ಉಗ್ರವಾದ ಭಾರತದ ದ್ವಂದ್ವ ನೀತಿ

Update: 2019-02-02 05:21 GMT

ಕೆಲ ದಿನಗಳ ಹಿಂದೆ ಹಿಂದೂ ಸೇನೆ ಎಂದು ಹೇಳಿಕೊಂಡ ಸಂಘಟನೆಯೊಂದು ಜಂತರ್ ಮಂತರ್‌ನಲ್ಲಿ ರಾಣಿ ವಿಕ್ಟೋರಿಯಾ ಅವರ ಪುಣ್ಯತಿಥಿಯನ್ನು ಆಚರಿಸಿ ಆಕೆಗೆ ಗೌರವ ಸಲ್ಲಿಸಿತು. ಭಾರತದಲ್ಲಿ ವಿಕ್ಟೋರಿಯಾ ರಾಣಿಯ ಆಳ್ವಿಕೆಯನ್ನು ಅಳಿಸಲು ನಡೆದ ಸ್ವಾತಂತ್ರ ಚಳವಳಿಯನ್ನೇ ಅಗೌರವಿಸುವಂತೆ ಇವರು ವಿಕ್ಟೋರಿಯಾ ರಾಣಿಯನ್ನು ಸ್ಮರಿಸಿದರು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಸಾವರ್ಕರ್ ಸೇರಿದಂತೆ ಹಿಂದೂ ಮಹಾಸಭಾದ ನಾಯಕರು ಬ್ರಿಟಿಷರ ಪರವಾಗಿ ನಿಂತು ದೇಶಕ್ಕೆ ದ್ರೋಹ ಬಗೆದಿದ್ದು ಆಕಸ್ಮಿಕ ಅಲ್ಲ ಎನ್ನುವುದನ್ನು ಈ ಸಂಘಪರಿವಾರದ ನಾಯಕರ ವರ್ತನೆಯಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ಆದರೆ ಲಕ್ಷಾಂತರ ಸ್ವಾತಂತ್ರ ಹೋರಾಟಗಾರರ ಬಲಿದಾನದಿಂದ ಇಂದು ದೇಶ ಸ್ವತಂತ್ರಗೊಂಡಿದೆ. ವಿಕ್ಟೋರಿಯಾ ರಾಣಿಯನ್ನು ಸ್ಮರಿಸಿದ ಈ ಹಿಂದುತ್ವವಾದಿ ನಾಯಕರು, ಭಗತ್ ಸಿಂಗ್, ಆಝಾದ್, ಜಲಿಯನ್ ವಾಲಾಬಾಗ್ ಹುತಾತ್ಮರು, ಸುಭಾಶ್ಚಂದ್ರ ಬೋಸ್ ಇವರೆಲ್ಲರನ್ನ್ನೂ ಅವಮಾನಿಸಿದರು. ಈ ದೇಶದ್ರೋಹಿಗಳನ್ನು ಬಂಧಿಸುವುದಿರಲಿ, ಅವರ ಮೇಲೆ ಪ್ರಕರಣವೇ ದಾಖಲಾಗಿಲ್ಲ. ಇದೀಗ ಈ ದೇಶದ್ರೋಹಿ ಉಗ್ರವಾದಿಗಳು ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಗಾಂಧಿಯನ್ನು ಹತ್ಯೆಗೈದ ಜನವರಿ 30ರಂದು ಹಿಂದೂಮಹಾಸಭಾದ ಮುಖಂಡರು ಗಾಂಧೀಜಿಯ ಪ್ರತಿಕೃತಿಗೆ ಗುಂಡಿಕ್ಕಿ, ನಾಥೂರಾಂ ಗೋಡ್ಸೆಯನ್ನು ಮಹಾತ್ಮ ಎಂದು ಘೋಷಿಸಿದ್ದಾರೆ. ಸಾರ್ವಜನಿಕವಾಗಿ ಈ ಕಾರ್ಯಕ್ರಮ ನಡೆದಿದ್ದು, ಗಾಂಧಿಯನ್ನು ಕೊಂದ ಸ್ಮರಣೆಗಾಗಿ ಸಿಹಿಯನ್ನು ಹಂಚಿದ್ದಾರೆ. ಇದು ತೀವ್ರ ವಿವಾದಕ್ಕೊಳಗಾದ ಕಾರಣದಿಂದ ಕಾಟಾಚಾರಕ್ಕೆ ಮೂವರನ್ನು ಬಂಧಿಸಲಾಗಿದೆ. ಅತ್ಯಂತ ಅಮಾನವೀಯ ಮತ್ತು ಕ್ರೌರ್ಯದ ಪರಮಾವಧಿಯನ್ನು ಮೆರಿದಿರುವ ಇವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಬೇಕಾಗಿತ್ತು. ಆದರೆ ಅಂತಹ ಯಾವುದೇ ಬೆಳವಣಿಗೆ ನಡೆಯಲಿಲ್ಲ.

ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರು ಎಂಬ ನಕಲಿ ವೀಡಿಯೊವನ್ನು ಇಟ್ಟುಕೊಂಡು ಕನ್ಹಯ್ಯ ಮತ್ತು ಅವರ ಸ್ನೇಹಿತರ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಿಸಿರುವ ಸರಕಾರಕ್ಕೆ, ಈ ಹಿಂದುತ್ವ ಉಗ್ರವಾದಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಯಾಕೆ ಕಷ್ಟವಾಗಿದೆ? ಗಾಂಧೀಜಿಯ ಕೊಲೆಯನ್ನು ಬಹಿರಂಗವಾಗಿ ಸಂಭ್ರಮಿಸಿದ್ದೇ ಅಲ್ಲದೆ, ನಾಥೂರಾಂ ಗೋಡ್ಸೆಯೆನ್ನುವ ಸ್ವತಂತ್ರ ಭಾರತದ ಪ್ರಪ್ರಥಮ ಉಗ್ರವಾದಿ, ಭಯೋತ್ಪಾದಕನನ್ನು ‘ಮಹಾತ್ಮ’ ಎಂದು ಕರೆದ ಸಂಘಟನೆಯನ್ನು ನಿಷೇಧಿಸಲು ಸರಕಾರ ಯಾಕೆ ಹಿಂಜರಿಯುತ್ತಿದೆ?

 ಹಿಂದೂ ಮಹಾ ಸಭಾ ಸ್ಥಾಪನೆಯಾಗಿದ್ದೇ ದೇಶದಲ್ಲಿ ಮನು ಸಿದ್ಧಾಂತವನ್ನು ಜಾರಿಗೊಳಿಸಲು. ಮೊಗಲರು ಮತ್ತು ಬ್ರಿಟಿಷರು ಭಾರತಕ್ಕೆ ಕಾಲಿಟ್ಟ ಬಳಿಕ ಮನುಸಿದ್ಧಾಂತ ತಲೆ ಕೆಳಗಾಯಿತು. ಕೆಳಜಾತಿಯ ಜನರೂ ಶಿಕ್ಷಣವನ್ನು ತಮ್ಮದಾಗಿಸಿಕೊಂಡರು. ಸಮಾಜದಲ್ಲಿ ಮುಂಚೂಣಿಯ ಸ್ಥಾನವನ್ನು ಪಡೆದರು. ಶೂದ್ರರು, ದಲಿತರು ಶಿಕ್ಷಣವನ್ನು ಪಡೆಯಬಾರದು, ವಿವಿಧ ಜಾತಿಗಳು ಅವರವರ ಕಾಯಕಕ್ಕೆ ಮರಳಬೇಕು ಎನ್ನುವುದು ಮನುವಾದಿಗಳ ಒಳ ಆಶಯ. ಅದಕ್ಕಾಗಿ ವರ್ಣ ವ್ಯವಸ್ಥೆಯನ್ನು ಮರುಸ್ಥಾಪನೆಗೊಳಿಸುವುದಕ್ಕಾಗಿ ಮತ್ತು ವೈದಿಕ ಧರ್ಮವನ್ನು ಜಾರಿಗೊಳಿಸುವುದಕ್ಕಾಗಿ ಹಿಂದೂ ಮಹಾಸಭಾ ಸ್ಥಾಪನೆಯಾಯಿತು. ಆದರೆ ತನ್ನನ್ನು ತಾನು ‘ಶ್ರೇಷ್ಠ ಹಿಂದೂ’ ಎಂದೇ ಕರೆಸಿಕೊಂಡ ಮಹಾತ್ಮ ಗಾಂಧಿಯಿಂದಾಗಿ ಅವರ ದುರುದ್ದೇಶ ಈಡೇರಲಿಲ್ಲ. ಈ ದೇಶದಲ್ಲಿ ಮತ್ತೆ ಮನುವಾದಿ ಆಡಳಿತವನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ ಎಂಬ ಸಿಟ್ಟಿನಿಂದಲೇ ಗೋಡ್ಸೆಯ ಮೂಲಕ ಗಾಂಧೀಜಿಯನ್ನು ಕೊಂದು ಹಾಕಲಾಯಿತು.

ಅಂಬೇಡ್ಕರ್ ಮೂಲಕ ಸಂವಿಧಾನ ಜಾರಿಗೆ ಬಂದಾಗ ‘‘ಮನುಸ್ಮತಿಯ ತತ್ವಗಳಿಲ್ಲದ ಸಂವಿಧಾನಕ್ಕೆ ಯಾವ ಗೌರವವೂ ಇಲ್ಲ’’ ಎಂದು ಆರೆಸ್ಸೆಸ್ ಮುಖವಾಣಿ ಪತ್ರಿಕೆಯಲ್ಲಿ ಬರೆಯಲಾಯಿತು. ಇತ್ತೀಚಿನವರೆಗೂ ಆರೆಸ್ಸೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿರಲಿಲ್ಲ. ಅಲ್ಲಿ ರಾಷ್ಟ್ರಗೀತೆಗೆ ಯಾವ ಗೌರವವೂ ಇದ್ದಿರಲಿಲ್ಲ. ನೆಹರೂ ತಲೆಮಾರು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಎತ್ತಿ ಹಿಡಿದ ಕಾರಣಕ್ಕಾಗಿ ಹಿಂದೂ ಮಹಾಸಭಾದ ಸಂಚು ವಿಫಲವಾಯಿತು. ಆದರೆ ಇದೀಗ ಹಿಂದುತ್ವವಾದಿ ಉಗ್ರರು ಮತ್ತೆ ದೇಶಾದ್ಯಂತ ತಲೆಯೆತ್ತಿದ್ದಾರೆ. ಅಲ್ಲಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಪೋಸ್ಟರ್‌ಗಳು ಕಾಣಿಸಿಕೊಳ್ಳುತ್ತಿವೆ. ಸನಾತನ ಸಂಸ್ಥೆಯಂತಹ ಸಂಘಟನೆಗಳು ವಿಚಾರವಾದಿಗಳನ್ನು, ಪ್ರಜಾಪ್ರಭುತ್ವವಾದಿಗಳನ್ನು ಬಹಿರಂಗವಾಗಿಯೇ ಗುಂಡಿಟ್ಟು ಕೊಲ್ಲುತ್ತಿವೆ. ಇದೇ ಸಂದರ್ಭದಲ್ಲಿ ಹಿಂದೂ ಮಹಾಸಭಾ ಗಾಂಧಿಯ ಕೊಲೆಯನ್ನು ಬಹಿರಂಗವಾಗಿ ಸಂಭ್ರಮಿಸಿದೆ ಮಾತ್ರವಲ್ಲ, ಅದರ ಅಣಕು ಪ್ರದರ್ಶನವನ್ನು ಮತ್ತೊಮ್ಮೆ ಮಾಡಿ ನಾಥೂರಾಮನಿಗೆ ಗೌರವ ಸಲ್ಲಿಸಿದೆ.

