ಅಪ್ಪು ಅಣ್ಣನ ಬಹುಕಾಲದ ಕನಸು ನನಸಾಗಿಸಿದ ಉಚ್ಚಿಲದ ಯುವಕರು

Update: 2019-02-13 12:18 GMT

ಹೆಸರು ಅಪ್ಪು ಅಣ್ಣ, ವಾಸವಾಗಿರುವುದು ಸೋಮೇಶ್ವರ ಉಚ್ಚಿಲದ ಕಡಲ ತೀರದ ಪುಟ್ಟ ಮನೆಯೊಂದರಲ್ಲಿ. 72ರ ಇಳಿವಯಸ್ಸಿನಲ್ಲಿ ಏಕಾಂತ ಜೀವನವನ್ನು ದೂಡುತ್ತಿರುವ ಅಪ್ಪು ಅಣ್ಣನಿಗೆ ಸಮುದ್ರದ ಅಲೆಗಳೇ ಬದುಕಿನ ಸಂಗಾತಿ. ಸರ್ಕಾರದಿಂದ ಸಿಗುವ 7 ಕಿಲೋ ಅಕ್ಕಿ ಮತ್ತು ಸಾವಿರ ರೂಪಾಯಿ ಅವರ ಜೀವನದ ಆಸರೆ. ಅದರಲ್ಲಿ ಅವರ ದೈನಂದಿನ ಬದುಕಿನ ಬೇಡಿಕೆಗಳನ್ನು ಪೂರೈಸಬೇಕಷ್ಟೆ…!

ಮೂರೂ ಹೊತ್ತಿನ ಆಹಾರವನ್ನು ಸೇವಿಸದೇ ವರ್ಷಗಳೇ ಕಳೆಯಿತು ಎಂದು ಅಪ್ಪು ಅಣ್ಣ ಹೇಳುವಾಗ ಎಂತಹ ಕಲ್ಲು ಹೃದಯವೂ ಕರಗುತ್ತದೆ. ಮಾನವನ ಮೂಲಭೂತ ಬೇಡಿಕೆಯಾದ ಶೌಚಾಲಯವೇ ಇಲ್ಲದಿರುವುದು ಅವರನ್ನು ಹಲವು ವರ್ಷದಿಂದ ಕಾಡುತ್ತಿದ್ದ ಸಮಸ್ಯೆ. ಅವರೇ ಹೇಳುವಂತೆ ಹಲವಾರು ಜನರಲ್ಲಿ ತನಗೊಂದು ಶೌಚಾಲಯ ನಿರ್ಮಿಸಿ ಕೊಡಬೇಕೆಂದು ಬೇಡಿಕೊಂಡರು. 2014 ರಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ನಳಿನ್ ಕುಮಾರ್ ರಿಗೂ ಈ ಬಗ್ಗೆ ಅಪ್ಪು ಅಣ್ಣ ತಿಳಿಸಿದ್ದರು. ಉಚ್ಚಿಲ ಕ್ಷೇತ್ರದ ಶಾಸಕರಿಗೂ ಮನವಿ ಸಲ್ಲಿಸಿದ್ದರು.

ಈ ನಡುವೆ ಯಾರದೋ ಸಲಹೆಯ ಮೇರೆಗೆ ಅವರು ಸೋಮೇಶ್ವರ ಉಚ್ಚಿಲ ಪಂಚಾಯತ್ ಕಚೇರಿಯಲ್ಲಿ ತನಗೆ ಶೌಚಾಲಯವನ್ನು ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದರು. 9 ತಿಂಗಳ ಕಾಯುವಿಕೆಯ ನಂತರ ತನ್ನ ಮನವಿಯನ್ನು ತಿರಸ್ಕರಿಸಲಾಗಿದೆ ಎನ್ನುವುದು ಅಪ್ಪು ಅಣ್ಣನಿಗೆ ತಿಳಿದು ಬಂತು. ಇದು ತಿಳಿದ ನಂತರ ಬೇರೆ ಮಾರ್ಗವೇ ಇಲ್ಲದಾಯಿತು. ಅಪ್ಪು ಅಣ್ಣನ ಧ್ವನಿ ಆಳುವ ವರ್ಗದ ಕಿವಿಗೆ ಬೀಳಲೇ ಇಲ್ಲ!

