ಭಾರತದ ಸಾರ್ವಜನಿಕ ಆರೋಗ್ಯ ನೀತಿ ಮತ್ತು ಕೋಕಾ-ಕೋಲಾ

Update: 2019-02-13 18:32 GMT

 ಆಹಾರೋದ್ಯಮ ಮತ್ತು ಸರಕಾರದ ನಿಯಂತ್ರಕರ ನಡುವೆ ಇಂತಹ ನಿಕಟ ಸಂಪರ್ಕವಿರದಂತೆ ಮಾಡಲು ಸರಕಾರ ಜಾಗರೂಕವಾಗಿದ್ದು, ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಬಿ. ಸಸಿ ಸೇಕರನ್ ಮತ್ತು ದೇಬಬ್ರತ ಕಾನುಂಗೊ- ಇಬ್ಬರನ್ನೂ ಎಫ್‌ಎಸ್‌ಎಸ್‌ಎಐಯ ಕರ್ತವದಿಂದ ಬಿಡುಗಡೆಗೊಳಿಸಿ, ಅವರ ಜಾಗದಲ್ಲಿ ಹಿತಾಸಕ್ತಿಗಳ ತಿಕ್ಕಾಟವಿರದ ಸ್ವತಂತ್ರ ತಜ್ಞರನ್ನು ನೇಮಿಸಬೇಕು. ವಿಶೇಷವಾಗಿ ಖಾಸಗಿ ಆಹಾರ ನಿಗಮಗಳು ಮತ್ತು ಸಾರ್ವಜನಿಕ ಆರೋಗ್ಯದ ನಡುವೆ ಹಿತಾಸಕ್ತಿಗಳ ತಿಕ್ಕಾಟವಿರದಂತಹ ವ್ಯಕ್ತಿಗಳನ್ನು ನೇಮಿಸಬೇಕಾಗಿದೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರೊ/ ಸೂಸನ್ ಗ್ರೀನ್‌ಹಾಲ್ಗ್‌ರವರ ಪ್ರಕಾರ ಕೋಕಾ-ಕೋಲಾ ಕಂಪೆನಿಯು ಬೊಜ್ಜು ಸಮಸ್ಯೆಗೆ ಸಂಬಂಧಿಸಿದ ವಿಷಯಗಳ ಕುರಿತಾದ ಚೀನಾದ ಸಾರ್ವಜನಿಕ ಆರೋಗ್ಯ ನೀತಿಗಳ ಮೇಲೆ ಪ್ರಭಾವ ಬೀರಿದೆ. ಕಂಪೆನಿಯ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಲಾಭವಾಗುವಂತೆ ಪೌಷ್ಟಿಕಾಂಶ ವಿಜ್ಞಾನಿಗಳ ಜತೆ ಗುಪ್ತ ಕಾರ್ಯತಂತ್ರ ನಡೆಸಿದ ಲಾಭರಹಿತವಾದ ಒಂದು ಸಂಘಟನೆಯ ಮೂಲಕ ಕಂಪೆನಿಯು ಈ ಕೆಲಸಮಾಡಿದೆ. ಈ ಕಾರ್ಯತಂತ್ರದ ಆಘಾತಕಾರಿ ವಿವರಗಳು ಬ್ರಿಟಿಷ್ ಮೆಡಿಕಲ್ ಜರ್ನಲ್ ಮತ್ತು ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ಪಾಲಿಸಿಯಲ್ಲಿ ಕಳೆದ ತಿಂಗಳು ಪ್ರಕಟವಾಗಿವೆ.
ದಿ ಇಂಟರ್ನಲ್ ಲೈಫ್ ಸಾಯನ್ಸಸ್ ಇನ್‌ಸ್ಟಿಟ್ಯೂಟ್(ಐಎನ್‌ಎಸ್‌ಐ) ಎಂಬ ಒಂದು ಲಾಭೇತರ ಸಂಘಟನೆ ಇದೆ. ಕೋಕಾ-ಕೋಲಾ ಕಂಪೆನಿಯ ಓರ್ವ ಮಾಜಿ ಹಿರಿಯ ಉಪಾಧ್ಯಕ್ಷ ಅಲೆಕ್ಸ್ ಮಲೆಸ್ಪಿನಾ ಎಂಬಾತ ಇದರ ಸ್ಥಾಪಕ. ಕೋಕಾ-ಕೋಲಾದ ಮುಖ್ಯ ಆರೋಗ್ಯ ಮತ್ತು ವಿಜ್ಞಾನ ಅಧಿಕಾರಿ ರೋನಾ ಆ್ಯಪಲ್‌ಬೌಮ್ 2015ರ ಅಂತ್ಯದ ವರೆಗೆ ಇದನ್ನು