ಕರುಳಿನ ಸೂಕ್ಷ್ಮಜೀವಿಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು: ಅಧ್ಯಯನ ವರದಿ

Update: 2019-02-07 17:01 GMT

ನಮ್ಮ ಕರುಳಿನಲ್ಲಿ ವಾಸವಾಗಿರುವ ಬ್ಯಾಕ್ಟೀರಿಯಾಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡಬಹುದು ಎಂದು ಅಧ್ಯಯನವೊಂದು ಹೇಳಿದೆ. ಖಿನ್ನತೆಗೊಳಗಾಗಿರುವ ವ್ಯಕ್ತಿಗಳಲ್ಲಿ, ಅವರು ಖಿನ್ನತೆ ನಿವಾರಕಗಳನ್ನು ಸೇವಿಸಿರಲಿ ಅಥವಾ ಸೇವಿಸದಿರಲಿ, ಕಾಪ್ರೊಕಾಕಸ್ ಮತ್ತು ಡಯಲಿಸ್ಟರ್ ಎಂದು ಕರೆಯಲಾಗುವ ಬ್ಯಾಕ್ಟೀರಿಯಾಗಳು ಒಂದೇ ಸಮನೆ ಕಡಿಮೆ ಪ್ರಮಾಣದಲ್ಲಿರುತ್ತವೆ ಎನ್ನುವುದನ್ನು ಬೆಲ್ಜಿಯಂನಲ್ಲಿ ನಡೆಸಲಾದ ಸಂಶೋಧನೆಯು ಬೆಳಕಿಗೆ ತಂದಿದೆ.

ಪ್ರಾಥಮಿಕವಾಗಿ ಕಂಡುಬಂದಿರುವ ಅಂಶಗಳಿಗೆ ಮುಂದಿನ ಸಂಶೋಧನೆಗಳು ಪುಷ್ಟಿ ನೀಡಿದರೆ ಕರುಳುಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರೊಬಯಾಟಿಕ್ ‌ಗಳು ಅಥವಾ ಸಜೀವ ಸೂಕ್ಷ್ಮಾಣುಜೀವಿಗಳನ್ನು ಆಧರಿಸಿದ ನೂತನ ವಿಧಾನಗಳನ್ನು ಮಾನಸಿಕ ಅಸ್ವಸ್ಥತೆಗಾಗಿ ಚಿಕಿತ್ಸೆಯಲ್ಲಿ ಬಳಸಲು ಸಾಧ್ಯವಾಗುತ್ತದೆ.

 ಬೆಲ್ಜಿಯಂನ ಲೀವೆನ್‌ ನಲ್ಲಿರುವ ಫ್ಲಾಂಡರ್ಸ್ ಇನ್‌ಸ್ಟಿಟ್ಯೂಟ್ ಫಾರ್ ಬಯೊಟೆಕ್ನಾಲಜಿ ಮತ್ತು ಕ್ಯಾಥಲಿಕ್ ವಿವಿಯ ಜೆರನ್ ರೀಸ್ ಅವರು ಸಮೀಕ್ಷಗೊಳಗಾಗಿದ್ದ 1,000 ಜನರ ವೈದ್ಯಕೀಯ ತಪಾಸಣೆ ವರದಿಗಳ ವಿಶ್ಲೇಷಣೆಯನ್ನು ನಡೆಸಿದ್ದಾರೆ. ಅವರಲ್ಲಿಯ ಖಿನ್ನತೆ, ಜೀವನಮಟ್ಟ ಮತ್ತು ಮಲದಲ್ಲಿರುವ ಸೂಕ್ಷ್ಮಜೀವಿಗಳ ನಡುವಿನ ಸಂಬಂಧವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ಸಂಶೋಧನೆಗಳನ್ನು ನಡೆಸಿದ್ದರು.

