ಮೂರನೇ ದಿನವೂ ರಾಜ್ಯಸಭಾ ಕಲಾಪಗಳು ಸಂಪೂರ್ಣ ವ್ಯರ್ಥ

Update: 2019-02-06 16:46 GMT

ಹೊಸದಿಲ್ಲಿ,ಫೆ.6: ಪೌರತ್ವ(ತಿದ್ದುಪಡಿ) ಮಸೂದೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗಾಗಿ ರೋಸ್ಟರ್ ಪದ್ಧತಿ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರತಿಭಟನೆಗಳಿಂದಾಗಿ ಸತತ ಮೂರನೇ ದಿನವಾದ ಬುಧವಾರವೂ ರಾಜ್ಯಸಭೆಯ ಕಲಾಪಗಳು ಸಂಪೂರ್ಣ ವ್ಯರ್ಥಗೊಂಡವು.

ಬೆಳಿಗ್ಗೆ ಸದನ ಆರಂಭಗೊಂಡ ಬೆನ್ನಿಗೇ ಪೌರತ್ವ(ತಿದ್ದುಪಡಿ) ಮಸೂದೆ ಸೇರಿದಂತೆ ವಿವಿಧ ವಿಷಯಗಳ ವಿರುದ್ಧ ಪ್ರತಿಭಟನೆ ನಡೆಸಲು ಪ್ರತಿಪಕ್ಷ ಸದಸ್ಯರು ಪ್ರಯತ್ನಿಸಿದಾಗ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಿದರು. ಸದನವು ಮರುಸಮಾವೇಶಗೊಂಡಾಗ ಆರ್‌ ಜೆಡಿ,ಎಸ್‌ಪಿ,ಬಿಎಸ್‌ ಪಿ ಮತ್ತು ಟಿಎಂಸಿ ಸದಸ್ಯರು ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ರೋಸ್ಟರ್ ಪದ್ಧತಿಯ ಜಾರಿ ಸೇರಿದಂತೆ ವಿವಿಧ ವಿಷಯಗಳನ್ನು ಪ್ರತಿಭಟಿಸಿ ಸದನದ ಅಂಗಳಕ್ಕೆ ಲಗ್ಗೆ ಹಾಕಿದರು. ಕಾಂಗ್ರೆಸ್ ಸದಸ್ಯರೂ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಆಸನಗಳಿಂದ ಎದ್ದು ನಿಂತಿದ್ದರು. ರೋಸ್ಟರ್ ಪದ್ಧತಿಯಿಂದ ಉದ್ಯೋಗ ಮೀಸಲಾತಿಯು ಸೀಮಿತಗೊಳ್ಳುತ್ತದೆ ಎನ್ನುವುದು ಈ ಸದಸ್ಯರ ವಾದವಾಗಿತ್ತು.

ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ತಮ್ಮ ಆಸನಗಳಿಗೆ ಮರಳುವಂತೆ ಪ್ರತಿಭಟನಾನಿರತರಿಗೆ ಸೂಚಿಸಿದರಾದರೂ ಪಟ್ಟುಬಿಡದ ಸದಸ್ಯರು ಸರಕಾರ ವಿರೋಧಿ ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದರು. ರೋಸ್ಟರ್ ಪದ್ಧತಿಯ ವಿರುದ್ಧ ಭಿತ್ತಿಪತ್ರಗಳನ್ನೂ ಪ್ರತಿಪಕ್ಷ ಸದಸ್ಯರು ಪ್ರದರ್ಶಿಸಿದರು.

ಶೂನ್ಯವೇಳೆಯಲ್ಲಿ ಈ ಬಗ್ಗೆ ಮಾತನಾಡಲು ಅವಕಾಶ ನೀಡುವುದಾಗಿ ಎಸ್‌ಪಿ ನಾಯಕ ರಾಮಗೋಪಾಲ ಯಾದವ್ ಅವರಿಗೆ ತಿಳಿಸಿದ ಸಿಂಗ್, ಪ್ರತಿಭಟನೆಗಳನ್ನು ಅಂತ್ಯಗೊಳಿಸುವಂತೆ ಕೋರಿದರು.

ಸರಕಾರವು ಈ ವಿಷಯದಲ್ಲಿ ಸದನದಲ್ಲಿ ನೀಡಿದ್ದ ಭರವಸೆಗಳಿಂದ ವಿಮುಖವಾಗಿದೆ ಎಂದು ಯಾದವ್ ಹೇಳಿದರು. ತನ್ಮಧ್ಯೆ ಸಂಸದೀಯ ವ್ಯವಹಾರಗಳ ಸಚಿವ ವಿಜಯ ಗೋಯೆಲ್ ಅವರು ಯಾದವರನ್ನು ಸಮಾಧಾನಿಸಲು ಪ್ರಯತ್ನಿದರಾದರೂ ಪ್ರತಿಭಟನೆಗಳು ನಿಲ್ಲಲಿಲ್ಲ.

ರೋಸ್ಟರ್ ಪದ್ಧತಿಯ ಬಗ್ಗೆ ಸರಕಾರವು ಪರಿಶೀಲನೆ ನಡೆಸುತ್ತಿದೆ ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲು ವಿಶೇಷ ರಜಾಕಾಲ ಅರ್ಜಿ ಮತ್ತು ಪುನರ್‌ಪರಿಶೀಲನೆ ಅರ್ಜಿಗಳನ್ನು ಸಿದ್ಧಗೊಳಿಸುತ್ತಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದರು.

ಪ್ರತಿಪಕ್ಷ ಸದಸ್ಯರು ಪ್ರತಿಭಟನೆಗಳನ್ನು ಮತ್ತು ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದಾಗ ಉಪಸಭಾಪತಿಗಳು ದಿನದ ಮಟ್ಟಿಗೆ ಸದನವನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News