ಮುನ್ನಡೆಸುತ್ತಿದ್ದ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬೊಜ್ಜು ಸಮಸ್ಯೆಯಿಂದ ಬಳಲುವವರು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸೇವಿಸುತ್ತಿರುವ ಬಗ್ಗೆ ನಡೆದ ಹಲವು ಅಧ್ಯಯನಗಳು ಈ ಕಾಯಿಲೆಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಬಳಸುತ್ತಿರುವುದೇ ಮುಖ್ಯ ಕಾರಣವೆಂದು ಹೇಳಿದವು. ಕೋಕಾ-ಕೋಲಾದ ಸಿಹಿಯನ್ನು ಬೆಟ್ಟುಮಾಡಿ ತೋರಿಸಲಾಯಿತು. ಇದನ್ನು ಅಲ್ಲಗಳೆಯುವ ಪ್ರಯತ್ನವಾಗಿ, ಕೋಕಾ-ಕೋಲಾ ಕಂಪೆನಿಯು ಆರೋಗ್ಯಪೂರ್ಣ ಆಹಾರ(ಡಯಟ್) ಮತ್ತು ಕ್ಯಾಲರಿಗಳ ಸೇವನೆಗಿಂತ ದೈಹಿಕ ಚಟುವಟಿಕೆಗಳು ಇಲ್ಲದಿರುವುದೇ ಬೊಜ್ಜುತನಕ್ಕೆ ಕಾರಣವೆಂದು ಪ್ರಚಾರ ತಂತ್ರವನ್ನು ಅಳವಡಿಸಿಕೊಂಡಿತು. ಚೀನಾ, ಭಾರತ, ಮೆಕ್ಸಿಕೊ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೂಡ ಬೊಜ್ಜು ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ತನ್ನ ಮಾರುಕಟ್ಟೆಗೆ ಹೊಡೆತ ಬೀಳಬಹುದೆಂಬ ಭಯವೇ ಕಂಪೆನಿಯ ಈ ತಂತ್ರಕ್ಕೆ ಕಾರಣವಾಗಿತ್ತು. ಸಾಕಷ್ಟು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ನೀವು ಎಷ್ಟು ಕೋಲಾ ಕುಡಿದರೂ ನಿಮಗೆ ಏನೂ ತೊಂದರೆಯಾಗುವುದಿಲ್ಲ ಎಂದು ಗ್ರಾಹಕರಿಗೆ ಮನವರಿಕೆ ಮಾಡಿಸು ವುದೇ ಕಂಪೆನಿಯ ಕಾರ್ಯ ತಂತ್ರ ವಾಗಿತ್ತು.
ಅಮೆರಿಕದಲ್ಲಿ ಗ್ಲೋಬಲ್ ಎನರ್ಜಿ ಬ್ಯಾಲನ್ಸ್ ನೆಟ್‌ವರ್ಕ್ (ಜಿಇಬಿಎನ್)ಎಂಬ ಇನ್ನೊಂದು ಲಾಭೇತರ ಸಂಘಟನೆ 2015ರಲ್ಲಿ ತಾನು ತನ್ನ ಚಟುವಟಿಕೆಗಳನ್ನು ನಿಲ್ಲಿಸುವುದಾಗಿ ಹೇಳಿತು. ಸಾರ್ವಜನಿಕ ಆರೋಗ್ಯ ವೃತ್ತಿಪರರು ಮತ್ತು ಇತರ ಮಾಧ್ಯಮಗಳು ಅದೊಂದು ಕೋಕಾ-ಕೋಲಾ ಕಂಪೆನಿಯ ಪರವಾಗಿ ಕೆಲಸ ಮಾಡುವ ಸಂಘಟನೆ ಎಂದು ಬಹಿರಂಗಪಡಿಸಿದ್ದೇ ಇದಕ್ಕೆ ಕಾರಣ.
ಐಎಲ್‌ಎಸ್‌ಐಯ ಹಾಗೆಯೇ, ಜಿಇಬಿಎನ್ ಕೂಡ ತನ್ನ ಜಾಲವನ್ನು ಆರಂಭಿಸಲು ಪಡೆದ 1.5ಮಿಲಿಯ ಡಾಲರ್ ಮೊತ್ತವೂ ಸೇರಿದಂತೆ, ಕೋಕಾ ಕೋಲಾದಿಂದ ಸಾಕಷ್ಟು ಮೊತ್ತದ ನಿಧಿಯನ್ನು ಪಡೆದಿತ್ತು.


