ಕೇಂದ್ರ ಬಜೆಟ್ ನಲ್ಲಿ ರಕ್ಷಣಾ ಪಡೆಗಳಿಗೆ ಮೀಸಲಿರಿಸಲಾದ ಮೊತ್ತ ಪಾವತಿಗಳಿಗೂ ಸಾಲದು!

Update: 2019-02-11 08:40 GMT

ಹೊಸದಿಲ್ಲಿ, ಫೆ.11: ಈ ವರ್ಷದ ಮಧ್ಯಂತರ ಬಜೆಟಿನಲ್ಲಿ ನೌಕಾಪಡೆ ಮತ್ತು ವಾಯುಪಡೆಗೆ ಮೀಸಲಿರಿಸಲಾಗಿರುವ ಮೊತ್ತ ಈ ಎರಡೂ ಪಡೆಗಳು 2019-2010ರಲ್ಲಿ ಮಾಡಬೇಕಾದ ಪಾವತಿಗಳನ್ನೂ ಮಾಡಲು ಸಾಧ್ಯವಾಗದಷ್ಟು ಕಡಿಮೆಯಾಗಿದೆ ಎಂದು ‘ದಿ ಹಿಂದು’ ವರದಿ ತಿಳಿಸಿದೆ. ಈ  ಹಣಕಾಸಿನ ಕೊರತೆಯಿಂದ ರಕ್ಷಣಾ ಪಡೆಗಳ ಆಧುನೀಕರಣ ಮತ್ತು ಸಾಮರ್ಥ್ಯ ಹೆಚ್ಚಳ ಯೋಜನೆಗಳು  ಬಾಧಿತವಾಗಲಿದೆ ಎಂಬ ಕಳವಳ ವ್ಯಕ್ತವಾಗಿದೆ.

ಸಂಸತ್ತಿನಲ್ಲಿ ಫೆಬ್ರವರಿ 1ರಂದು ಮಂಡನೆಯಾದ ಬಜೆಟ್ ಮೂರೂ ರಕ್ಷಣಾ ಪಡೆಗಳಿಗೆ 3.01 ಲಕ್ಷ ಕೋಟಿ ರೂ. ಮೀಸಲಿರಿಸಿತ್ತು. ಇದರಿಂದ ಅಸಮಾಧಾನಗೊಂಡಿರುವ ರಕ್ಷಣಾ ಪಡೆಗಳು ಈಗಾಗಲೇ ರಕ್ಷಣಾ ಸಚಿವಾಲಯಕ್ಕೆ  ಈ ಬಗ್ಗೆ ತಿಳಿಸಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿತ್ತ ಸಚಿವಾಲಯದ ಬಳಿ ಈ ವಿಚಾರ ಎತ್ತಲಿದ್ದಾರೆಂದು ತಿಳಿದು ಬಂದಿದೆ.

ನೌಕಾ ಪಡೆಗೆ 22,227 ಕೋಟಿ ರೂ. ಮೀಸಲಿರಿಸಲಾಗಿದ್ದರೂ ಅದು 2019-20ರಲ್ಲಿ ಪಾವತಿ ಮಾಡಬೇಕಾದ ಒಟ್ಟು ಮೊತ್ತ ರೂ 25,461 ಆಗಿದೆ. ವಾಯುಪಡೆಗೆ 39,347 ಕೋಟಿ ರೂ. ನಿಗದಿಯಾಗಿದ್ದರೆ ಅದು ಪಾವತಿ ಮಾಡಬೇಕಾಗಿರುವ ಮೊತ್ತ ರೂ 47,413 ಕೋಟಿಯಾಗಿದೆ.  ಈ ಮೊತ್ತದಲ್ಲಿ ರಫೇಲ್ ಜೆಟ್ ಪಾವತಿಗಳೂ ಸೇರಿದೆ.

ಅತ್ತ ಸೇನೆಗೆ 29,700 ಕೋಟಿ ಮೀಸಲಿರಿಸಲಾಗಿದ್ದರೆ ಅದು ಪಾವತಿ ಮಾಡಬೇಕಿರುವ ಮೊತ್ತ ರೂ 21,600 ರೂ. ಆಗಿದ್ದು ಸಮಸ್ಯೆಯೇನೂ ಇಲ್ಲದೇ ಇದ್ದರೂ  ವೇತನದ ಹೊರತಾದ ಇತರ ವೆಚ್ಚಗಳು ಬಾಧಿತವಾಗಬಹುದು.

2019-20ರಲ್ಲಿ ಸೇನೆ, ನೌಕಾದಳ ಮತ್ತು ವಾಯುದಳಗಳ ಅಂದಾಜು ಖರ್ಚುವೆಚ್ಚಗಳು ಕ್ರಮವಾಗಿ ರೂ 36,000 ಕೋಟಿ, ರೂ 35,714 ಕೋಟಿ ಹಾಗೂ ರೂ 74,895 ಕೋಟಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News