ಬಾಬರಿ-ರಾಮಜನ್ಮಭೂಮಿ ವಿಚಾರಣೆ ಮುಂದೂಡಿ ಕೊಡು-ಕೊಳ್ಳುವಿಕೆ ಮಾಡಲಾಗುತ್ತಿದೆಯೇ?

Update: 2019-02-04 15:27 GMT

ಬಾಬರಿ-ರಾಮ ಜನ್ಮಭೂಮಿ ವಿವಾದದ ವಿಚಾರಣೆಯ ದಿನಾಂಕ ಮುಂದೂಡಿಕೆ ಸಂಶಯಗಳನ್ನು ಸೃಷ್ಟಿಸಿದೆ ಎಂದಿರುವ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾ. ಮಾರ್ಕಾಂಡೇಯ ಕಾಟ್ಜು ಸರ್ವೋಚ್ಛ ನ್ಯಾಯಾಲಯದಲ್ಲಿ ಇತ್ತೀಚಿನ ಕೆಲ ಬೆಳವಣಿಗೆಗಳು ಸಂಶಯಾಸ್ಪದವಾಗಿದೆ ಎಂದಿದ್ದಾರೆ. ಈ ಬಗ್ಗೆ indicanews.comಗೆ ಅವರು ಬರೆದ ಲೇಖನದಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ರಿಗೆ 4 ಪ್ರಶ್ನೆಗಳನ್ನು ಕೇಳಿದ್ದು, ಸಾರ್ವಜನಿಕವಾಗಿ ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ. ಕಾಟ್ಜು ಅವರ ಲೇಖನದ ಪೂರ್ಣಪಾಠ ಈ ಕೆಳಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿಗಳು ಅನುಮಾನಾತೀತವಾಗಿರಬೇಕು. ಆದರೆ ಭಾರತದ ಸುಪ್ರೀಂಕೋರ್ಟ್ ‍ನಲ್ಲಿ ಇತ್ತೀಚಿನ ಕೆಲ ಬೆಳವಣಿಗೆಗಳು, ಉದಾಹರಣೆಗೆ ರಾಮಜನ್ಮಭೂಮಿ ಪ್ರಕರಣದ ಅನಗತ್ಯ ವಿಳಂಬ ಹಾಗೂ ವಿಚಾರಣೆಯನ್ನು ಪದೇ ಪದೇ ಮುಂದೂಡುತ್ತಿರುವುದು (ದಿನಾಂಕ ನಿಗದಿಪಡಿಸಲು ದಿನ ನಿಗದಿಪಡಿಸುವುದು ಇತ್ಯಾದಿ) ಮತ್ತಿತರ ಬೆಳವಣಿಗೆಗಳಿಂದ ಭಾರತದ ಮುಖ್ಯ ನ್ಯಾಮೂರ್ತಿಗಳ ನಡತೆ ಬಗ್ಗೆ ಗುಸು ಗುಸು ಕೇಳಿಬರುತ್ತಿವೆ. ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಬಹುಶಃ ಅವರೇ ಉತ್ತರಿಸಿ ಸ್ಪಷ್ಟಪಡಿಸುವುದು ಸೂಕ್ತ.

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯಾಗಿ, ನಾನು ಕಾರ್ಯನಿರ್ವಹಿಸಿದ ಈ ಪವಿತ್ರ ಸಂಸ್ಥೆಯ ಆಗುಹೋಗುಗಳ ಬಗ್ಗೆ ನನಗೆ ಕಳಕಳಿ ಇದೆ. ಭಾರತದ ಜನತೆಯ ಪರವಾಗಿ ಭಾರತದ ಸಿಜೆಐ ರಂಜನ್ ಗೊಗೋಯ್ ಅವರಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಬಯಸುತ್ತೇನೆ. ಇದಕ್ಕೆ ಅವರು ಬಹಿರಂಗ ಉತ್ತರ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಸಂಸ್ಥೆಗಳು (ಸಿಜೆಐ ಸೇರಿ) ಎಲ್ಲರೂ ಜನಸೇವಕರು ಹಾಗೂ ಜನರಿಗೆ ಉತ್ತರದಾಯಿತ್ವ ಹೊಂದಿರುವವರು.

