ಕಳ್ಳಭಟ್ಟಿ ದುರಂತವನ್ನು ರಾಜಕೀಯ ಪಿತೂರಿ ಎಂದ ಉತ್ತರ ಪ್ರದೇಶ ಸಿಎಂ!

Update: 2019-02-11 04:36 GMT

ಮೀರಠ್/ ಹರಿದ್ವಾರ, ಫೆ.11: ವಿಷಪೂರಿತ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 116ನ್ನು ತಲುಪಿದ್ದು, ಇದು ರಾಜಕೀಯ ಪಿತೂರಿ. ಸಮಾಜವಾದಿ ಪಕ್ಷ ಈ ಪಿತೂರಿಯ ಹಿಂದಿರಬಹುದು ಎಂಬ ಸಂದೇಹವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಮತ್ತೆ ಆರು ಮಂದಿ ಹಾಗೂ ಹರಿದ್ವಾರದಲ್ಲಿ ಮತ್ತೆ ಮೂವರು ಮೃತಪಟ್ಟಿದ್ದಾರೆ. ಉತ್ತರಾಖಂಡದಲ್ಲಿ 12 ಮತ್ತು ಉತ್ತರ ಪ್ರದೇಶದಲ್ಲಿ ಮತ್ತೆ ನಾಲ್ಕು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಇದೆ. ಉತ್ತರ ಪ್ರದೇಶದ ಸಹರಣಪುರದಲ್ಲಿ ಸಾವಿನ ಸಂಖ್ಯೆ 70ಕ್ಕೆ ತಲುಪಿದ್ದು, ಉತ್ತರಾಖಂಡದಲ್ಲಿ 36 ಮಂದಿ ಜೀವ ಕಳೆದುಕೊಂಡಿದ್ದಾರೆ. ಪೂರ್ವ ಉತ್ತರ ಪ್ರದೇಶದ ಖುಷಿನಗರದಲ್ಲಿ 10 ಮಂದಿ ಬಲಿಯಾಗಿದ್ದಾರೆ.

ಈ ದುರಂತಕ್ಕೆ ಆಡಳಿತಾರೂಢ ಬಿಜೆಪಿ ಕಾರಣ ಎಂದು ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿ ಟೀಕಿಸಿವೆ. ಈ ಮಧ್ಯೆ ಅಕ್ರಮ ಮದ್ಯ ವ್ಯಾಪಾರದಲ್ಲಿ ತೊಡಗಿರುವವರು ಯಾವುದೇ ಪಕ್ಷಕ್ಕೆ ಸೇರಿದ್ದರೂ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಆದಿತ್ಯನಾಥ್ ಘೋಷಿಸಿದ್ದಾರೆ.

"ಈ ಮುನ್ನ ಕೂಡಾ ಎಸ್ಪಿ ಮುಖಂಡರು ಇಂಥ ಕುಚೋದ್ಯದ ಕೃತ್ಯಗಳಲ್ಲಿ ತೊಡಗಿರುವುದು ಗಮನಕ್ಕೆ ಬಂದಿತ್ತು. ಅಝಂಗಢ, ಹರ್ದೋಯಿ, ಕಾನ್ಪುರ ಹಾಗೂ ಬಾರಬಂಕಿಯಲ್ಲಿ ಎಸ್ಪಿ ಮುಖಂಡರು ಹಿಂದಿನ ಕಳ್ಳಭಟ್ಟಿ ದುರಂತದಲ್ಲಿ ಶಾಮೀಲಾಗಿದ್ದರು. ಈ ಬಾರಿ ಕೂಡಾ ಪಿತೂರಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ" ಎಂದು ಅವರು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಈ ದುರಂತಕ್ಕೆ ಬಿಜೆಪಿ ನೇರ ಹೊಣೆ ಎಂದು ಆಪಾದಿಸಿದ್ದರೆ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ

ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News