ಐಎಲ್‌ಎಸ್‌ಐಗೆ ಒಂದು ಭಾರತೀಯ ಶಾಖೆ ಕೂಡ ಇದೆ. ಅದರ ನಿರ್ದೇಶಕರ ಮಂಡಳಿಯಲ್ಲಿ ಕೂಡ ನೆಸ್ಲೆ ಹಾಗೂ ಅಜಿನೊಮೊಟೊದ ಪ್ರತಿನಿಧಿಗಳಿದ್ದಾರೆ. ಅದು ಸಕ್ಕರೆ ಮತ್ತು ಡಯಟ್‌ನ ಪಾತ್ರವನ್ನು ಕ್ಷೀಣಗೊಳಿಸಿ, ಇದಕ್ಕೆ ಬದಲಾಗಿ ಹೆಚ್ಚು ಹೆಚ್ಚು ದೈಹಿಕ ಚಟುವಟಿಕೆ/ವ್ಯಾಯಾಮ ಮಾಡಬೇಕೆಂದು ಹೇಳುವುದಕ್ಕಾಗಿ ಭಾರತದಲ್ಲಿ ಸಮ್ಮೇಳನವನ್ನು ಏರ್ಪಡಿಸಿತ್ತು. ಆದರೆ ಭಾರತ ಸರಕಾರದ ಅಧಿಕಾರಿಗಳು ಕೂಡ ಐಎಸ್‌ಎಲ್‌ಐನ್ನು ನಡೆಸುವುದರಲ್ಲಿ ಒಳಗೊಂಡಿದ್ದಾರೆಂಬುದು ನಿಜವಾಗಿಯೂ ಆತಂಕದ ಸಂಗತಿ. ಉದಾಹರಣೆಗೆ, ಮಂಡಳಿಯ ಸದಸ್ಯರಲ್ಲೊಬ್ಬರು ದೇಬಬ್ರತ ಕಾನುಂಗೊ. ಇವರು ಫುಡ್ ಸೇಫ್ಟಿ ಆ್ಯಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ)ದ ಓರ್ವ ಅಧಿಕಾರಿ.
ಹಾಗೆಯೇ ಇನ್ನೋರ್ವ ಸದಸ್ಯ ಬಿ.ಸಸಿ ಸೇಕರನ್ ಎಫ್‌ಎಸ್‌ಎಐಯ ವೈಜ್ಞಾನಿಕ ಸಮಿತಿಯ ಸದಸ್ಯ. ಇವರನ್ನು ವಾಶಿಂಗ್ಟನ್‌ನಲ್ಲಿರುವ ಐಎಲ್‌ಎಸ್‌ಐ ಗ್ಲೋಬಲ್‌ನ ಟ್ರಸ್ಟಿಗಳಲ್ಲಿ ಒಬ್ಬರು ಎಂದು ನಮೂದಿಸಲಾಗಿದೆ.
ಚೀನಾದಲ್ಲಿ ನಡೆದಿರುವಂತೆಯೆ, ಈ ಸಂಘಟನೆಯು ಭಾರತದಲ್ಲಿ ಪ್ರಮುಖ ಆರೋಗ್ಯನೀತಿ ಕ್ಷೇತ್ರಗಳನ್ನು, ರಂಗಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
2008ರ ಎಪ್ರಿಲ್‌ನಲ್ಲಿ, ಎಫ್‌ಎಸ್‌ಎಸ್‌ಎಐ ಆಹಾರ ಸುರಕ್ಷತೆ ಮತ್ತು ಗುಣ ಮಟ್ಟಗಳು (ಲೇಬಲಿಂಗ್ ಆ್ಯಂಡ್ ಡಿಸ್‌ಪ್ಲೆ) ಎಂಬ ಒಂದು ಕರಡನ್ನು ಬಿಡುಗಡೆ ಮಾಡಿತು. ಇದರ ಪ್ರಕಾರ, ಆಹಾರೋತ್ಪನ್ನ ಒಂದರ ಮೇಲೆ ಅಂಟಿಸಲಾಗುವ ಲೇಬಲ್‌ನಲ್ಲಿ ಅದರಲ್ಲಿರುವ ಕೊಬ್ಬು, ಸಕ್ಕರೆ ಅಥವಾ ಉಪ್ಪಿನ ಮಟ್ಟಗಳನ್ನು ಕೆಂಪು ಬಣ್ಣದ ಅಕ್ಷರಗಳಲ್ಲಿ ನಮೂದಿಸಬೇಕು; ಅಂದರೆ ಕೆಲವು ಸ್ವಹಿತಾಸಕ್ತಿ ಶಕ್ತಿಗಳು ಇದನ್ನು ವಿರೋಧಿಸಿದ್ದರಿಂದ ಕರಡು ನಿಯಮಗಳನ್ನು ತಡೆಹಿಡಿಯಲಾಯಿತು. ಆದ್ದರಿಂದ, ಭಾರತದ ಆಹಾರ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ವ್ಯಕ್ತಿಗಳಿಗೆ ಐಎಲ್‌ಎಸ್‌ನಲ್ಲಿ ಕೂಡ ಆಯಕಟ್ಟಿನ ಹುದ್ದೆಗಳನ್ನು, ಪಾತ್ರಗಳನ್ನು ಹೊಂದಲು ಅವಕಾಶ ನೀಡಬಾರದು. ಇಂತಹ ದ್ವಿಪಾತ್ರಗಳು ಹಿತಾಸಕ್ತಿಗಳ ಗಂಭೀರ ಸ್ವರೂಪದ ಘರ್ಷಣೆಗೆ ಸಮಾನವಾಗುತ್ತವೆ.
