ಮಧ್ಯ ಪ್ರದೇಶ: ಗೋ ಹತ್ಯೆ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ವಯ ಪ್ರಕರಣ

Update: 2019-02-05 09:36 GMT

ಭೋಪಾಲ್, ಫೆ. 5: ಮಧ್ಯ ಪ್ರದೇಶದ ಕೋಮು ಸೂಕ್ಷ್ಮ ಖಂಡ್ವಾ ಪಟ್ಟಣದಲ್ಲಿ ಗೋಹತ್ಯೆ ಆರೋಪದ ಮೇಲೆ ಬಂಧಿಸಲ್ಪಟ್ಟ ಮೂವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ವಯ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಕಾಯಿದೆಯನ್ವಯ ಇದೇ ಮೊದಲ ಬಾರಿ  ಪ್ರಕರಣ ದಾಖಲಾಗಿದೆ.

ಕಳೆದ ವಾರ ಮೋಘತ್ ಪೊಲೀಸರು ರಾಜು ಆಲಿಯಾಸ್ ನದೀಂ ಮತ್ತು ಶಕೀಲ್ ಎಂಬವರನ್ನು ಖರ್ಕಳ್ಳಿ ಗ್ರಾಮದಲ್ಲಿ ಬಂಧಿಸಿದ್ದರೆ ಆಗ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿ ಆಝಂ ಎಂಬಾತನನ್ನು ಸೋಮವಾರ ಬಂಧಿಸಲಾಗಿದೆ.

ಆರೋಪಿಗಳ ಪೈಕಿ ರಾಜು ಎಂಬಾತನ ವಿರುದ್ಧ  ಈ ಹಿಂದೆಯೂ ಗೋಹತ್ಯೆ ಪ್ರಕರಣ ದಾಖಲಾಗಿತ್ತು. ಪೊಲೀಸರು  ದನದ ಮೃತದೇಹವನ್ನು ಆರೋಪಿಗಳನ್ನು ಬಂಧಿಸಿದ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಕಾಯಿದೆಯ ಸೆಕ್ಷನ್ 4, 6, 9 ಅನ್ವಯವೂ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಶಿಫಾರಸಿನ ಮೇರೆಗೆ ಜಿಲ್ಲಾಧಿಕಾರಿ ರಾಷ್ಟ್ರೀಯ ಭದ್ರತಾ ಕಾಯಿದೆಯನ್ವಯ ಪ್ರಕರಣ ದಾಖಲಿಸಲು ಅನುಮತಿಸಿದ್ದು ಇದರಿಂದಾಗಿ ಆರೋಪಿಗಳು ಹೆಚ್ಚಿನ ಅವಧಿ ಜೈಲಿನಲ್ಲಿರಬೇಕಾಗುತ್ತದೆ.

ಈ ಮೂವರು ಸಾಮಾನ್ಯವಾಗಿ ಹಾಲಿನ ಡಬ್ಬಿಗಳಲ್ಲಿ ಮಾಂಸವನ್ನು ಸಾಗಾಟ ನಡೆಸುತ್ತಿದ್ದರೆಂದು ಮಾಹಿತಿದಾರರು ತಮಗೆ ತಿಳಿಸಿದ್ದರೆಂದು ಪೊಲೀಸರು ಹೇಳಿದ್ದಾರೆ. ಗೋಹತ್ಯೆಯಿಂದಾಗಿ ಮತೀಯ ಉದ್ವಿಗ್ನತೆ ಉಂಟಾಗುವ ಭಯವಿತ್ತಾದರೂ ಮೂರನೇ ಆರೋಪಿಯನ್ನೂ ಬಂಧಿಸಲಾಗಿರುವುದರಿಂದ  ಪರಿಸ್ಥಿತಿ ತಿಳಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News