ್ ಗೊಯೆಲ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ವಿತ್ತ ಸಚಿವಾಲಯ ಬುಧವಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಶುಕ್ರವಾರ ತಾನು ಮಂಡಿಸಲಿರುವ ಬಜೆಟ್ 2019-2020ರ ಸಾಲಿನ ಮಧ್ಯಂತರ ಬಜೆಟ್ ಆಗಿದೆಯೇ ಹೊರತು, ಸಂಪೂರ್ಣ ಬಜೆಟ್ ಅಲ್ಲವೆಂದು ಸ್ಪಷ್ಟಪಡಿಸಿತ್ತು

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಂತೆಯೇ ಕೇಂದ್ರ ಸರಕಾರವು ಸಾಮಾನ್ಯ ಬಜೆಟ್ ಮಂಡಿಸುವುದಕ್ಕೆ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರಕಾರಕ್ಕೆ ತನ್ನ ಅಧಿಕಾರಾವಧಿಯಲ್ಲಿ ಆರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಂವಿಧಾನದಲ್ಲಿ ಅವಕಾಶವಿಲ್ಲದಿರುವುದರಿಂದ ಎನ್‌ಡಿಎ ಸರಕಾರವು ಪೂರ್ಣಮಟ್ಟದ ಬಜೆಟನ್ನು ಲೋಕಸಭೆಯಲ್ಲಿ ಮಂಡಿಸುವುದನ್ನು ವಿರೋಧಿಸುವುದಾಗಿಯೂ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಬೆದರಿಕೆ ಹಾಕಿದ್ದವು.

2014ರ ಮೇ ತಿಂಗಳಲ್ಲಿ ಅಧಿಕಾರಕ್ಕೇರಿದ ಎನ್‌ಡಿಎ ಸರಕಾರವು, ಆ ವರ್ಷವೇ 2014-15ರ ಸಾಲಿನ ಬಜೆಟ್ ಮಂಡಿಸಿತ್ತು. ಆನಂತರ ಅದು 2015-16, 2016-17, 2017-18 ಹಾಗೂ 2018-19 ಹೀಗೆ ಒಟ್ಟು ಐದು ಸಾರ್ವತ್ರಿಕ ಬಜೆಟ್‌ಗಳನ್ನು ಮಂಡಿಸಿದೆ.

ಆದರೆ 2019-20ನೇ ಸಾಲಿನ ವಿತ್ತ ವರ್ಷವು 2019ರ ಎಪ್ರಿಲ್ 1ರಂದು ಆರಂಭಗೊಳ್ಳಲಿದ್ದು, 2020ರ ಮಾರ್ಚ್ 31ರವರೆಗೆ ಚಾಲ್ತಿಯಲ್ಲಿರುವುದು. ಆದರೆ ಹಾಲಿ ಕೇಂದ್ರ ಸರಕಾರದ ಅಧಿಕಾರಾವಧಿಯು 2019ರ ಮೇ 26ರಂದು ಮುಗಿಯಲಿದೆ.

ಜಿಡಿಪಿ ಪರಿಷ್ಕರಣೆ

ಮಧ್ಯಂತರ ಬಜೆಚ್ ಮಂಡನೆಯ ಮುನ್ನಾ ದಿನವಾದ ಗುರುವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು 2017-18ರ ವಿತ್ತವರ್ಷದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ) ಬೆಳವಣಿಗೆ ದರವನ್ನು ಪರಿಷ್ಕರಿಸಿದ್ದು, ಶೇ.6.7ರಿಂದ ಶೇ.7.2ಕ್ಕೆ ಏರಿಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News