ವೇದ ವಿದ್ಯೆ ಬೋಧಿಸಲು ಶಾಲಾ ಬೋರ್ಡ್ ಸಮಂಜಸವೇ?

Update: 2019-02-05 18:35 GMT

ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿರುವ ಮಹರ್ಷಿ ಸಂದೀಪನಿ ರಾಷ್ರೀಯ ವೇದ ವಿದ್ಯ ಪ್ರತಿಷ್ಠಾನದ ಆಡಳಿತ ಮಂಡಳಿಯ ಸಭೆಯಲ್ಲಿ ಇತ್ತೀಚೆಗೆ, ಇಲಾಖೆಯ ಸಚಿವರಾದ ಪ್ರಕಾಶ್ ಜಾವಡೇಕರ್‌ರವರು, ಭಾರತೀಯ ಶಿಕ್ಷಾ ಬೋರ್ಡ್‌ಅನ್ನು ಸ್ಥಾಪಿಸುವ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ. ಎಸೆಸೆಲ್ಸಿ ಬೋರ್ಡ್ ನಂತೆಯೇ ಬಿಎಸ್‌ಬಿ ಬೋರ್ಡ್ ಕೆಲಸ ಮಾಡಲಿದ್ದು, ಕೂಡಲೇ ಬೋರ್ಡ್‌ನ ಉಪನಿಯಮಗಳನ್ನು ಸಿದ್ಧ ಪಡಿಸಲು ನಿರ್ದೇಶಿಸಲಾಗಿದೆ. ವೇದ ಶಿಕ್ಷಣ, ಆಧುನಿಕ ಶಿಕ್ಷಣ ಮಿಶ್ರಿತ ಪಠ್ಯ ತಯಾರಾಗಲಿದ್ದು ವಿದ್ಯಾಭಾರತಿ (ಸಂಘ ಪರಿವಾರ ನಡೆಸುವ ಶಾಲೆಗಳು) ಹಾಗೂ ಇತರ ಶಾಲೆಗಳು ಬಿಎಸ್‌ಬಿ ಬೋರ್ಡ್‌ಗೆ ಸಂಯೋಜನೆಗೊಳ್ಳಲಿವೆ.
ದೇಶದಲ್ಲಿ ವೇದವನ್ನು ಶಿಕ್ಷಣವಾಗಿ ಬೋಧಿಸಲು ಪಠ್ಯ ಮತ್ತು ಬೋರ್ಡ್‌ನ್ನು ರಚಿಸುತ್ತಿರುವುದು ಒಂದು ಗಣನೀಯವಾದ ಬೆಳವಣಿಗೆ. ಈ ವಿಷಯದ ಕುರಿತು ವಿಶ್ಲೇಷಿಸುವಾಗ ಭಾವೋದ್ವೇಗಕ್ಕೆ ಒಳಗಾಗುವುದು ಸಲ್ಲದು. ವೇದ ಉಪನಿಷತ್ತು ಹಾಗೂ ಮಹಾಕಾವ್ಯಗಳು ನಿಜಕ್ಕೂ ಅಂದಿನ ಕಾಲಕ್ಕೆ ನೀತಿ, ನೈತಿಕತೆ, ಸಮಾಜ ಮುನ್ನಡೆಯಲು ಬೇಕಿದ್ದ ಮೌಲ್ಯಗಳನ್ನು ಅದ್ಭುತವಾಗಿ ಕಾವ್ಯ ಸೌಂದರ್ಯದ ರಸದೊಂದಿಗೆ ಚಿತ್ರಿಸಿವೆ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಈ ಉಪ ಖಂಡದ ಸಂಸ್ಕೃತಿ ವಿಕಸನಗೊಳ್ಳಲು ಈ ಮಹಾಕಾವ್ಯಗಳು ಪ್ರಮುಖ ಪಾತ್ರವಹಿಸಿವೆ.
ವಿಶಾಲ ವ್ಯಾಪ್ತಿಯಲ್ಲಿ ನೋಡಿದರೆ ಎಲ್ಲಾ ಗ್ರಂಥಗಳ ಬೋಧನೆಗಳು ಎರಡು ವಿಭಿನ್ನ ತತ್ವಶಾಸ್ತ್ರದ ಅಡಿಯಲ್ಲಿ ಬರುತ್ತವೆ. ಧಾರ್ಮಿಕ ಗ್ರಂಥಗಳು, ಜಗತ್ತಿನ ಎಲ್ಲಾ ಘಟನೆಗಳಿಗೂ ಕಾರಣ ಜಗತ್ತಿನಾಚೆ ಇರುವಂಥದ್ದು; ಅದು ಮನುಷ್ಯರ ಚಿಂತನೆಗೆ ನಿಲುಕದ್ದು ಎಂಬ ತತ್ವಶಾಸ್ತ್ರದ ಮೇಲೆ ನಿಂತಿವೆ. ಬದಲಿಗೆ ಆಧುನಿಕ ಶಿಕ್ಷಣ ‘‘ಎಲ್ಲದಕ್ಕೂ ಕಾರಣ ವಸ್ತು ಜಗತ್ತಿನಲ್ಲೇ ಅಡಕವಾಗಿದೆ; ವಸ್ತು ಪ್ರಪಂಚ ಕ್ರಮಬದ್ಧವಾಗಿ ಚಲಿಸುತ್ತಿದ್ದು, ಅದನ್ನು ಅಧ್ಯಯನ ಮಾಡಲು ಕ್ರಮಬದ್ಧ ವಿಧಾನವನ್ನು ಅಳವಡಿಸತಕ್ಕದ್ದು’’ ಎಂದೆನ್ನುತ್ತದೆ. ಅದು ಕ್ರಮಬದ್ಧವಾಗಿ ಬದಲಾವಣೆಯಲ್ಲಿ ಇರುವುದರಿಂದಲೇ ಐನ್‌ಸ್ಟೈನ್‌ರವರು ‘God doesn’t play dice with the world’ ಎಂದ್ದದು. ಹೀಗೆ ಧಾರ್ಮಿಕ ಬೋಧನೆಗಳ ಮೂಲ ಮತ್ತು ವಿಜ್ಞಾನದ ಅಡಿಪಾಯದ ಮೇಲಾಧಾರಿತ ಆಧುನಿಕ ಶಿಕ್ಷಣದ ಮೂಲ ಎರಡು ತದ್ವಿರುದ್ಧ ತತ್ವಶಾಸ್ತ್ರ ದಿಂದ ಹೂರಹೂಮ್ಮಿದೆ ಎಂಬುದು ಗಮನಾರ್ಹ. ಬಹುತೇಕ ವಿಷಯಗಳಲ್ಲಿ ಎರಡರ ತೀರ್ಮಾನಗಳು ವಿರುದ್ಧವಾಗಿರುವಾಗ ವಿದ್ಯಾರ್ಥಿಗಳಿಗೆ ಇವೆರಡರ ಕುರಿತು ಬೋಧಿಸುವುದು ಸಮಂಜಸವೇ?
ಈಗ ಧರ್ಮನಿರಪೇಕ್ಷತೆ ಎಂಬ ಪದ ವಿವಾದವನ್ನು ಉಂಟುಮಾಡುತ್ತಿದೆ. ಎಲ್ಲಾ ಪಕ್ಷಗಳು ತಮ್ಮ ಮತಬ್ಯಾಂಕ್ ಅನುಸಾರ ಧರ್ಮನಿರಪೇಕ್ಷತೆಯನ್ನು ಹೊಗಳುವ ಅಥವಾ ತೆಗಳುವಂತಹದ್ದು ಇದ್ದೇ ಇದೆ. ಈ ವಿರೂಪ ರಾಜಕೀಯವನ್ನು ದೂರವಿಟ್ಟು