ರಾಜಕೀಯ ನಾಯಕರ ಅಸೂಕ್ಷ್ಮ ಹೇಳಿಕೆಗಳು

Update: 2019-02-15 04:54 GMT

ರಾಜಕಾರಣಿಗಳು ಮಾತಿನಲ್ಲಿ ಸೂಕ್ಷ್ಮತೆಯನ್ನು ಕಳೆದುಕೊಂಡರೆ ಆಗುವ ಅನಾಹುತಗಳೇನು ಎನ್ನುವುದಕ್ಕೆ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳು ಉತ್ತಮ ಉದಾಹರಣೆಗಳಾಗಿವೆ. ಎರಡು ಆಡಿಯೊ ಪ್ರಕರಣಗಳು ರಾಜ್ಯದ ರಾಜಕಾರಣ ಅಡ್ಡ ಹಾದಿ ಹಿಡಿದಿರುವುದನ್ನಷ್ಟೇ ಅಲ್ಲ, ರಾಜಕೀಯ ನಾಯಕರು ಸಂವೇದನಾಶೀಲತೆಯನ್ನೇ ಕಳೆದುಕೊಂಡಿದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಿವೆ. ಆಡಿಯೊ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಕಾರಣದಿಂದ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಕಣ್ಣೀರ ಹೊಳೆಯನ್ನೇ ಹರಿಸಿದರು. ಭಾವನಾತ್ಮಕವಾಗಿ ಮಾತನಾಡುತ್ತಾ ಆಡಿಯೊ ಚರ್ಚೆಯನ್ನು ಸ್ಪೀಕರ್ ಅವರು ಹಳಿ ತಪ್ಪಿಸಿದರು. ಆಡಿಯೊ ಪ್ರಕರಣಗಳು ಪ್ರಜಾಸತ್ತೆಯ ವ್ಯವಸ್ಥೆಗೆ ಸವಾಲು ಹಾಕಿರುವುದರಿಂದ ಇದನ್ನು ಅತ್ಯಂತ ವಾಸ್ತವ ಕಣ್ಣಲ್ಲಿ ನಿಭಾಯಿಸುವುದು ಅತ್ಯಗತ್ಯ. ರಮೇಶ್ ಕುಮಾರ್ ಬಿಜೆಪಿಯಿಂದ ಹಣ ಪಡೆಯದೇ ಇರುವುದು ನಿಜವಿರಬಹುದು. ಹಾಗೆಂದು ತನಿಖೆ ನಡೆಯಬಾರದು ಎಂದರೆ ರಫೇಲ್ ಹಗರಣದ ಆರೋಪಿ ನರೇಂದ್ರ ಮೋದಿಗೂ ರಮೇಶ್ ಕುಮಾರ್ ಇರುವ ವ್ಯತ್ಯಾಸವಾದರೂ ಏನು?

