ಸುಳ್ಳು ಸುದ್ದಿಯ ಫ್ಯಾಕ್ಟರಿಗಳಿಗೆ ಪ್ರಧಾನಿಯೇ ಪ್ರಾಯೋಜಕ!

Update: 2019-02-09 18:55 GMT

ಚುನಾವಣೆ ಸಮರದಲ್ಲಿ ಸುಳ್ಳು ಸಹಜ. ಆದರೆ ಸಾಮಾಜಿಕ ಜಾಲತಾಣಗಳ ಬಳಕೆ ಪ್ರಮಾಣ ಹೆಚ್ಚಾದಂತೆಲ್ಲ ಸುಳ್ಳುಗಳ ಮಹಾಪೂರವೇ ಹರಿದು ಬರುತ್ತಿದ್ದು ರಾಜಕೀಯ, ಧರ್ಮಕ್ಕೆ ಸಂಬಂಧಿಸಿದ ಯಾವ ಸುದ್ದಿಯನ್ನೂ ಪರೀಕ್ಷಿಸದೇ ನಂಬುವಂತೆಯೇ ಇಲ್ಲ.
ಅದಿರಲಿ, ಸರಕಾರವೇ ಇಂತಹ ಫೇಕ್ ಫ್ಯಾಕ್ಟರಿಗಳನ್ನು ಪೋಷಿಸತೊಡಗಿದರೆ, ದೇಶದ ಪ್ರಧಾನಿಯೇ ಇಂತಹ ‘ಸುಳ್ಳು ಕಾರ್ಖಾನೆ’ಗಳ ಪ್ರಾಯೋಜಕತ್ವ ವಹಿಸಿಕೊಂಡರೆ ಮತ್ತೆ ನಂಬುವುದು ಯಾರನ್ನು?
ಕಳೆದ ತಿಂಗಳು ಸಮರ್ಥ ಬನ್ಸಾಲ್ ಎಂಬ ಪರ್ತಕರ್ತರು ಈ ಫೇಕ್ ಫ್ಯಾಕ್ಟರಿಗಳ ಕುರಿತು ಒಂದು ತನಿಖಾ ವರದಿ ಪ್ರಕಟಿಸಿದರು. ಹೆಚ್ಚುತ್ತಿರುವ ‘ಸುಳ್ಳು’ ಕಥೆಗಳು ಮತ್ತು ಸರಕಾರದ ನಡುವೆ ಲಿಂಕ್ ಇರುವುದನ್ನು ಅವರು ಎಳೆಎಳೆಯಾಗಿ ತೋರಿಸಿದ್ದರು. ಪ್ರಧಾನಿಯ ನಮೋ ಆ್ಯಪ್ ಮೂಲಕ ಸುಳ್ಳು ಸುದ್ದಿಗಳು, ಕುಚೋದ್ಯಗಳು ಹರಿದಾಡುವುದನ್ನು ಬನ್ಸಾಲ್ ತೋರಿಸಿದರು.
ನಮೋ ಆ್ಯಪ್‌ನ ‘ಮೈ ನೆಟ್‌ವರ್ಕ್’ ವಿಭಾಗದಲ್ಲಿ 15 ಪ್ರಾಯೋಜಿತ ಅಕೌಂಟುಗಳಿವೆ, ಅದರಲ್ಲಿ ಫೇಕ್ ಫ್ಯಾಕ್ಟರಿ ಎಂದೇ ಕುಖ್ಯಾತಿ ಪಡೆದಿರುವ ‘ದಿ ಇಂಡಿಯನ್ ಐ’ ಕೂಡ ಇದೆ. ಬಳಕೆದಾರರು ಇದನ್ನು ಫಾಲೋ ಮಾಡದೆ ಇದ್ದಾಗಲೂ ಇದರ ಪೋಸ್ಟ್‌ಗಳು ಅವರ ಮೈ ನೆಟ್‌ವರ್ಕ್ ಫೀಡರ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.
ಕೇಜ್ರಿವಾಲ್ ದೇಶದ್ರೋಹಿಯಂತೆ!