ಅತ್ಯುತ್ತಮ ಮಾನಸಿಕ ಸ್ಥಿತಿಯನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದ ಜನರಲ್ಲಿ ಫೀಕ್ಯಾಲಿಬ್ಯಾಕ್ಟೀರಿಯಂ ಮತ್ತು ಕಾಪ್ರೊಕಾಕಸ್ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿರುವುದು ಮತ್ತು ಖಿನ್ನತೆಗೊಳಗಾದವರಲ್ಲಿ ಕಾಪ್ರೊಕಾಕಸ್ ಮತ್ತು ಡಯಲಿಸ್ಟರ್ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರುವುದು ರೀಸ್ ಅವರ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.

ನೇಚರ್ ಮೈಕ್ರೋಬಯಾಲಜಿ ಜರ್ನಲ್‌ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯು ಕರುಳುಗಳಲ್ಲಿಯ ಸೂಕ್ಷ್ಮಜೀವಿಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಖಚಿತಪಡಿಸಿಲ್ಲ. ಆದರೆ ಇನ್ನೊಂದು ರೀತಿಯಲ್ಲಿ ಪರಿಣಾಮದ ಸಾಧ್ಯತೆಯಿದೆ. ಅಂದರೆ ವ್ಯಕ್ತಿಯ ಮಾನಸಿಕ ಆರೋಗ್ಯವು ಅವರಲ್ಲಿರುವ ಸೂಕ್ಷ್ಮಜೀವಿಗಳ ಮೇಲೆ ಪರಿಣಾಮ ಬೀರುವುದು ಈ ಸಾಧ್ಯತೆಯಾಗಿದೆ. ಆದರೆ ತನ್ನ ವಿಸ್ತ್ರತ ಸಂಶೋಧನೆಗಳಲ್ಲಿ ರೀಸ್ ಮತ್ತು ಅವರ ತಂಡವು ಕರುಳಿನಲ್ಲಿಯ ಸೂಕ್ಷ್ಮಜೀವಿಗಳು ಉತ್ತಮ ಮಾನಸಿಕ ಆರೋಗ್ಯಕ್ಕೆ ಪ್ರಮುಖವಾಗಿರುವ ನ್ಯೂರೊಟ್ರಾನ್ಸ್‌ಮಿಟರ್ ಅಥವಾ ನರಪ್ರೇಕ್ಷಕಗಳನ್ನು ಉತ್ಪಾದಿಸುವ ಮೂಲಕ ಮಾನವ ನರಮಂಡಲದ ಜೊತೆಗೆ ಸಂವಹನ ನಡೆಸುತ್ತವೆ ಎನ್ನುವುದಕ್ಕೆ ಸಾಕ್ಷಾಧಾರಗಳನ್ನು ಕಂಡುಕೊಂಡಿದ್ದಾರೆ.

 ಕರುಳಿನ ಬ್ಯಾಕ್ಟೀರಿಯಾಗಳು ನರಮಂಡಲದೊಂದಿಗ ಸಂವಹನ ನಡೆಸುತ್ತಿವೆಯೇ ಎನ್ನುವುದನ್ನು ಕಂಡುಕೊಳ್ಳಲು ಅವುಗಳ ಡಿಎನ್‌ಎ ಅನ್ನು ವಿಶ್ಲೇಷಿಸಿ ನಾವು ಅಧ್ಯಯನ ನಡೆಸಿದ್ದೆವು. ಹೆಚ್ಚಿನ ಬ್ಯಾಕ್ಟೀರಿಯಾಗಳು ನರಪ್ರೇಕ್ಷಕಗಳನ್ನು ಉತ್ಪಾದಿಸುವ ಮೂಲಕ ಡೋಪ್‌ ಮೈನ್ ಮತ್ತು ಸಿರೊಟೊನಿನ್‌ನಂತಹ ರಾಸಾಯನಿಕಗಳಿಗೆ ಸ್ಪಂದಿಸುತ್ತವೆ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ. ಇವೆರಡೂ ರಾಸಾಯನಿಕಗಳು ಮಿದುಳಿನಲ್ಲಿ ಸಂಕೀರ್ಣ ಪಾತ್ರಗಳನ್ನು ಹೊಂದಿವೆ ಮತ್ತು ಇವುಗಳ ಅಸಮತೋಲನವು ಖಿನ್ನತೆಯೊಂದಿಗೆ ತಳುಕು ಹಾಕಿಕೊಂಡಿದೆ ಎನ್ನುವುದು ಗೊತ್ತಿರುವ ವಿಷಯವಾಗಿದೆ ಎಂದು ರೀಸ್ ವರದಿಯಲ್ಲಿ ಹೇಳಿದ್ದಾರೆ.