 ‘ತನಿಖೆ ನಡೆದರೆ ನನಗೆ ಇನ್ನಷ್ಟು ಅವಮಾನವಾಗುತ್ತದೆ’ ಎನ್ನುವುದನ್ನು ವಿವರಿಸುವುದಕ್ಕಾಗಿ ಅವರು ನೀಡಿದ ಉದಾಹರಣೆ ಮುಜುಗರ ತರಿಸುವಂತಹದು. ಅವರಂತಹ ಮುತ್ಸದ್ದಿ ನಾಯಕ, ಸ್ಪೀಕರ್ ಸ್ಥಾನದಲ್ಲಿ ಕುಳಿತು ಆಡುವ ಮಾತು ಅದಲ್ಲ. ಅತ್ಯಾಚಾರ ಸಂತ್ರಸ್ತೆಯೊಬ್ಬಳು ನ್ಯಾಯಕ್ಕಾಗಿ ದೂರು ನೀಡಿದಳಂತೆ. ನ್ಯಾಯಾಲಯದಲ್ಲಿ ಆಕೆಯನ್ನು ಅತ್ಯಾಚಾರದ ಕುರಿತಂತೆ ಬಗೆ ಬಗೆಯಾಗಿ ಪ್ರಶ್ನಿಸಿದರಂತೆ. ಅವಳು ಇನ್ನಷ್ಟು ಅವಮಾನಿತಳಾದಳಂತೆ. ಯಾರೋ ‘ನಿನಗೆ ನ್ಯಾಯ ಸಿಕ್ಕಿತೆ’? ಎಂದು ಕೇಳಿದಾಗ ಆಕೆ ‘ಅವನು ಒಂದು ಬಾರಿ ಅತ್ಯಾಚಾರ ಮಾಡಿದ. ನ್ಯಾಯಾಲಯದಲ್ಲಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆಯಿತು’ ಎಂದು ಹೇಳಿದಳಂತೆ. ಈ ಉದಾಹರಣೆಯಲ್ಲಿ ಸತ್ಯ ಇಲ್ಲವೆಂದಲ್ಲ. ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಬಾಯಿ ಮುಚ್ಚಿಸಲು ಮುಜುಗರದ ಪ್ರಶ್ನೆಗಳನ್ನು ಉದ್ದೇಶಪೂರ್ವಕವಾಗಿ ಕೇಳಿ ಅವಮಾನಿಸುವುದು, ತಾನು ದೂರು ನೀಡಲೇ ಬಾರದಿತ್ತು ಎಂಬ ಭಾವನೆ ಅವಳ ಒಳಗೆ ಮೂಡುವಂತೆ ನೋಡುವುದು ಇವೆಲ್ಲ ನ್ಯಾಯವ್ಯವಸ್ಥೆಯಲ್ಲಿ ನಡೆಯುತ್ತಿರುವುದು ನಿಜ.

ಅತ್ಯಾಚಾರ ಸಂತ್ರಸ್ತೆಯರನ್ನು ಸೂಕ್ಷ್ಮವಾಗಿ ನಡೆಸಿಕೊಳ್ಳಬೇಕು ಎಂದು ಇದೀಗ ನ್ಯಾಯಾಲಯವೇ ಹೇಳುತ್ತಿದೆ. ಪೊಲೀಸರು ಕೂಡ ಅವರೊಂದಿಗೆ ಮೃದುವಾಗಿ ನಡೆದುಕೊಳ್ಳಬೇಕು ಎನ್ನುವ ಆದೇಶವಿದೆ. ‘ತನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ’ ಎನ್ನುವುದು ರಮೇಶ್ ಕುಮಾರ ಅಳಲು. ಇಲ್ಲಿ ಅತ್ಯಾಚಾರ ಸಂತ್ರಸ್ತೆಯರ ಸ್ಥಿತಿಯನ್ನು ಅತ್ಯಂತ ಲಘುವಾಗಿ ತೆಗೆದುಕೊಂಡಿದ್ದಾರೆ. ದೂರು ಕೊಟ್ಟ ಅತ್ಯಾಚಾರ ಸಂತ್ರಸ್ತೆಯನ್ನು ವ್ಯಂಗ್ಯ ಮಾಡಿದಂತಿತ್ತು ರಮೇಶ್ ಕುಮಾರ್ ಧ್ವನಿ. ಹಾಗಾದರೆ ಸಂತ್ರಸ್ತೆ ದೂರು ನೀಡಿದ್ದು ತಪ್ಪೇ? ದೂರು ನೀಡಿದ ಕಾರಣಕ್ಕಾಗಿ ನ್ಯಾಯಾಲಯದಲ್ಲಿ ಪದೇ ಪದೇ ಅತ್ಯಾಚಾರಕ್ಕೊಳಗಾಗುವ ಅಪಾಯವಿರುವುದರಿಂದ ದೂರು ನೀಡಬಾರದು ಎಂದು ಹೇಳುತ್ತಾರೆಯೇ? ಆಕೆಯನ್ನು ನ್ಯಾಯಾಲಯದಲ್ಲಿ ಆ ಪರಿಸ್ಥಿತಿಗೆ ನೂಕಿದ ನ್ಯಾಯವ್ಯವಸ್ಥೆ ತಾನೆ ಅದಕ್ಕೆ ಹೊಣೆ?