►1. ಗೊಯೋಯ್ ಅವರ ಪುತ್ರಿಯನ್ನು ವಿವಾಹವಾಗಿರುವುದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಾಲ್ಮೀಕಿ ಮೆಹ್ತಾ ಅವರ ಪುತ್ರ. ವಾಲ್ಮೀಕಿ ಮೆಹ್ತಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಾಗ, ಈ ಬಗ್ಗೆ ಅಂದಿನ ಸಿಜೆಐ ನ್ಯಾಯಮೂರ್ತಿ ಠಾಕೂರ್ ತನಿಖೆ ನಡೆಸಿ, ಆರೋಪಗಳು ನಿಜ ಎಂದು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ 2016ರ ಮಾರ್ಚ್‍ ನಲ್ಲಿ ಮುಖ್ಯ ನ್ಯಾಯಮೂರ್ತಿ ಠಾಕೂರ್ ನೇತೃತ್ವದಲ್ಲಿ ಸಭೆ ಸೇರಿದ ಕೊಲೀಜಿಯಂ, ನ್ಯಾಯಮೂರ್ತಿ ವಾಲ್ಮೀಕಿಯವರನ್ನು ಬೇರೆ ಹೈಕೋರ್ಟ್‍ಗೆ ವರ್ಗಾಯಿಸುವಂತೆ ಶಿಫಾರಸ್ಸು ಮಾಡಿತ್ತು.

ಸಾಮಾನ್ಯವಾಗಿ ಇಂಥ ಶಿಫಾರಸ್ಸನ್ನು ಭಾರತ ಸರ್ಕಾರ ಕೆಲ ವಾರಗಳನ್ನು ಅನುಷ್ಠಾನಗೊಳಿಸುತ್ತದೆ. ವಿಚಿತ್ರವೆಂದರೆ ಈ ಪ್ರಕರಣದಲ್ಲಿ ಕೊಲೀಜಿಯಂ ಶಿಫಾರಸ್ಸನ್ನು ಒಂದು ವರ್ಷ ಕಾಲ ‘ಶೈತ್ಯಾಗಾರ’ದಲ್ಲಿ ಇರಿಸಿತು. ಈ ಮಧ್ಯೆ ಅಂದಿನ ಸಿಜೆಐ ಠಾಕೂರ್ ಅವರು ಶಿಫಾರಸ್ಸು ಜಾರಿ ಮಾಡದ ಬಗ್ಗೆ ಸರ್ಕಾರವನ್ನು ತೆರೆದ ಕೋರ್ಟ್ ನಲ್ಲೇ ತರಾಟೆಗೆ ತೆಗೆದುಕೊಂಡಿದ್ದರು ಮಾತ್ರವಲ್ಲದೇ ಗಂಭೀರ ಆರೋಪಗಳಿರುವ ನ್ಯಾಯಮೂರ್ತಿ ವಾಲ್ಮೀಕಿಯವರಿಗೆ ಯಾವುದೇ ಪ್ರಕರಣಗಳನ್ನು ನೀಡದಂತೆ ಅವರನ್ನು ನ್ಯಾಯಾಂಗ ಕಲಾಪದಿಂದ ಹಿಂದಕ್ಕೆ ಕರೆಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಆದೇಶ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. 2017ರ ಜನವರಿಯಲ್ಲಿ ನ್ಯಾಯಮೂರ್ತಿ ಠಾಕೂರ್ ನಿವೃತ್ತರಾದರು. ಹೆಚ್ಚು ಹೊಂದಾಣಿಕೆಯ ಮನೋಭಾವದ ನ್ಯಾಯಮೂರ್ತಿ ಕೇಹರ್ ಅವರು ಸಿಜೆಐ ಹುದ್ದೆಗೇರಿದರು. ಆಗ ಸರ್ಕಾರ ಈ ಕಡತವನ್ನು ಮತ್ತೆ ಸುಪ್ರೀಂಕೋರ್ಟ್‍ಗೆ ವಾಪಾಸು ಕಳುಹಿಸಿತು (ಭಾರತದ ರಾಷ್ಟ್ರಪತಿಗಳಿಗೆ ಸಹಿ ಮಾಡುವ ಸಲುವಾಗಿ ಕಳುಹಿಸುವ ಬದಲು). ಆ ಬಳಿಕ ಸಿಜೆಐ ಕೇಹರ್ ನೇತೃತ್ವದಲ್ಲಿ ಸಭೆ ಸೇರಿದ ಕೊಲಾಜಿಯಂ, ಹಿಂದಿನ ಶಿಫಾರಸ್ಸನ್ನು ರದ್ದುಪಡಿಸಿತು. ಪರಿಣಾಮವಾಗಿ ನ್ಯಾಯಮೂರ್ತಿ ವಾಲ್ಮೀಕಿಯವರು ದೆಹಲಿ ಹೈಕೋರ್ಟ್ ನ್ಯಾಯಮೂತಿಯಾಗಿ ಇಂದಿನವರೆಗೂ ಮುಂದುವರಿದಿದ್ದಾರೆ. ಈ ಚಿದಂಬರ ರಹಸ್ಯದ ಹಿಂದಿನ ಸತ್ಯಾಂಶವೇನು?

