×
Ad

ಅಡ್ಡ ಪರಿಣಾಮದಿಂದ ಕಿವುಡುತನ: ಜಾನ್ಸನ್ ಆ್ಯಂಡ್ ಜಾನ್ಸನ್ ವಿರುದ್ಧ ಮಹಿಳೆಯ ಕಾನೂನು ಹೋರಾಟ

Update: 2019-02-09 22:45 IST

ಹೊಸದಿಲ್ಲಿ, ಫೆ.9: ಔಷಧ ಉತ್ಪಾದನಾ ಕ್ಷೇತ್ರದ ಬೃಹತ್ ಸಂಸ್ಥೆ ‘ಜಾನ್ಸನ್ ಆ್ಯಂಡ್ ಜಾನ್ಸನ್’ ಕಡಿಮೆ ದರದ ಔಷಧಿಯ ಬದಲು ದುಬಾರಿ ಬೆಲೆಯ, ದುಷ್ಪರಿಣಾಮ (ಅಡ್ಡ ಪರಿಣಾಮ) ಬೀರುವ ಔಷಧಿ ಪೂರೈಸಿದ್ದರಿಂದ ಶ್ರವಣ ಶಕ್ತಿ ಕಳೆದುಕೊಂಡಿರುವ ಭಾರತೀಯ ಮಹಿಳೆಯೊಬ್ಬರು ಈಗ ಆ ಸಂಸ್ಥೆಗೆ ಭಾರತದಲ್ಲಿ ಔಷಧ ಉತ್ಪಾದಿಸಲು ಪೇಟೆಂಟ್ ನೀಡುವ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ನಂದಿತಾ ವೆಂಕಟೇಶನ್ ಕ್ಷಯ ರೋಗದ ವಿರುದ್ಧ 8 ವರ್ಷ ಸುದೀರ್ಘ ಹೋರಾಟ ನಡೆಸಿದವರು. ಶಸ್ತ್ರಚಿಕಿತ್ಸೆ, ಔಷಧ, ಇಂಜೆಕ್ಷನ್‌ಗಳ ಬಳಕೆಯ ದುಷ್ಪರಿಣಾಮದಿಂದ ಅವರು ಈಗ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಫೆ.8ರಂದು ಅವರು ಭಾರತೀಯ ಪೇಟೆಂಟ್(ಹಕ್ಕುಸ್ವಾಮ್ಯ) ಕಾನೂನು ಬಳಸಿಕೊಂಡು ಔಷಧ ಉತ್ಪಾದನಾ ಕ್ಷೇತ್ರದ ಬೃಹತ್ ಸಂಸ್ಥೆ ‘ಜಾನ್ಸನ್ ಆ್ಯಂಡ್ ಜಾನ್ಸನ್’ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಮುಂಬೈಯಲ್ಲಿರುವ ಇಂಡಿಯನ್ ಪೇಟೆಂಟ್ ಆಫೀಸ್‌ನಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ. ತಮ್ಮ ಈ ಹೋರಾಟದಲ್ಲಿ ಅವರು ದಕ್ಷಿಣ ಆಫ್ರಿಕಾದ 28 ವರ್ಷದ ಫುಮೆಝ್ ಟಿಸೈಲ್ ಅವರ ನೆರವನ್ನು ಪಡೆದಿದ್ದಾರೆ. ಟಿಸೈಲ್ ಅವರು ಕೂಡಾ ಔಷಧ ನಿರೋಧಕ ಕ್ಷಯದ ದವಡೆಯಿಂದ ಪಾರಾಗಿ ಬಂದವರು.

