ನಿಮ್ಮ ಭವಿಷ್ಯನಿಧಿ ಹಣ ಅಪಾಯದಲ್ಲಿದೆ...

Update: 2019-02-14 03:55 GMT

ಮುಂಬೈ, ಫೆ. 14: ಐಎಲ್ ಆ್ಯಂಡ್ ಎಫ್‌ಎಸ್ ಸಮೂಹದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾದ ಕೋಟ್ಯಂತರ ರೂ. ಹಣ ಅಪಾಯದಲ್ಲಿದೆ ಎಂದು ಭವಿಷ್ಯ ನಿಧಿ ಹಾಗೂ ಪಿಂಚಣಿ ನಿಧಿ ಟ್ರಸ್ಟ್‌ಗಳು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿವೆ.

ಈ ಬಾಂಡ್‌ಗಳು ಭದ್ರತೆ ಇಲ್ಲದ ಸಾಲ ಪತ್ರಗಳಾಗಿರುವುದರಿಂದ ನಾವು ಭಾರಿ ಮೊತ್ತವನ್ನು ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕ ವ್ಯಕ್ತಪಡಿಸಿವೆ.

ಇವು ವ್ಯಾಪಾರ ಸಾಧನಗಳಾಗಿರುವುದರಿಂದ ಎಷ್ಟು ಮೊತ್ತ ಅಪಾಯದಲ್ಲಿದೆ ಎಂಬ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಆದರೆ ಹೂಡಿಕೆ ಬ್ಯಾಂಕ್‌ಗಳ ಅಂದಾಜಿನಂತೆ, ಈ ಮೂಲ ಸೌಕರ್ಯ ಕಂಪನಿಯ ಬಾಂಡ್‌ಗಳು ಟ್ರಿಪಲ್ ಎ ಶ್ರೇಣಿಯ ಬಾಂಡ್‌ಗಳಾಗಿರುವುದರಿಂದ ಕೋಟ್ಯಂತರ ರೂ. ಇದರಲ್ಲಿ ಹೂಡಿಕೆ ಮಾಡಲಾಗಿದೆ. ಎಎಎ ಶ್ರೇಣಿಯ ಬಾಂಡ್‌ಗಳು ಕಡಿಮೆ ಅಪಾಯ ಸಾಧ್ಯತೆಯ ಬಾಂಡ್‌ಗಳು ಎನಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿವೃತ್ತಿ ನಿಧಿಯ ದೊಡ್ಡ ಮೊತ್ತವನ್ನು ಇಲ್ಲಿ ಹೂಡಿಕೆ ಮಾಡಿರುವ ಸಾಧ್ಯತೆ ಇದೆ.

ಅಂದಾಜಿನ ಪ್ರಕಾರ 50ಕ್ಕೂ ಅಧಿಕ ನಿಧಿಗಳು ನಿರ್ವಹಿಸುವ 14 ಲಕ್ಷ ಉದ್ಯೋಗಿಗಳ ನಿವೃತ್ತಿ ನಂತರದ ಪ್ರಯೋಜನ ನಿಧಿಯನ್ನು ಐಎಲ್ ಆ್ಯಂಡ್ ಎಫ್‌ಎಸ್‌ನಲ್ಲಿ ಹೂಡಿಕೆ ಮಾಡಲಾಗಿದೆ. ಇದರಲ್ಲಿ ಹಲವು ಸರ್ಕಾರಿ ಉದ್ದಿಮೆಗಳು, ಖಾಸಗಿ ಕಂಪನಿಗಳು ಮತ್ತು ವಿದ್ಯುತ್ ನಿಗಮಗಳ ಪಿಎಫ್ ಟ್ರಸ್ಟ್‌ಗಳು ಸೇರಿವೆ. ಐಎಲ್ ಆ್ಯಂಡ್ ಎಫ್‌ಎಸ್ ಬಾಂಡ್‌ಗಳು ಭದ್ರತೆಯಿಲ್ಲದ ಬಾಂಡ್‌ಗಳಾಗಿರುವ ಹಿನ್ನೆಲೆಯಲ್ಲಿ ಹೂಡಿಕೆ ಮಾಡಿದ ಟ್ರಸ್ಟ್‌ಗಳು ಈ ಮೊತ್ತವನ್ನು ಕಳೆದುಕೊಳ್ಳುವ ಭೀತಿ ಇದೆ.

ಸರ್ಕಾರಿ ಸ್ವಾಮ್ಯದ ಎಂಎಂಟಿಸಿ, ಇಂಡಿಯನ್ ಆಯಿಲ್, ಸಿಐಡಿಸಿಒ, ಹುಡ್ಕೊ, ಐಡಿಬಿಐ, ಎಸ್‌ಬಿಐ ಹಾಗೂ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿದ್ಯುತ್ ಸರಬರಾಜು ಕಂಪನಿಗಳು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿವೆ. ಹಿಂದೂಸ್ತಾನ್ ಯೂನಿಲಿವರ್ ಮತ್ತು ಏಷ್ಯನ್ ಪೈಂಟ್ಸ್‌ನಂಥ ಖಾಸಗಿ ಕಂಪನಿಗಳು ಕೂಡಾ ಅರ್ಜಿ ಸಲ್ಲಿಸಿದ ಕಂಪನಿಗಳ ಪಟ್ಟಿಯಲ್ಲಿ ಸೇರಿವೆ.

ಈ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಐಎಲ್ ಆ್ಯಂಡ್ ಎಫ್‌ಎಸ್ ವಕ್ತಾರ ಶರದ್ ಗೋಯಲ್ ಉತ್ತರಿಸಲು ನಿರಾಕರಿಸಿದ್ದಾರೆ. ಈ ಸಮೂಹದ 302 ಸಂಸ್ಥೆಗಳ ಪೈಕಿ 169 ಭಾರತೀಯ ಕಂಪನಿಗಳಾಗಿದ್ದು, ಕೇವಲ 22 ಕಂಪನಿಗಳು ಮಾತ್ರ ಎಲ್ಲ ಹೊಣೆಗಾರಿಕೆಯನ್ನು ನಿರ್ವಹಿಸುವ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News