ಕೇಂದ್ರ ಸರಕಾರವು ‘ಸ್ವಚ್ಛ ಭಾರತ’ ಅಭಿಯಾನಕ್ಕೆ ದೊಡ್ಡ ಮೊತ್ತವನ್ನು ಮೀಸಲಿಟ್ಟಿದೆ, ಆದರೆ ಅಪ್ಪು ಅಣ್ಣನಂತಿರುವ ಸಾವಿರಾರು ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ನಮ್ಮ ವ್ಯವಸ್ಥೆಯ ವೈಫಲ್ಯವನ್ನು ಸಾರಿ ಹೇಳುತ್ತಿದೆ. ಸಮುದ್ರ ವಿಹಾರಕ್ಕೆ ಸಾವಿರಾರು ಸ್ಥಳೀಯ ಮತ್ತು ಹೊರ ಊರಿನಿಂದ ಜನರು ಬರುತ್ತಾರೆ, ಅವರು ಯಾರೂ ಅಪ್ಪು ಅಣ್ಣನಂತಿರುವ ವ್ಯಕ್ತಿಗಳ ಮಾನಸಿಕ ತುಮುಲವನ್ನು ಅರಿಯುವ ಗೋಜಿಗೆ ಹೋಗಲಿಲ್ಲ.

ಅಪ್ಪು ಅಣ್ಣ ತನ್ನ ಸಮಸ್ಯೆಗಳನ್ನು ಊರಿನ ಯುವಕರೊಂದಿಗೆ ಹೇಳಿಕೊಂಡಿದ್ದರು. ಇದನ್ನು ಕೇಳಿಸಿಕೊಂಡ ಯುವಕರು ಅಜ್ಜಿನಡ್ಕ ಫ್ರೆಂಡ್ಸ್ ಅಸೋಸಿಯೇಶನ್ ನೊಂದಿಗೆ ಅಪ್ಪು ಅಣ್ಣನ ಅಸಹಾಯಕ ಪರಿಸ್ಥಿಯನ್ನು ವಿವರಿಸಿದ್ದರು ಮತ್ತು ಅಪ್ಪು ಅಣ್ಣನಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದ ವೇಳೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಉಚ್ಚಿಲ ಮತ್ತು ಪರಿಸರದ ಅಜ್ಜಿನಡ್ಕ ಫ್ರೆಂಡ್ಸ್ ಅಸೋಸಿಯೇಶನ್ ಯುವಕರು ಕೂಡಲೇ ಸಹಾಯ ನೀಡಲು ಮುಂದಾದರು. ಕೇವಲ 2 ವಾರಗಳಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಂಡಿತು.

ತನ್ನ ಬಹುಕಾಲದ, ಮೂಲಭೂತ ಬೇಡಿಕೆಯಾಗಿದ್ದ ಶೌಚಾಲಯವನ್ನು ನಿರ್ಮಿಸಿಕೊಟ್ಟ ಉಚ್ಚಿಲದ ಯುವಕರಿಗೆ ಮತ್ತು ಅಜ್ಜಿನಡ್ಕ ಫ್ರೆಂಡ್ಸ್ ಅಸೋಸಿಯೇಶನ್ ಗೆ ಅಪ್ಪು ಅಣ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

ಇಂದು ನೂರಾರು ಮಂದಿ ಅಪ್ಪು ಅಣ್ಣನಂತಹವರು ನಮ್ಮ ಊರು, ಗ್ರಾಮ, ಜಿಲ್ಲೆ, ರಾಜ್ಯದಲ್ಲಿ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಸರಕಾರದಿಂದ ದೊರೆಯಬೇಕಾದ ಸವಲತ್ತನ್ನು ಪಡೆಯಲು ಸುಲಭ ನಿಯಮಾವಳಿಯನ್ನು ರಚಿಸಬೇಕಾಗಿದೆ. ಕಡತಗಳಲ್ಲಿ ಹುದುಗಿರುವ ಸವಲತ್ತುಗಳು ಹೊರಬಂದು ಬಡವರ ಬಾಗಿಲಿಗೆ ಮುಟ್ಟಬೇಕಾಗಿದೆ ಎಂದು ಅಜ್ಜಿನಡ್ಕ ಫ್ರೆಂಡ್ಸ್ ಅಸೋಸಿಯೇಶನ್ ಒತ್ತಾಯಿಸಿದೆ.

Similar News