ಭಾರತೀಯರ ಆರೋಗ್ಯಕ್ಕೆ ಕಂಟಕವಾದ ತ್ಯಾಜ್ಯ ಟಯರ್‌ಗಳು

Update: 2019-02-05 07:16 GMT

ಭಾರೀ ಪ್ರಮಾಣದಲ್ಲಿ ರೋಗ ಹಾಗೂ ಅಕಾಲ ಮರಣವನ್ನು ಉಂಟು ಮಾಡುವಂತಹ ಅತ್ಯಂತ ಭೀಕರವಾದ ಮಾಲಿನ್ಯವೊಂದರಿಂದ ಭಾರತವು ಬಾಧಿತವಾಗಿದೆ. ಟಯರ್ ಪೈರೋಲಿಸಿಸ್ ಸ್ಥಾವರಗಳಿಂದ ಪರಿಸರಕ್ಕೆ ಆಗಿರುವ ಮಾಲಿನ್ಯದ ಬಗ್ಗೆ ಯಾವುದೇ ದತ್ತಾಂಶಗಳಿಲ್ಲ. ಅಷ್ಟೇ ಅಲ್ಲ, ಭಾರತದ ಸ್ಥಾವರಗಳಲ್ಲಿ ಉರಿಸಲಾಗುತ್ತಿರುವ ಬ್ರಿಟಿಷ್ ಟಯರ್‌ಗಳನ್ನು ಕಾನೂನುಬಾಹಿರವಾಗಿ ಉರಿಸಲಾಗು ತ್ತಿದೆಯೇ ಎಂಬ ಬಗ್ಗೆಯೂ ಸರಕಾರಗಳು ತನಿಖೆ ನಡೆಸಲು ವಿಫಲವಾಗಿವೆ.

ಅಸಹನೀಯವಾದ ರೀತಿಯಲ್ಲಿ ತ್ಯಾಜ್ಯಗಳು ಸಮುದ್ರಕ್ಕೆ ಹರಿದುಹೋಗುತ್ತಿರುವ ವೀಡಿಯೊ ದೃಶ್ಯವೊಂದು ಇತ್ತೀಚೆಗೆ ಪ್ರಸಾರಗೊಂಡಿರುವುದು, ನಾವು ಈಗಲೂ ಭೌತಿಕ ಜಗತ್ತಿನಲ್ಲಿ ಯಾವ ರೀತಿಯಲ್ಲಿ ಬದುಕುತ್ತಿದ್ದೇವೆಂಬುದನ್ನು ನೆನಪಿಸಿಕೊಟ್ಟಿದೆ. ವರ್ಷದ ಹಿಂದೆ ಚೀನಾವು ಪ್ಲಾಸ್ಟಿಕ್ ತ್ಯಾಜ್ಯದ ಆಮದನ್ನು ನಿಷೇಧಿಸಿದಾಗ, ಬ್ರಿಟಿಷ್ ಸರಕಾರವು ತ್ಯಾಜ್ಯ ನಿರ್ವಹಣೆ ಹಾಗೂ ದೇಶಿಯವಾಗಿ ತ್ಯಾಜ್ಯಗಳ ಪುನರ್ಬಳಕೆ ಯೋಜನೆಗಳಿಗೆ ಭಾರೀ ಹೂಡಿಕೆ ಮಾಡಲಿದೆಯೆಂದು ಎಲ್ಲರೂ ಭಾವಿಸಿದ್ದರು. ಆದರೆ ಅದಕ್ಕೆ ಬದಲಾಗಿ ಬ್ರಿಟನ್ ತನ್ನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಹೊಸ ಹೊಸ ಸ್ಥಳಗಳ ಹುಡುಕಾಟದಲ್ಲಿ ತೊಡಗಿತು. ಮಲೇಶ್ಯ, ಥಾಯ್ಲೆಂಡ್ ಹಾಗೂ ವಿಯೆಟ್ನಾಂ ಇವು ಬ್ರಿಟನ್‌ನ ಪ್ಲಾಸ್ಟಿಕ್ ತ್ಯಾಜವನ್ನು ಸ್ವೀಕರಿಸುವ ‘ಅದೃಷ್ಟವಂತ’ ದೇಶಗಳ ಸಾಲಿನಲ್ಲಿ ಸೇರಿದವು. ಆದರೆ ಇವ್ಯಾವ ದೇಶಗಳಲ್ಲೂ ಸಮರ್ಪಕವಾದ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಿರಲಿಲ್ಲ. ಹೀಗಾಗಿ, ಬ್ರಿಟನ್‌ನ ತ್ಯಾಜ್ಯವೆಲ್ಲವೂ ನಿಸ್ಸಂದೇಹವಾಗಿ ಆ ದೇಶಗಳ ಸಮುದ್ರಗಳಿಗೆ ಪ್ರವಾಹದಂತೆ ಹರಿದುಬರುತ್ತಿವೆ. ತ್ಯಾಜ್ಯಗಳನ್ನು ಇನ್ನೊಂದು ದೇಶದಲ್ಲಿ ವಿಲೇವಾರಿ ಮಾಡುವ ಈ ಪದ್ಧತಿಗೆ, ‘ತ್ಯಾಜ್ಯ ವಸಾಹತೀಕರಣ’ ಎಂಬ ಪದವೊಂದು ಹುಟ್ಟಿಕೊಂಡಿದೆ.
ಪ್ಲಾಸ್ಟಿಕ್ ತ್ಯಾಜ್ಯಗಳ ರಫ್ತು ಅತ್ಯಂತ ಕೆಟ್ಟ ಪಿಡುಗಾಗಿದೆ. ಆದರೆ ನಮಗೆ ಕಾಣದಿರುವಂತಹ ಇದಕ್ಕಿಂತಲೂ ಕೆಟ್ಟದಾದ ಇನ್ನೊಂದು ವಿದ್ಯಮಾನ ನಡೆಯುತ್ತಿದೆ. ಅದೇನೆಂದರೆ, ಪ್ರತಿ ತಿಂಗಳೂ ಸಾವಿರಾರು ಟನ್‌ಗಳಷ್ಟು ಬಳಕೆಯಾದ ಟಯರ್‌ಗಳು, ಬ್ರಿಟನ್‌ನ ಬಂದರುಗಳನ್ನು ತೊರೆದು, ಭಾರತದ ದಾರಿ ಹಿಡಿಯುತ್ತಿವೆ. ಭಾರತದಲ್ಲಿ ಈ ಟಯರ್‌ಗಳನ್ನು ಪೈರೋಲಿಸಿಸ್ ಸ್ಥಾವರಗಳಲ್ಲಿ ಬೇಯಿಸಲಾಗುತ್ತದೆ ಹಾಗೂ ಅವುಗಳಿಂದ ಅತ್ಯಂತ ಕೊಳಕಾದ ಕೈಗಾರಿಕಾ ಇಂಧನವನ್ನು ಉತ್ಪಾದಿಸಲಾಗುತ್ತದೆ. ಈ ಸ್ಥಾವರಗಳ ಪೈಕಿ ಕೆಲವು ಮಾತ್ರ ಭಾರತೀಯ ಕಾನೂನುನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ನೂರಾರು ಬಹುಶಃ ಸಾವಿರಾರು ಘಟಕಗಳು, ವಿಷಕಾರಕ ಅನಿಲಗಳನ್ನು ಗಾಳಿಯಲ್ಲಿ ವಿಸರ್ಜಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಮಗೇನೂ ಗೊತ್ತೇ ಇಲ್ಲ ಎಂಬಂತೆ ಬೇರೆಡೆ ನೋಡುತ್ತಿದ್ದಾರೆ.
 ಬಳಕೆಯಾದ ಟಯರ್‌ಗಳನ್ನು ಆಮ್ಲಜನಕ ಮುಕ್ತ ರಿಯಾಕ್ಟರ್ ಕೊಳವೆಯಲ್ಲಿ ಇಡೀ ಹಾಗೂ ಇಲ್ಲವೇ ಚೂರುಚೂರಾಗಿ ಬೇಯಿಸುವ ಮೂಲಕ ಅವುಗಳನ್ನು ಪುನರ್ಬಳಕೆಗೆ ಯೋಗ್ಯವಾಗುವಂತೆ ಮಾಡುವ ಪ್ರಕ್ರಿಯೆಯನ್ನು ಪೈರೊಲಿಸ್ ಎಂದು ಕರೆಯಲಾಗುತ್ತದೆ.
