ಇಬ್ಬರು ಖತರ್ ಫುಟ್ಬಾಲ್ ಆಟಗಾರರ ಅರ್ಹತೆ ಕುರಿತು ಯುಎಇ ತಕರಾರು

Update: 2019-01-31 18:54 GMT

ದುಬೈ, ಜ.31: ಇಬ್ಬರು ಖತರ್ ಫುಟ್ಬಾಲ್ ಆಟಗಾರರ ಅರ್ಹತೆಯನ್ನು ಪ್ರಶ್ನಿಸಿ ಏಶ್ಯಕಪ್ ಆತಿಥ್ಯವಹಿಸಿರುವ ಯುಎಇ ತಂಡ ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್‌ಗೆ ದೂರು ದಾಖಲಿಸಿದೆ ಎಂದು ವರದಿಯಾಗಿದೆ.

 ಖತರ್ ತಂಡ ಜಪಾನ್ ವಿರುದ್ಧ ಏಶ್ಯಕಪ್ ಫುಟ್ಬಾಲ್ ಫೈನಲ್ ಪಂದ್ಯ ಆಡುವ ಮುನ್ನಾದಿನ ಯುಎಇ ಈ ನಿರ್ಧಾರಕ್ಕೆ ಬಂದಿದೆ. ಮಂಗಳವಾರ ನಡೆದಿದ್ದ ಸೆಮಿ ಫೈನಲ್ ಹಣಾಹಣಿಯಲ್ಲಿ ಖತರ್ ತಂಡ ಆತಿಥೇಯ ಯುಎಇ ತಂಡವನ್ನು 4-0 ಅಂತರದಿಂದ ಮಣಿಸಿ ಫೈನಲ್‌ಗೆ ತಲುಪಿತ್ತು. ಪಂದ್ಯದ ಕೊನೆಯಲ್ಲಿ ಯುಎಇ ಪ್ರೇಕ್ಷಕರು ಪ್ಲಾಸ್ಟಿಕ್ ಬಾಟಲ್‌ಗಳು ಹಾಗೂ ಶೂಗಳನ್ನು ಖತರ್ ಆಟಗಾರರನ್ನು ಗುರಿಯಾಗಿಸಿ ಮೈದಾನಕ್ಕೆ ಎಸೆದಿದ್ದರು.

ಇಬ್ಬರು ಖತರ್ ಆಟಗಾರರ ಅರ್ಹತೆಗೆ ಸಂಬಂಧಿಸಿ ಯುಎಇ ಸಲ್ಲಿಸಿದ ದೂರನ್ನು ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್ ಸ್ವೀಕರಿಸಿದೆ. ಎಎಫ್‌ಸಿ ನಿಯಮಾವಳಿ ಪ್ರಕಾರ ಪರಿಶೀಲನೆ ನಡೆಸಲಾಗುತ್ತದೆ ಎಂದು ಎಎಫ್‌ಸಿ ವಕ್ತಾರ ತಿಳಿಸಿದ್ದಾರೆ. ಟೂರ್ನಮೆಂಟ್‌ನಲ್ಲಿ ಒಟ್ಟು 8 ಗೋಲುಗಳನ್ನು ಬಾರಿಸಿ ದಾಖಲೆ ನಿರ್ಮಿಸಿರುವ ಸ್ಟ್ರೈಕರ್ ಅಲ್ಮೋಝ್ ಅಲಿ ಹಾಗೂ ಡಿಫೆಂಡರ್ ಬಾಸ್ಸಂ ಅಲ್-ರಾವಿ ವಿರುದ್ಧ ಯುಎಇ ದೂರು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. 22ರ ಹರೆಯದ ಅಲಿ ಸೂಡಾನ್ ಸಂಜಾತರಾಗಿದ್ದು, 21ರ ಹರೆಯದ ಅಲ್-ರಾವಿ ಇರಾಕ್‌ನಲ್ಲಿ ಜನಿಸಿದ್ದಾರೆ. ಅನರ್ಹ ಆಟಗಾರರನ್ನು ಮೈದಾನಕ್ಕೆ ಇಳಿಸಿದರೆ ಎಎಫ್‌ಸಿ ಶಿಸ್ತು ಹಾಗೂ ನೀತಿ ಸಂಹಿತೆ ಪ್ರಕಾರ ಆಟಗಾರನಿಗೆ ಒಂದು ಪಂದ್ಯ ನಿಷೇಧದ ಜೊತೆಗೆ ದಂಡ ವಿಧಿಸಲಾಗುತ್ತದೆ. ಟೂರ್ನಿ ಮುಗಿದ ಬಳಿಕ ಅನರ್ಹ ಅಂಶ ತಿಳಿದುಬಂದರೆ ಮುಂಬರುವ ಟೂರ್ನಿಯಿಂದ ಆಟಗಾರನನ್ನು ತಂಡದಿಂದ ಹೊರಗಿಡುವ ಅಧಿಕಾರ ಎಎಫ್‌ಸಿಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News