ರಮೇಶ್ ಕುಮಾರ್ ಉದಾಹರಣೆಯಲ್ಲಿ ಜಾಣತನವೂ ಇದೆ. ಯಾವುದೇ ಕಾರಣಕ್ಕೂ ಆಡಿಯೊವನ್ನು ಸಿಟ್ ತನಿಖೆಗೆ ಒಳಪಡಿಸಬಾರದು ಎನ್ನುವ ಧ್ವನಿ ಅದರಲ್ಲಿದೆ. ಒಂದು ವೇಳೆ ತನಿಖೆಗೆ ಒಳಗಾದರೆ ಪದೇ ಪದೇ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ನನ್ನ ಬಳಿ ತನಿಖಾಧಿಕಾರಿಗಳು ಕೆದಕುತ್ತಾರೆ. ಇದರಿಂದ ನನ್ನ ವರ್ಚಸ್ಸಿಗೆ ಇನ್ನಷ್ಟು ಧಕ್ಕೆಯಾಗುತ್ತದೆ ಎನ್ನುವುದು ರಮೇಶ್ ಕುಮಾರ್ ವಾದ. ಇದೊಂದು ಅಸಂಬದ್ಧ ವಾದವಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತುಕೊಳ್ಳದೆ ನೀಡಿರುವ ಹೇಳಿಕೆಯಾಗಿದೆ. ಸಂವಿಧಾನಕ್ಕಿಂತ ರಮೇಶ್ ಕುಮಾರ್ ವರ್ಚಸ್ಸು ದೊಡ್ಡದಲ್ಲ. ಅದಕ್ಕಾಗಿ ಪ್ರಜಾಸತ್ತೆಯನ್ನು ಬುಡಮೇಲು ಮಾಡುವ ಶಕ್ತಿಗಳನ್ನು ರಕ್ಷಿಸುವುದು ಸರಿಯಲ್ಲ. ರಮೇಶ್ ಕುಮಾರ್ ಪ್ರಬುದ್ಧರಾಗಿ ಮಾತನಾಡಬೇಕಾಗಿತ್ತು. ‘ದಯವಿಟ್ಟು ಆ ಆಡಿಯೊವನ್ನು ತನಿಖೆಗೊಳಪಡಿಸಿ ನನ್ನನ್ನು ಆರೋಪ ಮುಕ್ತಗೊಳಿಸಿ’ ಎಂದು ಅವರು ಕೇಳುವುದು ಹೆಚ್ಚು ಸರಿ. ಪ್ರಕರಣ ತನಿಖೆಯಾಗದೇ ಇದ್ದರೆ ಈ ಆರೋಪ ಅವರ ಬದುಕಿನುದ್ದಕ್ಕೂ ಹಿಂಬಾಲಿಸುತ್ತದೆ. ಪ್ರಕರಣ ತನಿಖೆಯಾಗಿ ಆರೋಪಮುಕ್ತವಾದರೆ ಅದು ಅವರನ್ನು ಇನ್ನಷ್ಟು ವಿಶ್ವಾಸಾರ್ಹರನ್ನಾಗಿಸುತ್ತದೆ. ರಮೇಶ್ ಕುಮಾರ್ ಅವರ ಅತಿ ನಾಟಕೀಯ ವರ್ತನೆಯೇ ಸಂಶಯಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಹಾಸನದ ಶಾಸಕರೊಬ್ಬರು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಕುರಿತಂತೆ ಸಂವೇದನಾರಹಿತವಾದ, ಅಮಾನವೀಯವಾದ ಮಾತುಗಳನ್ನಾಡಿ ಜನರ ಆಕ್ರೋಶ ಎದುರಿಸುತ್ತಿದ್ದಾರೆ. ಒಂದು ಪಕ್ಷದ ಜೊತೆಗೆ ರಾಜಕೀಯವಾಗಿ ಅಸಮಾಧಾನ ಇರುವುದು ಸಹಜ. ಅದನ್ನು ಬಗ್ಗು ಬಡಿಯಲು ಸಂಚು ರೂಪಿಸುವುದೂ ಸಾಮಾನ್ಯ. ಆದರೆ ಒಂದು ಪಕ್ಷದ ನಾಶಕ್ಕಾಗಿ ಒಬ್ಬ ಹಿರಿಯ ವ್ಯಕ್ತಿಯ ಸಾವನ್ನು ಬಯಸುವುದು ಎಷ್ಟು ಸರಿ?