 ಕೆಟ್ಟದಾದ ರೀತಿಯಲ್ಲಿ ಟಯರ್‌ನ ಪೈರೋಲಿಸಿಸ್ ಪ್ರಕ್ರಿಯೆಯನ್ನು ನಡೆಸಿದಲ್ಲಿ, ಅದು ಭಾರ ಲೋಹ, ಬೆಂಝೆನ್, ಡಯೊಕ್ಸಿನ್‌ಗಳು ಹಾಗೂ ಇತರ ಸಾವಯವ ರಾಸಾಯನಿಕಗಳನ್ನೊಳಗೊಂಡ ಮಿಶ್ರಣವನ್ನು ಬಿಡುಗಡೆಗೊಳಿಸುತ್ತದೆ. ಇವುಗಳಲ್ಲಿ ಕೆಲವು ಅತ್ಯಂತ ಕ್ಯಾನ್ಸರ್‌ಕಾರಕಗಳಾಗಿವೆ. ಟಯರ್ ಪೈರೋಲಿಸಿಸ್ ಘಟಕದಲ್ಲಿ ಬಿಸಿ ಕುಲುಮೆಯಿಂದ ಕಪ್ಪಗಿನ ಹೊಗೆ ಹೊರಹೊಮ್ಮುತ್ತಿರುವುದನ್ನು ಹಾಗೂ ಟಿ ಶರ್ಟ್‌ಗಳನ್ನು ಧರಿಸಿದ ಕಾರ್ಮಿಕರು ಮುಖವಾಡ ಅಥವಾ ಇತರ ಯಾವುದೇ ಸುರಕ್ಷತಾ ಸಾಮಗ್ರಿಗಳಿಲ್ಲದೆ, ಪೈಪ್‌ಗಳು ಹಾಗೂ ಕುಲುಮೆಗಳಿಂದ ಟಾರಿನ ಉಳಿಕೆಗಳನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯಗಳನ್ನು ವಿಡಿಯೋಗಳು ತೋರಿಸಿವೆ.
 ಭಾರೀ ಪ್ರಮಾಣದಲ್ಲಿ ರೋಗ ಹಾಗೂ ಅಕಾಲ ಮರಣವನ್ನುಂಟು ಮಾಡುವಂತಹ ಅತ್ಯಂತ ಭೀಕರವಾದ ಮಾಲಿನ್ಯವೊಂದರಿಂದ ಭಾರತವು ಬಾಧಿತವಾಗಿದೆ. ಟಯರ್ ಪೈರೋಲಿಸಿಸ್ ಸ್ಥಾವರಗಳಿಂದ ಪರಿಸರಕ್ಕೆ ಆಗಿರುವ ಮಾಲಿನ್ಯದ ಬಗ್ಗೆ ಯಾವುದೇ ದತ್ತಾಂಶಗಳಿಲ್ಲ. ಅಷ್ಟೇ ಅಲ್ಲ, ಭಾರತದ ಸ್ಥಾವರಗಳಲ್ಲಿ ಉರಿಸಲಾಗುತ್ತಿರುವ ಬ್ರಿಟಿಷ್ ಟಯರ್‌ಗಳನ್ನು ಕಾನೂನುಬಾಹಿರವಾಗಿ ಉರಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ಸರಕಾರಗಳು ತನಿಖೆ ನಡೆಸಲು ವಿಫಲವಾಗಿವೆ. ಬ್ರಿಟನ್‌ನಿಂದ ಈ ತ್ಯಾಜ್ಯ ಟಯರ್‌ಗಳನ್ನು ರಫ್ತು ಮಾಡುತ್ತಿರುವ ಕಂಪೆನಿಗಳ ಪರವಾಗಿ ಬ್ರಿಟಿಷ್ ಸರಕಾರವು ತನ್ನದೇ ಕಾನೂನುಗಳನ್ನು ಮುರಿಯಲು ಸಿದ್ಧವಾಗಿರುವಂತೆ ಭಾಸವಾಗುತ್ತಿದೆ.
