ಪೌರತ್ವ ಮಸೂದೆಗೆ ಒತ್ತು ನೀಡಿದ ಪ್ರಧಾನಿ ಮೋದಿ

Update: 2019-02-02 15:24 GMT

ಠಾಕೂರ್‌ನಗರ(ಪ.ಬಂ),ಫೆ.2: ವಿವಾದಗಳ ಕೇಂದ್ರಬಿಂದುವಾಗಿರುವ ಪೌರತ್ವ(ತಿದ್ದುಪಡಿ) ಮಸೂದೆಯನ್ನು ಶನಿವಾರ ಇಲ್ಲಿ ಬಲವಾಗಿ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು,ಅದು ಧಾರ್ಮಿಕ ಕಿರುಕುಳಗಳನ್ನು ಅನುಭವಿಸಿದವರಿಗೆ ನ್ಯಾಯ ಮತ್ತು ಗೌರವವನ್ನು ಒದಗಿಸಲಿದೆ ಎಂದು ಹೇಳಿದರು.

ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ ಅವರು,ಅದು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಿಂಸಾಚಾರವನ್ನು ನಡೆಸುತ್ತಿದೆ ಎಂದು ಆರೋಪಿಸಿದರು. ತನ್ನ ಪಕ್ಷದೆಡೆಗೆ ಜನರ ಪ್ರೀತಿಯನ್ನು ಕಂಡು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಭಯಗ್ರಸ್ತರಾಗಿದ್ದಾರೆ ಎಂದರು.

ಭಾರತವು ಎರಡು ಹೋಳುಗಳಾದ ಬಳಿಕ ಸ್ವಾತಂತ್ರ್ಯವನ್ನು ಪಡೆದಿತ್ತು. ತಮ್ಮ ಆಯ್ಕೆಯ ದೇಶದಲ್ಲಿ ಸುಖವಾಗಿ ಬದುಕಬಹುದು ಎಂದು ಜನರು ಭಾವಿಸಿದ್ದರು. ಆದರೆ ಅವರು ಹಿಂದು,ಸಿಖ್,ಜೈನ್ ಮತ್ತು ಪಾರ್ಸಿ ಧರ್ಮಗಳಿಗೆ ಸೇರಿದವರಾಗಿದ್ದರಿಂದ ದೌರ್ಜನ್ಯಗಳು ಮತ್ತು ಹಿಂಸೆಗಳನ್ನು ಅನುಭವಿಸಿದರು ಎಂದ ಮೋದಿ,ಇದೇ ಕಾರಣದಿಂದ ನಾವು ಪೌರತ್ವ ಮಸೂದೆಯನ್ನು ತಂದಿದ್ದೇವೆ. ಈ ಜನರಿಗೆ ಹೋಗಲು ಭಾರತವನ್ನು ಬಿಟ್ಟು ಬೇರೆ ಸ್ಥಳವಿಲ್ಲ. ಅವರಿಗೆ ನ್ಯಾಯ ಮತ್ತು ಗೌರವವನ್ನು ಒದಗಿಸಬಾರದೇ? ಮಸೂದೆಯನ್ನು ಬೆಂಬಲಿಸುವಂತೆ ಮತ್ತು ಸದನದಲ್ಲಿ ಅದರ ಅಂಗೀಕಾರಕ್ಕೆ ಅನುವು ಮಾಡುವಂತೆ ತಾನು ಟಿಎಂಸಿಯನ್ನು ಕೇಳಿಕೊಳ್ಳುತ್ತೇನೆ ಎಂದರು.

ಪ್ರಧಾನಿ ಇಲ್ಲಿ ಪರಿಶಿಷ್ಟ ಜಾತಿ ಮತುವಾ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪೂರ್ವ ಪಾಕಿಸ್ತಾನ ಮೂಲದವರಾದ ಮತುವಾಗಳು ಧಾರ್ಮಿಕ ಕಿರುಕುಳವನ್ನು ಸಹಿಸಲಾಗದೆ 1950ರ ಆರಂಭದಲ್ಲಿ ಪಶ್ಚಿಮ ಬಂಗಾಳಕ್ಕೆ ವಲಸೆ ಬರತೊಡಗಿದ್ದರು. ರಾಜ್ಯದಲ್ಲಿ ಸುಮಾರು 30 ಲಕ್ಷದಷ್ಟಿರುವ ಮತುವಾಗಳು ಉತ್ತರ ಮತ್ತು ದಕ್ಷಿಣ 24 ಪರಗಣಗಳ ಜಿಲ್ಲೆಗಳಲ್ಲಿಯ ಕನಿಷ್ಠ ಐದು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಬಲ್ಲರು. ಆದರೆ ಅವರಲ್ಲಿ ಹೆಚ್ಚಿನವರು ತಮಗೆ ಈವರೆಗೂ ಭಾರತದ ಪೌರತ್ವ ದೊರಕಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯೊಂದಿಗೆ ಕೈಜೋಡಿಸಿರುವ ಮತುವಾ ಮಹಾಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಮಮತಾ ಮತ್ತು ಅವರ ಪಕ್ಷವು ಬಿಜೆಪಿ ಕಾರ್ಯಕರ್ತರ ವಿರುದ್ಧ ಹಿಂಸಾಚಾರಕ್ಕಿಳಿದಿರುವ,ಅಮಾಯಕರನ್ನು ಕೊಲ್ಲುತ್ತಿರುವುದರ ಹಿಂದಿನ ಕಾರಣ ತನಗೀಗ ಅರ್ಥವಾಗಿದೆ. ಬಿಜೆಪಿಯ ಬಗ್ಗೆ ಜನರ ಪ್ರೀತಿಯನ್ನು ಕಂಡು ಅವರು ಆತಂಕಗೊಂಡಿದ್ದಾರೆ ಎಂದರು.

► ನೂಕುನುಗ್ಗಲು,ಹಲವರಿಗೆ ಗಾಯ

ಕಿಕ್ಕಿರಿದು ತುಂಬಿದ್ದ ಸಮಾವೇಶ ಸ್ಥಳದ ಹೊರಗೆ ನಿಂತಿದ್ದ ನೂರಾರು ಬೆಂಬಲಿಗರು ಒಳಗೆ ನುಗ್ಗಲು ಪ್ರಯತ್ನಿಸಿದಾಗ ನೂಕುನುಗ್ಗಲು ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಗಾಯಗೊಂಡರು. ಶಾಂತರಾಗಿರುವಂತೆ ಮತ್ತು ಮುಂದಕ್ಕೆ ನುಗ್ಗಲು ಪ್ರಯತ್ನಿಸದಂತೆ ಮೋದಿಯವರು ಕೇಳಿಕೊಂಡರಾದರೂ ಜನರು ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ತಮಗೆ ಸ್ಥಳಾವಕಾಶಗಳನ್ನು ಕಲ್ಪಿಸಿಕೊಳ್ಳಲು ಜನರು ಖುರ್ಚಿಗಳನ್ನೆತ್ತಿ ವೇದಿಕೆಯ ಎದುರಿನ ಖಾಲಿ ಜಾಗಕ್ಕೆ ಎಸೆಯತೊಡಗಿದ್ದರು. ಗದ್ದಲ ಹೆಚ್ಚುತ್ತಿರುವುನ್ನು ಗಮನಿಸಿದ ಮೋದಿ ಭಾಷಣವನ್ನು ಮೊಟಕುಗೊಳಿಸಿ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News