ಫೆಡ್ ಕಪ್: ರೊಮೆನಿಯಾ ಸೆಮಿಫೈನಲ್ ಹಂತಕ್ಕೆ

Update: 2019-02-11 18:39 GMT

ಪ್ಯಾರಿಸ್, ಫೆ.11: ಹಾಲಿ ಚಾಂಪಿಯನ್ ಝೆಕ್ ಗಣರಾಜ್ಯಕ್ಕೆ 3-2ರ ಅಂತರದಲ್ಲಿ ಸೋಲಿನ ಆಘಾತ ನೀಡಿದ ರೊಮೆನಿಯಾ ತಂಡ ಫೆಡ್ ಕಪ್ ಟೂರ್ನಿಯ ಸೆಮಿಫೈನಲ್ ಹಂತ ಪ್ರವೇಶಿಸಿದೆ. ನಿರ್ಣಾಯಕ ಡಬಲ್ಸ್ ಪಂದ್ಯದಲ್ಲಿ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ ವಿಜೇತರಾದ ಬಾರ್ಬರಾ ಕ್ರೆಜಿಕೋವಾ ಮತ್ತು ಕ್ಯಾತರೀನಾ ಸಿನಿಯಕೋವಾ ಜೋಡಿಯನ್ನು ಮ್ಯಾರಾಥಾನ್ ಹೋರಾಟದಲ್ಲಿ ಮಣಿಸಿದ ರೊಮೇನಿಯಾದ ಐರಿನಾ ಬೆಗು- ಮೋನಿಕಾ ನಿಕುಲೆಸ್ಕು ಜೋಡಿ ತಮ್ಮ ದೇಶವನ್ನು ಸೆಮಿಫೈನಲ್ ಹಂತಕ್ಕೆ ಮುನ್ನಡೆಸಿತು. ಸುಮಾರು 3 ಗಂಟೆ ಕಾಲ ನಡೆದ ರೋಮಾಂಚನಕಾರಿ ಹೋರಾಟದಲ್ಲಿ ರೊಮೆನಿಯಾದ ಜೋಡಿ 6-7(2/7), 6-4, 6-4 ಅಂತರದ ಜಯ ಸಾಧಿಸಿತು. ಇದರೊಂದಿಗೆ ತವರೂರಿನ ಪ್ರೇಕ್ಷಕರ ನಿರೀಕ್ಷೆಯನ್ನು ಉಳಿಸಿಕೊಳ್ಳುವ 10 ಬಾರಿಯ ಚಾಂಪಿಯನ್ ಝೆಕ್ ಗಣರಾಜ್ಯದ ಕನಸು ನುಚ್ಚುನೂರಾಯಿತು. ಇದಕ್ಕೂ ಮೊದಲು ವಿಶ್ವದ ಮಾಜಿ ಅಗ್ರಗಣ್ಯ ಆಟಗಾರ್ತಿಯರ ನಡುವೆ ನಡೆದ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ , ಸಿಮೊನಾ ಹಾಲೆಪ್ ತಮ್ಮ ಎದುರಾಳಿ ಝೆಕ್ ತಂಡದ ಅಗ್ರಗಣ್ಯ ಆಟಗಾರ್ತಿ ಕರೊಲಿನ ಪ್ಲಿಸ್ಕೋವಾರನ್ನು 6-4, 5-7, 6-4ರ ಕಠಿಣ ಹೋರಾಟದಲ್ಲಿ ಮಣಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಎರಡನೇ ಪಂದ್ಯದಲ್ಲಿ ಕ್ಯಾತರೀನಾ ಸಿನಿಯಕೋವಾ 6-4, 6-2ರ ಅಂತರದಲ್ಲಿ ಮಿಹೆಲ ಬುಝರ್ನೆಸ್ಕು ಎದುರು ಜಯ ಸಾಧಿಸಿ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಡಬಲ್ಸ್‌ನಲ್ಲಿ ಪಟ್ಟು ಬಿಡದ ರೊಮೆನಿಯಾ ಆಟಗಾರ್ತಿಯರು ತಂಡವನ್ನು ಸೆಮಿಫೈನಲ್ ಹಂತಕ್ಕೇರಿಸುವಲ್ಲಿ ಸಫಲವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News