  ಪ್ಲಾಸ್ಟಿಕ್ ತ್ಯಾಜ್ಯದ ಹಾಗಲ್ಲದೆ, ಬಳಕೆಯಾದ ಟಯರ್‌ಗಳಿಗೆ ಬ್ರಿಟನ್‌ನಲ್ಲೇ ಸಿದ್ಧ ಮಾರುಕಟ್ಟೆಯಿದೆ. ಅಲ್ಲಿ ಅವುಗಳನ್ನು ಬಿಗಿಯಾದ ಬ್ಲಾಕ್‌ಗಳಾಗಿ ಕುಗ್ಗಿಸಿ, ರಸ್ತೆಗಳಿಗೆ ಅಡಿಪಾಯಗಳನ್ನು, ಕಾಲುವೆ ಒಡ್ಡುಗಳನ್ನು ಹಾಗೂ ಒಳಚರಂಡಿಯನ್ನು ನಿರ್ಮಿಸಲು ಬಳಸಲಾಗುತ್ತದೆ. ನಾವು ತ್ಯಜಿಸುತ್ತಿರುವ ಟಯರ್‌ಗಳಿಂದ ಪರಿಸರಕ್ಕೆ ಆಗುತ್ತಿರುವ ಹಾನಿಗೆ ಹೋಲಿಸಿದರೆ ಇದು ಎಷ್ಟೋ ವಾಸಿ. ಇದೀಗ ಬಳಕೆಯಾದ ಟಯರ್‌ಗಳಿಂದ ತಯಾರಿಸುತ್ತಿರುವ ಬ್ಲಾಕ್‌ಗಳು ಈಗ ಒಂದೋ ಬಂದ್ ಆಗಿವೆ, ಇಲ್ಲವೇ ಮುಚ್ಚುಗಡೆಯ ಭೀತಿಯನ್ನು ಎದುರಿಸುತ್ತಿವೆ. ಯಾಕೆಂದರೆ, ಅವರು ಈ ಗುಜರಿ ಟಯರುಗಳನ್ನು ಖರೀದಿಸುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಅವರಿಗಿಂತ, ಭಾರತದ ಪೈರೋಲಿಸಿಸ್ ಸ್ಥಾವರಗಳು ಅಧಿಕ ಹಣವನ್ನು ಪಾವತಿಸುತ್ತಿವೆ.
 ಬ್ರಿಟನ್‌ನ ಪ್ರಮುಖ ಟಯರ್ ಬ್ಲಾಕ್ ದಲ್ಲಾಳಿಯಾಗಿರುವ ಡೇವಿಡ್ ಎಲ್ ರೀಡ್ ಅವರ ದಾಸ್ತಾನಿನಲ್ಲಿದ್ದ ಕಂಪ್ರೆಸ್ಡ್ ಬ್ಲಾಕ್‌ಗಳ ಸರಬರಾಜು ಖಾಲಿಯಾಗತೊಡಗಿದ ಸಮಯದಲ್ಲೇ ಅವರಿಗೆ ಸ್ಥಳೀಯಾಡಳಿತದಿಂದ ಪ್ರಮುಖವಾದ ಆರ್ಡರ್ ದೊರೆತಿತ್ತು. ಆದರೆ ಅವರಲ್ಲಿ ಬ್ಲಾಕ್‌ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇರಲಿಲ್ಲವಾದ್ದರಿಂದ ಆ ಗುತ್ತಿಗೆ ತಪ್ಪಿಹೋಯಿತು. ಹೀಗಾಗಿ ಸ್ಥಳೀಯಾಡಳಿತವು ಬ್ಲಾಕ್‌ಗಳ ಬದಲಿಗೆ ಕಲ್ಲನ್ನು ಬಳಸಬೇಕಾಯಿತು. ಇದರಿಂದಾಗಿ ಅದಕ್ಕೆ 2 ಲಕ್ಷ ಡಾಲರ್ ಅಧಿಕ ವೆಚ್ಚವುಂಟಾಯಿತು. ಡೇವಿಡ್ ಎಲ್. ರೀಡ್ ಅವರು ಇತರ ಉದ್ಯಮಗಳಲ್ಲಿಯೂ ತೊಡಗಿಕೊಂಡಿದ್ದರಿಂದ, ತನಗಾದ ಹಾನಿಯನ್ನು ಎದುರಿಸುವಲ್ಲಿ ಅವರು ಸಫಲರಾದರು. ಆದರೆ ಅವರ ಕಂಪೆನಿಯು, ಇತರ ಹಲವು ಟಯರ್ ಕಂಪ್ರೆಸ್ಡ್ ಬ್ಲಾಕ್ ತಯಾರಿಕಾ ಕಂಪೆನಿಗಳಂತೆ ಮುಚ್ಚುಗಡೆಯಾಗಬೇಕಾಯಿತು. ತನ್ನ ಕೆಲವು ಮಾಜಿ ಸ್ಪರ್ಧಿಗಳ ಜೊತೆ ಅವರು ಕೂಡಾ ಬಳಕೆಯಾದ ಟಯರುಗಳ ವಿಷಯದಲ್ಲಿ ಸರಕಾರ ಯಾವ ರೀತಿಯ ನಾಟಕವಾಡುತ್ತಿದೆಯೆಂಬುದನ್ನು ತಿಳಿಯಲು ಹತಾಶ ಪ್ರಯತ್ನ ನಡೆಸಿದ್ದರಾದರೂ ಅಲ್ಪಸ್ವಲ್ಪ ಯಶಸ್ಸನ್ನು ಮಾತ್ರವೇ ಕಂಡಿದ್ದಾರೆ.


     ‘‘ತ್ಯಾಜ್ಯ ಟಯರುಗಳ ರಫ್ತುದಾರರು, ತಾವು ತ್ಯಾಜ್ಯವನ್ನು ಯಾವ ದೇಶಗಳಿಗೆ ಕಳುಹಿಸುತ್ತೇವೆಯೋ ಆ ರಾಷ್ಟ್ರಗಳು, ಯುರೋಪ್ ಒಕ್ಕೂಟದೊಳಗಿನ ಮಾನದಂಡಗಳಿಗೆ ಸರಿಸಮಾನವಾದ ಮಾನವ ಆರೋಗ್ಯ ಹಾಗೂ ಪರಿಸರಾತ್ಮಕ ರಕ್ಷಣೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ’’ ಎಂಬುದನ್ನು ಪ್ರದರ್ಶಿಸಲು ಸಮರ್ಥವಾಗಿರಬೇಕು ಎಂಬುದಾಗಿ ಬ್ರಿಟಿಷ್ ಸರಕಾರದ ಮಾರ್ಗದರ್ಶಿ ಸೂತ್ರಗಳು ಕಟ್ಟುನಿಟ್ಟಾಗಿ ಪ್ರತಿಪಾದಿಸಿವೆ. ಈ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುವ ಹೊಣೆಹೊತ್ತಿರುವ ಬ್ರಿಟನ್ ಪರಿಸರ ಇಲಾಖೆಯ ಇಚ್ಛಾಶಕ್ತಿಯನ್ನು, ಬ್ರಿಟನ್‌ನ ಒಂದು ಬ್ಲಾಕ್ ತಯಾರಕ ಕಂಪೆನಿಯು ಪರೀಕ್ಷಿಸ ಹೊರಟಿತು. ಬ್ರಿಟನ್‌ನ ತ್ಯಾಜ್ಯ ಟಯರುಗಳನ್ನು ಬ್ರಿಟನ್ ಹಾಗೂ ಯುರೋಪ್ ಒಕ್ಕೂಟದ ಮಾಲಿನ್ಯ ನಿಯಂತ್ರಣ ಕುರಿತ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸದ ಆಫ್ರಿಕದಲ್ಲಿರುವ ಪ್ರೊಲಿಸಿಸ್ ಘಟಕಗಳಿಗೆ ತಾನು ಕಳುಹಿಸಬಹುದೇ ಎಂಬುದಾಗಿ ಮನವಿ ಸಲ್ಲಿಸಿತ್ತು. ಆಗ ಬ್ರಿಟನ್‌ನ ಪರಿಸರ ಇಲಾಖೆಯು ಆ ಟಯರ್ ಬ್ಲಾಕ್ ಕಂಪೆನಿಗೆ, ಮರುಪತ್ರವೊಂದನ್ನು ಬರೆದು, ‘‘ಈ ವಹಿವಾಟಿಗೆ ಸಂಬಂಧಿಸಿದ ಕಾರ್ಯ ನಿರ್ವಹಣಾ ವಿಧಾನಗಳು ಹಾಗೂ ದಾಖಲೆಗಳನ್ನು ಸರಿಯಾಗಿ ಪೂರ್ಣಗೊಳಿಸಿದ್ದಲ್ಲಿ ನೀವು ಸೂಚಿಸಿರುವ ಉದ್ಯಮ ಯೋಜನೆಯು ನಮಗೆ ಸ್ವೀಕಾರಾರ್ಹವಾಗಿದೆ’’ ಎಂದು ತಿಳಿಸಿತ್ತು. ಮರುಬಳಕೆಯ ಟಯರ್‌ಗಳಿಂದ ಪರಿಸರಕ್ಕಾಗುವ ಅಪಾಯದ ಕುರಿತು ಬ್ರಿಟಿಷ್ ಸರಕಾರದ ಕಾಳಜಿಯು, ಬ್ರಿಟನ್‌ನ ಕಂಪೆನಿಯು ಮರುಬಳಕೆಯ ಟಯರ್‌ಗಳನ್ನು ಯಾವ ಕಂಪೆನಿಗಳಿಗೆ ರಫ್ತು ಮಾಡುತ್ತಿದೆ ಹಾಗೂ ಈ ಟಯರುಗಳನ್ನು ಆಮದು ಮಾಡಿಕೊಳ್ಳುವ ಭಾರತೀಯ ಕಂಪೆನಿಗಳು ಸಕ್ರಮವಾದವುಗಳೇ ಎಂಬ ಬಗ್ಗೆ ಭಾರತ ಸರಕಾರವನ್ನು ಕೇಳಿಕೊಳ್ಳುವುದಕ್ಕಷ್ಟ ಸೀಮಿತವಾಗಿದೆ. ಈ ಟಯರ್‌ಗಳನ್ನು ಸ್ವೀಕರಿಸುವ ಕಂಪೆನಿಗಳ ಕಾರ್ಯನಿರ್ವಹಣೆಯ ಕುರಿತಾಗಲಿ ಅಥವಾ ಭಾರತ ಸರಕಾರವು ಅದನ್ನು ಸಮರ್ಪಕವಾಗಿ ನಿಯಂತ್ರಿಸುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಅದು ಯಾವುದೇ ರೀತಿಯ ಪ್ರಯತ್ನಗಳನ್ನು ಮಾಡಲಿಲ್ಲ. ಭಾರತಕ್ಕೆ ಬ್ರಿಟನಿಂದ ರಫ್ತಾಗುವ ಟಯರ್‌ಗಳ ಕುರಿತಾದ ಯಾವುದೇ ಅಂಕಿಅಂಶಗಳು ಅದರ ಬಳಿಯಿಲ್ಲ. ಈ ಹಳೆಯ ಟಯರ್‌ಗಳಿಗೆ ‘ಹಸಿರು ತ್ಯಾಜ್ಯ’ಗಳೆಂದು ವರ್ಗೀಕರಿಸಲಾಗಿರುವುದರಿಂದ ಅವು ಬ್ರಿಟನ್‌ನ ಕಡಲತಡಿಯಿಂದ ನಿರ್ಗಮಿಸಿದ ಕೂಡಲೇ, ಬ್ರಿಟನ್ ಸರಕಾರ ತನ್ನ ಕೈ ತೊಳೆದುಕೊಂಡು ಬಿಡುತ್ತದೆ.