ಕನಿಷ್ಠ್ಠ ಕೆಲವು ಪ್ರಮಾಣದಲ್ಲಿ ಖಿನ್ನತೆಗೆ ಬ್ಯಾಕ್ಟೀರಿಯಾಗಳ ಕಡಿಮೆ ಸಂಖ್ಯೆ ಕಾರಣ ಎನ್ನುವುದು ಸಾಬೀತಾದರೆ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಬಲ್ಲ ಪ್ರೊಬಯಾಟಿಕ್ ಚಿಕಿತ್ಸೆಗಳಿಗೆ ಮಾರ್ಗವನ್ನು ತೆರೆಯಲಿದೆ. ಆದರೆ ಈ ಸಂಬಂಧವು ಇನ್ನೂ ಸಾಬೀತುಗೊಳ್ಳಬೇಕಿದೆ. ಇದಕ್ಕಾಗಿ ಬ್ಯಾಕ್ಟೀರಿಯಾಗಳು ಪ್ರಯೋಗಶಾಲೆಯಲ್ಲಿ ಬೆಳೆಸಿ ಇನ್ನಷ್ಟು ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ ಎಂದು ರೀಸ್ ಹೇಳಿದ್ದಾರೆ.

ನೇಚರ್ ಬಯೊಟೆಕ್ನಾಲಜಿಯಲ್ಲಿ ಪ್ರಕಟಗೊಂಡಿರುವ ಎರಡು ಪ್ರತ್ಯೇಕ ವರದಿಗಳಲ್ಲಿ ಚೀನಾದ ವಿಜ್ಞಾನಿಗಳು ಮತ್ತು ಬ್ರಿಟನ್-ಆಸ್ಟ್ರೇಲಿಯಾ ವಿಜ್ಞಾನಿಗಳ ತಂಡ ಕರುಳಿನ ಸೂಕ್ಷ್ಮಜೀವಿಗಳಲ್ಲಿ 100ಕ್ಕೂ ಅಧಿಕ ಹೊಸ ತಳಿಗಳ ಡಿಎನ್‌ಎಗಳ ಅಧ್ಯಯನ ನಡೆಸಿರುವುದಾಗಿ ತಿಳಿಸಿದ್ದಾರೆ. ಇದು ಮಾನವ ಕರುಳಿನಲ್ಲಿಯ ಬ್ಯಾಕ್ಟೀರಿಯಾಗಳಿಗೆ ಸಂಬಂಧಿಸಿದಂತೆ ಈವರೆಗಿನ ಸಮಗ್ರ ಪಟ್ಟಿಯಾಗಿದೆ.

ಇಂತಹ ಬ್ಯಾಕ್ಟೀರಿಯಾಗಳ ವಿಶಾಲ ಪಟ್ಟಿಯು ರೋಗಿಗಳ ಶರೀರಗಳಲ್ಲಿ ಯಾವ ಬ್ಯಾಕ್ಟೀರಿಯಾಗಳು ಇವೆ ಎನ್ನುವುದನ್ನು ಗುರುತಿಸಲು ಮತ್ತು ಕರುಳಿನ ರೋಗ,ಅಲರ್ಜಿಗಳು ಮತ್ತು ಬೊಜ್ಜಿನಂತಹ ವೈದ್ಯಕೀಯ ಸ್ಥಿತಿಗಳಿಗೆ ನೂತನ ಚಿಕಿತ್ಸೆಯನ್ನು ಕಂಡುಕೊಳ್ಳಲು ಸಂಶೋಧನೆಗೆ ನೆರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News