ತನ್ನ ಕುಟುಂಬವನ್ನು ಹುಡುಕುತ್ತಿರುವ ಕಾಡಾನೆಗಾಗಿ ಟ್ವಿಟರ್ ಅಭಿಯಾನ ಆರಂಭಿಸಿದ ಗ್ರಾಮಸ್ಥರು

Update: 2019-02-08 16:03 GMT

ತಮಿಳುನಾಡಿನ ಕೊಯಮತ್ತೂರು ಮತ್ತು ತಿರುಪುರಗಳ ನಡುವಿನ ಗ್ರಾಮಗಳಲ್ಲಿ ಅಲೆದಾಡುತ್ತಿರುವ ಕಾಡಾನೆಯೊಂದು ತನ್ನಿಂದ ಬೇರ್ಪಟ್ಟಿರುವ ತನ್ನ ಕುಟುಂಬವನ್ನು ಹುಡುಕಾಡುತ್ತಿದೆ. ಈ ಆನೆಯಿಂದ ತಮಗೆ ತೊಂದರೆಯಾಗುತ್ತಿದ್ದರೂ ಅದನ್ನು ಅತಿಯಾಗಿ ಪ್ರೀತಿಸುತ್ತಿರುವ ಗ್ರಾಮಸ್ಥರು ‘ಚಿನ್ನತಂಬಿ’ ಎಂದು ನಾಮಕರಣವನ್ನೂ ಮಾಡಿದ್ದಾರೆ. ಇದೇ ವೇಳೆ ಚಿನ್ನತಂಬಿಯನ್ನು ರಕ್ಷಿಸಲು ಅರಣ್ಯ ಇಲಾಖೆಯು ಕಟ್ಟೆಚ್ಚರದಲ್ಲಿದೆ.

ಒಂಟಿ ಸಲಗ ಚಿನ್ನತಂಬಿಯ ಅಲೆದಾಟದ ಕುರಿತು ಗ್ರಾಮಸ್ಥರಲ್ಲಿ ಮನೆಮಾಡಿರುವ ಆತಂಕ, ಭೀತಿ ಯಾರಿಗಾದರೂ ಅರ್ಥವಾಗುವಂಥದ್ದೇ. ಆದರೆ ಚಿನ್ನತಂಬಿಯ ಕಥೆಗೆ ಇನ್ನೊಂದು ಮುಖವೂ ಇದೆ. ಅದನ್ನು ರಕ್ಷಿಸಬೇಕು ಮತ್ತು ಅದು ತನ್ನ ನೈಸರ್ಗಿಕ ವಾಸಸ್ಥಾನದಲ್ಲಿ ಹಾಯಾಗಿರಲಿ ಎಂದು ಬಯಸುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ಮಾನವನಿಂದ ಅರಣ್ಯಗಳ ಅತಿಕ್ರಮಣದಿಂದಾಗಿ ಹಲವಾರು ಕಾಡಾನೆಗಳು ಕೊಯಮತ್ತೂರು ಮತ್ತು ಸಮೀಪದ ಗ್ರಾಮಗಳಿಗೆ ನುಗ್ಗುತ್ತಿವೆ,ಆಗಾಗ್ಗೆ ಕೃಷಿಯನ್ನೂ ಹಾಳು ಮಾಡುತ್ತಿವೆ.

ಸ್ಥಳೀಯರಲ್ಲಿ ಚಿನ್ನತಂಬಿ ಜನಪ್ರಿಯವಾಗಿದ್ದು, ಅರಣ್ಯ ಇಲಾಖೆಯು ಜ.25ರಂದು ಪೆರಿಯ ಥಡಗಂ ಪ್ರದೇಶದಿಂದ ಅದನ್ನು ರಕ್ಷಿಸಿತ್ತು. ಅದನ್ನು ಲಾರಿಗೆ ಹತ್ತಿಸಲು ಅರಣ್ಯ ಇಲಾಖಾಧಿಕಾರಿಗಳು ಪ್ರಯತ್ನಿಸಿದ ಸಂದರ್ಭ ಅದರ ಎರಡೂ ದಂತಗಳು ಮುರಿದಿದ್ದವು. ಅಲ್ಲದೆ ಈ ಕಾರ್ಯಾಚರಣೆಗೆ ನೆರವಾಗಿದ್ದ ಕಾಡಾನೆಗಳು ಅದನ್ನು ಗಾಯಗೊಳಿಸಿದ್ದವು. ಹರಸಾಹಸಪಟ್ಟು ಚಿನ್ನತಂಬಿಯನ್ನು ಲಾರಿಯಲ್ಲಿ ಹತ್ತಿಸಲು ಯಶಸ್ವಿಯಾಗಿದ್ದ ಅಧಿಕಾರಿಗಳು ಟಾಪ್‌ ಸ್ಲಿಪ್ ಹುಲಿಧಾಮಕ್ಕೆ ಸಾಗಿಸಿ, ವರಕಾಳಿಯೂರು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದರು.