 ಬಳಕೆಯಾದ ಟಯರ್‌ಗಳ ವ್ಯಾಪಾರಿಯಾಗಲು, ಬ್ರಿಟನ್‌ನಲ್ಲಿ ನೀವು ಮಾಡಬೇಕಾದುದಿಷ್ಟೇ. ಮೊದಲಿಗೆ ‘ಯು2 ಪರಿಸರಾತ್ಮಕ ವಿನಾಯಿತಿ’ ಫಾರಂ ಅನ್ನು ಭರ್ತಿ ಮಾಡಿ. ಆನಂತರ ನೀವು ಬಳಕೆಯಾದ ಟಯರ್‌ಗಳನ್ನು ನಿರ್ಮಾಣ ಕಾಮಗಾರಿಗೆ ಬೇಕಾದ ಬ್ಲಾಕ್‌ಗಳ ತಯಾರಿಕೆಗೆ ಬಳಸುವುದಾಗಿ ಹೇಳಿಕೊಂಡು ಅವುಗಳನ್ನು ಗ್ಯಾರೇಜ್‌ನಿಂದ ಖರೀದಿಸಬಹುದಾಗಿದೆ. ಆದರೆ ಈ ಪರವಾನಿಗೆಯನ್ನು ಬಳಸಿಕೊಂಡು ಅದನ್ನು ಶಿಪ್ಪಿಂಗ್ ಕಂಟೈನರ್‌ನಲ್ಲಿ ಹೇರಿ, ಭಾರತಕ್ಕೆ ಕಳುಹಿಸುವುದನ್ನು ತಡೆಯುವಂತಹ ಯಾವುದೇ ನಿಯಮ (ಕನಿಷ್ಠ ಪಕ್ಷ ಅದರ ಅನುಷ್ಠಾನದಲ್ಲಾದರೂ)ಬ್ರಿಟಿಷ್ ಕಾನೂನಿನಲ್ಲಿ ಇಲ್ಲವೆಂಬಂತೆ ಭಾಸವಾಗುತ್ತದೆ.
 ಈ ವಿಷಯಗಳಿಗೆ ಸಂಬಂಧಿಸಿ ನಾನು ಬ್ರಿಟಿಷ್ ಸರಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ. ಆದರೆ ಅದು ಸಕಾಲಿಕವಾಗಿ ನನಗೆ ಉತ್ತರವನ್ನು ಕಳುಹಿಸಲು ವಿಫಲವಾಗಿತ್ತು. ಇದೇ ವೇಳೆ ರೀಡ್, ಈ ವಿಷಯವಾಗಿ ಪರಿಸರ ಸಚಿವಾಲಯದ ಕಾರ್ಯದರ್ಶಿ ಮೈಕೆಲ್ ಗೋವ್, ಲೇಬರ್ ಸಂಸದ ಸು ಹೇಮ್ಯನ್, ಲಿಯಾಮ್ ಫಾಕ್ಸ್ ಹಾಗೂ ಇತರ ಸಂಸದರು ಹಾಗೂ ಅಧಿಕಾರಿಗಳನ್ನು ಅವರು ಸಂಪರ್ಕಿಸಿದ್ದರು. ಆದರೆ ಇವರ್ಯಾರ ಬಳಿಯೂ ಉತ್ತರವಿರಲಿಲ್ಲ. ಈ ಬಗ್ಗೆ ಯಾರಿಗಾದರೂ ಕಾಳಜಿಯಿದೆಯೇ?. ಭಾರತದ ಜನತೆಯ ಪ್ರಾಣಕ್ಕೆ , ಬ್ರಿಟನ್ ದೇಶದ ರಾಜಕಾರಣಿಗಳು ಯಾವುದೇ ಬೆಲೆ ನೀಡುತ್ತಿಲ್ಲವೇ?.