ನನಗೆ ಇರುವ ಮಾಹಿತಿಯ ಪ್ರಕಾರ, ಸಂಬಂಧಿಯ ವರ್ಗಾವಣೆಯ ಶಿಫಾರಸ್ಸಿನ ಬಗ್ಗೆ ಗೊತ್ತಾದ ತಕ್ಷಣ, ಗೊಯೋಯ್ ಅವರು ಪ್ರಧಾನಿ ಮೋದಿಯವರ ಬಳಿಗೆ ಹೋಗಿ (ಅಥವಾ ಹಿರಿಯ ಸಂಪುಟ ಸಚಿವರ ಬಳಿಗೆ), ವಾಲ್ಮೀಕಿಯವರನ್ನು ವರ್ಗಾವಣೆ ಮಾಡದಂತೆ ಗೋಗರೆದಿದ್ದರು. ಜೇಷ್ಠತೆಯ ಆಧಾರದಲ್ಲಿ ಗೊಗೋಯ್ ಅವರು ಭಾರತದ ಸಿಜೆಐ ಆಗುವ ಸಂಭಾವ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಅವರ ಮನವಿಯನ್ನು ಪುರಸ್ಕರಿಸಿತು ಹಾಗೂ ಅದಕ್ಕೆ ಸಂಬಂಧಿಸಿದ ಕಡತವನ್ನು ಸಹಿಗಾಗಿ ರಾಷ್ಟ್ರಪತಿಗೆ ಕಳುಹಿಸುವ ಬದಲು ಶೈತ್ಯಾಗಾರದಲ್ಲಿರಿಸಿತು. ಆದರೆ ಇದರ ಸತ್ಯಾಸತ್ಯತೆಯನ್ನು ನ್ಯಾಯಮೂರ್ತಿ ಗೊಗೋಯ್ ಅವರೇ ಬಹಿರಂಗಪಡಿಸಬೇಕು.

ಈ ಮಾಹಿತಿ ಸರಿ ಎಂದಾದಲ್ಲಿ, ಸಹಜವಾಗಿಯೇ ನ್ಯಾಯಮೂರ್ತಿ ಗೊಗೋಯ್ ಅವರು ಬಿಜೆಪಿ ಸರ್ಕಾರದಿಂದ ಅನುಕೂಲ ಪಡೆದಿದ್ದಾರೆ ಹಾಗೂ ಅದನ್ನು ಅವರು ಹಿಂದಿರುಗಿಸಬೇಕಾಗಿದೆ. ಈ ಅಂಶವೇ ಸುಪ್ರೀಂಕೋರ್ಟ್‍ನ ಹಲವು ಆಗು ಹೋಗುಗಳನ್ನು ವಿವರಿಸುತ್ತದೆ.

