ಇದು ಹಕ್ಕಿಯಲ್ಲ; ವಿಮಾನವೂ ಅಲ್ಲ.. ಮೇಕ್ ಇನ್ ಇಂಡಿಯಾ ‘ರೈಲು ಬಿಟ್ಟ’ ಪಿಯೂಶ್ ಗೋಯಲ್

Update: 2019-02-11 07:27 GMT

ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ವಂದೇ ಭಾರತ್ ಎಕ್ಸ್‍ಪ್ರೆಸ್ ನ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, "ಇದು ಹಕ್ಕಿ...ಇದು ವಿಮಾನ.. ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಿಸಿದ ಭಾರತದ ಮೊಟ್ಟಮೊದಲ ಅರೆ ಹೈಸ್ಪೀಡ್ ರೈಲು, ವಂದೇ ಭಾರತ್ ಎಕ್ಸ್‍ಪ್ರೆಸ್ ಮಿಂಚಿನ ವೇಗದಲ್ಲಿ ಚಲಿಸುತ್ತದೆ.." ಎಂದು ವಿವರಣೆ ನೀಡಿದ್ದರು. ಇದೇ ವಿಡಿಯೊವನ್ನು ಗೋಯಲ್ ಅವರ ಅಧಿಕೃತ ಟ್ವಿಟರ್ ಮತ್ತು ಫೇಸ್ ಬುಕ್ ಖಾತೆಗಳಲ್ಲೂ ಪೋಸ್ಟ್ ಮಾಡಲಾಗಿತ್ತು.

ಈ ವಿಡಿಯೊವನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಕೂಡಾ ರಿಟ್ವೀಟ್ ಮಾಡಿದರು.

ಪಿಯೂಶ್ ಗೋಯಲ್ ಅವರ ಟ್ವೀಟ್ ಆಧರಿಸಿ, ರಿಪಬ್ಲಿಕ್ ಟಿವಿ "ವಾಚ್: ಪಿಯೂಶ್ ಗೋಯೆಲ್ ಗಿವ್ಸ್ ಎ ಗ್ಲಿಂಪ್ಸ್ ಆಫ್ ಬರ್ಡ್ ಆ್ಯಂಡ್ ಪ್ಲೇನ್ ಲೈಕ್ ವಂದೇ ಭಾರತ್ ಎಕ್ಸ್‍ಪ್ರೆಸ್" ಎಂಬ ಶೀರ್ಷಿಕೆಯಡಿ ಒಂದು ಲೇಖನವನ್ನು ಕೂಡಾ ಪ್ರಕಟಿಸಿತು.

ಇದಾದ ಕೆಲವೇ ಕ್ಷಣಗಳಲ್ಲಿ ಸಚಿವರ ಫೇಸ್‍ ಬುಕ್ ಪೇಜ್‍ ನಲ್ಲಿ ಪ್ರತಿಕ್ರಿಯೆಗಳು ಬಂದವು. ಇದು ಮೂಲ ಅಥವಾ ನೈಜ ವಿಡಿಯೊ ಅಲ್ಲ; ಸ್ಪೀಡ್ ಅಪ್ ಮಾಡಿದ (ವೇಗ ಹೆಚ್ಚಿಸಿದ) ವಿಡಿಯೊ ಎಂಬ ಅರ್ಥದ ಪ್ರತಿಕ್ರಿಯೆಗಳು ಕಂಡುಬಂದವು.

ಸತ್ಯ ಏನು?

ಪಿಯೂಶ್ ಗೋಯಲ್ ಪೋಸ್ಟ್ ಮಾಡಿದ ವಿಡಿಯೋದ ಕಾಮೆಂಟ್ ಒಂದರಲ್ಲಿದ್ದ ಯೂಟ್ಯೂಬ್ ಲಿಂಕನ್ನು altnews.in ಪರಿಶೀಲಿಸಿದೆ. ಈ ವಿಡಿಯೊವನ್ನು ಯೂಟ್ಯೂಬ್ ಚಾನಲ್‍ನಲ್ಲಿ "ದ ರೈಲ್ ಮೈಲ್" ಎಂಬ ಹೆಸರಿನಲ್ಲಿ 2018ರ ಡಿಸೆಂಬರ್ 28ರಂದು ಪೋಸ್ಟ್ ಮಾಡಲಾಗಿತ್ತು. ಯೂಟ್ಯೂಬ್ ಚಾನಲ್‍ನ ವಿಡಿಯೊದ ಬಗ್ಗೆ ಎಂಬ ವಿಭಾಗದಲ್ಲಿ ನೀಡಿದ ಮಾಹಿತಿಯ ಅನ್ವಯ ಈ ವಿಡಿಯೊವನ್ನು ಟ್ರೈನ್ ಸ್ಪಾಟರ್ಸ್ ಅಥವಾ ಟ್ರೈನ್ ಎಂಥೂಸಿಯಾಸ್ಟ್ ಪೋಸ್ಟ್ ಮಾಡಿದ್ದು ಎನ್ನುವುದು ತಿಳಿದುಬಂತು. ಯುಟ್ಯೂಬ್ ಚಾನಲ್ ನ ಫೇಸ್‍ ಬುಕ್ ಪೇಜ್ ಕೂಡಾ ಇದ್ದು, ಸಚಿವರ ಪೋಸ್ಟ್ ಪ್ರಶ್ನಿಸಿದ ವ್ಯಕ್ತಿ ಈ ಫೇಸ್‍ ಬುಕ್ ಪೇಜ್ ‍ನ ಅಡ್ಮಿನ್ ಆಗಿದ್ದರು.