ಫೇಸ್‌ಬುಕ್ ಪೇಜ್, ಟ್ವಿಟರ್, ವೆಬ್‌ಸೈಟ್-ಹೀಗೆ ಸಾಮಾಜಿಕ ಜಾಲತಾಣದ ಎಲ್ಲ ಸ್ತರಗಳಲ್ಲೂ ಇರುವ ‘ದಿ ಇಂಡಿಯನ್ ಐ’ ಎಂತಹ ಕುಚೋದ್ಯ ಮಾಡುತ್ತದೆ ಎಂಬುದಕ್ಕೆ ಈ ಉದಾಹರಣೆ ನೋಡಿ. ವಿರೋಧ ಪಕ್ಷಗಳ ಮಹಾಘಟಬಂಧನ್ ಸಮಾವೇಶದಲ್ಲಿ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಪಾಕಿಸ್ತಾನದ ಪರ ಮಾತಾಡಿದರು ಎಂದು ಈ ‘ಇಂಡಿಯನ್ ಐ’ ಸುಳ್ಳು ಸುದ್ದಿ ಹರಡಿತ್ತು. ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ತೊಂದರೆ ಎಂಬರ್ಥದಲ್ಲಿ ಕೇಜ್ರಿವಾಲ್ ಮಾತಾಡಿದರು ಎಂದಿತ್ತು. ಅದಕ್ಕಾಗಿ ಅವರನ್ನು ದೇಶದ್ರೋಹಿ ಎಂದು ಆರ್ಡರ್ ಅನ್ನೂ ಪಾಸ್ ಮಾಡಿಬಿಟ್ಟಿತ್ತು.
ಆದರೆ ಆಗಲೇ ಅಲ್ಟ್‌ನ್ಯೂಸ್ ‘ಇಂಡಿಯನ್ ಐ’ ಹಾಕಿರುವ ವೀಡಿಯೊ ತಿರುಚಿದ್ದು ಎಂದು ಸಾಬೀತು ಮಾಡಿತ್ತು. ಮೋದಿ ಮತ್ತು ಶಾ ಮತ್ತೆ ಅಧಿಕಾರಕ್ಕೆ ಬಂದರೆ ದೇಶ ಉಳಿಯಲಾರದು ಎಂಬ ಕೇಜ್ರಿವಾಲರ ಮಾತನ್ನು ತಿರುಚಲಾಗಿತ್ತು. ‘ದೇಶ’ ಎಂದಿರುವಲ್ಲಿ ‘ಪಾಕಿಸ್ತಾನ’ ಎಂದು ಸೇರಿಸಲಾಗಿತ್ತು! ಇಂತಹ ಅನಾಹುತ ಮಾಡುವ ಗುಂಪಿಗೆ ನರೇಂದ್ರ ಮೋದಿಯವರ ಆ್ಯಪ್ ಸಪೋರ್ಟು ಮಾಡುತ್ತಿದೆ.
ಗುಜರಾತ್ ಲಿಂಕ್
ಅಲ್ಟ್‌ನ್ಯೂಸ್ ಕಳೆದ ಸೆಪ್ಟಂಬರ್‌ನಲ್ಲಿ ಈ ‘ಇಂಡಿಯನ್ ಐ’ಗಿರುವ ಗುಜರಾತ್ ಲಿಂಕನ್ನು ಬಯಲು ಮಾಡಿತ್ತು. ಗುಜರಾತ್ ಮೂಲದ ‘ಸಿಲ್ವರ್ ಟಚ್ ಟೆಕ್ನಾಲಜೀಸ್’ ಕಂಪೆನಿಗೂ ಇದಕ್ಕೂ ಸಂಬಂಧವಿದೆ. ಈ ಕಂಪೆನಿಯೇ ನಮೋ ಆ್ಯಪ್ ರೂಪಿಸಿದೆ! ಈ ಕಂಪೆನಿಯ ಸರ್ವರ್‌ಗಳ ಮೂಲಕವೇ ‘ಇಂಡಿಯನ್ ಐ’ ಬರುತ್ತಿತ್ತು. ಅಲ್ಟ್ ನ್ಯೂಸ್ ತನಿಖೆಯ ನಂತರ ‘ಇಂಡಿಯನ್ ಐ’ ಐಪಿ ಅಡ್ರೆಸ್ ಬದಲು ಮಾಡಲಾಗಿತ್ತು.