ಗೊಗೋಯ್ ಅವರು ಈಗ ಭಾರತದ ಮುಖ್ಯ ನ್ಯಾಯಮೂರ್ತಿ. ಸುಪ್ರೀಂಕೋರ್ಟ್ ರಿಜಿಸ್ಟ್ರಿಯಲ್ಲಿರುವ ಎಲ್ಲ ದಾಖಲೆಗಳೂ ಅವರ ಕೈಗೆಟುಕುತ್ತವೆ. ಆದ್ದರಿಂದ ಅವರು ಸಾರ್ವಜನಿಕವಾಗಿ ಈ ಕೆಳಗಿನ ಅಂಶಗಳನ್ನು ಸಾರ್ವಜನಿಕ ಮುಂದಿಡಬೇಕು.

1). ವಾಲ್ಮೀಕಿ ಮೆಹ್ತಾ ವರ್ಗಾವಣೆಗೆ ಸಂಬಂಧಿಸಿದಂತೆ ಅಂದಿನ ಸಿಜೆಐ ಠಾಕೂರ್ ನೇತೃತ್ವದ ಕೊಲೀಜಿಯಂ ಮಾಡಿದ ಶಿಫಾರಸ್ಸು. 2). ಕೊಲೀಜಿಯಂ ಶಿಫಾರಸ್ಸನ್ನು ಅನುಷ್ಠಾನಕ್ಕೆ ಏಕೆ ತಂದಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿ ಸಿಜೆಐ ಠಾಕೂರ್ ಅವರು ಸರ್ಕಾರಕ್ಕೆ ಬರೆದ ಪತ್ರ ಹಾಗೂ ಸರ್ಕಾರದಿಂದ ಅದಕ್ಕೆ ಬಂದ ಉತ್ತರಗಳು. 3) ಈ ಶಿಫಾರಸ್ಸನ್ನು ಹೊಸ ಮುಖ್ಯ ನ್ಯಾಯಮೂರ್ತಿ ಕೇಹರ್ ನೇತೃತ್ವದ ಸುಪ್ರೀಂಕೋರ್ಟ್ ಕೊಲೀಜಿಯಂಗೆ ವಾಪಾಸು ಕಳುಹಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಬರೆದ ಪತ್ರ. 4). ನ್ಯಾಯಮೂರ್ತಿ ಮೆಹ್ತಾ ಅವರವ ವರ್ಗಾವಣೆಯನ್ನು ರದ್ದುಪಡಿಸಿ ನ್ಯಾಯಮೂರ್ತಿ ಕೇಹರ್ ನೇತೃತ್ವದ ಕೊಲಾಜಿಯಂ ಮಾಡಿದ ನಿರ್ಣಯದ ಪ್ರತಿ.

►2. ವಾಲ್ಮೀಕಿ ಮೆಹ್ತಾ ಅವರ ಮಗ (ಗೊಯೋಯ್ ಅವರ ಅಳಿಯ) ವಕೀಲ. ಅವರ ಪ್ರಾಕ್ಟೀಸ್ ಹಾಗೂ ಆದಾಯ, ವಿವಾಹದ ಬಳಿಕ ದಿಢೀರನೇ ಹಲವು ಪಟ್ಟು ಹೆಚ್ಚಿತು ಎಂಬ ಭಾವನೆ ಇದೆ. ಆದ್ದರಿಂದ ತಮ್ಮ ಅಳಿಯನ ವಿವಾಹಕ್ಕೆ ಮುನ್ನ ಹಾಗೂ ವಿವಾಹದ ಬಳಿಕ ಅವರ ಆದಾಯ ಎಷ್ಟಿತ್ತು ಎನ್ನುವುದನ್ನು ಸಿಜೆಐ ಗೊಗೋಯ್ ಅವರು ಉಲ್ಲೇಖಿಸಬೇಕು.

►3. ದೆಹಲಿ ಹೈಕೋರ್ಟ್‍ನ ಮೂವರು ನ್ಯಾಯಾಧೀಶರಾದ ನ್ಯಾಯಮೂರ್ತಿ ಪ್ರದೀಪ್ ನಂದರಜೋಗ್ (ಪ್ರಸ್ತುತ ರಾಜಸ್ಥಾನ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ), ನ್ಯಾಯಮೂರ್ತಿ ಹೀತಾ ಮಿತ್ತಲ್ (ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ) ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್ ಎಲ್ಲರೂ ದೆಹಲಿ ಹೈಕೋರ್ಟ್‍ನ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗಿಂತ ಸೇವಾ ಹಿರಿತನ ಹೊಂದಿದವರು ಹಾಗೂ ಅವರನ್ನು ಸೂಪರ್‍ಸೀಡ್ ಮಾಡಲಾಗಿದೆ. ಏಕೆ? ನಾನು ದೆಹಲಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದೆ ಹಾಗೂ ಈ ಮೂವರನ್ನೂ ವೈಯಕ್ತಿಕವಾಗಿ ಬಲ್ಲೆ (ಎಲ್ಲರೂ ಆ ಅವಧಿಯಲ್ಲಿ ಹೈಕೋರ್ಟ್‍ನಲ್ಲಿ ಅಧೀನ ನ್ಯಾಯಾಧೀಶರಾಗಿದ್ದವರು) ಎಲ್ಲರೂ ನಿಷ್ಠೆ ಮತ್ತು ದಕ್ಷತೆಯ ಕಳಂಕರಹಿತ ವ್ಯಕ್ತಿತ್ವ ಹೊಂದಿದ್ದವರು. 12.12.2018ರಂದು ಸಭೆ ಸೇರಿದ ಸುಪ್ರೀಂಕೋರ್ಟ್ ಕೊಲೀಜಿಯಂ, ನ್ಯಾಯಮೂರ್ತಿ ನಂದರಜೋಗ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವಂತೆ ಶಿಫಾರಸ್ಸು ಮಾಡಿತ್ತು. ಕೊಲಾಜಿಯಂನ ಎಲ್ಲ ಐದು ಸದಸ್ಯರು ಇದಕ್ಕೆ ಸಹಿ ಮಾಡಿದ್ದರು. ಆದರೆ ಆ ಬಳಿಕ ಸಿಜೆಐ ಗೊಗೋಯ್ ಅವರು ಈ ಶಿಫಾರಸ್ಸು ಪತ್ರವನ್ನು ಜೇಬಿನಲ್ಲಿರಿಸಿಕೊಂಡು, ಸಾಮಾನ್ಯವಾಗಿ ಮಾಡುವಂತೆ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲೇ ಇಲ್ಲ. ಏಕೆ? ಈ ಬಗ್ಗೆ ನಾನು ನ್ಯಾಯಮೂರ್ತಿ ಲೋಕೂರ್ ಅವರ ಜತೆ ಮಾತನಾಡಿದ್ದೆ. (ಇವರು ಕೊಲೀಜಿಯಂನಲ್ಲಿ ಗೊಗೋಯ್ ನಂತರ ಎರಡನೇ ಅತ್ಯಂತ ಹಿರಿಯ ಸದಸ್ಯ). ಈ ಶಿಫಾರಸ್ಸಿನ ಬಳಿಕ ಲೋಕೂರ್ ಅವರು ಸರ್ಕಾರಕ್ಕೆ ಈ ಶಿಫಾರಸ್ಸು ಪತ್ರವನ್ನು ಕಳುಹಿಸಲಾಗಿದೆಯೇ ಎಂದು ಕೇಳುವ ಸಲುವಾಗಿ ಪದೇ ಪದೇ ಸಿಜೆಐ ನಿವಾಸಕ್ಕೆ ಕರೆ ಮಾಡಿದ್ದರು. ಆದರೆ ಅವರ ಕಾರ್ಯದರ್ಶಿ ದೂರವಾಣಿ ಕರೆ ಸ್ವೀಕರಿಸಿ, ಸಿಜೆಐ ಅವರ ಆರೋಗ್ಯ ಸರಿ ಇಲ್ಲ ಎಂದು ಉತ್ತರಿಸುತ್ತಿದ್ದರು. ಗೊಯೋಯ್ ಈ ಸಂಬಂಧ ವಾಪಾಸು ಕರೆ ಮಾಡಲೇ ಇಲ್ಲ ಎಂದು ಲೋಕೂರ್ ವಿವರಿಸಿದ್ದರು. ಈ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎನ್ನುವುದನ್ನು ಆ ಬಳಿಕ ಗೊಗೋಯ್ ಹೇಳಿದ್ದರು. ಸಲಹಾ ನ್ಯಾಯಮೂರ್ತಿಗಳ ಜತೆ ಈ ಬಗ್ಗೆ ಚರ್ಚಿಸದ ಹಿನ್ನೆಲೆಯಲ್ಲಿ ಶಿಫಾರಸ್ಸನ್ನು ಸರ್ಕಾರಕ್ಕೆ ಕಳುಹಿಸಲಿಲ್ಲ ಎಂದು ಸಿಜೆಐ ಹೇಳಿದ್ದಾಗಿ ನ್ಯಾಯಮೂರ್ತಿ ಲೋಕೂರ್ ವಿವರಿಸಿದ್ದರು. ಆದರೆ ಈ ಸಲಹೆಗಳು ಒಂದು ಅಥವಾ ಎರಡು ದಿನಕ್ಕಿಂತ ಹೆಚ್ಚಿನ ಅವಧಿ ತೆಗೆದುಕೊಳ್ಳುವುದಿಲ್ಲ (ನನ್ನ ಸ್ವ- ಅನುಭವದಿಂದ ತಿಳಿದುಕೊಂಡಂತೆ).

