5 ಲ.ರೂ.ವರೆಗಿನ ಆದಾಯ ‘ತೆರಿಗೆ ಮುಕ್ತ’ ಎನ್ನುವುದು ಬಜೆಟ್ ಘೋಷಣೆಯ ಅರ್ಥವೇ?

Update: 2019-02-01 17:36 GMT

ಹೊಸದಿಲ್ಲಿ,ಫೆ.1: ಶುಕ್ರವಾರ ಸಂಸತ್ತಿನಲ್ಲಿ ಮಧ್ಯಂತರ ಮುಂಗಡಪತ್ರವನ್ನು ಮಂಡಿಸಿದ ಕೇಂದ್ರ ವಿತ್ತಸಚಿವ ಪಿಯೂಷ್ ಗೋಯಲ್ ಅವರು ಆದಾಯ ತೆರಿಗೆ ಪಾವತಿದಾರರಿಗೆ ನೆಮ್ಮದಿಯನ್ನುಂಟು ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ವಾರ್ಷಿಕ ಐದು ಲ.ರೂ.ವರೆಗೆ ಆದಾಯವನ್ನು ಹೊಂದಿರುವವರು ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ ಎಂದು ಅವರು ಹೇಳಿದ್ದಾರೆ. ಸಚಿವರು ಇದನ್ನು ಘೋಷಿಸುತ್ತಿದ್ದಂತೆ ಲೋಕಸಭೆಯಲ್ಲಿ ಸಂಭ್ರಮ ಮನೆಮಾಡಿತ್ತು. ಆದರೆ ನಿಜಕ್ಕೂ ಸಚಿವರ ಪ್ರಕಟನೆಯ ಅರ್ಥವೇನು?

ಚುನಾವಣೆಗೆ ಮೊದಲು ಸರಕಾರದಿಂದ ಮುಂಗಡಪತ್ರ ಮಂಡನೆಯು ಚುನಾವಣೆಗಳ ನಂತರ ಬರುವ ಸರಕಾರವು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಂತಾಗಲು ತೆರಿಗೆಗಳು ನಿರ್ಣಯಿಸಲ್ಪಡುವ ರೀತಿಯಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನುಂಟು ಮಾಡುವುದಿಲ್ಲ. ಮುಖ್ಯ ತೆರಿಗೆ ಪ್ರಸ್ತಾವಗಳನ್ನು ಪೂರ್ಣಪ್ರಮಾಣದ ಮುಂಗಡಪತ್ರದಲ್ಲಿ ಮಂಡಿಸಲಾಗುವುದು ಎಂದು ಹೇಳುವ ಮೂಲಕ ಸ್ವತಃ ಗೋಯಲ್ ಅವರೂ ಇದನ್ನು ಒಪ್ಪಿಕೊಂಡಿದ್ದಾರೆ.

ಆದರೆ,ಸಣ್ಣ ತೆರಿಗೆದಾರರು...ವಿಶೇಷವಾಗಿ ಮಧ್ಯಮ ವರ್ಗ,ವೇತನದಾರರು,ಪಿಂಚಣಿದಾರರು ಮತ್ತು ಹಿರಿಯ ನಾಗರಿಕರು ವರ್ಷದ ಆರಂಭದಲ್ಲಿ ಮುಂಗಡಪತ್ರ ತೆರಿಗೆ ಪ್ರಸ್ತಾವಗಳ ಬಗ್ಗೆ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಹೀಗಾಗಿ ತೆರಿಗೆ ಪ್ರಸ್ತಾವಗಳನ್ನು,ವಿಶೇಷವಾಗಿ ಈ ವರ್ಗದ ಜನರಿಗೆ ಸಂಬಂಧಿಸಿದ ಪ್ರಸ್ತಾವಗಳನ್ನು ಕಾಯಿಸಕೂಡದು ಎಂದೂ ಗೋಯಲ್ ಹೇಳಿದ್ದಾರೆ.

► ಗೋಯಲ್ ಪ್ರಕಟಿಸಿದ್ದು ಇಲ್ಲಿದೆ:

2019-20ನೇ ಸಾಲಿಗೆ ಹಾಲಿ ತೆರಿಗೆ ದರಗಳೇ ಮುಂದುವರಿಯಲಿವೆ.

ಐದು ಲಕ್ಷ ರೂ.ವರೆಗೆ ತೆರಿಗೆಗರ್ಹ ವಾರ್ಷಿಕ ಆದಾಯವನ್ನು ಹೊಂದಿರುವವರು ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಪಡೆಯುತ್ತಾರೆ ಮತ್ತು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಿಲ್ಲ. ಗೋಯಲ್ ಅವರ ಹೇಳಿಕೆಯ ಈ ಎರಡೂ ಭಾಗಗಳು ಮಹತ್ವದ್ದಾಗಿವೆ.