ಇದೇ ‘ಇಂಡಿಯನ್ ಐ’ ಕೋಲ್ಕೊತಾದ ಮಹಾಘಟ ಬಂಧನ್ ರ್ಯಾಲಿಯಲ್ಲಿ ಯಾರೊಬ್ಬರೂ ‘‘ಭಾರತ್ ಮಾತಾ ಕಿ ಜೈ’’ ಅನ್ನಲಿಲ್ಲ ಎಂದು ಸುಳ್ಳು ಹರಡಿತ್ತು. ಇದನ್ನೇ ಅಮಿತ್ ಶಾ ತಮ್ಮ ಭಾಷಣಗಳಲ್ಲಿ ಹೇಳಿದ್ದರು. ಆದರೆ ರ್ಯಾಲಿಯ ಕೊನೆಯಲ್ಲಿ ‘‘ಭಾರತ್ ಮಾತಾ ಕಿ ಜೈ’’, ‘‘ಜೈ ಹಿಂದ್’’, ‘‘ವಂದೇ ಮಾತರಂ’’ ಘೋಷಣೆಗಳನ್ನು ಹೇಳಿದ್ದು ವೀಡಿಯೋದಲ್ಲಿ ಸ್ಪಷ್ಟವಾಗಿದೆ.
ಹೀಗೆ ಬರೀ ಸುಳ್ಳು, ಕುಚೋದ್ಯವನ್ನೇ ಮಾಡುವ ಇಂತಹ ನೂರಾರು ಗುಂಪುಗಳಿವೆ. ಆದರೆ, ಪ್ರಧಾನಿ ಯವರ ನಮೋ ಆ್ಯಪ್ ಇಂಥವನ್ನು ಬೆಂಬಲಿಸುತ್ತದೆ ಎನ್ನುವ ವಿಷಯ ಅಸಹ್ಯಕರವಾದುದು.
ಫೇಕ್‌ನ್ಯೂಸ್‌ಗಳ ಹಕೀಕತ್ತನ್ನು ಕಂಡು ಹಿಡಿಯಲು ಬೆನ್ನು ಹತ್ತಿದರೆ ಅದು ಬಿಜೆಪಿಯ ಬುಡಕ್ಕೆ ಬಂದು ನಿಲ್ಲುತ್ತದೆ. 2008ರ ಸುಮಾರಿಗೆಲ್ಲ ಅದರ ಐಟಿ ಸೆಲ್ ಆ್ಯಕ್ಟಿವ್ ಆಗಿತ್ತು. ಫೇಸ್‌ಬುಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಹಲವರು ಈ ಐಟಿ ಸೆಲ್‌ನ ಭಾಗವಾದರು. ಈಗಲೂ ಕೆಲವು ಹಳೆಯ ಫೇಸ್‌ಬುಕ್ ನೌಕರರು ಬಿಜೆಪಿಯ ಐಟಿ ಸೆಲ್‌ನಲ್ಲಿ ಇದ್ದಾರೆ. ಕೇಸರಿ ಭ್ರಾಂತಿಯ ಹಲವು ಡೇಟಾ ಅನಲಿಸ್ಟ್‌ಗಳು ಬಿಜೆಪಿ ಸೇರಿದ ಮೇಲಂತೂ, ಈ ದೇಶದ ಸಾಮಾಜಿಕ, ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಹೆಕ್ಕಲಾಯಿತು. ಈ ಮಾಹಿತಿಯನ್ನು ಪೂರಕವಾಗಿ ಬಳಸಿಕೊಂಡ ಬಿಜೆಪಿ ಐಟಿ ಘಟಕ ದಿನವೂ ಹತ್ತಾರು ಸುಳ್ಳುಗಳನ್ನು ಸೃಷ್ಟಿಸತೊಡಗಿತು. ಅಮಾಯಕ ಯುವಕರಲ್ಲಿ ಹುಸಿ ದೇಶಭಕ್ತಿ ಹುಟ್ಟಿಸಿ, ಲಕ್ಷಗಳ ಸಂಖ್ಯೆಯಲ್ಲಿ ವಾಟ್ಸ್ ಆ್ಯಪ್ ಗ್ರೂಪ್‌ಗಳನ್ನು ಹುಟ್ಟು ಹಾಕಿ ಸುಳ್ಳುಗಳ ಮಹಾಪೂರವನ್ನೇ ಹರಿಸತೊಡಗಿತು.