ನರೇಂದ್ರ ಮೋದಿ ಸರಕಾರ ಭಯೋತ್ಪಾದನೆ ಮತ್ತು ಉಗ್ರವಾದಿಗಳ ದಮನದ ಕುರಿತಂತೆ ಮಾತನಾಡುತ್ತಿದೆ. ಕಾಶ್ಮೀರದಲ್ಲಿ ಸೇನೆಯನ್ನು ನಾಗರಿಕರ ವಿರುದ್ಧ ಬಳಸಿ ಅವರನ್ನು ಹದ್ದು ಬಸ್ತಿನಲ್ಲಿಡಲು ವಿಫಲ ಪ್ರಯತ್ನ ನಡೆಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ತನ್ನ ಪಾದ ಬುಡದಲ್ಲೇ ಬೆಳೆಯುತ್ತಿರುವ ಕೇಸರಿ ಉಗ್ರವಾದವೆನ್ನುವ ವಿಷ ಬಳ್ಳಿಯ ಕುರಿತಂತೆ ಜಾಣಕುರುಡನಂತೆ ವರ್ತಿಸುತ್ತಿದೆ. ಅತ್ಯಂತ ಆತಂಕಕಾರಿ ವಿಷಯವೆಂದರೆ ಹಿಂದೂ ಮಹಾಸಭಾದ ಕೃತ್ಯದ ವಿರುದ್ಧ ಹಿಂದೂ ಧಾರ್ಮಿಕ ಮುಖಂಡರು ನಮಗೆ ಸಂಬಂಧಿಸಿದ ವಿಷಯವೇ ಇದಲ್ಲ ಎಂದು ಮೌನವಾಗಿರುವುದು. ಇಂದು ವಿಶ್ವದ ಎಲ್ಲೇ ಉಗ್ರರು ದಾಳಿ ಮಾಡಿರಲಿ, ತಕ್ಷಣ ಆಯಾ ಧರ್ಮದ ಮುಖಂಡರು ಅವರನ್ನು ಖಂಡಿಸುತ್ತಾರೆ. ಧರ್ಮಕ್ಕೂ ಆ ಸಂಘಟನೆಗಳಿಗೂ ಯಾವ ಸಂಬಂಧವೂ ಇಲ್ಲ ಎಂದು ಘೋಷಿಸುತ್ತಾರೆ.

ಹಿಂದೂ ಹೆಸರನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡುತ್ತಿರುವ ಸಂಘಟನೆ ಎಸಗಿರುವ ಕೃತ್ಯದ ಕುರಿತಂತೆ ಪೇಜಾವರ ಶ್ರೀ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಯಾಕೆ ಮೌನವಾಗಿದ್ದಾರೆ? ಇಂತಹ ನಾಯಕರು, ಕಾಶ್ಮೀರದಲ್ಲಿ ತೀವ್ರವಾದಿಗಳು ಅಥವಾ ಪ್ರತ್ಯೇಕತಾವಾದಿಗಳು ಅಫ್ಝಲ್‌ ಗುರುವಿಗೆ ಗೌರವ ಸಲ್ಲಿಸಿದಾಗ, ಆತನನ್ನು ಹುತಾತ್ಮ ಎಂದು ಕರೆದಾಗ ಎಚ್ಚರವಾಗುತ್ತಾರೆ. ಗೋಡ್ಸೆಯನ್ನು ಮಹಾತ್ಮ ಎಂದು ಘೋಷಿಸುವುದಕ್ಕೂ, ಅಫ್ಝಲ್ ಗುರುವನ್ನು ಹುತಾತ್ಮ ಎನ್ನುವುದಕ್ಕೂ ವ್ಯತ್ಯಾಸವಿದೆಯೇ? ಇಂದು ಪಂಜಾಬ್‌ನಲ್ಲಿ ಬಹಿರಂಗವಾಗಿಯೇ ಭಿಂದ್ರನ್‌ವಾಲೆಯನ್ನು ನಾಯಕನನ್ನಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಹೊಸ ತಲೆಮಾರು ಭಿಂದ್ರನ್‌ವಾಲೆಯನ್ನು ಹುತಾತ್ಮ ಎಂದು ಕರೆಯಲು ತೊಡಗಿದೆ.