ಕೋಕಾ-ಕೋಲಾದಂತಹ ಕಂಪೆನಿಗಳು ಎಲ್ಲಾ ಕಡೆ ತಮ್ಮ ಆಜಾನುಬಾಹುಗಳನ್ನು ಹರಡಿಕೊಂಡಿವೆೆ. ಹಾಗಾಗಿ, ಅವುಗಳು ತಮ್ಮ ಲಾಭಕ್ಕಾಗಿ ಎಷ್ಟು ಮೊತ್ತದ ಹಣವನ್ನಾದರೂ ವ್ಯಯಿಸಲು ಸಿದ್ಧವಿರುತ್ತವೆ. 2006ರಲ್ಲಿ ಭಾರತದಲ್ಲಿ ನೀರಿನ ಕೊರತೆಗಳನ್ನು ಉಂಟುಮಾಡಿದ್ದಕ್ಕಾಗಿ ಕೋಕಾ-ಕೋಲಾ ಕಂಪೆನಿ ಟೀಕೆಗೆ ಗುರಿಯಾದಾಗ ಅದು ತನ್ನ ಪರವಾಗಿ ಲಾಬಿ ಮಾಡಲು ಒಬ್ಬ ಲಾಬಿ ಮಾಡುವವನನ್ನು(ಲಾಬಿಯಿಸ್ಡ್) ಬಾಡಿಗೆಗೆ ಪಡೆಯಿತು. ‘‘ಕೋಕಾ-ಕೋಲಾದಿಂದ ಪರಿಸರ ಹಾನಿ ಉಂಟಾಗುತ್ತಿದೆ ಎಂದು ಯಾವುದೇ ಒಂದು ಅಧ್ಯಯನ ಹೇಳಿದಲ್ಲಿ ಅದನ್ನು ಸುಳ್ಳೆಂದು ಇನ್ನೊಂದು ಅಧ್ಯಯನವು ಸಾಬೀತು ಮಾಡುವಂತೆ ನೋಡಿಕೊಳ್ಳುವುದು ಆ ಲಾಬಿಯಿಸ್ಟ್‌ನ ಕೆಲಸವಾಗಿತ್ತು’’ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಹೇಳಿತ್ತು.
 ಆಹಾರೋದ್ಯಮ ಮತ್ತು ಸರಕಾರದ ನಿಯಂತ್ರಕರ ನಡುವೆ ನಿಕಟ ಸಂಪರ್ಕವಿರದಂತೆ ಮಾಡಲು ಸರಕಾರ ಜಾಗರೂಕವಾಗಿದ್ದು, ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಬಿ. ಸಸಿ ಸೇಕರನ್ ಮತ್ತು ದೇಬಬ್ರತ ಕಾನುಂಗೊ- ಇಬ್ಬರನ್ನೂ ಎಫ್‌ಎಸ್‌ಎಸ್‌ಎಐಯ ಕರ್ತವದಿಂದ ಬಿಡುಗಡೆಗೊಳಿಸಿ, ಅವರ ಜಾಗದಲ್ಲಿ ಹಿತಾಸಕ್ತಿಗಳ ತಿಕ್ಕಾಟವಿರದ ಸ್ವತಂತ್ರ ತಜ್ಞರನ್ನು ನೇಮಿಸಬೇಕು. ವಿಶೇಷವಾಗಿ ಖಾಸಗಿ ಆಹಾರ ನಿಗಮಗಳು ಮತ್ತು ಸಾರ್ವಜನಿಕ ಆರೋಗ್ಯದ ನಡುವೆ ಹಿತಾಸಕ್ತಿಗಳ ತಿಕ್ಕಾಟವಿರದಂತಹ ವ್ಯಕ್ತಿಗಳನ್ನು ನೇಮಿಸಬೇಕಾಗಿದೆ.
ಕೃಪೆ: thewire.in

Writer - ಅಮಿತ್ ಶ್ರೀವಾಸ್ತವ

contributor

Editor - ಅಮಿತ್ ಶ್ರೀವಾಸ್ತವ

contributor

Similar News

ಜಗದಗಲ
ಜಗ ದಗಲ