ಈ ಕೆಳಗಿನ ವಿಡಿಯೊದಲ್ಲಿ ಸಚಿವರು ಟ್ವೀಟ್ ಮಾಡಿದ ವಿಡಿಯೊ ತುಣುಕಿನ ಭಾಗ 26ನೇ ಸೆಕೆಂಡ್‍ನಿಂದ ಆರಂಭವಾಗುತ್ತದೆ. ಮೂಲ ವಿಡಿಯೋದಲ್ಲಿ ರೈಲು ಸಾಮಾನ್ಯ ವೇಗದಲ್ಲೇ ಚಲಿಸುತ್ತದೆ. ಆದರೆ ಸಚಿವರು ಎಡಿಟ್ ಮಾಡಿದ ವಿಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ರೈಲು ‘ಮಿಂಚಿನ ವೇಗದಲ್ಲಿ’ ಚಲಿಸುವುದು ಕಾಣಿಸುತ್ತದೆ. ಮೂಲ ವಿಡಿಯೋವನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗಿದೆ.

ಈ ಮೇಲಿನ ವಿಡಿಯೊದಿಂದ ತಿಳಿದುಬರುವಂತೆ, ರೈಲ್ವೆ ಸಚಿವರು ಪೋಸ್ಟ್ ಮಾಡಿದ ವಿಡಿಯೋ ಯೂಟ್ಯೂಬ್ ವಿಡಿಯೊದಿಂದ ಕತ್ತರಿಸಿದ ಭಾಗ. ಬಳಿಕ ಇದರ ವೇಗವನ್ನು ಮೂಲ ವೇಗದ ದುಪ್ಪಟ್ಟು ವೇಗಗೊಳಿಸಲಾಗಿದೆ (ಫಾಸ್ಟ್ ಫಾರ್ವರ್ಡ್). ಸಚಿವ ಪಿಯೂಶ್ ಗೋಯಲ್ ಪೋಸ್ಟ್ ಮಾಡಿದ ವಿಡಿಯೊ ಮತ್ತು ಮೂಲ ವಿಡಿಯೊದ ವೇಗದ ಹೋಲಿಕೆಯನ್ನು ಈ ಕೆಳಗೆ ಕಾಣಬಹುದಾಗಿದೆ.

ಈ ವಿಡಿಯೊವನ್ನು ಹರ್ಯಾಣ ರಾಜ್ಯದ ಅಸೋಟಿ ರೈಲು ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿತ್ತು. ಮೂಲ ಯೂಟ್ಯೂಬ್ ವಿಡಿಯೊದಲ್ಲಿ ಟ್ರೇಡ್‍ಮಾರ್ಕ್ ವಾಟರ್‍ಮಾರ್ಕ್ ಕೂಡಾ ಇದ್ದು, ಇದು ತಮ್ಮ ವಿಡಿಯೊ ಎಂದು ಹೇಳಿಕೊಂಡ ಫೇಸ್‍ಬುಕ್ ಬಳಕೆದಾರನ ಪ್ರತಿಪಾದನೆಗೆ ತಾಳೆಯಾಗುತ್ತದೆ.

ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯುವಂಥ ಮಾಹಿತಿಯನ್ನು ಗೋಯಲ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ಇವರು, ಕೇಂದ್ರ ಸರ್ಕಾರದ ಅಭಿವೃದ್ಧಿ ಪ್ರಯತ್ನಗಳನ್ನು ಧನಾತ್ಮಕ ಬೆಳಕಿನಲ್ಲಿ ಬಿಂಬಿಸುವ ಪ್ರಯತ್ನದಲ್ಲಿ ತಪ್ಪುದಾರಿಗೆಳೆಯುವ ಚಿತ್ರ ಹಾಗೂ ಮಾಹಿತಿ ಪೋಸ್ಟ್ ಮಾಡಿದ್ದಕ್ಕಾಗಿ ಹಲವು ಬಾರಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಕೃಪೆ: altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News