ಗೋಡ್ಸೆಗೆ ಬಹಿರಂಗವಾಗಿ ಜಯಘೋಷ ಹಾಕುವ ಸಂಘಟನೆಗಳ ಕುರಿತಂತೆ ಮೃದುವಾಗಿರುವ ಅಥವಾ ಅವುಗಳನ್ನು ಸಾಕುವ ಸರಕಾರ, ಭಿಂದ್ರನ್‌ವಾಲೆ, ಅಫ್ಝಲ್ ಗುರುವಿನ ಪರವಾಗಿ ಜಯಘೋಷ ಹಾಕುವ ಸಂಘಟನೆಗಳ ವಿರುದ್ಧ ಮಾತನಾಡುವ ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ಸರಕಾರದ ಇಂತಹ ದ್ವಂದ್ವ ನಿಲುವು ಈ ದೇಶದಲ್ಲಿ ಗೋಡ್ಸೆಯ ಅಭಿಮಾನಿಗಳ ಜೊತೆ ಜೊತೆಗೆ ಭಿಂದ್ರನ್‌ವಾಲೆ ಮತ್ತು ಅಫ್ಝಲ್‌ಗುರುವಿನ ಅಭಿಮಾನಿಗಳನ್ನು ಬೆಳೆಸುತ್ತದೆ. ಅಷ್ಟೇ ಅಲ್ಲ, ತನ್ನ ದೇಶದಲ್ಲಿ ಬೆಳೆಯುತ್ತಿರುವ ಹಿಂದುತ್ವ ಉಗ್ರವಾದಿಗಳನ್ನು, ಭಯೋತ್ಪಾದಕರನ್ನು ದಮನಿಸಲು ಶಕ್ತವಲ್ಲದ ಸರಕಾರವೊಂದು ನೆರೆಯ ದೇಶದ ಭಯೋತ್ಪಾದಕರ, ಉಗ್ರವಾದಿಗಳ ಕುರಿತಂತೆ ಮಾತನಾಡುವುದೇ ಹಾಸ್ಯಾಸ್ಪದವಾಗುತ್ತದೆ. ಉಗ್ರವಾದದ ಕುರಿತಂತೆ ಭಾರತ ಸರಕಾರದ ದ್ವಂದ್ವ ನಿಲುವನ್ನು ವಿಶ್ವಸಂಸ್ಥೆ ಸಹಿತ ಜಗತ್ತು ಗಮನಿಸುತ್ತಿದೆ ಎನ್ನುವ ಎಚ್ಚರಿಕೆ ಮೋದಿ ನೇತೃತ್ವದ ಸರಕಾರಕ್ಕೆ ಇರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮ, ಜಾತಿಯ ಹೆಸರಿನಲ್ಲಿ ಹಿಂಸೆಯನ್ನು ಪ್ರಚೋದಿಸುವ ಯಾವ ಸಮುದಾಯಕ್ಕೆ ಸೇರಿದ ಸಂಘಟನೆಗಳನ್ನೇ ಆಗಲಿ, ಅವುಗಳನ್ನು ದಮನ ಮಾಡುವಲ್ಲಿ ಸರಕಾರ ಹಿಂದೆ ಮುಂದೆ ನೋಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News