ಆದರೆ ತನ್ನ ಕುಟುಂಬದ ಶೋಧಕ್ಕಾಗಿ ತನ್ನ ಹಿಂದಿನ ಜಾಗಕ್ಕೆ ಪಯಣ ಆರಂಭಿಸಿದ್ದ ಚಿನ್ನತಂಬಿ ಉದುಮಲೈ ಮತ್ತು ಕೃಷ್ಣಾಪುರಂ ಪ್ರದೇಶಗಳಲ್ಲಿ ಅಲೆದಾಡಿದ್ದು, ಮೂರು ದಿನಗಳಲ್ಲಿ 100 ಕಿ.ಮೀ.ಗೂ ಅಧಿಕ ದೂರವನ್ನು ಕ್ರಮಿಸಿತ್ತು. ಅರಣ್ಯ ಇಲಾಖೆಯು ಚಿನ್ನತಂಬಿಯನ್ನು ವಾಪಸ್ ಅರಣ್ಯಕ್ಕೆ ಕಳುಹಿಸಲು ಮಾಡಿದ ಪ್ರಯತ್ನಗಳು ಸಫಲವಾಗಿಲ್ಲ. ಅಧಿಕಾರಿಗಳು ಅದನ್ನು ಅರಣ್ಯಕ್ಕೆ ಓಡಿಸುತ್ತಿದ್ದರೂ ಲೆಕ್ಕಿಸದೆ ಮತ್ತೆ ಮತ್ತೆ ವಾಪಸಾಗುತ್ತಲೇ ಇದೆ.

ಈ ಸಮಸ್ಯೆಯಿಂದಾಗಿ ಚಿನ್ನತಂಬಿಯನ್ನು ಪಳಗಿಸಿ ಸಾಕಾನೆಯನ್ನಾಗಿ ಪರಿವರ್ತಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದರು. ಆದರೆ ಇದನ್ನು ಹಲವಾರು ಜನರು ವಿರೋಧಿಸುತ್ತಿದ್ದು, ‘ಸೇವ್ ಚಿನ್ನತಂಬಿ ’ ಹ್ಯಾಷ್‌ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಚಿನ್ನತಂಬಿಯನ್ನು ಅರಣ್ಯಕ್ಕೆ ಮರಳಲು ನೆರವಾಗಲು ಸಲೀಂ ಮತ್ತು ಮರಿಯಪ್ಪನ್ ಹೆಸರಿನ ಎರಡು ಸಾಕಾನೆಗಳನ್ನೂ ಅರಣ್ಯಾಧಿಕಾರಿಗಳು ತರಿಸಿಕೊಂಡಿದ್ದಾರೆ.

ಚಿನ್ನತಂಬಿ ಚಿನ್ನತಂಬಿಯಾಗಿಯೇ ಇರಲಿ

ಚಿನ್ನತಂಬಿಯನ್ನು ಸಾಕಾನೆಯನ್ನಾಗಿ ಪಳಗಿಸುವ ಅರಣ್ಯ ಇಲಾಖೆಯ ಹವಣಿಕೆಯ ವಿರುದ್ಧ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯೊಂದು ದಾಖಲಾಗಿದೆ. ಇದೇ ವೇಳೆ ಚಿನ್ನತಂಬಿಯನ್ನು ಪಳಗಿಸದಿದ್ದರೆ ಅದು ಸ್ವತಃ ತನಗೆ ಮತ್ತು ತನ್ನ ಸುತ್ತಲಿದ್ದವರಿಗೂ ಅಪಾಯಕಾರಿಯಾಗುತ್ತದೆ ಎಂದು ಹಲವರು ಆತಂಕ ಪಟ್ಟುಕೊಂಡಿದ್ದಾರೆ, ಆದರೆ ಅವರಿಗೂ ಚಿನ್ನತಂಬಿಯ ಬಗ್ಗೆ ಹೃದಯಗಳಲ್ಲಿ ಮೃದುಭಾವನೆಗಳಿವೆ.

ತನ್ಮಧ್ಯೆ ಚಿನ್ನತಂಬಿಯನ್ನು ಪಳಗಿದ ಆನೆಯನ್ನಾಗಿ ಪರಿವರ್ತಿಸುವ ಯಾವುದೇ ಯೋಜನೆಯಿಲ್ಲ ಎಂದು ತಮಿಳುನಾಡು ಸರಕಾರವು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಚಿನ್ನತಂಬಿಯನ್ನು ಮತ್ತೆ ಅರಣ್ಯಕ್ಕೆ ಕಳುಹಿಸಲು ಅಧಿಕಾರಿಗಳು ಪ್ರಯತ್ನಿಸುತ್ತಲೇ ಇದ್ದಾರೆ ಮತ್ತು ಅದಕ್ಕೆ ಸಾಕಷ್ಟು ನೀರು ಮತ್ತು ತಿನ್ನಲು ಕಬ್ಬನ್ನು ಒದಗಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಚಿನ್ನತಂಬಿಯ ಚಲನವಲನಗಳ ಕುರಿತು ಸ್ಥಳೀಯ ಜನರಿಗೆ ಧ್ವನಿವರ್ಧಕಗಳ ಮೂಲಕ ನಿರಂತರವಾಗಿ ಮಾಹಿತಿಗಳನ್ನು ನೀಡುತ್ತಿದ್ದಾರೆ. ಚಿನ್ನತಂಬಿ ತನ್ನ ಮೂಲ ವಾಸಸ್ಥಾನಕ್ಕೆ ಮರಳಲಿ ಮತ್ತು ತನ್ನ ಕುಟುಂಬವನ್ನು ಸೇರಿಕೊಳ್ಳಲಿ ಎಂದು ಜನರು ಹಾರೈಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News