ಮೂವರು ಪ್ರತಿಭಾವಂತ ನ್ಯಾಯಮೂರ್ತಿಗಳನ್ನು ಹತ್ತಿಕ್ಕಿರುವ ಕ್ರಮ, ಇಂದಿರಾಗಾಂಧಿ ಸರ್ಕಾರದ ಅವಧಿಯಲ್ಲಿ ಸುಪ್ರೀಂಕೋರ್ಟ್‍ನ ಮೂವರು ನ್ಯಾಯಮೂರ್ತಿಗಳನ್ನು ದಮನಿಸಿದ ಕ್ರಮವನ್ನು ನೆನಪಿಸುತ್ತದೆ ಹಾಗೂ ಇದು, ಆ ಮೂವರು ನ್ಯಾಯಮೂರ್ತಿಗಳ ನೈತಿಕಸ್ಥೈರ್ಯ ಕುಂದಿಸುವ ಜತೆಗೆ  ಇಡೀ ನ್ಯಾಯಾಂಗದಲ್ಲಿ ತಪ್ಪು ಸಂದೇಶವನ್ನು ರವಾನಿಸಿದೆ. ಬಿಜೆಪಿ ಸರ್ಕಾರದ ಆಣತಿಯಂತೆ ಹೀಗೆ ಮಾಡಲಾಗಿದೆ ಎನ್ನುವುದು ಸುಪ್ರೀಂಕೋರ್ಟ್ ವಕೀಲರೊಬ್ಬರ  ಅಭಿಪ್ರಾಯ. ನ್ಯಾಯಮೂರ್ತಿ ಖನ್ನಾ ಹೆಸರನ್ನು ಶಿಫಾರಸ್ಸು ಮಾಡಿದ ಕೊಲಾಜಿಯಂನಲ್ಲಿ ಇತರ ನ್ಯಾಯಮೂರ್ತಿಗಳೂ ಇದ್ದರು ಎನ್ನುವುದು ನಿಸ್ಸಂದೇಹ. ಆದರೆ ಇವರೆಲ್ಲರೂ ನ್ಯಾಯಮೂರ್ತಿ ಖನ್ನಾ ಹೆಸರನ್ನು ಹೇರಿದ ಗೊಗೋಯ್ ಅವರಿಗೆ ಶರಣಾಗಿ, ಯಾವ ಪ್ರತಿರೋಧವನ್ನೂ ತೋರಲಿಲ್ಲ (ನಾನು ವೈಯಕ್ತಿಕವಾಗಿ ಬಲ್ಲ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ನಾನು ವೈಯಕ್ತಿಕವಾಗಿ ಸಂಪರ್ಕಿಸಿ ಮಾತನಾಡಿದಾಗ ತಿಳಿದುಬಂದಂತೆ).