ಕ್ಷಯರೋಗದ ಚಿಕಿತ್ಸೆಯಲ್ಲಿ ಇಂಜೆಕ್ಷನ್ ಬಳಕೆಯ ದುಷ್ಪರಿಣಾಮಗಳಲ್ಲಿ ಶ್ರವಣ ಸಮಸ್ಯೆಯೂ ಒಂದಾಗಿದೆ. ‘ಬೆಡಕ್ವಿಲೈನ್’ ಔಷಧ ಬಳಸುವುದರಿಂದ ಈ ಸಮಸ್ಯೆ (ಕಿವುಡುತನ) ದೂರವಾಗುತ್ತದೆ. ನಂದಿತಾ ಹಾಗೂ ಟಿಸೈಲ್ ಇಬ್ಬರೂ ಕ್ಷಯ ರೋಗದ ಚಿಕಿತ್ಸೆ ಪಡೆಯುತ್ತಿರುವಾಗ ಬೆಡಕ್ವಿಲನ್ ಔಷಧಿ ದೊರಕದ ಕಾರಣ ಅವರು ಈಗ ‘ಕೋಕ್ಲಿಯರ್ ಇಂಪ್ಲಾಂಟ್’ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅಲ್ಲದೆ ಈಗ ಇಬ್ಬರೂ ಜೀವ ಉಳಿಸುವ ‘ಬೆಡಕ್ವಿಲೈನ್’ ಔಷಧ ಬಳಸುವಂತೆ ಕ್ಷಯ ರೋಗಿಗಳಿಗೆ ಸಲಹೆ ನೀಡುವ ಅಭಿಯಾನ ಆರಂಭಿಸಿದ್ದಾರೆ.

