ಪೋಕ್ಸೊ ಕಾಯ್ದೆ: ಪರಿಹಾರ ಸಿಕ್ಕಿದ್ದು ಎಷ್ಟು ಸಂತ್ರಸ್ತೆಯರಿಗೆ ಗೊತ್ತೇ ?

Update: 2019-02-03 06:06 GMT

ಚೆನ್ನೈ, ಫೆ. 3: ಅತ್ಯಾಚಾರ ನಿಯಂತ್ರಿಸುವ ಉದ್ದೇಶದಿಂದ ಹಾಗೂ ಅತ್ಯಾಚಾರ ಸಂತ್ರಸ್ತೆಯರಿಗೆ ಸೂಕ್ತ ಪರಿಹಾರ ಸಿಗುವ ದೃಷ್ಟಿಯಿಂದ ರೂಪಿಸಿರುವ ಪೋಕ್ಸೊ ಕಾಯ್ದೆ ತಮಿಳುನಾಡಿನಲ್ಲಿ ಕೇವಲ ಶೇಕಡ 3ರಷ್ಟು ಸಂತ್ರಸ್ತೆಯರಿಗೆ ಮಾತ್ರ ಮಧ್ಯಂತರ ಪರಿಹಾರ ದೊರಕಿಸಿಕೊಟ್ಟಿದೆ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆಯಡಿ ಸಂತ್ರಸ್ತೆಯರ ಕುಟುಂಬದ ಹೊರೆ ಕಡಿಮೆ ಮಾಡುವ ಸಲುವಾಗಿ ವಿಶೇಷ ನ್ಯಾಯಾಲಯಗಳು ಮಧ್ಯಂತರ ಪರಿಹಾರ ನೀಡುವಂತೆ ಸೂಚಿಸಲು ಅವಕಾಶವಿದೆ. ಆದರೆ ಸಕಾಲಕ್ಕೆ ಇಂಥ ಪರಿಹಾರ ದೊರಕದೇ ಬಹುತೇಕ ಸಂತ್ರಸ್ತ ಕುಟುಂಬಗಳು ದಯನೀಯ ಸ್ಥಿತಿಯಲ್ಲಿವೆ.

ಪ್ರಿಯಾ  ಎಂಬ ಶಾಲಾ ಬಾಲಕಿಯ ಮೇಲೆ ನೆರೆಮನೆಯ ವ್ಯಕ್ತಿ ಅತ್ಯಾಚಾರ ಎಸಗಿದ್ದರಿಂದ ಆಕೆ ಗರ್ಭಿಣಿಯಾಗಿದ್ದಳು. ಈ ಬಡಕುಟುಂಬಕ್ಕೆ ಮಧ್ಯಂತರ ಪರಿಹಾರ ಸಿಕ್ಕಿದ್ದರೆ ಕನಿಷ್ಠ ವೈದ್ಯಕೀಯ ವೆಚ್ಚಕ್ಕಾದರೂ ಅನುಕೂಲವಾಗುತ್ತಿತ್ತು. ನಾಲ್ಕು ವರ್ಷ ಕಳೆದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಆಕೆಯ ಸಂಬಂಧಿಕರು ಹೇಳುತ್ತಾರೆ.

ಕಳೆದ ಐದು ವರ್ಷಗಳಲ್ಲಿ ತಮಿಳುನಾಡಿನ 25 ಜಿಲ್ಲೆಗಳಲ್ಲಿ ಕೇವಲ ಶೇಕಡ 3ರಷ್ಟು ಸಂತ್ರಸ್ತೆಯರಿಗೆ ಮಾತ್ರ ಪರಿಹಾರ ಸಿಕ್ಕಿದೆ ಎನ್ನುವ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ಬೆಳಕಿಗೆ ಬಂದಿದೆ. ಸರ್ಕಾರೇತರ ಸಂಸ್ಥೆಯೊಂದು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಸಿಕ್ಕಿರುವ ಉತ್ತರದ ಪ್ರಕಾರ ರಾಜ್ಯದಲ್ಲಿ 3153 ಪ್ರಕರಣಗಳ ಪೈಕಿ ಕೇವಲ 95 ಪ್ರಕರಣಗಳಲ್ಲಷ್ಟೇ ಪರಿಹಾರ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News