ವಿದೇಶ ಪ್ರಯಾಣ ನಿರ್ಬಂಧಪಟ್ಟಿಯಿಂದ ಶರೀಫ್ ಹೆಸರು ಕೈಬಿಡಲು ಪಾಕ್ ನಕಾರ

Update: 2019-02-10 18:21 GMT

    ಇಸ್ಲಾಮಾಬಾದ್,ಫೆ.10: ವಿದೇಶ ಪ್ರಯಾಣಕ್ಕೆ ತಡೆಯೊಡ್ಡುವ ನಿರ್ಗಮನ ನಿಯಂತ್ರಣ ಪಟ್ಟಿ (ಇಸಿಎಲ್)ಯಿಂದ ತಮ್ಮ ಹೆಸರುಗಳನ್ನು ತೆಗೆದುಹಾಕಬೇಕೆಂದು ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್, ಅವರ ಪುತ್ರಿ ಹಾಗೂ ಅಳಿಯ ಸಲ್ಲಿಸಿದ್ದ ಮನವಿಗಳನ್ನು ಪಾಕ್ ಸರಕಾರವು ಶನಿವಾರ ತಿರಸ್ಕರಿಸಿದೆ.

 ಇಸಿಎಲ್‌ನಿಂದ ತಮ್ಮ ಹೆಸರುಗಳನ್ನು ಕೈಬಿಡುವಂತೆ ಕೋರಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನವಾಝ್ ಶರೀಫ್, ಅವರ ಪುತ್ರಿ ಮರಿಯಾಂ ಹಾಗೂ ಅಳಿಯ ಮುಹಮ್ಮದ್ ಸಫ್ದರ್ ಅವರು ಗೃಹ ಸಚಿವಾಲಯಕ್ಕೆ ಪ್ರತ್ಯೇಕವಾಗಿ ಮನವಿಗಳನ್ನು ಸಲ್ಲಿಸಿದ್ದರೆಂದು ಜಿಯೋ ನ್ಯೂಸ್ ವರದಿ ಮಾಡಿದೆ. ತಾವು ಭ್ರಷ್ಟಾಚಾರ ಪ್ರಕರಣಗಳು ಅಧಿಕಾರದ ದುರ್ಬಳಕೆ, ಭಯೋತ್ಪಾದನೆ ಅಥವಾ ಇತರ ಯಾವುದೇ ಸಂಚಿನ ಪ್ರಕರಣಗಳಲ್ಲಿ ಶಾಮೀಲಾಗಿಲ್ಲವಾದ್ದರಿಂದ 2010ರಲ್ಲಿ ಜಾರಿಗೆ ತರಲಾದ ಇಸಿಎಲ್ ಕಾನೂನುಗಳು ತಮಗೆ ಅನ್ವಯಿಸುವುದಿಲ್ಲ. ಹೀಗಾಗಿ ತಮ್ಮ ಹೆಸರುಗಳನ್ನು ಇಸಿಎಲ್ ಪಟ್ಟಿಯಿಂದ ಕೈಬಿಡಬೇಕೆಂದು ಅವರು ಕೋರಿದ್ದರು. ಆದರೆ ಗೃಹ ಸಚಿವಾಲಯವು ನವಾಝ್, ಮರಿಯಾಂ ಹಾಗೂ ನಿವೃತ್ತ ಕ್ಯಾಪ್ಟನ್ ಸಫ್ದರ್ ಅವರ ಅರ್ಜಿಗಳನ್ನು ತಿರಸ್ಕರಿಸಿದೆಯೆಂದು ಮೂಲಗಳನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ತಿಳಿಸಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ಕಳೆದ ವರ್ಷದ ಆಗಸ್ಟ್ 20ರಂದು ನಡೆದ ಸಂಪುಟ ಸಭೆಯು ನವಾಝ್ ಶರೀಫ್ ಅವರ ಕುಟುಂಬವನ್ನು ಇಸಿಎಲ್ ಪಟ್ಟಿಗೆ ಸೇರ್ಪಡೆಗೊಳಿಸುವ ನಿರ್ಧಾರವನ್ನು ಕೈಗೊಂಡಿತ್ತು.

    ಆ್ಯವೆನ್‌ಫೀಲ್ಡ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಇಸ್ಲಾಮಾಬಾದ್‌ನ ನ್ಯಾಯಾಲಯವೊಂದು ನವಾಝ್ ಶರೀಫ್, ಮರಿಯಾಮ್ ಹಾಗೂ ಸಫ್ದರ್ ಅವರಿ ಕ್ರಮವಾಗಿ 11 ವರ್ಷ, 8 ವರ್ಷ ಹಾಗೂ ಒಂದು ವರ್ಷದ ಜೈಲು ಶಿಕ್ಷೆಗಳ

 ಘೋಷಿಸಿತ್ತು. ಸೆಪ್ಟೆಂಬರ್ 19ರಂದು ಇಸ್ಲಾಮಾಬಾದ್‌ನ ಹೈಕೋರ್ಟ್ ಆ್ಯವೆನ್‌ಫೀಲ್ಡ್ ಪ್ರಕರಣದಲ್ಲಿ ಈ ಮೂವರಿಗೆ ವಿಧಿಸಲಾದ ಶಿಕ್ಷೆಯನ್ನು ಅಮಾನತಿನಲ್ಲಿರಿಸಿತ್ತು ಹಾಗೂ ಅವರನ್ನು ಬಿಡುಗಡೆಗೊಳಿಸಿತ್ತು.

 ಆದರೆ ಅಲ್ ಅಝಿಝಿಯಾ ಸ್ಟೀಲ್ ಮಿಲ್ಸ್ ಲಂಚ ಪ್ರಕರಣಕ್ಕೆ ಸಂಬಂಧಿಸಿ ಇಸ್ಲಾಮಾಬಾದ್‌ನ ನ್ಯಾಯಾಲಯವು 69 ವರ್ಷ ವಯಸ್ಸಿನ ಶರೀಫ್‌ಗೆ ಏಳು ವರ್ಷೆಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಘೋಷಿಸಿತ್ತು. ಆವಾಗಿನಿಂದ ಶರೀಫ್ ಅವರು ಇಸ್ಲಾಮಾಬಾದ್‌ನ ಕೊಟ್ ಲಾಖ್‌ಪಾಟ್ ಜೈಲಿನಲ್ಲಿ ಕಾರಾಗೃಹವಾಸ ಅನುಭವಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News