ಅಧ್ಯಯನ ಮಾಡಿದಲ್ಲಿ, ನಮ್ಮ ನವೋದಯ ಚಳವಳಿಯ ಹರಿಕಾರರು, ಸ್ವಾತಂತ್ಯ ಹೋರಾಟಗಾರರು ಈ ಪರಿಕಲ್ಪನೆಯನ್ನು ಮುಂದಿನ ಭಾರತದ ಜೀವನಾಳ ಎಂದದ್ದೇಕೆ ಎಂಬುದು ಗೋಚರ ವಾಗುತ್ತದೆ. ಎರಡು ಸಾವಿರ ವರ್ಷಗಳ ಕತ್ತಲಿನ ಯುಗದ ಮೂಲ ಲಕ್ಷಣ: ಧರ್ಮ ಶಾಸ್ತ್ರವೇ ದಂಡ ಸಂಹಿತೆ; ಧರ್ಮವೇ ರಾಜ, ರಾಜ್ಯ ಅಥವಾ ರಾಜಕೀಯವನ್ನು ನಿರ್ದೇಶಿಸುವಂತಹದ್ದು. ಆ ಯುಗದ ಕೊನೆಯ ಭಾಗದಲ್ಲಿ ಕೆಲವು ಐತಿಹಾಸಿಕ ಕಾರಣಗಳಿಂದ, ಉದಯೋನ್ಮುಖ ಮಧ್ಯಮ ವರ್ಗ ಹೊಸ ಚಿಂತನೆಯೊಂದಕ್ಕೆ ಜನ್ಮ ನೀಡಿತು. ಅದುವೇ ನವೋದಯ ಯುಗದ ಪ್ರಾರಂಭ. ಜಗತ್ತಿನಾಚೆ ಕಾರಣ ಹುಡುಕುವುದನ್ನು ತ್ಯಜಿಸಿ ವಸ್ತು ಪ್ರಪಂಚದೊಳಗೆ ಕಾರ್ಯಕಾರಣಿ ಸಂಬಂಧ ಶೋಧಿಸಲು ಪ್ರಾರಂಭ ಮಾಡಿದ್ದು ಈ ಯುಗದ ಹುಟ್ಟಿಗೆ ಕಾರಣವಾಯಿತು. ಸಾವಿರಾರು ವರ್ಷಗಳಲ್ಲಿ ಬಗೆಹರಿಯದೆ ಕಗ್ಗಂಟಾಗಿ ಉಳಿದ ವಸ್ತು ಜಗತ್ತಿಗೆ, ನಿಸರ್ಗಕ್ಕೆ ಸಂಬಂಧಿಸಿದ ಹತ್ತಾರು ಪ್ರಶ್ನೆಗಳು ಈಗ ಬಗೆಹರಿದವು. ಈ ನವೋದಯ ಕಾಲಘಟ್ಟ ಹಲವಾರು ತ್ಯಾಗ ಬಲಿದಾನಗಳ ಫಲ; ಜಿಯಾರ್ಡಿನೋ ಬ್ರೂನೋ, ಗೆಲಿಲಿಯೋ ನಂತಹ ಹತ್ತಾರು ದಿಗ್ಗಜರು, ಧಾರ್ಮಿಕ ತತ್ವಸಾಸ್ತ್ರದ ಬದಲು ವೈಜ್ಞಾನಿಕ ತತ್ವಶಾಸ್ತ್ರ ಅನುಸರಿಸಿದ್ದರಿಂದ, ಸುಮಾರು ಎರಡು ಶತಮಾನಗಳ ಕಾಲ ಪ್ರಾಣ ತೆರಬೇಕಾಯಿತು. ಕೊನೆಗೂ ಗೆದ್ದದ್ದು ಆಧುನಿಕ ವಿಜ್ಞಾನ, ಇದು ಪ್ರಜಾಪ್ರಭುತ್ವಕ್ಕೆ, ಅದರೊಂದಿಗೆ ಧರ್ಮನಿರಪೇಕ್ಷತೆಗೆ ನಾಂದಿ ಹಾಡಿತು!