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ತಮ್ಮ ಐಟಿ ಕಾರ್ಯಕರ್ತರ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡುತ್ತ ಫೇಕ್ ನ್ಯೂಸ್ ತಮಗೆ ಲಾಭವಾಗಿದ್ದರ ಕುರಿತು ಮಾತನಾಡಿದರು. ಬಿಜೆಪಿಗೆ ಲಾಭ ಆಗುವುದಾದರೆ, ಸುಳ್ಳು ಸುದ್ದಿಗಳನ್ನು ಯಥೇಚ್ಛವಾಗಿ ಹರಡಿದರೆ ಅದರಲ್ಲಿ ತಪ್ಪಿಲ್ಲ ಎಂಬಂತೆ ಉಪದೇಶ ಮಾಡಿದರು. ‘‘ಅಖಿಲೇಶ್ ಯಾದವ್ ತಮ್ಮ ತಂದೆ ಮುಲಾಯಂ ಸಿಂಗ್ ಯಾದವರಿಗೆ ಹೊಡೆದರು ಎಂದು ಬಿಜೆಪಿ ಕಾರ್ಯಕರ್ತ ಹಬ್ಬಿಸಿದ ಸುದ್ದಿಯಿಂದ ನಮಗೆ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ದೊಡ್ಡ ಲಾಭವೇ ಆಗಿತ್ತು’’ ಎಂದು ಹೇಳಿದ್ದ ಅಮಿತ್ ಶಾ, ‘‘ಅದು ಸುಳ್ಳು ಸುದ್ದಿ ಎಂಬುದು ಗೊತ್ತಿದ್ದರೂ ಅದನ್ನು ಎಲ್ಲ ಕಡೆ ಹರಡಲು ನಾನೇ ಹೇಳಿದ್ದೆ’’ ಎಂದರು.
‘‘ವಿ ಸಪೋರ್ಟ್ ಮೋದಿ’’, ‘‘ಮೋದಿ ಫಿರ್ ಏಕ್ ಬಾರ್’’, ‘‘ಹಮ್‌ಲೋಗ್’’-ಇಂತಹ ನೂರಾರು ಫೇಕ್ ಫ್ಯಾಕ್ಟರಿಗಳಿದ್ದು, ಬಿಜೆಪಿಯಿಂದ ಅವು ಸಾಕಷ್ಟು ನೆರವು ಪಡೆಯುತ್ತಿವೆ. ಪ್ರಗತಿಪರರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲು ಅವರ ಭಾಷಣದ ವೀಡಿಯೊಗಳನ್ನೇ ತಿರುಚುವ ದುಷ್ಟ ಕೆಲಸದಲ್ಲಿ ಇವು ನಿರತವಾಗಿದ್ದು, ಅಮಾಯಕ ಯುವಕರ ದಾರಿ ತಪ್ಪಿಸುತ್ತಿವೆ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಸುಳ್ಳು ಸುದ್ದಿಗಳನ್ನು ಯಥೇಚ್ಛವಾಗಿ ಹರಡುತ್ತಿರುವುದು ಪೋಸ್ಟ್‌ಕಾರ್ಡ್ ಪೋರ್ಟಲ್. ಕುಳಿತರೆ ಸುಳ್ಳು, ನಿಂತರೆ ಸುಳ್ಳು, ಉಸಿರಾಡಿದರೆ ಸುಳ್ಳು -ಇದು ಪೋಸ್ಟ್‌ಕಾರ್ಡ್‌ನ ಧ್ಯೇಯವಾಕ್ಯ. ಕುತಂತ್ರ, ಕುಚೋದ್ಯಗಳಿಗೆ ಅಪಖ್ಯಾತಿ ಪಡೆದಿರುವ ಪೋಸ್ಟ್‌ಕಾರ್ಡಿನಂತಹ ಸಂಸ್ಥೆಗಳಿಗೆ ಬಿಜೆಪಿಯ ಐಟಿ ಘಟಕ ಆರ್ಥಿಕ ನೆರವು ನೀಡುತ್ತಿದೆ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ.
(ಕೃಪೆ: ಅಲ್ಟ್‌ನ್ಯೂಸ್‌ಡಾಟ್‌ಕಾಮ್)

Writer - -ಪಿ.ಕೆ. ಮಲ್ಲನಗೌಡರ್

contributor

Editor - -ಪಿ.ಕೆ. ಮಲ್ಲನಗೌಡರ್

contributor

Similar News

ಜಗದಗಲ
ಜಗ ದಗಲ