ನ್ಯಾಯಮೂರ್ತಿ ಖನ್ನಾ ಅವರಿಗಿಂತ ಸೇವಾಜ್ಯೇಷ್ಠತೆ ಹೊಂದಿದ್ದ ಮೂವರು ನ್ಯಾಯಮೂರ್ತಿಗಳ ವಿರುದ್ಧ ಯಾವುದೇ ಆರೋಪಗಳಿದ್ದಲ್ಲಿ ಅದನ್ನು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ. 12.12.2018ರವರೆಗೆ ನ್ಯಾಯಮೂರ್ತಿ ನಂದರಜೋಗ್ ವಿರುದ್ಧ ಯಾವ ಆರೋಪಗಳೂ ಇರಲಿಲ್ಲ ಹಾಗೂ ಕೊಲಾಜಿಯಂ ಅವರಿಗೆ ಬಡ್ತಿ ನೀಡುವಂತೆ ಶಿಫಾರಸ್ಸು ಮಾಡಿತ್ತು. ಆದರೆ ಕೇವಲ ಮೂರು ವಾರಗಳಲ್ಲಿ ಇದು ಹುಟ್ಟಿಕೊಂಡಿತೇ? ಎಂಬ ಅಂಶ ನಿಗೂಢ.

ಎಲ್ಲಕ್ಕಿಂತ ಹೆಚ್ಚಾಗಿ, ಇದೀಗ ಪದೋನ್ನತಿ ಪಡೆದಿರುವ ನ್ಯಾಯಮೂರ್ತಿ ಮಹೇಶ್ವರಿ ಅವರ ಹೆಸರನ್ನು 12.12.2018ರಂದು ನಡೆದ ಕೊಲೀಜಿಯಂ ಸಭೆ ನಿರ್ದಿಷ್ಟವಾಗಿ ತಿರಸ್ಕರಿಸಿತ್ತು (ಕೊಲಾಜಿಯಂ ಸದಸ್ಯರಾಗಿದ್ದ ನ್ಯಾಯಮೂರ್ತಿ ಲೋಕೂರ್ ನನಗೆ ಹೇಳಿದ ಪ್ರಕಾರ). ಕೇವಲ ಮೂರು ವಾರಗಳಲ್ಲಿ ಅವರಿಗೆ ಅರ್ಹತೆ ಬಂತೇ?

►4. ರಾಮಜನ್ಮಭೂಮಿ ಪ್ರಕರಣವನ್ನು ಒಂದಲ್ಲ ಒಂದು ಕಾರಣ ನೀಡಿ ಏಕೆ ಪದೇ ಪದೇ ಮುಂದೂಡಲಾಗುತ್ತಿದೆ? ವಿಚಾರಣೆಯ ದಿನಾಂಕ ನಿಗದಿಪಡಿಸಲು ದಿನವನ್ನು ಏಕೆ ನಿರ್ಧರಿಸಲಾಗುತ್ತದೆ?, ಮತ್ತೆ ಇದು ನಿಗೂಢ. ಇದು ಒಂದು ಬಗೆಯ ಕೊಡು- ಕೊಳ್ಳುವಿಕೆಯೇ? ಗೊಗೋಯ್ ಅವರೇ ಉತ್ತರಿಸಬೇಕು.

(ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಹಾಗೂ ಭಾರತದ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ. ಇವರು ವ್ಯಕ್ತಪಡಿಸಿದ ಅಭಿಪ್ರಾಯಗಳು ವೈಯಕ್ತಿಕ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News