►ಹಾಲಿ ತೆರಿಗೆ ದರಗಳ ಮುಂದುವರಿಕೆ

2019-20ನೇ ಸಾಲಿಗೆ ಹಾಲಿ ತೆರಿಗೆ ದರಗಳೇ ಮುಂದುವರಿಯುತ್ತವೆ ಎಂದು ಗೋಯಲ್ ಸ್ಪಷ್ಟವಾಗಿ ಹೇಳಿದ್ದಾರೆ. 2.5 ಲ.ರೂ.ವರೆಗಿನ ಆದಾಯಕ್ಕೆ ಶೇ.0 ತೆರಿಗೆ,2.5 ಲ.ರೂ.ನಿಂದ 5 ಲ.ರೂ.ವರೆಗಿನ ಆದಾಯಕ್ಕೆ ಶೇ.5,5 ಲ.ರೂ.ನಿಂದ 10 ಲ.ರೂ.ವರೆಗಿನ ಆದಾಯಕ್ಕೆ ಶೇ.20 ಮತ್ತು ಇದಕ್ಕೂ ಹೆಚ್ಚಿನ ಆದಾಯಕ್ಕೆ ಶೇ.30 ಹಾಲಿ ತೆರಿಗೆ ದರಗಳಾಗಿವೆ.

►ಐದು ಲ.ರೂ.ವರೆಗೆ ವಿನಾಯಿತಿ

ಮಧ್ಯಂತರ ಮುಂಗಡ ಪತ್ರದಲ್ಲಿಯ ಏಕೈಕ ಬದಲಾವಣೆಯು 2.5 ಲ.ರೂ.ನಿಂದ 5 ಲ.ರೂ.ವರೆಗೆ ಆದಾಯ ಹೊಂದಿರುವವರಿಗೆ ಸಂಬಂಧಿಸಿದೆ. ಈ ಸ್ತರದಲ್ಲಿರುವರು ಈಗ ತಾವು ಆದಾಯ ತೆರಿಗೆಯನ್ನಾಗಿ ಪಾವತಿಸಬೇಕಾಗಿದ್ದ ಶೇ.5ರ ಮೊತ್ತದಷ್ಟು,ಅಂದರೆ 12,500 ರೂ.ವರೆಗೆ ವಿನಾಯಿತಿಗೆ ಅರ್ಹರಾಗುತ್ತಾರೆ. ಅಂದರೆ ಹಿಂದೆ ಶೇ.5ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದವರು ತಮ್ಮ ಪೂರ್ಣ ತೆರಿಗೆ ಹಣವನ್ನು ಮರಳಿ ಪಡೆಯುತ್ತಾರೆ ಮತ್ತು ಅವರು ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ.

► ಮಾರ್ಜಿನಲ್ ತೆರಿಗೆ

ಇದು ತೆರಿಗೆ ಸ್ತರಗಳಲ್ಲಿ ಬದಲಾವಣೆಗಿಂತ ತೀರ ವಿಭಿನ್ನವಾಗಿದೆ.

ಸಾಮಾನ್ಯವಾಗಿ ಸರಕಾರವು ತೆರಿಗೆ ಸ್ತರಗಳಲ್ಲಿ ಬದಲಾವಣೆಗಳನ್ನು ಮಾಡಿದಾಗ ಅದು ಆದಾಯವನ್ನು ಪರಿಗಣಿಸದೆ ತೆರಿಗೆಯನ್ನು ಪಾವತಿಸುವ ಪ್ರತಿಯೊಬ್ಬರ ಮೇಲೂ ಪರಿಣಾಮವನ್ನು ಬೀರುತ್ತದೆ. ಇದನ್ನು ಮಾರ್ಜಿನಲ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ.

ಈಗ ವಾರ್ಷಿಕ 20 ಲ.ರೂ.ಆದಾಯ ಹೊಂದಿರುವ ಯಾವುದೇ ವ್ಯಕ್ತಿಯು 2.5 ಲ.ರೂ-5.ಲ.ರೂ ಸ್ತರಕ್ಕೆ ಶೇ.5,5 ಲ.ರೂ-10 ಲ.ರೂ.ಸ್ತರಕ್ಕೆ ಶೇ.10 ಮತ್ತು 10 ಲ.ರೂ.ನಿಂದ 20 ಲ.ರೂ.ವರೆಗಿನ ಆದಾಯಕ್ಕೆ ಶೇ.30ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದಾನೆ. 5.ಲ.ರೂ.ವರೆಗಿನ ಆದಾಯಕ್ಕೆ ಶೇ.0 ದರವನ್ನಿಟ್ಟು ಸ್ತರಗಳನ್ನು ಬದಲಿಸಿದ್ದರೆ 20 ಲ.ರೂ.ಆದಾಯ ಗಳಿಸುವ ವ್ಯಕ್ತಿಯೂ ಮೊದಲ 5 ಲ.ರೂ.ಗಳಿಗೆ ಯಾವುದೇ ತೆರಿಗೆಯನ್ನು ಪಾವತಿಸಬೇಕಿರಲಿಲ್ಲ ಮತ್ತು ಅದಕ್ಕಿಂತ ಹೆಚ್ಚಿನ ಆದಾಯಕ್ಕೆ ಮಾತ್ರ ತೆರಿಗೆಯನ್ನು ಪಾವತಿಸಬೇಕಾಗುತ್ತಿತ್ತು.

ಆದರೆ ಗೋಯಲ್ ಅವರು ಮುಂಗಡಪತ್ರ ಭಾಷಣದಲ್ಲಿ ಮಾಡಿರುವ ಪ್ರಸ್ತಾವಗಳ ಅಡಿ ಇದು ಹೀಗಿಲ್ಲ. ಬದಲಿಗೆ ಐದು ಲ.ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರು ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗಳನ್ನು ಮಾಡಿರದಿದ್ದರೆ ಕಳೆದ ವರ್ಷದಂತೆಯೇ ಈ ವರ್ಷವೂ ತೆರಿಗೆಯನ್ನು ಪಾವತಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News