ಬಡ್ಡಿದರ ಕಡಿತಗೊಳಿಸಿದ ಆರ್‌ಬಿಐ: ಗೃಹಸಾಲ ತುಸು ಅಗ್ಗವಾಗುವ ನಿರೀಕ್ಷೆ

Update: 2019-02-07 16:26 GMT

ಹೊಸದಿಲ್ಲಿ,ಫೆ.7: ಅಚ್ಚರಿಯ ನಡೆಯೊಂದರಲ್ಲಿ ಆರ್‌ ಬಿಐನ ವಿತ್ತೀಯ ನೀತಿ ಸಮಿತಿಯು ರೆಪೊ ದರವನ್ನು ಶೇ.0.25 ರಷ್ಟು ಕಡಿತಗೊಳಿಸಿದೆ. ಇದರೊಂದಿಗೆ ರೆಪೊ ದರ ಶೇ.6.25ಕ್ಕೆ ಇಳಿದಿದ್ದು,ಬ್ಯಾಂಕುಗಳು ಬಳಕೆದಾರ ಮತ್ತು ಗೃಹ ಸಾಲಗಳಿಗೆ ಬಡ್ಡಿದರಗಳನ್ನು ತಗ್ಗಿಸುವ ನಿರೀಕ್ಷೆಯಿದೆ.

ಇದು ಶಕ್ತಿಕಾಂತ ದಾಸ್ ಅವರು ಆರ್‌ ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿತ್ತೀಯ ನೀತಿ ಸಮಿತಿಯ ಮೊದಲ ದ್ವೈವಾರ್ಷಿಕ ಹಣಕಾಸು ಪರಾಮರ್ಶೆ ಸಭೆಯಾಗಿದ್ದು, ಸಮಿತಿಯು ತನ್ನ ನೀತಿ ನಿಲುವನ್ನು ‘ತಟಸ್ಥ’ಕ್ಕೆ ಬದಲಿಸಿತು. ರೆಪೊ ದರ ಕಡಿತಕ್ಕೆ 4:2 ಮತಗಳಿಂದ ಒಲವು ವ್ಯಕ್ತವಾದರೆ ನೀತಿನಿಲುವು ಬದಲಾವಣೆಯನ್ನು ಸಭೆಯು ಸರ್ವಾನುಮತದಿಂದ ಒಪ್ಪಿಕೊಂಡಿತು. ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ಮತ್ತು ಸಮಿತಿಯ ಇನ್ನೋರ್ವ ಸದಸ್ಯ ಚೇತನ ಘಾಟೆ ಅವರು ಬಡ್ಡಿದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಅಭಿಪ್ರಾಯ ವ್ಯಕ್ತಪಡಿಸಿದರೆ,ದಾಸ್ ಮತ್ತು ಇತರ ಮೂವರು ಸದಸ್ಯರು ಬಡ್ಡಿದರ ಕಡಿತದ ಪರವಾಗಿ ಮತ ಚಲಾಯಿಸಿದರು.

ಬೆಳವಣಿಗೆಯನ್ನು ಬೆಂಬಲಿಸುವ ಜೊತೆಗೆ ಹಣದುಬ್ಬರವನ್ನು ಶೇ.4ರ ಮಟ್ಟದಲ್ಲಿ ಕಾಯ್ದುಕೊಳ್ಳುವ ಮಧ್ಯಮಾವಧಿಯ ಗುರಿಗೆ ಅನುಗುಣವಾಗಿ ಬಡ್ಡಿದರವನ್ನು ಕಡಿತಗೊಳಿಸಲಾಗಿದೆ ಎಂದು ಸಮಿತಿಯು ತಿಳಿಸಿದೆ.

ಹೂಡಿಕೆ ಚಟುವಟಿಕೆಯು ಚೇತರಿಸಿಕೊಳ್ಳುತ್ತಿದೆ,ಆದರೆ ಮುಖ್ಯವಾಗಿ ಮೂಲಸೌಕರ್ಯದ ಮೇಲಿನ ಸಾರ್ವಜನಿಕ ವೆಚ್ಚ ಇದಕ್ಕೆ ಪೂರಕವಾಗಿದೆ. ಖಾಸಗಿ ಹೂಡಿಕೆ ಚಟುವಟಿಕೆಗಳನ್ನು ಬಲಗೊಳಿಸುವ ಮತ್ತು ಖಾಸಗಿ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದೂ ಸಮಿತಿಯು ಹೇಳಿದೆ.

ಆರ್‌ಬಿಐ ಹಿಂದಿನ ಬಾರಿ 2017,ಆಗಸ್ಟ್‌ನಲ್ಲಿ ಬಡ್ಡಿದರವನ್ನು ಕಡಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News