‘ದೇವೇಗೌಡರಿಗೆ ವಯಸ್ಸಾಗಿದೆ. ಅವರು ಹೆಚ್ಚು ಕಾಲ ಬದುಕುವುದಿಲ್ಲ, ಕುಮಾರಸ್ವಾಮಿ ಆರೋಗ್ಯ ಚೆನ್ನಾಗಿಲ್ಲ. ಅವರೂ ಬೇಗ ಸಾಯುತ್ತಾರೆ...’ ಎಂಬ ಅರ್ಥ ಬರುವ ಮಾತುಗಳನ್ನಾಡಿದ್ದಾರೆ ಶಾಸಕರು. ‘ನಿನ್ನ ಕಳುಹ ಬಂದವರಿಲ್ಲಿ ಉಳಿದು ಕೊಂಬವರಿಲ್ಲ’ ಎಂಬ ಶಿಶುನಾಳ ಶರೀಫರ ಮಾತುಗಳನ್ನು ಶಾಸಕರು ನೆನೆದುಕೊಳ್ಳಬೇಕು. ಸಾವು ಯಾರನ್ನೂ ಬಿಡುವುದಿಲ್ಲ. ಯಾರದೋ ಸಾವನ್ನು ನಿರೀಕ್ಷೆ ಮಾಡುತ್ತಾ ಕೂತವರೇ ಕೆಲವೊಮ್ಮೆ ಸಾಯುವುದಿದೆ. ದೇವೇಗೌಡರು ಮಾಜಿ ಪ್ರಧಾನಿ. ದೇವೇಗೌಡರನ್ನು ಹೊರಗಿಟ್ಟು ರಾಜ್ಯ ರಾಜಕಾರಣವನ್ನು ನೋಡುವುದಕ್ಕೆ ಸಾಧ್ಯವೇ ಇಲ್ಲ. ರಾಜ್ಯಕ್ಕೂ, ದೇಶಕ್ಕೂ ಅವರ ಕೊಡುಗೆ ದೊಡ್ಡದು. ಅಂತಹ ಮನುಷ್ಯನ ಸಾವನ್ನು ಬಯಸಿದ ಶಾಸಕನನ್ನು ಬೆಂಬಲಿಸಿ ಇದೀಗ ಬಿಜೆಪಿ ಬೀದಿಗಿಳಿದಿದೆ.

ನಿಜ. ಶಾಸಕ ಅಂತಹ ಮಾತನಾಡಿದರು ಎಂಬ ಕಾರಣಕ್ಕೆ ಜೆಡಿಎಸ್ ಕಾರ್ಯಕರ್ತರು ಶಾಸಕರ ಮೇಲೆ ಹಲ್ಲೆ ಮಾಡುವುದು ತಪ್ಪು. ಹಾಗೆ ಹಲ್ಲೆ ನಡೆಸಿದ್ದೇ ಆದರೆ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕು. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯ ಕುರಿತಂತೆ ಅಸೂಕ್ಷ್ಮವಾಗಿ ಮಾತನಾಡಿದ ಶಾಸಕರ ಪರವಾಗಿ ಕ್ಷಮೆಯಾಚಿಸುವುದು ಬಿಜೆಪಿಯ ಹೊಣೆಗಾರಿಕೆಯಾಗಿತ್ತು. ಕನಿಷ್ಠ ಶಾಸಕನ ಮಾತುಗಳನ್ನು ಖಂಡಿಸಿ ಹೇಳಿಕೆಗಳನ್ನು ನೀಡಬಹುದಿತ್ತು. ಬಳಿಕ ಹಲ್ಲೆಯನ್ನು ಖಂಡಿಸುವುದರಲ್ಲಿ ಅರ್ಥವಿದೆ. ಶಾಸಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸದೇ ಅವರ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಬಿಜೆಪಿ ನಾಯಕರೂ ಶಾಸಕನ ಹೇಳಿಕೆಗೆ ತಮ್ಮ ಸಮ್ಮತಿಯನ್ನು ನೀಡಿದಂತಾಗಿದೆ. ಇದು ನಿಜಕ್ಕೂ ನಾಚಿಗೆಗೇಡು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News