 ಬಳಕೆಯಾದ ಟಯರ್‌ಗಳನ್ನು ಭಾರತಕ್ಕೆ ರಫ್ತು ಮಾಡಿದ ಮೊದಲಿಗರಲ್ಲಿ ರಿಚರ್ಡ್ ಕುಕ್ ಕೂಡಾ ಒಬ್ಬರಾಗಿದ್ದಾರೆ. ಈಸ್ಟ್ ರೆನ್‌ಫ್ರೆವ್ಸ್‌ಹೈರ್ ಕ್ಷೇತ್ರದಲ್ಲಿ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಉತ್ತರ ಐಯರ್‌ಲ್ಯಾಂಡ್ 4,35,000 ಪೌಂಡ್ ಚುನಾವಣಾ ದೇಣಿಗೆ ಸಂಗ್ರಹಿಸಿದ್ದರು. (ಅದರ ಉಗಮ ಇನ್ನೂ ನಿಗೂಢವಾಗಿಯೇ ಮುಂದುವರಿದಿದೆ). ಅವರು ಬಳಕೆಯಾದ ಟಯರ್‌ಗಳನ್ನು ಭಾರತಕ್ಕೆ ಅಕ್ರಮವಾಗಿ ಸರಬರಾಜು ಮಾಡಿದ್ದಾರೆಂಬುದನ್ನು ಭಾರತ ಸರಕಾರ ಹಾಗೂ ಬ್ರಿಟನ್ ಅಧಿಕಾರಿಗಳು ಗುರುತಿಸಿದ್ದಾರೆಂಬುದನ್ನು ಓಪನ್ ಡೆಮಾಕ್ರಸಿ ಹಾಗೂ ಬಿಬಿಸಿ ಆರೋಪಿಸಿತ್ತು. ಆ ಸಮಯದಲ್ಲಿ ಭಾರತೀಯ ಕಾನೂನು, ಬಳಕೆಯಾದ ಟಯರುಗಳ ಆಮದನ್ನು ನಿಷೇಧಿಸಿತ್ತು. ಆದರೆ ತನ್ನ ಮೇಲಿನ ಆರೋಪಗಳನ್ನು ಕುಕ್ ನಿರಾಕರಿಸಿದ್ದರು. ನಾನು ಅವರೊಂದಿಗೆ ಮಾತನಾಡಲು ಯತ್ನಿಸಿದಾಗ, ಅವರ ಸಾಲಿಸಿಟರ್ ನನಗೆ ಫೋನಾಯಿಸಿ, ‘‘ಮಾನಹಾನಿಗಾಗಿ ಬಿಬಿಸಿ ವಿರುದ್ಧ ದಾವೆ ಹೂಡುವುದಾಗಿ ತಿಳಿಸಿದ್ದೇವೆ’’ ಎಂದು ಹೇಳಿದ್ದರೇ ಹೊರತು, ಬೇರೇನೂ ವಿವರಣೆಯನ್ನು ನೀಡಲು ನಿರಾಕರಿಸಿದ್ದರು.
ಈ ಎಲ್ಲಾ ವಿದ್ಯಮಾನಗಳಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಪ್ರತಿಯೊದು ಮಗುವಿಗೂ ಮೂಲಭೂತ ಪರಿಸರ ಸಿದ್ಧ್ದಾಂತವೊಂದನ್ನು ಕಲಿಸಲಾಗುತ್ತಿದೆ. ಅದೇನೆಂದರೆ, ನಿಮ್ಮ ಕೊಳಕನ್ನು ನೀವೇ ವಿಲೇವಾರಿ ಮಾಡಬೇಕು. ನಮ್ಮ ಸರಕಾರವು ಅದನ್ನು ಇತರ ದೇಶಗಳ ಜನರ ಮೇಲೆ ಸುರಿಯಲು ಸಂತಸ ಪಡುತ್ತಿರುವ ಹಾಗೆ ಕಾಣುತ್ತಿದೆ.

ಕೃಪೆ: ದಿ ಗಾರ್ಡಿಯನ್

Writer - ಜಾರ್ಜ್ ಮೊನ್‌ಬಿಯೊಟ್

contributor

Editor - ಜಾರ್ಜ್ ಮೊನ್‌ಬಿಯೊಟ್

contributor

Similar News

ಜಗದಗಲ
ಜಗ ದಗಲ