ಬರದ ಸಂಕಷ್ಟ ನಿವಾರಿಸಿ

Update: 2019-02-01 18:40 GMT

ಮಾನ್ಯರೇ,

ಈ ಸಲ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳ ನೂರು ತಾಲೂಕುಗಳ ಜನರು ಮತ್ತು ಜಾನುವಾರುಗಳು ತೀವ್ರ ಬರದ ಪರಿಣಾಮವನ್ನು ಎದುರಿಸುವಂತಾಗಿದೆ. ಅಂದಹಾಗೆ ಈಗಾಗಲೇ ಕಂದಾಯ ಇಲಾಖೆ ಪರಿಹಾರ ಕಾರ್ಯಗಳನ್ನು ಆರಂಭಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಮಾತ್ರ ಸಭೆ, ಭೇಟಿ ಮಾಡುವುದರಲ್ಲೇ ಕಾಲ ಹರಣಮಾಡುತ್ತಿದ್ದಾರೆ ಎಂಬ ಆರೋಪ ಎದುರಾಗಿದೆ. ಸಮರೋಪಾದಿಯಲ್ಲಿ ಯಾವ ಪರಿಹಾರ ಕಾರ್ಯನೂ ನಡೆಯುತ್ತಿಲ್ಲ. ಹೀಗಾಗಿ ಸಂತ್ರಸ್ತ ಜನರು ನೀರು, ದುಡ್ಡು ಇಲ್ಲದೇ ಸಂಕಟಪಡುವ ಪರಿಸ್ಥಿತಿ. ಅತ್ತ ಜಾನುವಾರುಗಳಿಗೂ ನೀರು, ಮೇವು ಇಲ್ಲದೇ ಮೌನವಾಗಿ ರೋದಿಸುವ ಪರಿಸ್ಥಿತಿ. ಈ ಸಲ ರಾಜ್ಯದಲ್ಲಿ ಬರ ಬೇಗನೆ ಆವರಿಸಿದೆ. ಹೀಗಾಗಿ ನೂರು ತಾಲೂಕುಗಳು ಸಂಕಷ್ಟದಲ್ಲಿವೆ. ಇದು ಫೆಬ್ರವರಿ ತಿಂಗಳು. ಎಪ್ರಿಲ್ ವರೆಗೆ ಕಾಯದೇ ತುರ್ತಾಗಿ ಗೋಶಾಲೆಗಳನ್ನು ತೆರೆಯುವಂತೆ ಸರಕಾರವೇ ಈ ಹಿಂದೆ ಆದೇಶಿಸಿತ್ತು. ಆದರೂ ಬರಪೀಡಿತ ಜಿಲ್ಲೆಗಳಲ್ಲಿ ಈ ಪ್ರಯತ್ನ ಇನ್ನೂ ಆಗಿಲ್ಲ. ಇದು ಜಿಡ್ಡುಗಟ್ಟಿದ ಅಧಿಕಾರ ವ್ಯವಸ್ಥೆಯ ಕರಾಳತೆಯನ್ನು ನಮ್ಮೆದುರು ತೋರಿಸುತ್ತಿದೆ. ಗೋರಕ್ಷಣೆಯ ಹೆಸರಿನ ಹೋರಾಟಗಾರರು ಎಂದು ಕರೆಸಿಕೊಳ್ಳುವವರು ಈಗ ನಾಪತ್ತೆಯಾಗಿದ್ದಾರೆ. ಬರದ ತೀವ್ರತೆಯಿಂದ ಕೂಲಿ ಕೆಲಸವೂ ಸಿಗದೆ ಗಂಭೀರ ಆರ್ಥಿಕ ಸಮಸ್ಯೆಗೊಳಗಾದ ಜನರು ತಮ್ಮೂರು ಬಿಟ್ಟು ಕೂಲಿಗಾಗಿ ಗುಳೆ ಹೋಗುತ್ತಿದ್ದಾರೆ. ಇಷ್ಟೆಲ್ಲಾ ಭೀಕರತೆ ಇದ್ದರೂ ಸರಕಾರ ಈ ಬಗ್ಗೆ ವಿಳಂಬನೀತಿ ಅನುಸರಿಸುತ್ತಿರುವುದು ಸಮರ್ಥನೀಯವಲ್ಲ. ಬರಪೀಡಿತ ಜಿಲ್ಲೆಗಳ ಜನರು ಮತ್ತು ಜಾನುವಾರುಗಳು ಬಿಸಿಲಿನಿಂದ, ಹಸಿವಿನಿಂದ ಇನ್ನಷ್ಟು ಬಳಲುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News