ಈಗ 40 ವರ್ಷದ ಮೇಲಿನ ಕ್ಷಯ ರೋಗಿಗಳಿಗೆ ಮಾರುಕಟ್ಟೆಯಲ್ಲಿ ಯಾವುದೇ ಸೂಕ್ತ ಆಯ್ಕೆಗಳಿಲ್ಲ. ಆದರೆ ಬೆಡಕ್ವಿಲೈನ್ ಔಷಧ ಸೂಕ್ತ ಆಯ್ಕೆ ಎಂದು ನಂದಿತಾ ಹೇಳುತ್ತಾರೆ. ವಿಶ್ವ ಮಟ್ಟದಲ್ಲಿ ಅತ್ಯಧಿಕ ಕ್ಷಯ ರೋಗಿಗಳು ಭಾರತದಲ್ಲಿದ್ದು 2025ರ ವೇಳೆಗೆ ಭಾರತವನ್ನು ಕ್ಷಯ ಮುಕ್ತ ದೇಶವಾಗಿಸಲು ಪಣ ತೊಡಲಾಗಿದೆ. ಕ್ಷಯ ರೋಗದಿಂದ ನಿಮ್ಮನ್ನು ರಕ್ಷಿಸುವ ಏಕೈಕ ಔಷಧಿ ನಿಮ್ಮನ್ನು ಕಿವುಡರನ್ನಾಗಿಸಬಹುದು ಎಂದು ಟಿಸೈಲ್ ಹೇಳುತ್ತಾರೆ. ಜೆ ಆ್ಯಂಡ್ ಜೆ ಯಂತಹ ಬೃಹತ್ ಔಷಧ ತಯಾರಕ ಸಂಸ್ಥೆಗಳು, ಜನರಿಗೆ ಸುಲಭದಲ್ಲಿ ದೊರಕುವ, ಕ್ಷಯಕ್ಕೆ ಪರಿಣಾಮಕಾರಿ ಮತ್ತು ಜೀವ ಉಳಿಸುವ ಔಷಧದ ಬೆಲೆಯನ್ನು ನಿಯಂತ್ರಿಸುವುದು ಸಲ್ಲದು ಎಂದವರು ಹೇಳುತ್ತಾರೆ. ಜೆ ಆ್ಯಂಡ್ ಜೆ ಸಂಸ್ಥೆಗೆ ಪೇಟೆಂಟ್ ದೊರೆತರೆ ಮುಂದಿನ 20 ವರ್ಷದ ತನಕ ಭಾರತದಲ್ಲಿ ಕಡಿಮೆ ದರದ ಔಷಧಿಯನ್ನು ಭಾರತದಲ್ಲಿ ಯಾರೂ ಉತ್ಪಾದಿಸಲಾಗದು. ಈ ಹಿನ್ನೆಲೆಯಲ್ಲಿ ಜೆ ಆ್ಯಂಡ್ ಜೆ ಪೇಟೆಂಟ್‌ಗೆ ತಮ್ಮ ವಿರೋಧವಿದೆ ಎಂದು ನಂದಿತಾ ಹೇಳುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯು, ಅಡ್ಡ ಪರಿಣಾಮವಿಲ್ಲದ ‘ಬೆಡಕ್ವಿಲೈನ್’ ಔಷಧ ಬಳಕೆಗೆ ಆದ್ಯತೆ ನೀಡುವಂತೆ ಕರೆ ನೀಡಿದೆ. ಅಲ್ಲದೆ ಕ್ಷಯ ರೋಗಿಗಳು ಬಳಸುವ ಔಷಧದ ಪಟ್ಟಿಯಲ್ಲಿ ಇದನ್ನು ಅಗ್ರಸ್ಥಾನದಲ್ಲಿ ಇರಿಸಿದೆ. ಟಿಸೈಲ್ ಹಾಗೂ ನಂದಿತಾರ ಪ್ರಕರಣದಲ್ಲಿ ಬಳಕೆಯಾದ ಔಷಧಗಳನ್ನು ಅಂತಿಮ ಸ್ಥಾನದಲ್ಲಿರಿಸಿದೆ. ಈ ಮಧ್ಯೆ, ದಕ್ಷಿಣ ಆಫ್ರಿಕಾ ‘ಬೆಡಕ್ವಿಲೈನ್’ ಔಷಧವನ್ನು ಹೆಚ್ಚು ಬಳಸುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ವಿಶ್ವದಲ್ಲಿ ಬಳಕೆಯಾಗುವ ಸುಮಾರು ಶೇ.70ರಷ್ಟು ‘ಬೆಡಕ್ವಿಲೈನ್’ ಔಷಧವನ್ನು ದಕ್ಷಿಣ ಆಫ್ರಿಕಾದಲ್ಲಿ ಬಳಸಲಾಗುತ್ತಿದೆ. ಬೆಡಕ್ವಿಲೈನ್ ಬಳಕೆಯಿಂದ ಕ್ಷಯ ರೋಗದಿಂದ ಮರಣವಪ್ಪುವವರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ದಕ್ಷಿಣ ಆಫ್ರಿಕಾದ ಇತ್ತೀಚಿನ ಪ್ರಕಟಣೆ ತಿಳಿಸಿದೆ. ಭಾರತದಲ್ಲಿ ಸಕ್ರಿಯ ಬೆಡಕ್ವಿನ್ ಅಂಶವನ್ನು ಒಳಗೊಂಡ ಔಷಧ ತಯಾರಿಸಲು ಜೆ ಆ್ಯಂಡ್ ಜೆ ಈಗಾಗಲೇ ಪೇಟೆಂಟ್ ಪಡೆದಿದೆ. ಈ ಪೇಟೆಂಟ್ 2023ಕ್ಕೆ ಅಂತ್ಯಗೊಳ್ಳುತ್ತದೆ. ಅದುವರೆಗೆ ಭಾರತದಲ್ಲಿ ಯಾವುದೇ ಔಷಧ ಉತ್ಪಾದನೆ ಸಂಸ್ಥೆಗಳು ಭಾರತದಲ್ಲಿ ಈ ಔಷಧ ತಯಾರಿಸುವಂತಿಲ್ಲ. ಇದೇ ಔಷಧದ ಮತ್ತೊಂದು ವಿಧದ ತಯಾರಿಗೆ ಕೆಲ ವರ್ಷದ ಹಿಂದೆ ಜಾನ್ಸನ್ ಸಂಸ್ಥೆ ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದೆ. ಆದರೆ ಈ ಪೇಟೆಂಟ್ ಅರ್ಜಿಯನ್ನು ವಿರೋಧಿಸಿ ಭಾರತೀಯ ಪೇಟೆಂಟ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಜೀವ ಉಳಿಸುವ ಔಷಧಿಗಳನ್ನು ಉತ್ಪಾದಿಸಿದರೂ ಅವುಗಳ ಅಧಿಕ ಬೆಲೆಯ ಕಾರಣ ಅಗತ್ಯ ಇರುವವರಿಗೆ ಕೈಗೆಟಕದಂತೆ ಯಾಕೆ ಮಾಡುತ್ತಾರೆ ಎಂಬುದು ಇಲ್ಲಿರುವ ಪ್ರಶ್ನೆಯಾಗಿದೆ ಎನ್ನುತ್ತಾರೆ ಟಿಸೈಲ್.

ತಮ್ಮ ಹೋರಾಟ ಯಶಸ್ವಿಯಾಗುತ್ತದೆ ಎಂದು ನಂದಿತಾ ಮತ್ತು ಟಿಸೈಲ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News