ಈ ಪರಿಕಲ್ಪನೆಯ ಆಧಾರದ ಮೇಲೆ ಫ್ರೆಂಚ್ ಮಹಾ ಕ್ರಾಂತಿ, ಆಮೆರಿಕನ್ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿ ಜರುಗಿದೆ. ಧರ್ಮನಿರಪೇಕ್ಷತೆಯ ಮೂಲ ಆರ್ಥ- ರಾಜ್ಯ ಯಂತ್ರದ ಗದ್ದುಗೆ ಹಿಡಿದವರು ಯಾವುದೇ ಧರ್ಮವನ್ನು ಪೋತ್ಸಾಹಿಸುವುದು ಸಲ್ಲದು ಎಂಬುದು. ಧರ್ಮ ಜನರ ವೈಯಕ್ತಿಕ ನಂಬಿಕೆಗೆ ಸೀಮಿತಗೊಂಡಿತು. ರಾಜಕೀಯ ಚಿಂತನೆಯಲ್ಲೂ ಮನುಷ್ಯ ತುಚ್ಛ, ಧರ್ಮವೇ ಶ್ರೇಷ್ಠ ಎಂಬ ನಂಬಿಕೆಯನ್ನು ತ್ಯಜಿಸಿ ಮಾನವ ಕೇಂದ್ರಿತ ಚಿಂತನೆ, ಮನುಷ್ಯನ ಅಭ್ಯುದಯವೇ ಎಲ್ಲಕ್ಕೂ ಮಿಗಿಲು ಎಂಬ ಮಾನವತಾವಾದಿ ದೃಷ್ಟಿಕೋನ ಉಗಮವಾಯಿತು. ಶಿಕ್ಷಣ ಕ್ಷೇತ್ರದಲ್ಲೂ ಆಮೂಲಾಗ್ರ ಬದಲಾವಣೆಯಾಯಿತು; ವೈಜ್ಞಾನಿಕ ಅಧ್ಯಯನದಿಂದ ರುಜುವಾತಾದ ಸತ್ಯವಷ್ಟೇ ಬೋಧಿಸಲು ಯೋಗ್ಯ ಎಂದು ಪರಿಗಣಿಸಿದರು. ಇದರಿಂದ ಮಾನವನ ಚಿಂತನೆ, ಪರಿಕಲ್ಪನೆ, ಜೀವನ ಅಮೂಲಾಗ್ರವಾಗಿ ಬದಲಾಗಿದೆ.
ಭಾರತದಲ್ಲೂ ನವೋದಯ ಚಿಂತಕರು, ನೇತಾಜಿ, ಭಗತಸಿಂಗ್‌ರಂತಹ ಸ್ವಾತಂತ್ಯ ಹೋರಾಟಗಾರರು ಧರ್ಮನಿರಪೇಕ್ಷ ಶಿಕ್ಷಣದ ಅವಶ್ಯಕತೆಯನ್ನು ಪ್ರತಿಪಾದಿಸಿ ದ್ದಾರೆ. ಈಶ್ವರ ಚಂದ್ರ ವಿದ್ಯಾಸಾಗರರು ಸ್ವತಃ ಸಂಸ್ಕೃತ ಪಂಡಿತರಾದರೂ, ‘‘ಸಾಂಖ್ಯಾ, ವೇದಾಂತ ಮುಂತಾದವು ದೋಷಪೂರಿತ ತತ್ವಜ್ಞಾನ ಅಧರಿಸಿವೆ ಎಂಬುದು ನಿರ್ವಿವಾದ.. ನಮ್ಮ ಮಕ್ಕಳಿಗೆ ಆಧುನಿಕ ವಿಜ್ಞಾನ, ಗಣಿತ ಹಾಗೂ ತರ್ಕಶಾಸ್ತ್ರ ಬೋಧಿಸಬೇಕಿದೆ’’ ಎಂದು 19ನೇ ಶತಮಾನದಲ್ಲಿಯೇ ಘೋಷಿಸಿರುವುದು ಗಮನಾರ್ಹ. ವೇದಾಂತಿಯಾಗಿದ್ದ ವಿವೇಕಾನಂದರು, ‘‘ಸಾಮಾಜಿಕ ನಿಯಮಗಳು ಆರ್ಥಿಕ ಪರಿಸ್ಥಿತಿಯ ತಳಹದಿಯ ಮೇಲೆ ರಚನೆಯಾಗಿರುತ್ತವೆ.. ಸಾಮಾಜಿಕ ವಿಷಯಗಳಲ್ಲಿ ಮೂಗುತೂರಿಸಿದ್ದು ಧರ್ಮದ ಘೋರ ಅಪರಾಧ’’ ಎಂದಿದ್ದಾರೆ. ದುರದೃಷ್ಟವೆಂದರೆ ಸ್ವಾತಂತ್ಯದ ನಂತರ, ಧರ್ಮನಿರಪೇಕ್ಷತೆಯ ಮೂಲ ಅರ್ಥವನ್ನೇ ತಿರುಚಿ, ‘ಎಲ್ಲಾ ಧರ್ಮಗಳಿಗೂ ಸಮಾನ ಪ್ರೋತ್ಸಾಹ’ ಎಂದು ವ್ಯಾಖ್ಯಾನಿಸಲಾಯಿತು. ಹಲವು ಧರ್ಮ, ಜಾತಿಗಳಿರುವ ಭಾರತದಲ್ಲಿ ಇಂತಹ ವ್ಯಾಖ್ಯಾನದಿಂದಾಗಿರುವ ಹಾನಿ ನಾವು ಇಷ್ಟು ಕಾಲ ನೋಡಿದ್ದೇವಷ್ಟೇ. ಕೇಂದ್ರ ಸರಕಾರದ ಪ್ರಸಕ್ತ ತೀರ್ಮಾನ ಕತ್ತಲು ಯುಗದ ಕಂದಾಚಾರಕ್ಕೆ ಮತ್ತೊಮ್ಮೆ ಪುಷ್ಟಿ ನೀಡಬಹುದೆಂಬ ಆತಂಕಕ್ಕೆ ಹುರಿಳಿಲ್ಲದ್ದಿಲ್ಲ. ಜೊತೆಗೆ ನಮ್ಮ ಧರ್ಮ ಎಲ್ಲಕ್ಕಿಂತ ಶ್ರೇಷ್ಠ ಎಂಬ ಕುರುಡುತನ ಇನ್ನಷ್ಟು ಬಲಗೊಂಡು ಅದನ್ನು ರಕ್ಷಿಸಲು ಮತ್ತಷ್ಟು ಪಡೆಗಳು ಹುಟ್ಟಿಕೊಂಡರೆ ಆಶ್ಚರ್ಯವಿಲ್ಲ.
ವೇದಗಳಷ್ಟೇ ನಮ್ಮ ನೆಲದ ಪುರಾತನ ಗ್ರಂಥಗಳೇ? ವೇದಗಳನ್ನು ತಿರಸ್ಕರಿಸಿ ಇದೇ ಭೂಭಾಗದಲ್ಲಿ ಜನ್ಮ ತಳೆದ ಬೌದ್ಧ, ಜೈನ ಧರ್ಮಗಳು, ನಿರೀಶ್ವರವಾದ, ನಾಸ್ತಿಕವಾದವನ್ನು ಪ್ರತಿಪಾದಿಸಿದ ಲೋಕಾಯತ, ಚಾರ್ವಾಕ ತತ್ವಶಾಸ್ತ್ರಗಳು ಈ ನೆಲದ್ದಲ್ಲವೇ? ಬರೀ ವೇದಗಳನ್ನು ಬೋಧಿಸಲು ಮುಂದಾದರೆ ಏಕಸಂಸ್ಕೃತಿಯನ್ನು ಹೇರಿದಂತಲ್ಲವೇ? ಅಥವಾ ಎಲ್ಲಾ ಧರ್ಮಗಳ ವಿಚಾರ ಬೋಧನೆ ಮಾಡಲು ಹೊರಟರೆ ಪರಿಸ್ಥಿತಿ ಏಾಗಬಹುದು ಎಂಬುದು ಸರಕಾರ ಯೋಚಿಸಬೇಕು.
ಸಂವಿಧಾನದ ಅನುಚ್ಛೇದ 27, 51ಆ ಹಾಗೂ 28 ರ ಪ್ರಕಾರ ಸರಕಾರದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಧಾರ್ಮಿಕ ನಿರ್ದೇಶನ ನೀಡುವುದನ್ನು ಹಾಗೂ ತೆರಿಗೆ ಹಣ ಬಳಸಿ ಯಾವುದೋ ಒಂದು ಧರ್ಮವನ್ನು ಉತ್ತೇಜಿಸುವುದು ಸಲ್ಲದು. ಈ ಹಿನ್ನೆಲೆಯಲ್ಲಿ ನೋಡಿದರೆ ಸರಕಾರದ ತೀರ್ಮಾನ ಸಂವಿಧಾನ ವಿರೋಧಿಯೂ ಆಗಿದೆ.

Writer - ರವಿನಂದನ್ ಬಿ.ಬಿ.

contributor

Editor - ರವಿನಂದನ್ ಬಿ.ಬಿ.

contributor

Similar News

ಜಗದಗಲ
ಜಗ ದಗಲ